ಹೆಣ್ಣುಮಕ್ಕಳ ಹೆಸರನ್ನು ಬಿಟ್ಟು ಪೌತಿ ಖಾತೆ ಮಾಡದಂತೆ ಜಿಲ್ಲಾಧಿಕಾರಿ ಸೂಚನೆ

ತುಮಕೂರು : ತಕರಾರು ಇರುವ ಹಾಗೂ ಕೋರ್ಟ್‍ನಲ್ಲಿರುವ ಅರ್ಜಿಗಳನ್ನು ಹೊರತುಪಡಿಸಿ ಉಳಿದ ಕಂದಾಯ ವಿಷಯಕ್ಕೆ ಸಂಬಂಧಿಸಿದ ಎಲ್ಲಾ ಅರ್ಜಿಗಳನ್ನು ವಿಲೇವಾರಿ ಮಾಡಬೇಕು. ಪೌತಿ ಖಾತೆ ಮಾಡುವ ಸಂದರ್ಭದಲ್ಲಿ ಹೆಣ್ಣು ಮಕ್ಕಳ ಹೆಸರನ್ನು ಬಿಟ್ಟು ಪೌತಿ ಖಾತೆ ಮಾಡಬಾರದು ಎಂದು ಸೂಚಿಸಿದರಲ್ಲದೆ ಕಳೆದ ಮಾಹೆಯಲ್ಲಿ ಜಿಲ್ಲಾದ್ಯಂತ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಬಹುತೇಕ ಅರ್ಜಿಗಳು ಜಮೀನಿಗೆ ದಾರಿ ಬಿಡುವ, ಪೌತಿ ಖಾತೆಗೆ ಸಂಬಂಧಪಟ್ಟಿದ್ದು, ಎಲ್ಲಾ ಅರ್ಜಿಗಳನ್ನು ಶೀಘ್ರದಲ್ಲೇ ವಿಲೇವಾರಿ ಮಾಡಲು ಕ್ರಮಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ನಿರ್ದೇಶನ ನೀಡಿದರು.

ಅವರು ಶುಕ್ರವಾರ ಬೆಳಿಗ್ಗೆ ತುಮಕೂರು ಹಾಗೂ ಕೊರಟಗೆರೆ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪೌತಿ ಖಾತೆ, ಲ್ಯಾಂಡ್ ಬೀಟ್, ಬೆಳೆ ಸಮೀಕ್ಷೆ, ಸ್ಮಶಾನ ಒತ್ತುವರಿ, ಪಹಣಿಗೆ ಆಧಾರ್ ಜೋಡಣೆ ಸೇರಿದಂತೆ ವಿವಿಧ ಕಂದಾಯ ವಿಷಯಗಳ ಪ್ರಗತಿ ಪರಿಶೀಲಿಸಿದರು.

ತುಮಕೂರು ತಾಲೂಕು   ಸೀತಕಲ್ಲು, ಕಾಳೇನ ಹಳ್ಳಿ, ಹಾಲುಗೊಂಡನಹಳ್ಳಿ; ಕೊರಟಗೆರೆ ತಾಲೂಕು ಭೂಚನಹಳ್ಳಿ, ವಜ್ಜನಕುರಿಕೆ ಗ್ರಾಮಗಳಿಗೆ ಭೇಟಿ ನೀಡಿ ಗ್ರಾಮಸ್ಥರ ಅಹವಾಲುಗಳನ್ನು ಆಲಿಸಿ ಸಮಸ್ಯೆಗಳ ಶೀಘ್ರ ಪರಿಹಾರಕ್ಕೆ ಕ್ರಮವಹಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬೆಳೆ ವಿಮೆ ಪಾವತಿಗೆ ಮನವಿಃ

