ಸಿ.ಟಿ. ರವಿ ಪ್ರಕರಣ: ಸಭಾಪತಿ ತೀರ್ಮಾನ-ವಿ.ಸೋಮಣ್ಣ

ತುಮಕೂರು – ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರು ಬುದ್ಧಿವಂತ ರಾಜಕಾರಣಿ. ಅವರು ಆ ರೀತಿ ಮಾತನಾಡಿದ್ದಾರೆ ಎನ್ನುವುದು ನನಗೆ ಗೊತ್ತಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಭಾಪತಿಗಳು ತೀರ್ಮಾನ ಕೈಗೊಳ್ಳುತ್ತಾರೆ ಎಂದು ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಇಂದಿಲ್ಲಿ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿ.ಟಿ. ರವಿ ಏನು ಮಾತನಾಡಿದ್ದಾರೆ, ಏನು ಮಾತನಾಡಿಲ್ಲ ಎನ್ನುವುದರ ಬಗ್ಗೆ ತೀರ್ಮಾನ ಮಾಡೋರು ಪರಿಷತ್ ಸಭಾಪತಿಗಳು. ವಿಧಾನ ಪರಿಷತ್‍ನಲ್ಲಿ ಸಭಾಪತಿಗಳು ಎಷ್ಟು ಕಸ್ಟಡಿಯನ್ನೋ ಅದೇ ರೀತಿ ಲೋಕಸಭೆಯಲ್ಲಿ ನಮ್ಮ ಸ್ಪೀಕರ್ ಸಹ ಅಷ್ಟೇ ಕಸ್ಟೋಡಿಯನ್. ಹಾಗಾಗಿ ಸಭಾಪತಿಗಳೇ ತೀರ್ಮಾನ ಮಾಡುತ್ತಾರೆ ಎಂದರು.

ಸಿ.ಟಿ. ರವಿ ಅವರು ಏನು ಮಾತನಾಡಿದ್ದಾರೆ ಎಂಬುದು ನನಗೆ ಸರಿಯಾಗಿ ಗೊತ್ತಿಲ್ಲ. ಪತ್ರಿಕೆಗಳಲ್ಲಿ ಅವಾಚ್ಯ ಪದ ಬಳಕೆ ಮಾಡಿದ್ದಾರೆ ಎಂಬುದನ್ನು ಓದಿದ್ದೇನೆ. ಆದರೆ ರವಿ ಅವರನ್ನು ಇಡೀ ರಾತ್ರಿ ಪೆÇಲೀಸರು ಜೀಪಿನಲ್ಲಿ ಕೂರಿಸಿಕೊಂಡು ಸುತ್ತಾಡಿಸಿ ಮಾನಸಿಕ ಹಿಂಸೆ ನೀಡಿರುವುದು ಯಾವುದೇ ನಾಗರಿಕ ಸರ್ಕಾರಕ್ಕೆ ಗೌರವ ತರುವುದಿಲ್ಲ ಎಂದರು.

ನೆಲಮಂಗಲದ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಕ್ ಕಾರಿನ ಮೇಲೆ ಬಿದ್ದು ಸಂಭವಿಸಿದ ಭೀಕರ ಅಪಘಾತದ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಸೋಮಣ್ಣ ಅವರು, ಬೆಂಗಳೂರು ಮತ್ತು ತುಮಕೂರು ನಡುವೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಓಡಾಡುತ್ತಿದ್ದ ವೇಳೆ ಆದಂತಹ ತೊಂದರೆಗಳನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಬಳಿ ಹೇಳಿದ್ದೇನೆ. ಅಲ್ಲದೆ ಈ ಕುರಿತು ಸವಿಸ್ತಾರವಾಗಿ ಪತ್ರವನ್ನು ಸಹ ಬರೆದಿದ್ದೇನೆ. ಎಷ್ಟು ಕಾಮಗಾರಿ ಆಗಿವೆ ಎಂಬುದರ ಬಗ್ಗೆಯೂ ತಿಳಿಸಿದ್ದೇನೆ ಎಂದರು.

ಕಳೆದ ಮೂರು ವರ್ಷದಲ್ಲಿ ಈ ಹೆದ್ದಾರಿಯಲ್ಲಿ 256 ಜನ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಇದುವರೆಗೂ ಎಲ್ಲಿ ಅಪಘಾತಗಳು ಆಗುತ್ತಿದ್ದವೋ ಅದೇ ಸ್ಥಳದಲ್ಲಿ ಪದೇ ಪದೇ ಅಪಘಾತಗಳು ಸಂಭವಿಸುತ್ತಿವೆ. ಈ ಬಗ್ಗೆಯೂ ಕೇಂದ್ರ ಸಚಿವರಿಗೆ ವರದಿ ನೀಡಲಾಗಿದೆ ಎಂದು ಅವರು ಹೇಳಿದರು.

ಜನವರಿ 2 ರಿಂದ ನೆಲಮಂಗಲದಿಂದ ತುಮಕೂರಿನ ಊರುಕೆರೆ ವರೆಗೆ 6 ಪಥದ ರಸ್ತೆ ಕಾಮಗಾರಿ ಪ್ರಾರಂಭವಾಗಲಿದೆ. ಯುದ್ದೋಪಾದಿಯಲ್ಲಿ ಕಾಮಗಾರಿ ನಡೆಸಿ ಮುಂದಿನ ನಾಲ್ಕೈದು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಒತ್ತಡ ಹೇರಿದ್ದೇನೆ ಎಂದರು.

