ಗಾಜಿನಮನೆ ನವೀಕರಣಕ್ಕೆ 3 ಕೋಟಿ, ಅಮಾನಿಕೆರೆಯಲ್ಲಿ ಜಲಕ್ರೀಡಾ ಅಕಾಡೆಮಿ ಸ್ಥಾಪನೆ

ತುಮಕೂರು : ಅಮಾನಿಕೆರೆಯಲ್ಲಿರುವ ಗಾಜಿನಮನೆ ನವೀಕರಣಕ್ಕೆ 3 ಕೋಟಿ ರೂ., ಅಮಾನಿಕೆರೆಯಲ್ಲಿ ಜಲಕ್ರೀಡಾ ಅಕಾಡಮಿ ಸ್ಥಾಪನೆ, ಊರ್ಡಿಗೆರೆ ಹೋಬಳಿ ಮಾಚನಹಳ್ಳಿಯಲ್ಲಿ ಸುಸಜ್ಜಿತ ಬಡಾವಣೆ ಸೇರಿದಂತೆ 2026-27ನೇ ಸಾಲಿನಲ್ಲಿ ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರ ಹಮ್ಮಿಕೊಂಡಿರುವ ಯೋಜನೆಗಳ ಆಯವ್ಯಯಕ್ಕೆ ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ನಡೆದ ಇಂದಿನ ಸಭೆಯಲ್ಲಿ ಅನುಮೋದನೆ ನೀಡಲಾಯಿತು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶನಿವಾರ ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರ ಅಧ್ಯಕ್ಷತೆಯಲ್ಲಿ 2026-27ನೇ ಸಾಲಿನ ಆಯವ್ಯಯ ಕುರಿತ ಸಭೆ ನಡೆಯಿತು.

ಅಮಾನಿಕೆರೆಯಲ್ಲಿರುವ ಗಾಜಿನಮನೆಯಲ್ಲಿ ವರ್ಷವಿಡೀ ಒಂದಿಲ್ಲೊಂದು ಪ್ರಮುಖ ಕಾರ್ಯಕ್ರಮಗಳು ಜರುಗುತ್ತಿರುತ್ತವೆ. ಆದರೆ ಮಳೆಗಾಲದಲ್ಲಿ ಗಾಳಿ-ಮಳೆಗೆ ಗಾಜುಗಳು ಒಡೆದು ಅಸ್ತವ್ಯಸ್ತವಾಗುತ್ತಿರುತ್ತವೆ. ಅಲ್ಲದೆ, ಬೃಹತ್ ಗಾಜಿನಮನೆಯಲ್ಲಿ ಪ್ರತಿಧ್ವನಿ ನಿಯಂತ್ರಣ ವ್ಯವಸ್ಥೆ ಇಲ್ಲದಿರುವುದರಿಂದ ಪ್ರಸ್ತುತ ಮೀಸಲಿಟ್ಟಿರುವ 1.50 ಕೋಟಿ ರೂ. ಸಾಲುವುದಿಲ್ಲ ಎಂದು ಶಾಸಕರಾದ ಜಿ.ಬಿ. ಜ್ಯೋತಿಗಣೇಶ್ ಅವರು ತಿಳಿಸಿದ ಹಿನ್ನೆಲೆಯಲ್ಲಿ, ಗಾಜಿನಮನೆಯ ಪೂರ್ಣ ಪ್ರಮಾಣದಲ್ಲಿ ಸುಸಜ್ಜಿತ ಸಭಾಂಗಣ ನವೀಕರಣಕ್ಕಾಗಿ 3 ಕೋಟಿ ರೂ.ಗಳಿಗೆ ಅನುಮೋದನೆ ನೀಡಲಾಯಿತು.

ತುಮಕೂರು ಅಮಾನಿಕೆರೆಯಲ್ಲಿ ಕಯಾಕಿಂಗ್ ಮತ್ತು ಕೆನೋಯಿಂಗ್ ಜಲಕ್ರೀಡಾ ಅಕಾಡೆಮಿ ಸ್ಥಾಪಿಸುವ ಪ್ರಸ್ತಾವನೆಗೆ ಇಂದಿನ ಸಭೆಯಲ್ಲಿ ಅನುಮೋದನೆ ನೀಡಲಾಯಿತು. ಇದರಿಂದಾಗಿ ತುಮಕೂರಿನಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಇಂಬುನೀಡಿದಂತಾಗಿದೆ.