ರೈತರು ತಾವು ಬೆಳೆದ ಬೆಳೆಗಳನ್ನು ವಿಮಾ ಯೋಜನೆಗೊಳಪಡಿಸಿ ಸೌಲಭ್ಯ ಪಡೆದುಕೊಳ್ಳಬೇಕು. ಸರ್ಕಾರ ಅಧಿಸೂಚಿರುವ ಬೆಳೆಗಳನ್ನು ವಿಮೆಗೊಳಪಡಿಸುವುದರಿಂದ ಪ್ರಕೃತಿ ವಿಕೋಪ/ಕೀಟ ಅಥವಾ ರೋಗಬಾಧೆಯಿಂದ ಬೆಳೆ ನಷ್ಟ ಹಾಗೂ ಬಿತ್ತನೆ ಹಂತದಿಂದ ಕಟಾವು ಹಂತದವರೆಗೆ ಬರ ಶುಷ್ಕ ಪರಿಸ್ಥಿತಿ, ಆಲಿಕಲ್ಲು ಮಳೆ, ಭೂ ಕುಸಿತ ಮುಂತಾದುವುಗಳಿಂದ ಇಳುವರಿ ನಷ್ಟ ಸಂಭವಿಸಿದಲ್ಲಿ ವಿಮಾ ಭದ್ರತೆಯನ್ನು ಒದಗಿಸಲಾಗುವುದು. ಅದೇ ರೀತಿ ಬೆಳೆ ಸಾಲ, ಬೆಳೆ ವಿಮೆ, ಬೆಂಬಲ ಬೆಲೆ ಖರೀದಿ, ಬೆಳೆ ಪರಿಹಾರ ಮತ್ತು ವಿವಿಧ ಇಲಾಖೆಗಳ ಸವಲತ್ತುಗಳನ್ನು ಪಡೆಯಲು ಹಾಗು ಪಹಣಿಯಲ್ಲಿ ಬೆಳೆ ವಿವರ ದಾಖಲಿಸಲು ರೈತರು ತಾವು ಬೆಳೆದ ಬೆಳೆಯ ಮಾಹಿತಿಯನ್ನು ಬೆಳೆ ಸಮೀಕ್ಷೆ ಆ್ಯಪ್‍ನಲ್ಲಿ ನೋಂದಾಯಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸ್ವತಃ ರೈತರೇ ತಮ್ಮ ಮೊಬೈಲ್ ಆಪ್ ಮೂಲಕ ಸಕಾಲಿಕವಾಗಿ ಬೆಳೆ ವಿವರಗಳನ್ನು ತಂತ್ರಾಂಶದಲ್ಲಿ ಅಪ್‍ಲೋಡ್ ಮಾಡುವುದರಿಂದ ನ್ಯೂನ್ಯತೆಗಳನ್ನು ಕಡಿಮೆ ಮಾಡಬಹುದು ಹಾಗೂ ಸೌಲಭ್ಯಗಳಿಂದ ವಂಚಿತರಾಗುವುದನ್ನು ತಪ್ಪಿಸಬಹುದಾಗಿದೆ ಎಂದು ರೈತರಿಗೆ ಮನವರಿಕೆ ಮಾಡಿದರು.

 ಆಯಾ ಗ್ರಾಮದ ಹಾಲು ಉತ್ಪಾದಕರ ಸಂಘಕ್ಕೆ ಪ್ರತಿ ದಿನ ರೈತರು ಭೇಟಿ ನೀಡುವುದರಿಂದ ಸಂಘದ ಕಚೇರಿಯಲ್ಲಿ ರೈತರು ವಿಮಾ ಮೊತ್ತ ಪಾವತಿಗೆ ಅನುವಾಗುವಂತೆ   ಸಿಬ್ಬಂದಿಯನ್ನು ನಿಯೋಜಿಸಬೇಕು ಎಂದು ಸಂಬಂಧಿಸಿದ ತಹಶೀಲ್ದಾರರಿಗೆ ಸೂಚನೆ ನೀಡಿದರು.

ಕಳೆದ ವರ್ಷ ತಮ್ಮ ಬೆಳೆಗೆ ಪಾವತಿಸಿದ ವಿಮೆಗೆ ಇದುವರೆಗೂ ಪರಿಹಾರ ದೊರಕಿಲ್ಲವೆಂದು ಸೀತಕಲ್ಲು ಗ್ರಾಮಸ್ಥರು ದೂರಿದಾಗ ಸಂಬಂಧಿಸಿದವರಿಂದ ಅಗತ್ಯ ದಾಖಲೆ ಪಡೆದು ಕ್ರಮಕೈಗೊಳ್ಳಬೇಕೆಂದು ಕೃಷಿ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು. 

