ತುಮಕೂರು:ಇದೇ ತಿಂಗಳ 7ನೇ ತಾರೀಖಿನಂದು ನಡೆಯುವ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ನ ಅಡಳಿತ ಮಂಡಳಿ ಚುನಾವಣೆಯಲ್ಲಿ ಕ್ರಿಕೆಟ್ ಆಟಗಾರರ ವೆಂಕಟೇಶ್‍ಪ್ರಸಾದ್ ನೇತೃತ್ವದ ಟೀಮ್ ಗೇಮ್ ಚೆಂಬರ್ ತಂಡಕ್ಕೆ ಕೆಎಸ್‍ಸಿಎ ಸದಸ್ಯರು ಮತ ಚಲಾಯಿಸುವ ಮೂಲಕ ಕರ್ನಾಟಕದಲ್ಲಿ ಕ್ರಿಕೆಟ್ ಆಟವನ್ನು ಭದ್ರವಾಗಿ ಕಟ್ಟಲು ಅವಕಾಶ ಮಾಡಿಕೊಡ ಬೇಕೆಂದು ಟೀಮ್ ಗೆಮ್ ಚೆಂಬರ್ ತಂಡದ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ವೆಂಕಟೇಶಪ್ರಸಾದ್ ಮನವಿ ಮಾಡಿದ್ದಾರೆ.
ನಗರದ ಖಾಸಗಿ ಹೊಟೇಲ್ ನಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು,ಕಳೆದ 23 ವರ್ಷಗಳಿಂದ ಅಧಿಕಾರದಲ್ಲಿರುವ ಬ್ರಿಜೆಶ್ ಪಟೇಲ್ ನೇತೃತ್ವದ ಆಡಳಿತ ಮಂಡಳಿ ನಿಂತ ನೀರಾಗಿದ್ದು,ಸಂಪೂರ್ಣವಾಗಿ ಕ್ರಿಕೆಟ್ ಕರ್ನಾಟಕದಲ್ಲಿ ಸತ್ತು ಹೋಗಿದೆ.ನಮ್ಮ ತಂಡ ಅಧಿಕಾರಕ್ಕೆ ಬಂದರೆ ಕರ್ನಾಟಕದಲ್ಲಿ ಕ್ರಿಕೆಟ್ ಉಚ್ರಾಯ ಸ್ಥಿತಿ ತಲುಪುವಂತೆ ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಟೀಮ್ ಗೆಮ್ ಚೆಂಜರ್ ತಂಡದಲ್ಲಿ ಕ್ರಿಕೆಟ್ ಆಟದಲ್ಲಿಯೇ ಪಳಗಿರುವ ಜಾವಗಲ್ ಶ್ರೀನಾಥ್, ಅನಿಲ್‍ಕುಂಬ್ಳೆ,ಸೈಯದ್ ಕಿರ್ಮಾನಿ, ಮಹಿಳಾ ಆಟಗಾರರಾದ ಶಾಂತ ರಂಗಸ್ವಾಮಿ, ಕಲ್ಪನಾ ವೆಂಕಟರಾವ್ ಸೇರಿದಂತೆ ಹಲವಾರು ಹಿರಿಯ ಅನುಭವಿ ಆಟಗಾರರು ಮತ್ತು ಆಡಳಿತಗಾರರು ನಮ್ಮೊಂದಿಗೆ ಇದ್ದಾರೆ.ಇವರಿಗೆ ಆಟವಾಡಿಯೂ ಗೊತ್ತು ಮತ್ತು ಆಡಳಿತ ನಡೆಸಿಯೂ ಅನುಭವವಿದೆ.ಗೆಲುವು ನಮ್ಮ ಕಡೆ ಇದೆ ಎಂಬುದು ಎದುರಾಳಿ ಟೀಮ್‍ಗೆ ಗೊತ್ತಿದ್ದರೂ ಹಿಂಬಾಗಿಲ ಮೂಲಕ ಅಧಿಕಾರ ಹಿಡಿಯಲು ಇನ್ನಿಲ್ಲದ ವ್ಯರ್ಥ ಪ್ರಯತ್ನ ನಡೆಸುತ್ತಿದ್ದಾರೆ.28 ವರ್ಷಗಳ ಕಾಲ ಅಧಿಕಾರ ನಡೆಸಿ, 200 ಬಾಕಿ ಉಳಿದಿರುವುದನ್ನು ತಿಳಿಯದ ಬ್ರಿಜೆಶ್ ಪಟೇಲ್, ಇನ್ನೂ ಒಂದು ಅಸೋಸಿಯೇಷನ್‍ನ್ನು ಹೇಗೆ ನಡೆಸಬಲ್ಲರು ಎಂಬುದನ್ನು ಸದಸ್ಯರುಗಳು ಅರ್ಥ ಮಾಡಿಕೊಳ್ಳಬೇಕಿದೆ.ಆಟಗಾರರೇ ಇಲ್ಲದ ತಂಡ ಕಟ್ಟಿಕೊಂಡು, ಕೇವಲ ವ್ಯಾಪಾರಿ ದೃಷ್ಟಿಯಿಂದ ಕೆಲಸ ಮಾಡುತ್ತಿರುವ ತಂಡವನ್ನು ಸದಸ್ಯರುಗಳು ಬೆಂಬಲಿಸದಂತೆ ವೆಂಕಟೇಶಪ್ರಸಾದ್ ಮನವಿ ಮಾಡಿದರು.