ನೆಲಮಂಗಲದಿಂದ 45 ಕಿ.ಮೀ. ಹೊರಗಿನ ರಸ್ತೆಗೆ 2046 ಕೋಟಿ ರೂ. ಅನುಮೋದನೆ ದೊರೆತಿದೆ. ಆದರೆ ಕಾಮಗಾರಿ ಅರ್ಧಕ್ಕೆ ನಿಂತಿದೆ. ಈ ಕಾಮಗಾರಿ ಮಾಡುತ್ತಿದ್ದ ಗುತ್ತಿಗೆದಾರ ಅರ್ಧಕ್ಕೆ ಬಿಟ್ಟು ಹೋಗುವ ಸ್ಥಿತಿಯಲ್ಲಿದ್ದನು. ಈ ಬಗ್ಗೆಯೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಗಮನಕ್ಕೆ ತಂದಿದ್ದೇವೆ. ಅವರು ಗುತ್ತಿಗೆದಾರನನ್ನು ಕರೆಸಿ ಮಾತನಾಡಿದ್ದಾರೆ. ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು.

ಮಠಕ್ಕೆ ಉಚಿತ ನೀರು:

ಸಿದ್ದಗಂಗಾ ಮಠಕ್ಕೆ ವಿದ್ಯುತ್ ಬಿಲ್ ಪಾವತಿಗೆ ಕೆಐಎಡಿಬಿ ಪತ್ರ ಬರೆದ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವ ಸೋಮಣ್ಣ ಅವರು, ಈಗಾಗಲೇ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರು ಈ ವಿಚಾರಕ್ಕೆ ಸಂಬಂಧಿಸಿದಂತೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಅವರಿಗೆ ಧನ್ಯವಾದ ಸಮರ್ಪಿಸುತ್ತೇನೆ ಎಂದರು.

ಇನ್ನು ಮುಂದೆ ಶ್ರೀಮಠಕ್ಕೆ ನೀರನ್ನು ಉಚಿತವಾಗಿ ಬಿಡುತ್ತೇವೆ ಎಂದು ಸಹ ಸಚಿವರು ಹೇಳಿದ್ದಾರೆ. ಹಾಗಾಗಿ ಈ ವಿಚಾರವನ್ನು ಇಲ್ಲಿಗೆ ಬಿಡೋಣ, ಈ ಬಗ್ಗೆ ಹೆಚ್ಚು ಚರ್ಚೆ ಬೇಡ ಎಂದರು.

ಹೇಮಾವತಿ ಎಕ್ಸ್‍ಪ್ರೆಸ್ ಲಿಂಕ್ ಕೆನಾಲ್‍ಗೆ ವಿರೋಧ :

ತುಮಕೂರು ಜಿಲ್ಲೆಯ ಜನರ ಜೀವನಾಡಿಯಾಗಿರುವ ಹೇಮಾವತಿ ನೀರನ್ನು ಎಕ್ಸ್‍ಪ್ರೆಸ್ ಲಿಂಕ್ ಕೆನಾಲ್ ಮೂಲಕ ಮಾಗಡಿ, ರಾಮನಗರಕ್ಕೆ ಕೊಂಡೊಯ್ಯುವ ಯೋಜನೆಗೆ ನನ್ನ ವಿರೋಧ ಇದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೇವಲ ರಾಮನಗರ, ಕುಣಿಗಲ್, ಕನಕಪುರಕ್ಕೆ ಮಾತ್ರ ಮಂತ್ರಿ ಅಲ್ಲ. ಇಡೀ ರಾಜ್ಯಕ್ಕೆ ಇವರು ಉಪಮುಖ್ಯಮಂತ್ರಿ. ಇದನ್ನು ಡಿ.ಕೆ. ಶಿವಕುಮಾರ್ ಅವರು ಅರ್ಥ ಮಾಡಿಕೊಳ್ಳಬೇಕು ಎಂದರು.

ತುಮಕೂರಿನ ನಾಗರಿಕರು, ಮತದಾರರಿಗೆ ಯಾರೇ ಅನ್ಯಾಯ ಮಾಡಿದರೂ ಅದು ಅನ್ಯಾಯವೇ. ನಾನು ಈ ಕ್ಷೇತ್ರಕ್ಕೆ ಬರುವುದಕ್ಕೆ ಮುಂಚೆಯೇ ಈ ಎಲ್ಲವೂ ನಡೆದು ಹೋಗಿತ್ತು. ಇದನ್ನು ನನ್ನ ಕಾಲದಲ್ಲಿ ಆರಂಭವಾದ ಯೋಜನೆಯಲ್ಲ. ಈಗಾಗಲೇ ನಾನು ಯಾವ ಮಂತ್ರಿಗೆ ಏನು ಹೇಳಬೇಕೋ ಅದನ್ನೆಲ್ಲಾ ಹೇಳಿದ್ದೀನಿ ಎಂದರು.

Leave a Reply

Your email address will not be published. Required fields are marked *