ಸೀತಕಲ್ಲು ಗ್ರಾಮದ ಅನಂತಮೂರ್ತಿ ಅವರು 16/2ಬಿ ಹಾಗೂ 17/2 ಸರ್ವೆ ನಂಬರಿನ ತಮ್ಮ ಜಮೀನನ್ನು ಎತ್ತಿನಹೊಳೆ ಯೋಜನೆಗೆ ಸ್ವಾಧೀನಪಡಿಸಿಕೊಂಡಿದ್ದು, ಇದುವರೆಗೂ ಅಧಿಕಾರಿಗಳು ಪರಿಹಾರವನ್ನು ನೀಡಿಲ್ಲ. ಉಳಿಮೆ ಮಾಡಿ ಬೆಳೆಯನ್ನು ಬೆಳೆಯಲು ಸಾಧ್ಯವಿಲ್ಲದೆ   ಪರಿಹಾರವೂ ಕೈಸೇರದೆ  ಜೀವನ ನಿರ್ವಹಣೆ ಕಷ್ಟಸಾಧ್ಯವಾಗಿದೆ ಎಂದು ಸಮಸ್ಯೆ ಹೇಳಿಕೊಂಡಾಗ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಎತ್ತಿನಹೊಳೆ ಯೋಜನೆ ವಿಶೇಷ ಭೂಸ್ವಾಧೀನಾಧಿಕಾರಿ ಮಂಜುನಾಥ್ ಅವರಿಗೆ ದೂರವಾಣಿ ಕರೆ ಮೂಲಕ ಸಮಸ್ಯೆ ಬಗ್ಗೆ ಪೂರ್ಣ ವಿವರ ಪಡೆದರು.  ಸರ್ಕಾರದಿಂದ ಶೀಘ್ರವಾಗಿ ಭೂಸ್ವಾಧೀನ ಪರಿಹಾರ ಹಣ ಬಿಡುಗಡೆಯಾಗಲಿದ್ದು, ಬಿಡುಗಡೆಯಾದ ಕೂಡಲೆ ಪರಿಹಾರ ನೀಡಲಾಗುವುದು ಎಂದು ರೈತನಿಗೆ ಸಮಾಧಾನ ಹೇಳಿದರು.

ಪರಿಣಾಮಕಾರಿ ಪೌತಿ ಖಾತೆ ಆಂದೋಲನ ಕೈಗೊಳ್ಳಿ :-

 ಗ್ರಾಮಗಳಲ್ಲಿ ಪರಿಣಾಮಕಾರಿಯಾಗಿ ಪೌತಿ ಖಾತೆ ಆಂದೋಲನವನ್ನು ಏರ್ಪಡಿಸಿ ಬಾಕಿ ಇರುವ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಲು ಸ್ಥಳೀಯ ಗ್ರಾಮ ಆಡಳಿತ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈವರೆಗೂ ಪೌತಿ ಖಾತೆಯಾಗಿರುವ ಹಾಗೂ ಪೌತಿ ಖಾತೆಯಾಗದವರ  ಪಟ್ಟಿಯನ್ನು ನಾಡ ಕಚೇರಿ/ಹಾಲು ಉತ್ಪಾದಕರ ಸಂಘಗಳ ಕಚೇರಿಯಲ್ಲಿ ಪ್ರಚುರಪಡಿಸಬೇಕು. ಸುಮಾರು 70-80 ವರ್ಷಗಳ ಹಿಂದೆ ಮೃತಪಟ್ಟವರ ಸಂಬಂಧಿತರು ಸದರಿ ಗ್ರಾಮದಲ್ಲಿ ವಾಸವಿಲ್ಲ ಹಾಗೂ    ಮರಣ ಪ್ರಮಾಣಪತ್ರ ಒದಗಿಸಿಲ್ಲವೆಂದು ತಿರಸ್ಕರಿಸದೆ ಗ್ರಾಮಸ್ಥರ ಸಮಕ್ಷಮದಲ್ಲಿ ಮಹಜರು ಮಾಡಿ ಮರಣ ಹೊಂದಿರುವವರ ಬಗ್ಗೆ ಹೇಳಿಕೆ ಪಡೆದು   ಪೌತಿ ಖಾತೆ ಅರ್ಜಿಗಳನ್ನು ವಿಲೇವಾರಿ ಮಾಡಬೇಕೆಂದು ನಿರ್ದೇಶನ ನೀಡಿದರು.


