ತುಮಕೂರು. ನಗರದ ಗೆದ್ದಲಹಳ್ಳಿಯ ಪರಿಶಿಷ್ಟ ಜಾತಿ-ಪಂಗಡಗಳ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯರ ಹಾಸ್ಟಲ್‍ಗೆ ಅಧಿಕಾರಿ ವರ್ಗ ತೆರಳಿ ವಿದ್ಯಾರ್ಥಿನಿಯರೊಂದಿಗೆ ಸಭ್ಯತೆ ಮೀರಿ ಡ್ಯಾನ್ಸ್ ಮಾಡಿ ಮಕ್ಕಳ ಹಕ್ಕುಗಳನ್ನು ಉಲ್ಲಂಘನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ಅಯೋಗಕ್ಕೆ ಸತ್ಯಶೋಧನಾ ಸಮಿತಿಯು ವರದಿಯನ್ನು ಸಲ್ಲಿಸಿದೆ.
ಹಾಸ್ಟಲ್‍ನಲ್ಲಿ ತುಮಕೂರು ನಗರದ ಪರಿಶಿಷ್ಟ ಜಾತಿ-ಪಂಗಡಗಳ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯರ ಹಾಸ್ಟಲ್ ನಲ್ಲಿ ನಡೆದ ಡ್ಯಾನ್ಸ್ ಪ್ರಕರಣಕ್ಕೆ ಮತ್ತು ಮಕ್ಕಳ ಹಕ್ಕು ಉಲ್ಲಂಘನೆಯ ಬಗ್ಗೆ ತನಿಖೆಗೆ ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ಅಯೋಗದ ನಿಕಟ ಪೂರ್ವ ಸದಸ್ಯ ಎಚ್.ಸಿ,ರಾಘವೇಂದ್ರ, ಬೆಂಗಳೂರಿನ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಅಂಜಲಿ ಮತ್ತು ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿದೇಶಕರಾದ ತಿರುಮಲರಾವ್ ಸೇರಿದಂತೆ ಮೂರು ಜನರ ಸತ್ಯ ಶೋಧನಾ ಸಮಿತಿಯನ್ನು ತನಿಖೆ ನಡೆಸಿ ವರದಿ ನೀಡಲು ನೇಮಿಸಲಾಗಿತ್ತು.
ಸತ್ಯಶೋಧನಾ ಸಮಿತಿಯು ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ಅಯೋಗದ ಅಧ್ಯಕ್ಷರಿಗೆ ತನಿಖಾ ವರದಿಯನ್ನು 2024 ಏಪ್ರಿಲ್ 29ರಂದು ನೀಡಿದೆ. ಸಮಿತಿಯು ಗೆದ್ದಲಹಳ್ಳಿಯಲ್ಲಿರುವ ಹಾಸ್ಟಲ್ ಡ್ಯಾನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂದಿನ ಜಿಲ್ಲಾಧಿಕಾರಿಗಳು, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಮತ್ತು ಜಿಲ್ಲಾ ರಕ್ಷಣಾಧಿಕಾರಿಗಳನ್ನು ಮತ್ತು ಹಾಸ್ಟಲ್ ಬಾಲಕಿಯರನ್ನು ಸತ್ಯಶೋಧನಾ ಸಮಿತಿಯು ವಿಚಾರಣೆಗೆ ಒಳಪಡಿಸಿ ವರದಿಯನ್ನು ಸಲ್ಲಿಸಿದೆ.
ಈ ಪ್ರಕರಣದಲ್ಲಿ ಜಿಲ್ಲಾಧಿಕಾರಿಗಳು ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು, ವಿದ್ಯಾರ್ಥಿನಿಯರ ನಿಲಯದ ಸಿಬ್ಬಂದಿ ಹಾಗೂ ಇತರ ಅಧಿಕಾರಿಗಳು ಮಕ್ಕಳ ಹಕ್ಕುಗಳನ್ನು, ಕರ್ನಾಟಕ ರಾಜ್ಯ ನಾಗರಿಕ ಸೇವಾ (ನಡತೆ) ನಿಯಮ ಹಾಗೂ ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ನೀತಿ-2016 ರ ಮಾರ್ಗಸೂಚಿಗಳನ್ನು ಸ್ಪಷ್ಟವಾಗಿ ಉಲ್ಲಂಘನೆ ಮಾಡಿರುವುದು ಕಂಡು ಬಂದಿದೆ ಎಂದು ಸಮತಿಯು ತಿಳಿಸಿದೆ.
