ಶೆಟ್ಟಿಹಳ್ಳಿಗೇಟ್ ಅಂಡರ್ ಪಾಸ್ ಮೇಲ್ಬಾಗದ ರಸ್ತೆಯಲ್ಲಿ ಬಿರುಕು

ತುಮಕೂರು- ನಗರದಲ್ಲಿ ಕಳೆದ ಐದಾರು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆ ಹಿನ್ನೆಲೆಯಲ್ಲಿ ಶೆಟ್ಟಿಹಳ್ಳಿಗೇಟ್‍ನಲ್ಲಿರುವ ಅಂಡರ್‍ಪಾಸ್ ಮೇಲ್ಭಾಗದ ರಸ್ತೆ ಬಿರುಕು ಬಿಟ್ಟು ಕುಸಿತಗೊಂಡಿದ್ದು, ಈ ಭಾಗದ ಜನರಲ್ಲಿ ತೀವ್ರ ಆತಂಕ ಮೂಡಿಸಿದೆ.

ನಗರದ ಶೆಟ್ಟಿಹಳ್ಳಿಗೇಟ್ ಸಮೀಪವಿರುವ ರಾಘವೇಂದ್ರ ಸ್ವಾಮಿ ಮಠಕ್ಕೆ ತಿರುವು ಪಡೆಯುವ ಅಂಡರ್‍ಪಾಸ್ ಮೇಲ್ಭಾಗದ ರಸ್ತೆ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕುಸಿದಿದ್ದು, ನಿನ್ನೆ ಸಂಜೆ ಮಳೆಯಿಂದಾಗಿ ಅಂಡರ್ ಪಾಸ್ ಬ್ರಿಡ್ಜ್ ಹೊಂದಿಕೊಂಡಂತೆ ರಸ್ತೆ ಕುಸಿದಿದೆ.

ಶೆಟ್ಟಿಹಳ್ಳಿ ಅಂಡರ್‍ಪಾಸ್ ಮಳೆ ಆರಂಭವಾದರೆ ಒಂದಿಲ್ಲೊಂದು ಕಾರಣಗಳಿಂದ ಸುದ್ದಿಯಾಗುತ್ತಲೇ ಇದೆ. ಇದುವರೆಗೂ ಮಳೆಯಿಂದ ಅಂಡರ್‍ಪಾಸ್ ನೀರು ತುಂಬಿ ವಾಹನ ಸವಾರರು ಸಂಚರಿಸಲಾಗದಂತಹ ಸ್ಥಿತಿ ನಿರ್ಮಾಣವಾಗುತ್ತಿತ್ತು. ಆದರೆ ಇದೀಗ ಅಂಡರ್‍ಪಾಸ್ ಮೇಲ್ಭಾಗದ ರಸ್ತೆ ಕುಸಿಯುವ ಈ ಭಾಗದ ಜನರಲ್ಲಿ ತೀವ್ರ ಆತಂಕವನ್ನು ಸೃಷ್ಠಿಸಿದೆ.

ರಸ್ತೆ ಕುಸಿದು ಗುಂಡಿ ಬಿದ್ದಿರುವುದನ್ನು ಗಮನಿಸಿದ ಸಾರ್ವಜನಿಕರು ಕೂಡಲೇ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ತಕ್ಷಣ ಸ್ಥಳಕ್ಕೆ ಆಗಮಿಸಿದ ಮಹಾನಗರ ಪಾಲಿಕೆ ಆಯುಕ್ತೆ ಅಶ್ವಿಜ ಮತ್ತು ಸಿಬ್ಬಂದಿ ರಸ್ತೆ ಕುಸಿದಿರುವುದನ್ನು ವೀಕ್ಷಿಸಿ ಕುಸಿದಿರುವ ರಸ್ತೆ ಗುಂಡಿಯನ್ನು ತಾತ್ಕಾಲಿಕವಾಗಿ ಮುಚ್ಚುವ ಕೆಲಸ ಮಾಡಿದ್ದಾರೆ.

ಗುರುವಾರ ಬೆಂಗಳೂರಿನಿಂದ ತಜ್ಞರು ನಗರಕ್ಕೆ ಆಗಮಿಸಿ ಶೆಟ್ಟಿಹಳ್ಳಿ ಅಂಡರ್‍ಪಾಸ್ ಮೇಲ್ಭಾಗದಲ್ಲಿ ರಸ್ತೆ ಕುಸಿದಿರುವುದನ್ನು ಕೂಲಂಕುಷವಾಗಿ ಪರಿಶೀಲಿಸಿ ಶಾಶ್ವತ ಪರಿಹಾರ ಕಲ್ಪಿಸುತ್ತಾರೆ ಎಂದು ಪಾಲಿಕೆ ಮೂಲಗಳು ತಿಳಿಸಿವೆ.