ನಕಾಶೆ ದಾರಿಯಿಲ್ಲದ ಕಡೆ ಜಮೀನಿಗೆ ದಾರಿ ಬಿಡುವ ಬಗ್ಗೆ ಅಕ್ಕಪಕ್ಕದ ರೈತರನ್ನು ಒಂದೆಡೆ ಸೇರಿಸಿ ರಾಜಿ ಸಂಧಾನದ ಮೂಲಕ ಸಮಸ್ಯೆಯನ್ನು ಬಗೆಹರಿಸಬೇಕು. ಕೃಷಿಯನ್ನೇ ಅವಲಂಬಿಸಿರುವ ರೈತರು ತಮ್ಮ ಹೊಲಗಳಿಗೆ ಹೋಗಲು ದಾರಿಯಿಲ್ಲದಿದ್ದರೆ ಅವರ ಜೀವನ ನಿರ್ವಹಣೆ ಹೇಗೆ ನಡೆಯಬೇಕು? ಕೂಡಲೇ ಕ್ರಮವಹಿಸಲು ಸೂಚನೆ ನೀಡಿದರು.

ನ್ಯಾಯಬೆಲೆ ಅಂಗಡಿಯಲ್ಲಿ ಉಚಿತ ಪಡಿತರ ಧಾನ್ಯ ಬಿಡುಗಡೆ, ಗ್ರಾಮದಲ್ಲಿ ಕುಡಿಯುವ ನೀರು ಪೂರೈಕೆ, ಸರ್ಕಾರಿ ಶಾಲೆಗಳಲ್ಲಿ ಬಿಸಿಯೂಟ ಸೌಲಭ್ಯ, ಪಠ್ಯಪುಸ್ತಕ, ಸಮವಸ್ತ್ರ, ಶೂ ವಿತರಣೆ ಬಗ್ಗೆ ಗ್ರಾಮಸ್ಥರಿಂದ ಮಾಹಿತಿ ಪಡೆದರು.

  ಹಾಲಗೊಂಡನಹಳ್ಳಿಯಲ್ಲಿ ಸ್ಮಶಾನ ಭೂಮಿಗೆ ಹೋಗಲು ದಾರಿಯಿಲ್ಲದೆ ಶವಸಂಸ್ಕಾರ ಮಾಡಲು ಅಕ್ಕಪಕ್ಕದ ಜಮೀನಿನವರು ಅವಕಾಶ ನೀಡುತ್ತಿಲ್ಲವೆಂಬ ಅಹವಾಲಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಸ್ಮಶಾನ ಭೂಮಿಗೆ ಹೋಗಲು ದಾರಿ ಬಿಡುವ ಬಗ್ಗೆ ಅಕ್ಕ ಪಕ್ಕದ ಜಮೀನಿನ ಮಾಲೀಕರಿಗೆ ಮನವಿ ಮಾಡಿ ದಾರಿ ಬಿಡಿಸುವ ಕೆಲಸ ಮಾಡಬೇಕೆಂದು ಗ್ರಾಮ ಆಡಳಿತಾಧಿಕಾರಿಗಳಿಗೆ ಸೂಚಿಸಿದರಲ್ಲದೆ ಗ್ರಾಮದಲ್ಲಿರುವ ಓವರ್‍ಹೆಡ್  ಟ್ಯಾಂಕಿನ ನೀರು ವಾಸನೆಯಿಂದ ಕೂಡಿದ್ದು, ಕುಡಿಯಲು ಸಾಧ್ಯವಿಲ್ಲವೆಂದು ಸ್ಥಳೀಯರು ದೂರು ನೀಡಿದಾಗ, ವಾರಕ್ಕೆರಡು ಬಾರಿ ಟ್ಯಾಂಕನ್ನು ಕ್ಲೋರಿನೇಷನ್ ಮಾಡಬೇಕು ಎಂದು ವಾಟರ್‍ಮ್ಯಾನ್‍ಗೆ ನಿರ್ದೇಶನ ನೀಡಿದರು. 