ತನಿಖೆಯಲ್ಲಿ ಭಾಗವಹಿಸಿದ ಯಾವೊಬ್ಬ ಅಧಿಕಾರಿಗಳು ಕೂಡ ಕಾರ್ಯಕ್ರಮ ಆಯೋಜನೆ ಮತ್ತು ಆ ದಿನದಂದು ಜರುಗಿದ ವಿವಿಧ ಕಾರ್ಯಕ್ರಮಗಳ ಒಂದೇ ಒಂದು ಪೋಟೋ ಕೂಡ ಲಭ್ಯವಿಲ್ಲವೆಂದು ಹೇಳಿರುವುದಲ್ಲದೇ, ಕಾರ್ಯಕ್ರಮ ಆಯೋಜನೆಯ ಯಾವುದೇ ಸ್ಪಷ್ಟ ರೂಪರೇಷಗಳು ಹಾಗೂ ಕಾರ್ಯಕ್ರಮದ ಪ್ರಾರಂಭದಿಂದ ಅಂತ್ಯದ ವರೆಗೆ ಏನು ಜರುಗಿತು ಎಂಬುದನ್ನು ತನಿಖಾ ಸಮಿತಿ ಮುಂದೆ ಸ್ಪಷ್ಟವಾಗಿ ಮಾಹಿತಿ ನೀಡುವಲ್ಲಿ ವಿಫಲರಾಗಿ ಅನೇಕ ಅಂಶಗಳನ್ನು ಮರೆಮಾಚಿರುವುದು ಕಂಡು ಬಂದಿತು ಎಂದು ಸಮಿತಿಯ ವರದಿಯಲ್ಲಿ ತಿಳಿಸಿದೆ.
2023ರ ನವೆಂಬರ್ 16 ರಂದು ಈ ವಿದ್ಯಾರ್ಥಿನಿಯರ ನಿಲಯದಲ್ಲಿ ಮಕ್ಕಳ ದಿನಾಚರಣೆ, ಕನ್ನಡ ರಾಜ್ಯೋತ್ಸವ, ದೀಪಾವಳಿ ಅಥವಾ ಜಿಲ್ಲಾಧಿಕಾರಿಗಳಿಗೆ ಅಭಿನಂದನಾ ಕಾರ್ಯಕ್ರಮ ಎಂದು ಒಬ್ಬೊಬ್ಬರು ಒಂದೊಂದು ತರಹ ಹೇಳಿದ್ದಲ್ಲದೆ, ಇದು ಎಲ್ಲಾ ಮಕ್ಕಳೇ ಆಯೋಜಿಸಿದ್ದು ಎಂದು ವಿಭಿನ್ನ ಹೇಳಿಕೆಗಳನ್ನು ನೀಡಿರುತ್ತಾರೆ. ಇವು ಯಾವುದೇ ಆಗಿದ್ದಲ್ಲಿ, 18 ವರ್ಷದೊಳಗಿನ ಬಾಲಕಿಯರು ಇರುವ ವಿದ್ಯಾರ್ಥಿನಿಯರ ನಿಲಯದಲ್ಲಿ ಹಗಲು ಅಥವಾ ಸಂಜೆ 6ಗಂಟೆಯ ಒಳಗಾಗಿ ಆಯೋಜಿಸಬೇಕಿತ್ತು,ಆದರೆ ಈ ಬಗ್ಗೆ ಕನಿಷ್ಠ ಜ್ಞಾನ ಇಲ್ಲದೆ ಕಾರ್ಯಕ್ರಮವನ್ನು ಸಂಜೆ 6.30 ರ ನಂತರ ಮಾಡಿರುವುದು ಮಕ್ಕಳ ಹಕ್ಕುಗಳ ಮತ್ತು ಮಕ್ಕಳ ರಕ್ಷಣಾ ನೀತಿಯ ಸ್ಪಷ್ಟ ಉಲ್ಲಂಘನೆ ಆಗಿರುವುದು ಕಾಣುತ್ತದೆ. ಅದೂ ಅಲ್ಲದೆ ವಿಚಾರಣೆಯ ಸಂದರ್ಭದಲ್ಲಿ ಈ ಕಾರ್ಯಕ್ರಮಗಳ ಆಯೋಜನೆಯ ಯಾವುದೇ ಕುರುಹುಗಳು ಅಥವಾ ವ್ಯವಸ್ಥೆಗಳು ಮಾಡಿರುವುದು ಕಿಂಚಿತ್ತೂ ಕಂಡು ಬಂದಿಲ್ಲ. ಕೇವಲ ಕೆಲವು ಮಕ್ಕಳಿಗೆ ಬಹುಮಾನ ವಿತರಣೆ ಹಾಗೂ ಹಿಂದೆ ಜಿಲ್ಲಾಧಿಕಾರಿಗಳು ಮಾಡಿದ ಉತ್ತಮ ಕೆಲಸಕ್ಕಾಗಿ ಅವರಿಗೆ ಅಭಿನಂದನಾ ಕಾರ್ಯಕ್ರಮ ಎಂಬುದು ಮೇಲುನೋಟಕ್ಕೆ ಕಂಡು ಬಂದಿದೆ ಎಂದು ವರದಿಯಲ್ಲಿ ತಿಳಿಸಿದೆ.
