ಸುದ್ದಿ : ಮೈತ್ರಿನ್ಯೂಸ್
ತುಮಕೂರು : ಜಿಲ್ಲೆಯಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ಎಲ್ಲಾ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ, ಡೆಂಗ್ಯೂ ನಿಯಂತ್ರಣಕ್ಕೆ ಜನತೆಯೂ ಕೈ ಜೋಡಿಸಲು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮನವಿ ಮಾಡಿದರು.
ಅವರು ಮೈತ್ರಿನ್ಯೂಸ್ ಪತ್ರಿಕೆಯೊಂದಿಗೆ ಮಾತನಾಡಿ, ಜಿಲ್ಲೆಯಲ್ಲಿ ಡೆಂಗ್ಯೂಯಿಂದ ವಿದ್ಯಾರ್ಥಿನಿಯೊಬ್ಬರು ಸಾವನ್ನಪ್ಪಿದ್ದು, ಈ ಸಾವಿಗೆ ಅವರು ಮನೆಯಲ್ಲಿಯೇ ಬಹಳ ದಿನ ಚಿಕಿತ್ಸೆ ಪಡೆದುಕೊಂಡಿರುವುದೇ ಕಾರಣವಾಗಿದೆ,ಜ್ವರ ಬಂದ ಕೂಡಲೇ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಳ್ಳಬೇಕು, ಸ್ವಯಂ ಚಿಕಿತ್ಸೆಗೆ ಯಾರೂ ಕೂಡ ಮುಂದಾಗಬಾರದು ಎಂದು ತಿಳಿಸಿದರು.
ಎರಡು ದಿನ ಜ್ವರ ಬಿಡದಿದ್ದರೆ ಡೆಂಗ್ಯೂ ಪರೀಕ್ಷೆ ಮಾಡಿಸಿ, ಪ್ಲೇಟ್‍ಲೆಟ್ಸ್ ಕಡಿಮೆಯಾಗಿದ್ದರೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಬೇಕು, ಪ್ಲೇಟ್‍ಲೆಟ್ಸ್ ಕಡಿಮೆಯಾದರೆ ಹಾಕಿಸಿಕೊಳ್ಳಬೇಕು, ಈಗಾಗಲೇ ಶಾಲೆಗಳಲ್ಲಿ ಜಾಗೃತಿ ಮೂಡಿಸಲು ತಿಳಿಸಿದ್ದು, ಎಲ್ಲಾ ಗ್ರಾಮ ಪಂಚಾಯಿತಿ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಜ್ವರದ ಲಕ್ಷಣ ಇರುವವರನ್ನು ಗುರುತಿಸುವಂತೆ ಮತ್ತು ಡೆಂಗ್ಯೂ ಸೊಳ್ಳೆಗಳು ಉತ್ಪತ್ತಿಯಾಗದಂತೆ ನೀರು ನಿಲ್ಲದೆ ನೋಡಿಕೊಳ್ಳಲು ಅರಿವು ಮೂಡಿಸಲು ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಜ್ವರ ಇರುವವರ ರಕ್ತ ಪರೀಕ್ಷೆ ಮಾಡಿಸುವಂತೆ ಆರೋಗ್ಯ ಇಲಾಖೆಯ ಸಿಬ್ಬಂದಿಗೆ ಸೂಚನೆ ನೀಡಿರುವುದಾಗಿ ಹೇಳಿದರು.
ಡೆಂಗ್ಯೂ ಸೊಳ್ಳೆಗಳು ಸಿಹಿ ನೀರಿನಲ್ಲಿ ಉತ್ಪತ್ತಿಯಾಗಲಿದ್ದು, ಈಗಾಗಲೇ ಗ್ರಾಮ ಪಂಚಾಯಿತಿ, ಪುರಸಭೆ, ನಗರಸಭೆ, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಚರಂಡಿ ಸ್ವಚ್ಚತೆ ಮತ್ತು ಧೂಮೀಕರಣಕ್ಕೆ ಸೂಚಿಸಿದ್ದು, ಇದಕ್ಕೆ ಜನರು ಸಹ ತಮ್ಮ ಮನೆಯ ಸುತ್ತಮುತ್ತಲ ವಾತವರಣವನ್ನು ಸ್ವಚ್ಚತೆಯಿಂದ ಇಟ್ಟುಕೊಳ್ಳಲು ಮುಂದಾಗಬೇಕು, ಅಧಿಕಾರಿಗಳು, ಆರೋಗ್ಯ ಇಲಾಖೆಗಳಿಂದ ಮಾತ್ರ ಡೆಂಗ್ಯೂ ಹೋಗಲಾಡಿಸಲು ಸಾಧ್ಯವಿಲ್ಲ, ಇಲಾಖೆಗಳು ಎಷ್ಟೇ ಸೂಚನೆ, ಅರಿವು ಮೂಡಿಸಿದರೂ ಜನರು ಜಾಗೃತರಾಗಿ ತಮ್ಮ ಮನೆಯ ಸುತ್ತಲ ವಾತವರಣ ಸ್ವಚ್ಚವಾಗಿಟ್ಟುಕೊಂಡು ಡೆಂಗ್ಯೂ ನಿಯಂತ್ರಣಕ್ಕೆ ಕಟಿಬದ್ಧರಾಗೋಣ ಎಂದು ಜನತೆಯಲ್ಲಿ ಜಿಲ್ಲಾಧಿಕಾರಿಗಳು ಮನವಿ ಮಾಡಿದರು.
ಸುದ್ದಿ : ಮೈತ್ರಿನ್ಯೂಸ್