ರಸ್ತೆ ಕುಸಿದಿರುವುದರಿಂದ ಬ್ಯಾರಿಕೇಡ್ ಅಳವಡಿಸಿ ವಾಹನಗಳ ಸಂಚಾರವನ್ನು ಬಂದ್ ಮಾಡಲಾಗಿದೆ.
ಶೆಟ್ಟಿಹಳ್ಳಿ ಅಂಡರ್‍ಪಾಸ್ ಮೇಲ್ಭಾಗದ ರಸ್ತೆಯಲ್ಲಿ ಮಳೆಯಿಂದಾಗಿ ಗುಂಡಿ ಬಿದ್ದಿರುವ ಬಗ್ಗೆ ಮಾಹಿತಿ ತಿಳಿದ ತಕ್ಷಣ ನಮ್ಮ ಪಾಲಿಕೆ ಸಿಬ್ಬಂದಿ ಸ್ಥಳಕ್ಕೆ ತೆರಳಿ ರಾತ್ರಿ 10 ಗಂಟೆವರೆಗೆ ತಾತ್ಕಾಲಿಕವಾಗಿ ರಸ್ತೆ ಗುಂಡಿ ಮುಚ್ಚಿದ್ದಾರೆ. ನಾವು ಈ ಮೊದಲು ಕಸ ಬರುತ್ತಿದೆ ಎಂದುಕೊಂಡಿದ್ದೆವು. ಆದರೆ ನಿನ್ನೆ ಪರಿಶೀಲಿಸಿದಾಗ ರಸ್ತೆ ಕುಸಿದು ಮಣ್ಣು ಬರುತ್ತಿರುವುದು ಸ್ಪಷ್ಟವಾಗಿದೆ. ಹಾಗಾಗಿ ರಾತ್ರಿ ರಸ್ತೆ ಬಂದ್ ಮಾಡಿ ತಾತ್ಕಾಲಿಕವಾಗಿ ಗುಂಡಿ ಮುಚ್ಚಲಾಗಿದೆ. ಗುರುವಾರ ಬೆಂಗಳೂರಿನಿಂದ ಎಕ್ಸ್‍ಫರ್ಟ್‍ಗಳು ಬಂದು ಶಾಶ್ವತ ಪರಿಹಾರ ಕಂಡು ಹಿಡಿಯಲಿದ್ದಾರೆ ಎಂದು ಮಹಾನಗರ ಪಾಲಿಕೆ ಆಯುಕ್ತೆ ಬಿ.ವಿ. ಅಶ್ವಿಜ ತಿಳಿಸಿದ್ದಾರೆ.

ಶಾಸಕರ ಭೇಟಿ: ಪರಿಶೀಲನೆ

ಶೆಟ್ಟಿಹಳ್ಳಿ ಅಂಡರ್ ಪಾಸ್ ಮೇಲ್ಭಾಗದಲ್ಲಿ ರಸ್ತೆ ಕುಸಿದಿರುವ ಸ್ಥಳಕ್ಕೆ ಬೆಳಿಗ್ಗೆ ಶಾಸಕ ಜ್ಯೋತಿಗಣೇಶ್ ಶೆಟ್ಟಿಹಳ್ಳಿ ಭೇಟಿ ನೀಡಿ ರಸ್ತೆಗುಂಡಿ ಬಿದ್ದಿರುವುದನ್ನು ವೀಕ್ಷಿಸಿದರು.

ನಂತರ ಮಾತನಾಡಿದ ಅವರು, ಈ ಜಾಗದಲ್ಲಿ ಗುಂಡಿ ಬಿದ್ದಿರುವ ವಿಷಯ ತಿಳಿಯುತ್ತಿದ್ದಂತೆ ಮಹಾನಗರ ಪಾಲಿಕೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಸ್ತೆ ಬಂದ್ ಮಾಡಿ ಗುಂಡಿಯನ್ನು ಮುಚ್ಚಿದ್ದಾರೆ. ಈಗಾಗಲೇ ನಾನು ಮಹಾನಗರ ಪಾಲಿಕೆ ಆಯುಕ್ತರ ಜತೆ ಈ ಸಂಬಂಧ ಮಾತನಾಡಿದ್ದು, ಬೆಂಗಳೂರಿನಿಂದ ತಜ್ಞರನ್ನು ಕರೆಸಿ ಇದಕ್ಕೊಂದು ಶಾಶ್ವತ ಪರಿಹಾರ ಕಲ್ಪಿಸುವುದಾಗಿ ತಿಳಿಸಿದ್ದಾರೆ ಎಂದು ಹೇಳಿದರು.

ನಗರದಲ್ಲಿ ಸತತವಾಗಿ ಮಳೆಯಾಗುತ್ತಿರುವುದರಿಂದ ನೀರು ಸರಾಗವಾಗಿ ಹರಿಯಲಾಗದೆ ಹೂಳು ತುಂಬಿರುವ ಚರಂಡಿಗಳನ್ನು ಗಮನಿಸಿ ಸ್ವಚ್ಛಗೊಳಿಸುವ ಮೂಲಕ ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿಯುವಂತೆ ಮಾಡಬೇಕು ಎಂದು ಪಾಲಿಕೆ ಅಧಿಕಾರಿಗಳು ಸೂಚಿಸಿದ್ದೇನೆ ಎಂದರು.

ಮಳೆ ಬಂದು ರಸ್ತೆಗಳಲ್ಲಿ ನೀರು ಹರಿಯುವ ಸಂದರ್ಭದಲ್ಲಿ ವಾಹನ ಸವಾರರ ಎಚ್ಚರಿಕೆಯಿಂದ ಸಂಚರಿಸಬೇಕು. ನೀರು ಹರಿಯುವ ಚರಂಡಿಗಳ ಅಕ್ಕಪಕ್ಕದಲ್ಲಿರುವ ಮನೆಗಳ ನಿವಾಸಿಗಳು ಬಹಳ ಎಚ್ಚರಿಕೆಯಿಂದ ಇರುವಂತೆಯೂ ಅವರು ಇದೇ ಸಂದರ್ಭದಲ್ಲಿ ಮನವಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಮಾಜಿ ಸದಸ್ಯ ವಿಷ್ಣುವರ್ಧನ್ ಹಾಗೂ ಈ ಭಾಗದ ಸ್ಥಳೀಯರು ಇದ್ದರು.

Leave a Reply

Your email address will not be published. Required fields are marked *