ಆದರೆ ಬಾಲಕಿಯರ ವಸತಿ ನಿಲಯದಲ್ಲಿ ಸಂಜೆ 6 ಗಂಟೆಯ ನಂತರ ಈ ತರಹದ ಕಾರ್ಯಕ್ರಮಗಳನ್ನು ಮಾಡುವುದು ತಪ್ಪು ಎಂಬ ಕನಿಷ್ಟ ಅರಿವು ಇರುವ ಜಿಲ್ಲೆಯ ಹಿರಿಯ ಅಧಿಕಾರಿಗಳು ಅಥವಾ ಇದರಲ್ಲಿ ಭಾಗವಹಿಸಿದ ಅಧಿಕಾರಿಗಳು ಅಥವಾ ಸಿಬ್ಬಂದಿಗಳು ಈ ಕಾರ್ಯಕ್ರಮವನ್ನು ತಪ್ಪಿಸಬಹುದಿತ್ತು. ಆದರೆ ಆ ಕ್ರಮಕ್ಕೆ ಮುಂದಾಗದೆ ಕಾರ್ಯಕ್ರಮ ಆಯೋಜನೆ ಮಾಡಿರುವುದು ಮತ್ತು ಎಲ್ಲರೂ ಭಾಗವಹಿಸಿರುವುದು, ಮೈಕ್, ಹಾಡು, ಡ್ಯಾನ್ಸ್, ಊಟದ ವ್ಯವಸ್ಥೆ ಮಾಡಿರುವುದು ನೋಡಿದರೆ ಇದು ಯಾವುದೂ ಒಂದು ರೀತಿಯ ಸ್ವ ಹಿತಾಸಕ್ತಿಯ ಉದ್ದೇಶದಿಂದಲೇ ಮಾಡಿರುವ ಕಾರ್ಯಕ್ರಮ ಎಂಬುದು ಕಂಡುಬರುತ್ತದೆ ಎಂದು ಸತ್ಯಶೋಧನಾ ಸಮಿತಿ ತಿಳಿಸಿದೆ.
ವಿದ್ಯಾರ್ಥಿನಿಯರ ನಿಲಯದಲ್ಲಿ
ಪದವಿ ಶಿಕ್ಷಣ ಪಡೆಯಿತ್ತಿರುವ ಕಾಲೇಜು ವಿದ್ಯಾರ್ಥಿನಿಯರು ಹೆಚ್ಚು ಇದ್ದು, ಪದವಿ ಪೂರ್ವ ಶಿಕ್ಷಣ ಪಡೆಯುತ್ತಿರುವ (ಪಿ.ಯು.ಸಿ) 18 ವರ್ಷದೊಳಗಿನ 70 ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿರುವುದು ಕಂಡುಬಂದಿದೆ. ಹಾಗಾಗಿ ಆಪ್ರಾಪ್ತ ಬಾಲಕಿಯರು ಇರುವಾಗ ಸಂಜೆ-ರಾತ್ರಿ ವೇಳೆ ಯಾವುದೇ ಕಾರ್ಯಕ್ರಮ ಆಯೋಜಿಸುವಾಗ ಸ್ಪಷ್ಟ ನಿಯಮ ಹಾಗೂ ಕ್ರಮ ಬದ್ಧತೆ ಇಲ್ಲದೆ ಕಾರ್ಯಕ್ರಮ ಆಯೋಜಿಸಿರುವುದ ಕಂಡು ಬಂದಿದೆ ಎಂದು ವರದಿಯಲ್ಲಿ ತಿಳಿಸಿದೆ.