ತುಮಕೂರು ತಾಲ್ಲೂಕು ಊರ್ಡಿಗೆರೆ ಹೋಬಳಿ ಮಾಚನಹಳ್ಳಿ ಗ್ರಾಮದ ವಿವಿಧ ಸರ್ವೆ ನಂಬರ್ ಜಮೀನು ಭೂಸ್ವಾಧೀನಪಡಿಸಿಕೊಂಡು ಸುಮಾರು 56 ಎಕರೆ ಜಮೀನಿನಲ್ಲಿ ವಿಶಾಲ ರಸ್ತೆ, ಉದ್ಯಾನ ಸೇರಿದಂತೆ ಸುಸಜ್ಜಿತ ಬಡಾವಣೆ ನಿರ್ಮಿಸುವ ಯೋಜನೆಗೆ ಸಭೆಯಲ್ಲಿ ಅನುಮೋದನೆ ನೀಡಲಾಯಿತು.

ಈ ಯೋಜನೆ ವ್ಯಾಪ್ತಿಯ ಭೂಸ್ವಾಧೀನ ಪ್ರಕ್ರಿಯೆ ಸಂಬಂಧಿಸಿದಂತೆ ರೈತರಿಗೆ ಪರಿಹಾರ ಅಥವಾ 50:50 ಅನುಪಾತದ ಪಾಲುದಾರಿಕೆ ಸಂಬಂಧ ಯೋಜನೆ ರೂಪುರೇಷೆ ಸಿದ್ಧಗೊಂಡಿದ್ದು, ರೈತರು ಒಪ್ಪಿದಲ್ಲಿ ಶೀಘ್ರದಲ್ಲೇ ಭೂಸ್ವಾಧೀನ ಪ್ರಕ್ರಿಯೆ ಮಾಡಲು ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಯಿತು.

ತುಮಕೂರು ನಗರ ರಿಂಗ್ ರಸ್ತೆಯಲ್ಲಿರುವ ದಿಬ್ಬೂರು ವೃತ್ತವು ಅಪಘಾತಗಳ ಸ್ಥಳವಾಗಿದ್ದು, ಇದನ್ನು ಪೊಲೀಸ್ ಇಲಾಖೆ ಸಲಹೆಯಂತೆ ಅಭಿವೃದ್ಧಿಪಡಿಸುವುದು, ಈಗಾಗಲೇ ಅನುಮೋದನೆಗೊಂಡಿರುವ ಯೋಜನೆಗಳ ಟೆಂಡರ್‍ಗಳ ಅನುಮೋದನೆ, ಮಹಾ ಯೋಜನೆ ನಕ್ಷೆಯಂತೆ ಎಪಿಎಂಸಿ ಮತ್ತು ಇಸ್ರೋ ಮಧ್ಯಭಾಗದಲ್ಲಿ ಹಾದುಹೋಗಿರುವ 40 ಅಡಿ ಮಹಾಯೋಜನೆ ರಸ್ತೆಯನ್ನು ಇಸ್ರೋ ಸಂಸ್ಥೆಯಿಂದ ಅಭಿವೃದ್ಧಿಪಡಿಸಲು ಅವರೊಂದಿಗೆ ವ್ಯವಹರಿಸುವ ತೀರ್ಮಾನ, ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯ ವಿವಿಧ ಭೂಮಿಯ ಅದಲು ಬದಲು ಸಂಬಂಧಿಸಿದ ತೀರ್ಮಾನಗಳು ಸೇರಿದಂತೆ ಮಹತ್ತರ ತೀರ್ಮಾನಗಳನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.

ಅಲ್ಲದೆ, ತುಮಕೂರು ನಗರದ ಗೆದ್ದಲಹಳ್ಳಿ ಗ್ರಾಮದ ಅಂಕಿತ ಎಜುಕೇಷನ್ ಟ್ರಸ್ಟ್ ಬೆಂಗಳೂರು ಇವರಿಗೆ ಹಂಚಿಕೆಯಾಗಿರುವ ನಾಗರಿಕ ಸೌಕರ್ಯ ನಿವೇಶನದ ಉದ್ದೇಶ ಬದಲಾವಣೆ ಸಂಬಂಧಿಸಿದಂತೆ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸುವ ಸಂಬಂಧ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಉಮೇಶ್‍ಚಂದ್ರ ಆಯವ್ಯಯ ಪ್ರಸ್ತಾವನೆಯನ್ನು ಮಂಡಿಸಿದರು. ಶಾಸಕ ಜಿ.ಬಿ. ಜ್ಯೋತಿಗಣೇಶ್, ತುಮಕೂರು ಮಹಾನಗರಪಾಲಿಕೆ ಆಯುಕ್ತೆ ಶುಭ, ಜಿಲ್ಲಾ ಪೊಲೀಸ್ ಅಧೀಕ್ಷಕ ಸಿ. ಗೋಪಾಲ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *