ಕೋವಿಡ್ ಪಾಸಿಟೀವ್ : ಜಿಲ್ಲೆಯಲ್ಲಿ 1 ಸಾವಿನ ಪ್ರಕರಣ ವರದಿ

ತುಮಕೂರು : ಕೋವಿಡ್ ಪಾಸಿಟೀವ್‍ನಿಂದ ಜಿಲ್ಲೆಯ ತುರುವೇಕೆರೆ ತಾಲೂಕಿನ 42 ವರ್ಷದ ವ್ಯಕ್ತಿಯೊಬ್ಬರು ಬೆಂಗಳೂರಿನಲ್ಲಿ ಸಾವನ್ನಪ್ಪಿರುವ ಪ್ರಕರಣ ಸೋಮವಾರ ವರದಿಯಾಗಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಕೆಸ್ವಾನ್ ಸಭಾಂಗಣದಲ್ಲಿ ಮಂಗಳವಾರ ರಾತ್ರಿ ಕೋವಿಡ್ ಸಂಬಂಧ ತುರ್ತು ಪತ್ರಿಕಾ ಹೇಳಿಕೆ ನೀಡಿದ ಅವರು ಕೋವಿಡ್‍ನಿಂದ ಮೃತಪಟ್ಟ ವ್ಯಕ್ತಿಯು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಜೂನ್ 2ರಂದು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಐಎಲ್‍ಐ ಹಾಗೂ ಸಾರಿ ಪ್ರಕರಣಗಳಿಂದ 36 ಗಂಟಲು ದ್ರವ ಮಾದರಿಗಳನ್ನು ಸಂಗ್ರಹಿಸಿ ಬೆಂಗಳೂರಿಗೆ ಕಳುಹಿಸಲಾಗಿತ್ತು. ಗುಬ್ಬಿ ತಾಲೂಕಿನ 13 ಹಾಗೂ ಶಿರಾ ತಾಲೂಕಿನ 1 ಸೇರಿದಂತೆ ಒಟ್ಟು 14 ಪ್ರಕರಣಗಳಲ್ಲಿ ಕೋವಿಡ್ ಪಾಸಿಟೀವ್ ದೃಢಪಟ್ಟ ಬಗ್ಗೆ ಮಂಗಳವಾರ ಬೆಳಿಗ್ಗೆ ವರದಿ ಬಂದಿದೆ. ಕೋವಿಡ್ ಪಾಸಿಟಿವ್ ಕಂಡು ಬಂದವರ ಪ್ರೈಮರಿ ಹಾಗೂ ಸೆಕೆಂಡರಿ ಕಾಂಟ್ಯಾಕ್ಟ್‍ನಲ್ಲಿದ್ದವರನ್ನು ಪತ್ತೆ ಹಚ್ಚಲಾಗಿದೆ ಎಂದು ತಿಳಿಸಿದರು.

ಆರೋಗ್ಯ ಸಚಿವಾಲಯದ ಕೋವಿಡ್ ಮಾರ್ಗಸೂಚಿಗಳನ್ವಯ ಐಎಲ್‍ಐ(ILI-Influenza Like Illness) ಮತ್ತು ಸಾರಿ(SARI-Severe Acute Respiratory Infection) ಪ್ರಕರಣಗಳನ್ನು ಪರೀಕ್ಷೆಗೊಳಪಡಿಸಲು ನಿರ್ದೇಶನ ನೀಡಿದ್ದು, ಅದರನುಸಾರ ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್ ಪರೀಕ್ಷೆ ಮಾಡಲು ಹಾಗೂ ಕೋವಿಡ್ ದೃಢಪಟ್ಟವರಿಗೆ ಚಿಕಿತ್ಸೆ ನೀಡಲು ಅಗತ್ಯ ಔಷಧಿ, ತಪಾಸಣಾ ಕಿಟ್‍ಗಳನ್ನು ಪೂರೈಕೆ ಮಾಡಲಾಗಿದೆ ಎಂದು ತಿಳಿಸಿದರು.
ಕೋವಿಡ್ ಪಾಸಿಟೀವ್ ದೃಢಪಟ್ಟ ರೋಗಿಗಳ ಗುಣಲಕ್ಷಣಕ್ಕೆ ತಕ್ಕಂತೆ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಯಾವುದೇ ಗಂಭೀರ ಪರಿಸ್ಥಿತಿ ಇರುವುದಿಲ್ಲ. ಮುನ್ನೆಚ್ಚರಿಕಾ ಕ್ರಮವಾಗಿ ಸಾರ್ವಜನಿಕರು ಹೆಚ್ಚಿನ ಜನಸಂದಣಿ ಇರುವೆಡೆ ಸೇರಬಾರದು. ಗರ್ಭಿಣಿ ಮಹಿಳೆಯರು ಹಾಗೂ ರಕ್ತದೊತ್ತಡ, ಮಧುಮೇಹ, ಕಿಡ್ನಿ ಸಂಬಂಧ (ಕೋಮಾರ್ಬಿಡಿಟಿ)ರೋಗಿಗಳು, ವಯೋವೃದ್ಧರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಜ್ವರ, ಕೆಮ್ಮು, ನೆಗಡಿ, ತಲೆನೋವು, ಎದೆನೋವು ಅಥವಾ ಉಸಿರಾಟದ ತೊಂದರೆ ರೋಗಲಕ್ಷಣಗಳಿದ್ದಲ್ಲಿ ತಕ್ಷಣ ವೈದ್ಯಕೀಯ ಸಲಹೆ ಪಡೆಯಬೇಕು. ಎಂದು ಮನವಿ ಮಾಡಿದರು.

ಕೋವಿಡ್ ಹರಡದಂತೆ ನಿಯಂತ್ರಿಸಲು ಜಿಲ್ಲಾ ಹಂತದಲ್ಲಿ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಕೋವಿಡ್ ದೃಢಪಟ್ಟವರಿಗೆ ಚಿಕಿತ್ಸೆ ನೀಡಲು ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆಗಳಲ್ಲಿ 2000 ಹಾಸಿಗೆ, 200 ಐಸಿಯು ಹಾಸಿಗೆ, ಸುಸ್ಥಿತಿಯಲ್ಲಿರುವ 55 ವೆಂಟೆಲೇಟರ್ಸ್, 257 ಆಕ್ಸಿಜನ್ ಕಾನ್ಸಂಟ್ರೇಟರ್, 14 ಆಕ್ಸಿಜನ್ ಪ್ರೊಡ್ಯೂಸಿಂಗ್ ಪ್ಲಾಂಟ್‍ಗಳಿವೆಯಲ್ಲದೆ ವೈದ್ಯಕೀಯ ಕಾಲೇಜು ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ 2000 ಹಾಸಿಗೆ ಹಾಗೂ 200 ಐಸಿಯು ಹಾಸಿಗೆಗಳು ಲಭ್ಯವಿದೆ ಎಂದು ತಿಳಿಸಿದರು.

ಕೋವಿಡ್ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಯಲ್ಲಿ ಪ್ರತೀ ದಿನ 400 ಆರ್‍ಟಿಪಿಸಿಆರ್ ಟೆಸ್ಟ್ ಮಾಡಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ. ಆದರೆ ಮುನ್ನೆಚ್ಚರಿಕೆ ಅಗತ್ಯ ಎಂದು ತಿಳಿಸಿದರಲ್ಲದೆ ದೈಹಿಕ ಅಂತರವನ್ನು ಕಾಪಾಡಿಕೊಳ್ಳಬೇಕು. ಅನಾರೋಗ್ಯ ಪೀಡಿತ ಮಕ್ಕಳನ್ನು ಮನೆಯಲ್ಲಿಯೇ ಇರಿಸಬೇಕು. ವಿದೇಶಗಳಿಂದ ಬರುವ ಪ್ರಯಾಣಿಕರ ಬಗ್ಗೆ, ರೋಗಲಕ್ಷಣಗಳಿದ್ದವರ ಬಗ್ಗೆ ಆರೋಗ್ಯ ಅಧಿಕಾರಿ ಹಾಗೂ ಸಿಬ್ಬಂದಿಯೊಂದಿಗೆ ಸಾರ್ವಜನಿಕರು ಮಾಹಿತಿಯನ್ನು ಹಂಚಿಕೊಳ್ಳಬೇಕು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಚಂದ್ರಶೇಖರ್ ಮಾತನಾಡಿ ಜಿಲ್ಲೆಯಲ್ಲಿ ಜನವರಿ 2025 ರಿಂದ ಮೇ 2025ರವರೆಗೆ ಯಾವುದೇ ಕೋವಿಡ್-19 ಪ್ರಕರಣಗಳು ವರದಿಯಾಗಿರುವುದಿಲ್ಲ. ಜೂನ್ ಮಾಹೆಯಲ್ಲಿ ಜಿಲ್ಲಾದ್ಯಂತ ಶಂಕಿತ ಕೋವಿಡ್-19ರ ರೋಗಿಗಳಿಂದ ILI & SARI ಪ್ರಕರಣಗಳಿಂದ Random ಆಗಿ RTPCR ಪರೀಕ್ಷೆಗಾಗಿ ಒಟ್ಟು 36 ಗಂಟಲು ದ್ರವದ ಮಾದರಿಗಳನ್ನು ಸಂಗ್ರಹಿಸಿ ಜೂನ್ 2ರಂದು ಬೆಂಗಳೂರಿನBMC-VRDLಗೆ ಪರೀಕ್ಷೆಗಾಗಿ ಕಳುಹಿಸಲಾಗಿತ್ತು. ಪರೀಕ್ಷಿಸಿದ ಮಾದರಿಗಳಲ್ಲಿ 14 ಪ್ರಕರಣಗಳು ಕೋವಿಡ್-19 ಪಾಸಿಟಿವ್ ಇರುವುದು ದೃಢಪಟ್ಟಿದೆ. ಎಲ್ಲಾ ಪ್ರಕರಣಗಳನ್ನು ಪರಿಶೀಲಿಸಿ (triage) ಎಲ್ಲಾ 14 ಪಾಸಿಟಿವ್ ಪ್ರಕರಣಗಳಲ್ಲಿ ರೋಗಿಗಳು ಚಿಕಿತ್ಸೆ ಪಡೆದು ಆರೋಗ್ಯದಿಂದ ಮನೆಯಲ್ಲಿದ್ದಾರೆ ಎಂದು ಮಾಹಿತಿ ನೀಡಿದರು.

Leave a Reply

Your email address will not be published. Required fields are marked *