ಈ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ತನಿಖಾ ತಂಡ ಗಮನಿಸಿರುವ ಪ್ರಮುಖ ಅಂಶವೇನೆಂದರೆ 16-11-2023 ರಂದು ನಿಜವಾಗಿ ಯಾವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂಬುದನ್ನು ಪ್ರಮಾಣಿಕವಾಗಿ ಸತ್ಯ ಹೇಳುವಲ್ಲಿ ಎಲ್ಲಾ ಅಧಿಕಾರಿಗಳು ಹಾಗೂ ವಿದ್ಯಾರ್ಥಿನಿಯರ ನಿಲಯದ ಅಧಿಕಾರಿಗಳು ಸಂಪೂರ್ಣವಾಗಿ ವಿಫಲರಾಗಿರುವುದಲ್ಲದೇ, ಎಲ್ಲಾ ಅಧಿಕಾರಿಗಳು ಮತ್ತು ವಿದ್ಯಾರ್ಥಿನಿಯರ ನಿಲಯದ ಸಿಬ್ಬಂದಿಗಳು ಹಿಂದೇಟು ಹಾಕಿದ್ದು ಸತ್ಯವನ್ನು ಮರೆಮಾಚಲು ಸಂಪೂರ್ಣವಾಗಿ ಪ್ರಯತ್ನಸಿರುವುದು ಕಂಡು ಬಂದಿದೆ ಎಂದು ವರದಿಯಲ್ಲಿ ತಿಳಿಸಿದೆ.
2023ರ ನವೆಂಬರ್ 16 ರಂದು ಆಯೋಜಿಸಿರುವ ಕಾರ್ಯಕ್ರಮಕ್ಕೆ ಅಧಿಕಾರಿಗಳು, ಅಧಿಕಾರಿಯೇತರ ಅನೇಕ ಜನ ಭಾಗವಹಿಸಿದ್ದಾರೆ ಅವರ ಹೆಸರು, ಭೇಟಿ ನೀಡಿದ, ಉದ್ದೇಶ, ಒಳಗಡೆ ಬಂದ ಸಮಯ, ಹೊರಗಡೆ ಹೋದ ಸಮಯ ಸಂಪರ್ಕ ಸಂಖ್ಯೆ ಹಾಗೂ ವಿವರಗಳು ಯಾವುದೇ ದಾಖಲೆಗಳಲ್ಲಿ ಸಹಿ ಇರುವುದಿಲ್ಲ. ಯಾವುದೇ ಚಲನ ವಲನ ವಹಿಗಳನ್ನು ನಿರ್ವಹಿಸಿರುವುದಿಲ್ಲ. ಶಾಮಿಯಾನ ಮೈಕ್ ಸೆಟ್ ಹಾಕಿದವರು, ಅಧಿಕಾರಿಗಳ ಕಾರು ಚಾಲಕರು, ಪಟಾಕಿ ಮಾಲೀಕ, ಅವರ ಮಗ. ಮಾಧ್ಯಮದವರು, ಹೊರಗಡೆಯಿಂದ ಮೈಸೂರು ಪಾಕ್ ತಂದವ ಮತ್ತು ಇತರರ ವಿವರ ಎಲ್ಲೂ ದಾಖಲಾಗಿರುವುದು ಕಂಡು ಬಂದಿಲ್ಲ.
