ಮಾರ್ಚ್ 15ರೊಳಗೆ ಕೆಎಸ್‍ಆರ್‍ಟಿಸಿ ಬಸ್ ಸಂಚಾರಕ್ಕೆ ಅನುವು ಮಾಡಿ ಕೊಡಲು ಜಿಲ್ಲಾಧಿಕಾರಿ ಸೂಚನೆ

ತುಮಕೂರು : ಮಾರ್ಚ್ 15ರೊಳಗೆ ಬಸ್ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಕೆಎಸ್‍ಆರ್‍ಟಿಸಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ ಅವರು ಸೂಚನೆ ನೀಡಿದರು.

ನಗರದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ ಹಾಗೂ ದಿಬ್ಬೂರು ಜಂಕ್ಷನ್-ಶಿರಾಗೇಟ್ ರಿಂಗ್ ರಸ್ತೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ನಗರದಲ್ಲಿ ನೂತನವಾಗಿ 111.25 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಕೆಎಸ್‍ಆರ್‍ಟಿಸಿ  ಬಸ್ ನಿಲ್ದಾಣದ ಅಂತಿಮ ಹಂತದ ಕಾಮಗಾರಿಯನ್ನು ಪರಿಶೀಲಿಸಲು ಮಂಗಳವಾರ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಬಾಕಿ ಇರುವ ಸಣ್ಣ-ಪುಟ್ಟ ಕೆಲಸಗಳನ್ನು ಪೂರ್ಣಗೊಳಿಸಲು ತಿಳಿಸಿದರು.

ನಗರದ ಮಧ್ಯಭಾಗದಲ್ಲಿ 3.17ಎಕರೆ ಪ್ರದೇಶದಲ್ಲಿ ತಲೆ ಎತ್ತಿರುವ ಬಸ್ ನಿಲ್ದಾಣದ ನೆಲ ಅಂತಸ್ತಿಗೆ ಭೇಟಿ ನೀಡಿ ಗ್ರಾನೈಟ್ ಪಾಲಿಷಿಂಗ್, ಪೇಂಟಿಂಗ್ ಕೆಲಸವನ್ನು ಪರಿಶೀಲಿಸಿ ಮಾಹಿತಿ ಪಡೆದರು.
ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಗ್ರಿಲ್‍ಗಳನ್ನು ಅಳವಡಿಸಬೇಕೆಂದು ನಿರ್ದೇಶನ ನೀಡಿದರಲ್ಲದೆ, ಪ್ರತಿದಿನ 2 ಪಾಳಿಯಲ್ಲಿ ಕೆಲಸಗಾರರನ್ನು ನಿಯೋಜಿಸಿ ತುರ್ತಾಗಿ ಅಂತಿಮ ಹಂತದ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸೂಚಿಸಿದರು.

ಈ ಸಂದರ್ಭದಲ್ಲಿ ಕೆಎಸ್‍ಆರ್‍ಟಿಸಿ ಅಧಿಕಾರಿಗಳಾದ ತ್ರಿವೇಣಿ, ಕೃಷ್ಣಪ್ಪ ಹಾಗೂ ಕಟ್ಟಡ ನಿರ್ಮಾಣ ಏಜೆನ್ಸಿಯ ಗುತ್ತಿಗೆದಾರ ನಟರಾಜ್ ಹಾಜರಿದ್ದರು.

ರಿಂಗ್ ರಸ್ತೆ ಬೇಗ ಮುಗಿಸಲು ಸೂಚನೆ:

ವಾಹನ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕೈಗೆತ್ತಿಕೊಂಡಿರುವ ನಗರದ ದಿಬ್ಬೂರು ಜಂಕ್ಷನ್‍ನಿಂದ ಶಿರಾಗೇಟ್‍ವರಗೆ 1.5 ಕಿ.ಮೀ. ದೂರದ ರಿಂಗ್ ರಸ್ತೆ ಕಾಮಗಾರಿಯನ್ನು ಬೇಗ ಮುಗಿಸಬೇಕು. ಕಾಮಗಾರಿ ಪೂರ್ಣಗೊಳಿಸಲು ವಿಳಂಬಕ್ಕೆ ಕಾರಣ ಕೇಳಿದಾಗ ಉತ್ತರಿಸಿದ ಲೋಕೋಪಯೋಗಿ ಇಂಜಿನಿಯರ್ ಸಿದ್ದಪ್ಪ ಕಳೆದ ವರ್ಷ ಮಳೆಯಿಂದಾಗಿ ಸೇತುವೆ ನಿರ್ಮಿಸಲು ಸಾಧ್ಯವಾಗಲಿಲ್ಲ. ರಸ್ತೆ ಕಾಮಗಾರಿಗಾಗಿ 9.60 ಕೋಟಿ ರೂ. ಹಾಗೂ ಸೇತುವೆ ನಿರ್ಮಾಣಕ್ಕಾಗಿ ಹೆಚ್ಚುವರಿ 4 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಕಾಮಗಾರಿ ಕೈಗೊಂಡಿದ್ದು, ಇನ್ನೆರಡು ತಿಂಗಳಲ್ಲಿ ಪೂರ್ಣಗೊಳಿಸಿ ಸಂಚಾರಕ್ಕೆ ಅವಕಾಶ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಲೋಕೋಪಯೋಗಿ ಇಲಾಖೆ ಕಾಮಗಾರಿಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು ಪ್ರತಿದಿನ ಕಾಮಗಾರಿಯ ಪ್ರಗತಿ ವಿವರವನ್ನು ನನ್ನ ಗಮನಕ್ಕೆ ತರಬೇಕೆಂದು ಟೂಡಾ ಆಯುಕ್ತೆ ಬಸಂತಿ ಹಾಗೂ ಸಹಾಯಕ ಕಾರ್ಯ ಪಾಲಕ ಇಂಜಿನಿಯರ್ ಅರುಣ್, ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

Leave a Reply

Your email address will not be published. Required fields are marked *