ತುಮಕೂರು : ಮದ್ಯ ಮತ್ತು ಮಾದಕ ವಸ್ತುಗಳ ಮಾಯಾಜಾಲಕ್ಕೆ ಒಳಗಾಗಬಾರದೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಯುವಜನರಿಗೆ ಕರೆ ನೀಡಿದರು.
ಶ್ರೀ ಮ.ನಿ.ಪ್ರ.ಡಾ: ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಜಿಲ್ಲಾ ಪೊಲೀಸ್ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಪದವಿಪೂರ್ವ ಶಿಕ್ಷಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕನ್ನಡ ಮತ್ತು ಸಂಸೃತಿ ಇಲಾಖೆ, ಡಾ: ಬಿ.ಆರ್. ಅಂಬೇಡ್ಕರ್ ಯುವಜನ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ, ಅಚರ್ಡ್ ಸಂಸ್ಥೆ, ವಿವಿಧ ಇಲಾಖೆ ಹಾಗೂ ಸಂಘ ಸಂಸ್ಥೆಗಳ ಸಹಯೋಗದಲ್ಲಿ ನಗರದ ಟೌನ್‍ಹಾಲ್ ವೃತ್ತದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ವ್ಯಸನಮುಕ್ತ ದಿನಾಚರಣೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಮದ್ಯ ಮತ್ತು ಮಾದಕ ವಸ್ತುಗಳಿಂದ ಉಂಟಾಗುವ ದುಷ್ಪರಿಣಾಮ ಕುರಿತು ಜನಜಾಗೃತಿ ಮೂಡಿಸಲು ರಾಜ್ಯದಾದ್ಯಂತ ಇಂದು ವ್ಯಸನಮುಕ್ತ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ದೇಶದಲ್ಲಿ ಶೇ.2ರಷ್ಟು ಮಂದಿ ವಿವಿಧ ರೀತಿಯ ಮಾದಕ ದ್ರವ್ಯಗಳ ವ್ಯಸನಕ್ಕೊಳಗಾಗುತ್ತಿದ್ದಾರೆ. ಮಾದಕ ವಸ್ತುಗಳ ಸೇವನೆಯು ಆರೋಗ್ಯಕ್ಕೆ ಹಾನಿಕಾರಕವಲ್ಲದೆ ಇಡೀ ಕುಟುಂಬಕ್ಕೂ ಮಾರಕವಾಗಲಿದೆ ಎಂದು ತಿಳಿಸಿದರು.
ಆಧುನಿಕ ಜಗತ್ತಿನಲ್ಲಿ ಮಾದಕ ವಸ್ತುಗಳ ಬಳಕೆಯ ಪ್ರಮಾಣವು ದಿನೇ ದಿನೇ ಹೆಚ್ಚಾಗುತ್ತಿದೆ. ಮಾದಕ ವಸ್ತುಗಳ ಬಳಕೆಯನ್ನು ನಿಯಂತ್ರಿಸುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಈ ಮಾದಕ ವಸ್ತುಗಳ ಮೋಹಕ ಮಾಯಾಜಾಲಕ್ಕೆ ಒಳಗಾದ ಶೇ.50ರಷ್ಟು ಜನರಿಗೆ ಸೂಕ್ತ ಚಿಕಿತ್ಸೆ ದೊರೆಯದೆ ಜೀವ ಹಾನಿಯಾಗುವ ಸಾಧ್ಯತೆಯಿದೆ. ಪದೇ ಪದೆ ಮಾದಕ ದ್ರವ್ಯ ಸೇವಿಸುವವರಲ್ಲಿ ಜಡತ್ವ, ಭಯ, ನರಮಂಡಲ ಮಂಕಾಗುವಿಕೆ, ಹೃದಯಸಂಬಂಧಿ ರೋಗ, ಕ್ಯಾನ್ಸರ್‍ನಂತಹ ಮಾರಣಾಂತಿಕ ಖಾಯಿಲೆಗಳಿಗೆ ತುತ್ತಾಗುವ ಸಂಭವ ಹೆಚ್ಚಾಗಿದೆ ಎಂದು ತಿಳಿಸಿದರಲ್ಲದೆ, ಮಾದಕ ವಸ್ತುಗಳ ಚಟಕ್ಕೆ ಯುವ ಜನರೇ ಹೆಚ್ಚಾಗಿ ಬಲಿಯಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಮಾದಕ ವಸ್ತುಗಳಿಗೆ ದಾಸರಾಗಿರುವವರನ್ನು ವೈದ್ಯಕೀಯ ನೆರವು, ನೈತಿಕ ಹಾಗೂ ಸಾಮಾಜಿಕ ಸಹಾನುಭೂತಿ ತೋರುವ ಮೂಲಕ ವ್ಯಸನದಿಂದ ಮುಕ್ತರನ್ನಾಗಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಮದ್ಯ ಮತ್ತು ಮಾದಕ ವಸ್ತುಗಳ ಬಳಕೆಯಿಂದ ಹೋರಾಡಿ ಆರೋಗ್ಯಕರ ಚಟುವಟಿಕೆಗಳನ್ನು ಬೆಳೆಸಿಕೊಳ್ಳಬೇಕೆಂದು ಕಿವಿ ಮಾತು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್ ಮಾತನಾಡಿ, ವಿದ್ಯಾರ್ಥಿಗಳು ಮಾದಕ ವಸ್ತುಗಳ ವ್ಯಸನಕ್ಕೆ ಬೀಳದಿದ್ದರೂ ಮಾದಕ ವಸ್ತುಗಳಿಂದಾಗುವ ಸಾಮಾಜಿಕ ಹಾಗೂ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿದಲ್ಲಿ ಸಾಮಾಜಿಕ ಪರಿವರ್ತನೆ ಸಾಧ್ಯವೆಂಬ ದೃಷ್ಟಿಯಿಂದ ವಿನೂತನ ರೀತಿಯಲ್ಲಿ ಈ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ವಿದ್ಯಾರ್ಥಿಗಳು ತಮ್ಮ ಕುಟುಂಬ ಹಾಗೂ ಸ್ನೇಹಿತರಿಗೆ ಮಾದಕ ವಸ್ತುವಿನಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಮೂಲಕ ಸಾಮಾಜಿಕ ಹೊಣೆಗಾರಿಕೆಯಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.