ತನಿಖೆಯಲ್ಲಿ ಜಿಲ್ಲಾಧಿಕಾರಿಗಳನ್ನು ಹೊರತು ಪಡಿಸಿ, ಭಾಗವಹಿಸಿದ ಎಲ್ಲಾ ಅಧಿಕಾರಿಗಳು ಮತ್ತು ಇತರರು ದಿನಾಂಕ 16/11/2023 ರಂದು ಆಯೋಜಿಸಿದ ಕಾರ್ಯಕ್ರಮ ಸಾಯಂಕಾಲ 6.30 ರಿಂದ 7.30ರ ಒಳಗೆ ಪೂರ್ಣಗೊಂಡಿದೆ ಎಂದು ತಿಳಿಸಿದ್ದಾರೆ. ಆದರೆ ಜಿಲ್ಲಾಧಿಕಾರಿಗಳು ಮಾತ್ರ ರಾತ್ರಿ 8.45ಕ್ಕೆ ಕಾರ್ಯಕ್ರಮ ಮುಕ್ತಾಯವಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದು ನಿಜವಾಗಿ ಯಾವ ಉದ್ದೇಶದಿಂದ ಮಾಡಿರುವ ಕಾರ್ಯಕ್ರಮ? ಎಂಬ ಸತ್ಯವನ್ನು ಮರೆಮಾಚಿರುವುದು ಕಂಡುಬರುತ್ತದೆ ಎಂದು ಸಮಿತಿಯು ವರದಿಯಲ್ಲಿ ತಿಳಿಸಿದೆ.
18 ವರ್ಷದೊಳಗಿನ ವಿದ್ಯಾರ್ಥಿನಿಯರು ಇರುವ ವಿದ್ಯಾರ್ಥಿನಿಯರ ನಿಲಯದ ಒಳಗೆ ಯಾವುದೇ ನಿಯಮ-ಶಿಷ್ಟಚಾರ-ಕ್ರಮ ಬದ್ಧತೆ ಇಲ್ಲದೆ, ಖಾಸಗಿ ದೃಶ್ಯ ಮಾಧ್ಯಮದವರು ನಿಲಯದ ಆವರಣದೊಳಗೆ ಬಂದು ಮಕ್ಕಳ ಕಾರ್ಯಕ್ರಮವನ್ನು ಚಿತ್ರೀಕರಿಸಿ, ಮಕ್ಕಳನ್ನು ಮಾತನಾಡಿಸಿ ಆ ದೃಶ್ಯಗಳನ್ನು ಮತ್ತು ತುಣುಕುಗಳನ್ನು ದೃಶ್ಯ ಮಾಧ್ಯಮದಲ್ಲಿ ಸಾರ್ವಜನಿಕವಾಗಿ ಪ್ರಸಾರ ಮಾಡಿರುವುದು, ಈ ವಸತಿ ನಿಲಯಕ್ಕೆ ಯಾವುದೇ ಮಕ್ಕಳ ರಕ್ಷಣಾ ನಿಯಮ ಇಲ್ಲದಿರುವುದು ಕಂಡು ಬಂದಿದೆ, ಈ ಬಗ್ಗೆ ಯಾವುದೇ ಅಧಿಕಾರಿಗಳಿಗೆ ನಿಯಮ/ಕಾನೂನು ಇರುವ ಬಗ್ಗೆ ಸ್ವಲ್ಪವೂ ಅರಿವಿನ ಜ್ಞಾನ ಇಲ್ಲದಿರುವುದು ಕಂಡು ಬಂದಿದ್ದು ಇದರಿಂದ ಈ ವಸತಿ ನಿಲಯದಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳ ಹಕ್ಕು, ಘನತೆ. ಗುರುತು, ಸ್ವಾತಂತ್ರ್ಯ ಗೌಪ್ಯತೆ, ನಂಬಿಕೆಗೆ ಹಾಗೂ ಸ್ವಾಭಿಮಾನಕ್ಕೆ ಧಕ್ಕೆಯಾಗಿರುವುದು ಸ್ಪಷ್ಟವಾಗಿ ಕಂಡು ಬಂದಿದೆ ಎಂದು ವರದಿಯಲ್ಲಿ ತಿಳಿಸಿದೆ.
