ತುಮಕೂರು : ಬೆಳೆ ವಿಮಾ ಯೋಜನೆಗೆ ಹೆಚ್ಚಿನ ಸಂಖ್ಯೆಯಲ್ಲಿ ರೈತರು ನೋಂದಾಯಿಸಿಕೊಳ್ಳಬೇಕೆಂದು ಜಿಲ್ಲಾ ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು ರೈತರಿಗೆ ಕರೆ ನೀಡಿದರು.
ಚಿಕ್ಕನಾಯಕನಹಳ್ಳಿ ತಾಲ್ಲೂಕು ಕಾಡೇನಹಳ್ಳಿ ಗ್ರಾಮದ ರೈತರ ತಾಕಿಗೆ ಭೇಟಿ ನೀಡಿ ಕೃಷಿ ಚಟುವಟಿಕೆಗಾಗಿ ರೈತರು ನಡೆಸಿರುವ ಭೂಮಿ ಸಿದ್ಧತೆಯನ್ನು ವೀಕ್ಷಿಸಿದ ನಂತರ ರೈತರೊಂದಿಗೆ ನಡೆಸಿದ ಸಂವಾದದಲ್ಲಿ ಮಾತನಾಡಿದ ಅವರು, ಕೃಷಿ ಅಧಿಕಾರಿಗಳು ಬೆಳೆ ವಿಮಾ ಯೋಜನೆಯ ಪ್ರಯೋಜನಗಳ ಬಗ್ಗೆ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಬೆಳೆವಿಮಾ ಯೋಜನೆಗೆ ನೋಂದಾಯಿಸಿಕೊಳ್ಳುವಂತೆ ಗ್ರಾಮೀಣ ಪ್ರದೇಶಗಳಲ್ಲಿ ಅಗತ್ಯ ಪ್ರಚಾರ ಕೈಗೊಳ್ಳಬೇಕೆಂದು ಚಿಕ್ಕನಾಯಕನಹಳ್ಳಿ ಸಹಾಯಕ ಕೃಷಿ ನಿರ್ದೇಶಕರು ಶಿವರಾಜ್ ಕುಮಾರ್ ಅವರಿಗೆ ಸೂಚಿಸಿದರು.
ನಂತರ ತಿಪಟೂರು ತಾಲ್ಲೂಕು ಕಿಬ್ಬನಹಳ್ಳಿ ವಿಎಸ್‍ಎಸ್‍ಎನ್ ಸೊಸೈಟಿಗೆ ಭೇಟಿ ನೀಡಿ ರಸಗೊಬ್ಬರ ದಾಸ್ತಾನು ಮತ್ತು ವಿತರಣೆ ಬಗ್ಗೆ ಪರಿಶೀಲಿಸಿದರು. ಬಳಿಕ ಬಿಳಿಗೆರೆ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಸಾಂಕೇತಿಕವಾಗಿ ಬಿತ್ತನೆ ಬೀಜ ವಿತರಣೆ ಮಾಡಿ ರೈತರಿಗೆ ಬಿತ್ತನೆ ಬೀಜ ಕೊರತೆಯಾಗದಂತೆ ಎಚ್ಚರವಹಿಸಬೇಕು. ಬಿತ್ತನೆ ಬೀಜ ಖಾಲಿಯಾದಂತೆ ಹಂತ-ಹಂತವಾಗಿ ಸರಬರಾಜು ಸಂಸ್ಥೆಗಳಿಂದ ತರಿಸಿ ದಾಸ್ತಾನು ಮಾಡಬೇಕೆಂದು ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಚೆನ್ನಕೇಶವ ಮೂರ್ತಿ ಅವರಿಗೆ ಸೂಚನೆ ನೀಡಿದರು.
ಇದಕ್ಕೂ ಮುನ್ನ ಗುಬ್ಬಿ ತಾಲ್ಲೂಕು ಕಸಬಾ ಹೋಬಳಿ ರೈತಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ರೈತರಿಗೆ ವಿತರಿಸುತ್ತಿದ್ದ ಬಿತ್ತನೆ ಬೀಜ ಹಾಗೂ ಕೃಷಿ ಪರಿಕರಗಳನ್ನು ಪರಿಶೀಲಿಸಿದರು. ನಂತರ ಮಾದನಘಟ್ಟ ಮಾದನಘಟ್ಟ ಗ್ರಾಮದ ರೈತರು ತಮ್ಮ ಜಮೀನಿನಲ್ಲಿ ಪಿಡಿಎಂಸಿ-ಓಐ ಯೋಜನೆಯಡಿ ನಿರ್ಮಿಸಿಕೊಂಡ ಕೃಷಿ ಹೊಂಡ ಹಾಗೂ ಎರೆಹುಳು ಘಟಕ ವೀಕ್ಷಣೆ ಮಾಡಿದರು.
ಕೊಂಡ್ಲಿ ಸರ್ಕಾರಿ ಶಾಲೆಗೆ ಭೇಟಿ ನೀಡಿ ನರೇಗಾ ಯೋಜನೆಯಡಿ ಶಾಲಾ ಆವರಣ ಗೋಡೆ ನಿರ್ಮಾಣ ಕಾಮಗಾರಿ ಹಾಗೂ ಬಿಸಿಯೂಟ ಯೋಜನೆಯನ್ನು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಕೃಷಿ ಉಪನಿರ್ದೇಶಕ ಟಿ.ಎನ್.ಅಶೋಕ್, ನರೇಗಾ ಯೋಜನೆಯ ಸಹಾಯಕ ನಿರ್ದೇಶಕರು, ಗುಬ್ಬಿ ಸಹಾಯಕ ಕೃಷಿ ನಿರ್ದೇಶಕ ಜಗನ್ನಾಥ್ ಗೌಡ ಸೇರಿದಂತೆ ಕೃಷಿ ಇಲಾಖೆ ಸಿಬ್ಬಂದಿಗಳು ಹಾಜರಿದ್ದರು.