ಮನೋ ವೈದ್ಯರಾದ ಡಾ|| ಲೋಕೇಶ್ ಬಾಬು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಆಕರ್ಷಣೆ, ಕುತೂಹಲ, ಉದ್ವೇಗದಿಂದ ಮಹಿಳೆಯರೂ ಸಹ ಮದ್ಯ ಹಾಗೂ ಮಾದಕ ವ್ಯಸನಿಗಳಾಗುತ್ತಿರುವುದು ಆಘಾತಕಾರಿ ಸಂಗತಿಯಾಗಿದೆ. ಹೆಣ್ಣು ಸಮಾಜದ ಕಣ್ಣಾಗಿರಬೇಕೇ ಹೊರತು ಕಂಟಕವಾಗಬಾರದು. ತಮ್ಮ ಕುಟುಂಬ ಸದಸ್ಯರು ಮಾದಕ ವ್ಯಸನಿಗಳಾಗಿದ್ದರೆ ಅದರಿಂದ ಮುಕ್ತಿಗೊಳಿಸಲು ಮಹಿಳೆಯರು ಶ್ರಮಿಸಬೇಕು ಎಂದರಲ್ಲದೆ, ಮಾದಕ ವ್ಯಸನಿಗಳು ಭಾವನಾತ್ಮಕ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ. ಅಂತಹವರಿಗೆ ಪ್ರೀತಿ, ವಿಶ್ವಾಸ, ಅನುಕಂಪ ತೋರುವ ಮೂಲಕ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ: ಪುರುಷೋತ್ತಮ್ ಮಾತನಾಡಿದರು.
ಈ ಸಂದರ್ಭದಲ್ಲಿ ಶ್ರೀ ಮ.ನಿ.ಪ್ರ.ಡಾ: ಮಹಾಂತ ಶಿವಯೋಗಿಗಳ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚಿಸಿದರು. ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಡಾ: ಬಾಲಗುರುಮೂರ್ತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಚಂದ್ರಶೇಖರ್, ವಾರ್ತಾ ಸಹಾಯಕರಾದ ಆರ್. ರೂಪಕಲಾ, ಅಚರ್ಡ್ ಸಂಸ್ಥೆಯ ಸದಾಶಿವ, ಡಾ|| ಅನಿಲ್ ಇನ್ನರ್ ವ್ಹೀಲ್ ಕ್ಲಬ್, ರೋಟರಿ ಸಂಸ್ಥೆ ಸೇರಿದಂತೆ ವಿವಿಧ ಇಲಾಖೆ ಹಾಗೂ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ನಗರದ ಟೌನ್‍ಹಾಲ್ ವೃತ್ತದಲ್ಲಿ ಶುಕ್ರವಾರ ಬೆಳಿಗ್ಗೆ ಆಯೋಜಿಸಲಾಗಿದ್ದ ವಿನೂತನ ರೀತಿಯ ವ್ಯಸನಮುಕ್ತ ದಿನಾಚರಣೆ ಅರಿವು ಕಾರ್ಯಕ್ರಮದಲ್ಲಿ ನಗರದ ವೈದ್ಯಕೀಯ, ಇಂಜಿನಿಯರಿಂಗ್, ಪದವಿ ಹಾಗೂ ಪದವಿಪೂರ್ವ ಕಾಲೇಜಿನ ಸಾವಿರಾರು ವಿದ್ಯಾರ್ಥಿಗಳು ಸಾಕ್ಷಿಯಾದರು.
ಟೌನ್‍ಹಾಲ್ ವೃತ್ತದಲ್ಲಿ ವಾಹನ ಸವಾರರೂ ಸಹ ಕೆಲವು ಕಾಲ ನಿಂತು ಬೃಹತ್ ಅರಿವು ಕಾರ್ಯಕ್ರಮದ ಪ್ರಯೋಜನ ಪಡೆದರು.