ಮಕ್ಕಳ ಹಿತದೃಷ್ಟಿಯಿಂದ, ಈ ವಿದ್ಯಾರ್ಥಿನಿಯರ ನಿಲಯ ಸೇರಿದಂತೆ ಸಮಾಜ ಕಲ್ಯಾಣ ಇಲಾಖೆ ಹಾಗೂ ಇತರ ಇಲಾಖೆಗಳಿಂದ ನಡೆಯುವ ಶಿಕ್ಷಣ ಸಹಿತ ಹಾಗೂ ಶಿಕ್ಷಣ ರಹಿತ ವಸತಿ ನಿಲಯಗಳಲ್ಲಿ ನಡೆಯುವ ಯಾವುದೇ ರಾಷ್ಟ್ರೀಯ ಕಾರ್ಯಕ್ರಮ, ದಿನಾಚರಣೆ, ಹಬ್ಬ ಮತ್ತು ವಸತಿ ನಿಲಯದ ವಿವಿಧ ಸಮಾರಂಭ, ಕಾರ್ಯಕ್ರಮಗಳಿಗೆ ಯಾವುದೇ ರೀತಿಯ ರೂಪುರೇಷೆ, ನಿರ್ಧಿಷ್ಟ ಕ್ರಮಬದ್ಧ ಕಾರ್ಯವಿಧಾನವಾಗಲಿ, ಸ್ಪಷ್ಟ ಲಿಖಿತ ನಿರ್ದೇಶನವಾಗಲಿ ಅಥವಾ ಸೀಮಿತ ಮಾನದಂಡವಾಗಲಿ ಯಾವುದೂ ಇಲ್ಲ ಎನ್ನುವುದು ಇಲ್ಲಿ ಕಂಡು ಬಂದಿದೆ. ಕೇವಲ ಇಲಾಖೆಯ ಸುತ್ತೋಲೆ ಆಧಾರಿತವಾಗಿ ಹಾಗೂ ವಿದ್ಯಾರ್ಥಿನಿಯರ ನಿಲಯದ ಮೆಲ್ವಿಚಾರಕರ ಇಚ್ಛಾನುಸಾರ ನಡೆಯುತ್ತದೆ ಎಂದು ತಿಳಿಸಿದೆ.
ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ನೀತಿ-2016 ರ ನೀತಿಯ ಚೌಕಟ್ಟಿನಲ್ಲಿ ರಾಜ್ಯದ ಪ್ರತಿಯೊಂದು ಶಾಲೆ/ಶಿಕ್ಷಣ ಸಂಸ್ಥೆಗಳು/ವಸತಿ ನಿಲಯಗಳು ತನ್ನ ಮಕ್ಕಳ ರಕ್ಷಣಾ ನೀತಿಯನ್ನು ರಚಿಸಿ ಅದನ್ನು ಅನುಷ್ಠಾನಕ್ಕೆ ತರಬೇಕು. ಈ ಮಕ್ಕಳ ರಕ್ಷಣಾ ನೀತಿಯ ಅಡಿಯಲ್ಲಿ ವಸತಿ ನಿಲಯದಲ್ಲಿ ಮಕ್ಕಳ ರಕ್ಷಣಾ ಸಮಿತಿ ರಚಿಸಿ, ಈ ಸಮಿತಿಯು ವರ್ಷಕ್ಕೆ 4 ಸಭೆ ನಡೆಸಿ ಮಕ್ಕಳ ಸುರಕ್ಷತೆ, ಸುಭದ್ರತೆಯ ಕುರಿತು ಚರ್ಚಸಿ ಕಾಲ ಕಾಲಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು. ಆದರೆ ಈ ವಸತಿ ನಿಲಯದಲ್ಲಿ ಈ ಮಕ್ಕಳ ರಕ್ಷಣಾ ನೀತಿಯಾಗಲಿ, ಸಮಿತಿಯಾಗಲಿ ಯಾವುದೂ ಅನುಷ್ಠಾನಕ್ಕೆ ಬಂದಿಲ್ಲ ಹಾಗೂ ಈ ಬಗ್ಗೆ ಯಾವ ಅಧಿಕಾರಿಗಳಿಗೂ ಯಾವ ಅರಿವು ಇಲ್ಲದಿರುವುದು ಕಂಡು ಬಂತು ಎಂದು ತಿಳಿಸಿದೆ.