ಬ್ರಿಜೆಶ್ ಪಟೇಲ್ ಆಡಳಿತದಲ್ಲಿ ಬಿಸಿಸಿಐ ಮತ್ತು ಕೆ.ಎಸ್.ಸಿ.ಎಗೆ ಸಂಬಂಧವೇ ಇಲ್ಲದಂತಾಗಿದೆ.ಹಾಗಾಗಿ ಯಾವುದೇ ನೆರವು ಮತ್ತು ಮಾರ್ಗದರ್ಶನ ಕೆ.ಎಸ್.ಸಿ.ಎಗೆ ರಾಷ್ಟ್ರಮಟ್ಟದಲ್ಲಿ ದೊರೆಯುತ್ತಿಲ್ಲ.ನಮ್ಮ ಟೀಮ್ ಅಧಿಕಾರಕ್ಕೆ ಬಂದರೆ ನನ್ನ ಜೊತೆಗೆ ಕ್ರಿಕೆಟ್ ದಿಗ್ಗಜರಾದ ಜಾವಗಲ್ ಶ್ರೀನಾಥ್,ಅನಿಲ್‍ಕುಂಬ್ಳೆ ಬಂದರೆ ಬಿ.ಸಿ.ಸಿ.ಐ ನಮ್ಮ ಮಾತು ತೆಗೆದು ಹಾಕಲು ಸಾಧ್ಯವಿಲ್ಲ. ಕರ್ನಾಟಕಕ್ಕೆ ಸಿಗಬೇಕಾದ ಎಲ್ಲಾ ಮಾನ್ಯತೆ, ಗೌರವ ದೊರೆಯುವುದರಲ್ಲಿ ಅನುಮಾನವೇ ಇಲ್ಲ. ಹಾಗಾಗಿ ಟೀಮ್ ಗೆಮ್ ಚೆಂಜರ್ ತಂಡವನ್ನು ಕ್ರೀಡಾ ಪ್ರೇಮಿಗಳಾಗಿರುವ ಕೆ.ಎಸ್.ಸಿ.ಎ ಅಜೀವ ಸದಸ್ಯರು ಮತ್ತು ಅಕೇಷನ್ಸ್ ಸದಸ್ಯರು ಮತ ನೀಡುವ ಮೂಲಕ ಬೆಂಬಲಿಸುವಂತೆ ಕೋರಿದರು.
ಕೆ.ಎಸ್.ಸಿ.ಎ ಮಾಜಿ ಖಜಾಂಚಿ ವಿನಯ್ ಮೃತ್ಯಂಜಯ್ ಮಾತನಾಡಿ,ಕೆ.ಎಸ್.ಸಿ.ಎ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿರುವ ವೆಂಕಟೇಶಪ್ರಸಾದ್ ಒಳ್ಳೆಯ ಆಟಗಾರರಷ್ಟೇ ಅಲ್ಲ. ಒಳ್ಳೆಯ ಆಡಳಿತಗಾರರಾಗಿಯೂ ಹೆಸರು ಮಾಡಿದ್ದಾರೆ.ದೂರದೃಷ್ಟಿಯುಳ್ಳ ಮನುಷ್ಯ. ಅವರು ಅಧ್ಯಕ್ಷರಾದರೆ ಕೆ.ಎಸ್.ಸಿ.ಎ ಎತ್ತರಕ್ಕೆ ಬೆಳೆಯುತ್ತದೆ ಎಂಬುದು ನಮ್ಮ ಆಚಲ ನಂಬಿಕೆಯಾಗಿದೆ. ಪ್ರಜಾಪ್ರಬುತ್ವದ ಹಾದಿಯಲ್ಲಿ ನಡೆಯುತ್ತಿದ್ದೇವೆ.ಬೇರೆ ತಂಡದ ರೀತಿ ನಾವು ಮಾಡಿದ್ದೇ ಕಾನೂನು ಎಂಬಂತೆ ವರ್ತಿಸುತ್ತಿಲ್ಲ. ಪ್ರತಿಯೊಬ್ಬರ ಅಭಿಪ್ರಾಯಗಳಿಗೂ ಮನ್ನಣೆ ದೊರೆಯಲಿದೆ.ಹಾಗಾಗಿ ತುಮಕೂರು ಹಾಸನ, ಶಿವಮೊಗ್ಗ ಅಕೇಷನಲ್ ಮತ್ತು ಕ್ರಿಕೆಟರ್ಸ್ ಟೀಂ ಗೆಮ್ ಚೆಂಜರ್ ತಂಡವನ್ನು ಹಾಗೆಯೇ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿರುವ ಸಿ.ಅರ್.ಹರೀಶ್ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದರು.
ಈ ವೇಳೆ ಕೆಎಸ್‍ಸಿಎ ಚುನಾವಣೆಯಲ್ಲಿ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿರುವ ಸಿ.ಆರ್.ಹರೀಶ್,ಕ್ರಿಕೆಟ್ ಅಟಗಾರರಾದ ನಿವೃತ್ತ ಪೊಲೀಸ್ ಅಧಿಕಾರಿ ನಾರಾಯಣಸ್ವಾಮಿ,ವಿನಯ್ ಮೃತ್ಯುಂಜಯ್, ಜಿ.ವಿ.ಕುಮಾರ್, ಶಶಿಧರ್, ವಿನಯ್ ವೈದ್ಯ ಸೇರಿದಂತೆ ಕೆ.ಎಸ್.ಸಿ.ಎ ಸದಸ್ಯರು ಮತ್ತು ಕ್ರಿಕೆಟ್ ಆಟಗಾರರು ಪಾಲ್ಗೊಂಡಿದ್ದರು.