ಭೋಚನಹಳ್ಳಿ ಗ್ರಾಮದ ನರಸಪ್ಪ ಅವರು 8 ವರ್ಷ ಕಳೆದರೂ ಅಧಿಕಾರಿಗಳು ನನಗೆ ಸಾಗುವಳಿ ಚೀಟಿ ನೀಡಿಲ್ಲ. ನಾಡ ಕಚೇರಿಗೆ ಅರ್ಜಿ ನೀಡಿ ಅಲೆದು ಅಲೆದು ಸಾಕಾಗಿದೆ ಅಧಿಕಾರಿಗಳು ಬದಲಾಗುತ್ತಲೆ ಇದ್ದಾರೆ ಹೊರತು ನನ್ನ ಅರ್ಜಿಗೆ ಮಾತ್ರ ಪರಿಹಾರ ಸಿಕ್ಕಲ್ಲವೆಂದು ಗೋಳಿಟ್ಟಾಗ ಜಿಲ್ಲಾಧಿಕಾರಿಗಳು ಕೂಡಲೇ ಗ್ರಾಮ ಆಡಳಿತಾಧಿಕಾರಿಗೆ ಕ್ರಮಕೈಗೊಳ್ಳಲು ಸೂಚನೆ ನೀಡಿದರು. ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಇಲ್ಲದಿರುವುದರಿಂದ ಕುಡಿಯುವ ನೀರಿಗೆ ತೊಂದರೆಯಾಗಿದ್ದು, ಶುದ್ಧ ನೀರು ತರಲು 1.5 ಕಿ.ಮೀ. ದೂರ ಹೋಗಬೇಕು. ನೀರಿನಲ್ಲಿ ಫ್ಲೋರೈಡ್ ಅಂಶ ಹೆಚ್ಚಾಗಿರುವುದರಿಂದ ಗ್ರಾಮಕ್ಕೊಂದು ಶುದ್ಧ ಕುಡಿಯುವ ನೀರಿನ ಘಟಕ ಒದಗಿಸಬೇಕೆಂದು ಗ್ರಾಮಸ್ಥರು ಮನವಿ ಮಾಡಿದರು. ಮಹಿಳೆಯರು ನೀರಿನ ಮೇಲೆ ಬಿಳಿಯಾದ ಪದರ ಇರುವುದನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.

ಗೃಹಲಕ್ಷ್ಮಿ ಯೋಜನೆಯಡಿ 2,000 ರೂ. ಕುಟುಂಬದ ಯಜಮಾನಿ ಖಾತೆಗೆ ಜಮೆಯಾಗುತ್ತಿರುವ ಬಗ್ಗೆ ಸ್ಥಳೀಯ ಮಹಿಳೆಯರಿಂದ ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು ಹಣ ಜಮೆಯಾಗದೆ ಇರುವ ಮಹಿಳೆಯರು ಮಾಹಿತಿ ಪಡೆಯಲು ಅನುವಾಗುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಸಹಾಯವಾಣಿ ಸ್ಥಾಪನೆ ಮಾಡಬೇಕೆಂದು ಸೂಚನೆ ನೀಡಿದರು.

ನಂತರ ಜಿಲ್ಲಾಧಿಕಾರಿಗಳು ಅಮವಾಸ್ಯೆಯ ಆಷಾಢ ಮಾಸದ ಮೊದಲ ಶುಕ್ರವಾರದ ಪ್ರಯುಕ್ತ ಕೊರಟಗೆರೆ ತಾಲೂಕು ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಗೊರವನಹಳ್ಳಿ ಶ್ರೀ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಭೇಟಿ ನೀಡಿ ತಾಯಿಯ ದರ್ಶನ ಪಡೆದರು.

 ಈ ಸಂದರ್ಭದಲ್ಲಿ ಉಪ ವಿಭಾಗಾಧಿಕಾರಿ ಗೌರವ ಕುಮಾರ್ ಶೆಟ್ಟಿ,  ತಹಶೀಲ್ದಾರರಾದ   ಎಂ. ಸಿದ್ದೇಶ್ ಹಾಗೂ ಮಂಜುನಾಥ್ ಕೆ., ಗ್ರಾಮ ಆಡಳಿತ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳು ಹಾಜರಿದ್ದರು.

Leave a Reply

Your email address will not be published. Required fields are marked *