ಇದು ಮಕ್ಕಳು ಸಂಘಟಿಸಿದ ಕಾರ್ಯಕ್ರಮ ಅವರೇ ಮಾಡಿದ್ದು ಎಂದು ಅಧಿಕಾರಿಗಳು ತನಿಖಾ ಸಮಯದಲ್ಲಿ ಹೇಳಿದ್ದಲ್ಲದೆ, ಮಕ್ಕಳು ಕೂಡಾ ಎನಾಯಿತು? ಎಂಬ ನಿಜವಾದ ಘಟನೆಯನ್ನು ಮರೆಮಾಚಿ, ಯಾವುದೇ ತಪ್ಪು ನಡೆದಿಲ್ಲ. ನಮಗೆ ತೊಂದರೆ ನೀಡಿಲ್ಲ, ನಾವು ಡ್ಯಾನ್ಸ್ ಮಾಡಿದ್ದು ನಿಜ ಆದರೆ ಯಾವ ಅಧಿಕಾರಿಗಳು ಅಸಭ್ಯವಾಗಿ ನಡೆದು ಕೊಂಡಿಲ್ಲ ಎಂದು ಮಕ್ಕಳ ಬಾಯಲ್ಲಿ ಹೇಳಿಸುವಲ್ಲಿ ತನಿಖೆಗೆ ಒಳಪಡಿಸಿದ ಅಧಿಕಾರಿಗಳು ಯಶಸ್ವಿಯಾಗಿದ್ದು ಕಂಡುಬಂತು. ಆದರೆ ಹಿರಿಯ ಕಾಲೇಜು ವಿದ್ಯಾರ್ಥಿನಿಯರೊಂದಿಗೆ ಕೈ ಕೈ ಹಿಡಿದು ಅಧಿಕಾರಿಗಳು ಹಾಡಿಗೆ ಡ್ಯಾನ್ಸ್ ಮಾಡಿದ್ದು ಕಂಡು ಬಂದಿದೆ. ಇದು ಇಲ್ಲಿ ಭಾಗವಹಿಸಿದ ಎಲ್ಲಾ ಅಧಿಕಾರಿಗಳ/ಸಿಬ್ಬಂದಿಗಳ ಸಭ್ಯ ನಡೆಯಲ್ಲ ಎಂಬುದು ತನಿಖೆಯಲ್ಲಿ ಸ್ಪಷ್ಟವಾಗಿ ಕಂಡು ಬಂದಿದೆ ಎಂದು ತಿಳಿಸಿದೆ.
18 ವರ್ಷದೊಳಗಿನ ವಿದ್ಯಾರ್ಥಿನಿಯರನ್ನು ಮಾತನಾಡಿಸಿದಾಗ ಕಾರ್ಯಕ್ರಮದಲ್ಲಿ ನಮಗೆ ಯಾವುದೇ ತೊಂದರೆ ಆಗಿಲ್ಲ, ಯಾರೂ ಅಸಭ್ಯವಾಗಿ ನಡೆದುಕೊಂಡಿಲ್ಲ ಎಂದು ಅಧಿಕಾರಿಗಳ ಒತ್ತಡದಿಂದ ಹೇಳಿರುವುದು ಮೇಲುನೋಟಕ್ಕೆ ಕಂಡು ಬಂದಿದೆ. ಆದರೆ ಒಟ್ಟಾರೆ ಪ್ರಕರಣದಲ್ಲಿ ಅಧಿಕಾರಿಗಳು ಮಾಡಿದ ತಪ್ಪಿಗೆ ನಾವು ಎದುರಿಸಬೇಕಾಯಿತು ಎಂಬ ಅಂಶವನ್ನು ವ್ಯಕ್ತಪಡಿಸಿರುವುದು ಕಂಡು ಬಂದಿದೆ. ಮಾಧ್ಯಮದವರು ನಿಲಯದ ಒಳಗೆ ಬಂದು ವಿಡಿಯೋ ಮಾಡಿ ಸಾರ್ವಜನಿಕವಾಗಿ ಕಾರ್ಯಕ್ರಮದ ತುಣುಕುಗಳನ್ನು ಅವರದ್ದೇ ಮಾತುಗಳನ್ನು ಸೇರಿಸಿ ಪ್ರಸಾರ ಮಾಡಿರುವುದು ತುಂಬಾ ಬೇಸರವಾಗಿದೆ ಎಂದು ಸ್ಪಷ್ಟವಾಗಿ ಹೇಳಿಕೆ ನೀಡಿರುತ್ತಾರೆ, ಅಲ್ಲದೆ ಈ ಕುರಿತು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ದೂರು ನೀಡಿರುವುದನ್ನು ಹೇಳಿರುತ್ತಾರೆ.
ಜಿಲ್ಲೆಗಳಲ್ಲಿ ಮಕ್ಕಳ ಹಕ್ಕುಗಳ ಉಲ್ಲಂಘನೆಯಾದ ಸಂದರ್ಭದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಹೆಚ್ಚಿನ ಮುತುವರ್ಜಿವಹಿಸಿ ಸಂಬಂಧಿಸಿದ ಇಲಾಖೆಯ ಗಮನಕ್ಕೆ ತಂದು ದೂರು ನೀಡಿ ಕ್ರಮವಹಿಸುವಲ್ಲಿ ಪ್ರಧಾನ ಪಾತ್ರವಹಿಸಬೇಕಾಗುತ್ತದೆ. ಈ ಪ್ರಕರಣಲ್ಲಿ ತುಮಕೂರು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಾದ ಶ್ರೀಮತಿ ಅನುಷಾ ಸೂಕ್ತಕ್ರಮ ಮತ್ತು ಸಹಭಾಗಿತ್ವದ ಪಾತ್ರವಹಿಸಿರುವುದು ಕಂಡುಬಂದಿರುವುದಿಲ್ಲ ಎಂದು ತಮ್ಮ ವರದಿಯಲ್ಲಿ ತಿಳಿಸಿದೆ.
ಸತ್ಯಶೋಧನಾ ಸಮಿತಿಯ ವರದಿಯನ್ನು ಹಾಸ್ಟಲ್‍ನಲ್ಲಿ ಮಕ್ಕಳ ಹಕ್ಕುಗಳು ಉಲ್ಲಂಘನೆಯಾಗಿದೆ ಎಂದು ದೂರು ನೀಡಿದ್ದ ಎಚ್.ಎಂ.ವೆಂಕಟೇಶ್ ಅವರಿಗೆ ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ಅಯೋಗದ ಅಧ್ಯಕ್ಷರು ಸತ್ಯ ಶೋಧನಾ ವರದಿಯನ್ನು ನೀಡಿದೆ.
ಸತ್ಯಶೋಧನಾ ಸಮಿತಿಯ ವರದಿಯ ಪ್ರಕಾರ ಹಾಗೂ ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ನೀತಿ-2016 ರ ಮಾರ್ಗಸೂಚಿಗಳನ್ನು ಸ್ಪಷ್ಟವಾಗಿ ಉಲ್ಲಂಘನೆ ಮಾಡಿರುವುದು ಕಂಡು ಬಂದಿದೆ ಎಂದು ತಿಳಿಸಿದ್ದು, ಈ ಸಂಬಂಧ ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಹೆಚ್.ಸಿ.ಮಹದೇವಪ್ಪ ಅವರು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ ಎಂದು ಹೇಳಲಾಗಿದೆ.
ಸತ್ಯ ಶೋಧನಾ ಸಮಿತಿಯು ಈ ಹಿಂದೆ ಜಿಲ್ಲಾಧಿಖಾರಿಗಳಾಗಿದ್ದ ಶ್ರೀನಿವಾಸ್, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿದೇಶಕರಾದ ಕೃಷ್ಣಪ್ಪ, ಸಹಾಯಕ ನಿರ್ದೇಶಕರಾದ ದಿನೇಶ್, ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ತ್ಯಾಗರಾಜ್ ತಹಶೀಲ್ದಾರ್ ಸಿದ್ದೇಶ್ ಮತ್ತು ಪಟಾಕಿ ಅಂಗಡಿ ಮಾಲೀಕರು ಹಾಗೂ ಅಧಿಕಾರಿಗಳ ಚಾಲಕರು ಮತ್ತು ವಿದ್ಯಾರ್ಥಿನಿಯಲದ ಮೇಲ್ವಿಚಾರಕರು, ವಿದ್ಯಾರ್ಥಿಗಳನ್ನು ವಿಚಾರಣೆಗೆ ಒಳ ಪಡಿಸಲಾಗಿದೆ ಎಂದು ವರದಿಯಲ್ಲಿ ತಿಳಿಸಿದೆ.
ವರದಿ : ಮೈತ್ರಿನ್ಯೂಸ್