ಪ್ರತಿ ಶಾಲೆಯಲ್ಲಿಯೂ ಸಂವಿಧಾನ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲು ಜಿಲ್ಲಾಧಿಕಾರಿ ಸೂಚನೆ

ತುಮಕೂರು : ಜಿಲ್ಲಾದ್ಯಂತ ಜನವರಿ 26 ರಿಂದ ಹಮ್ಮಿಕೊಂಡಿರುವ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದಡಿ ವಿದ್ಯಾರ್ಥಿಗಳಿಗಾಗಿ ಜಿಲ್ಲೆಯ ಎಲ್ಲ ಶಾಲೆಗಳಲ್ಲಿಯೂ ಸಂವಿಧಾನದ ಮಹತ್ವದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿಯ ಕೆಸ್ವಾನ್ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಶಾಲಾ ವಿದ್ಯಾರ್ಥಿಗಳಿಗಾಗಿ ಸಂವಿಧಾನದ ಆಶಯಗಳ ಬಗ್ಗೆ ಪ್ರಬಂಧ ಸ್ಪರ್ಧೆ, ಭಾಷಣ ಮತ್ತಿತರ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು. ಪ್ರತಿ ದಿನ ಬೆಳಗಿನ ಪ್ರಾರ್ಥನಾ ಸಮಯದಲ್ಲಿ ಮಕ್ಕಳಿಂದ ಸಂವಿಧಾನ ಪೀಠಿಕೆಯನ್ನು ಓದಿಸಬೇಕೆಂದು ನಿರ್ದೇಶನ ನೀಡಿದರು.

ಜಿಲ್ಲೆಯ ಎಲ್ಲಾ ಗ್ರಾಮಪಂಚಾಯತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸಂಚರಿಸುತ್ತಿರುವ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಕಲಾತಂಡಗಳಿಂದ ಕಲಾ ಪ್ರದರ್ಶನ, ಸಂಪನ್ಮೂಲ ವ್ಯಕ್ತಿಗಳಿಂದ ಭಾಷಣ, ರ್ಯಾಲಿ, ಬೀದಿ ನಾಟಕಗಳ ಮೂಲಕ ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ನೀಡಿರುವ ಮೂಲಭೂತ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಜನ ಸಾಮಾನ್ಯರಿಗೆ ಅರಿವು ಮೂಡಿಸಬೇಕು ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ. ಪ್ರಭು ಮಾತನಾಡಿ, ಜಾಥಾ ಕಾರ್ಯಕ್ರಮಕ್ಕಾಗಿ ಪ್ರತಿ ಪಂಚಾಯತಿಗೂ ಅನುದಾನ ನಿಗಧಿಪಡಿಸಲಾಗಿದ್ದು, ಈ ಅನುದಾನ ಬಳಸಿ ವಿಜೃಂಭಣೆಯಿಂದ ಹಬ್ಬದ ರೀತಿಯಲ್ಲಿ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.

ಸಂವಿಧಾನ ಜಾಥಾ ಕಾರ್ಯಕ್ರಮದ ಪಂಚಾಯತಿವಾರು ವೇಳಾಪಟ್ಟಿ ಹಾಗೂ ಸಂವಿಧಾನ ಪೀಠಿಕೆ ಹೊಂದಿರುವ ಕರಪತ್ರಗಳನ್ನು ಕಾರ್ಯಕ್ರಮದಲ್ಲಿ ಜನರಿಗೆ ವಿತರಿಸಬೇಕು. ವೇಳಾಪಟ್ಟಿಯನ್ವಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು. ಸ್ಥಳೀಯ ಶಾಸಕರು, ವಿಧಾನ ಪರಿಷತ್ ಸದಸ್ಯರು, ಸಂಸದರು, ಸ್ಥಳೀಯ ಜನಪ್ರತಿನಿಧಿಗಳನ್ನು ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳಬೇಕೆಂದು ಸೂಚನೆ ನೀಡಿದರು.
ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪ ಮಾತನಾಡಿ, ಈವರೆಗೂ ಜಿಲ್ಲೆಯ 130 ಗ್ರಾಮಪಂಚಾಯತಿ ಹಾಗೂ 4 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಜಾಗೃತಿ ಜಾಥಾ ವಾಹನ ಸಂಚರಿಸಿ ಸಂವಿಧಾನದ ಬಗ್ಗೆ ಅರಿವು ಮೂಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ಇದಕ್ಕೂ ಮುನ್ನ ವಿಧಾನ ಸೌಧ ಸಮಿತಿ ಸಭಾಂಗಣದಿಂದ ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ. ಮಹದೇವಪ್ಪ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ಸಹಕಾರ ಸಚಿವ ಕೆ.ಎನ್.ರಾಜಣ್ಣ, ಅಭಿವೃದ್ಧಿ ಆಯುಕ್ತ ಡಾ: ಶಾಲಿನಿ ರಜನೀಶ್, ಕ್ಯಾಪ್ಟನ್ ಮಣಿವಣ್ಣನ್, ರಾಕೇಶ್ ಕುಮಾರ್ ಸೇರಿದಂತೆ ವಿವಿಧ ಉನ್ನತ ಅಧಿಕಾರಿಗಳು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಸಭೆ ನಡೆಸಿ ಸಂವಿಧಾನ ಜಾಗೃತಿ ಜಾಥಾ ಕುರಿತು ಫೇಸ್‍ಬುಕ್, ಟ್ವಿಟರ್, ಇನ್‍ಸ್ಟಾಗ್ರಾಂ ಸೇರಿ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಪ್ರಚಾರ ಮಾಡಲು ಕ್ರಮ ಕೈಗೊಳ್ಳಬೇಕು. ಹೆಚ್ಚಿನ ಜನರು ಜಾಥಾದಲ್ಲಿ ಪಾಲ್ಗೊಳ್ಳುವಂತೆ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಸೂಚಿಸಿದರು.

ಪ್ರತಿ ವಾರ ಜಾಥಾ ಕಾರ್ಯಕ್ರಮದ ಪ್ರಗತಿ ಪರಿಶೀಲನೆ ನಡೆಸಲಾಗುವುದು. ಯಶಸ್ವಿಯಾಗಿ ಜಾಥಾ ಕಾರ್ಯಕ್ರಮ ನಡೆಸುವಲ್ಲಿ ತುಮಕೂರು ಜಿಲ್ಲೆಯು 2ನೇ ಸ್ಥಾನದಲ್ಲಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಜಾಥಾ ಕಾರ್ಯಕ್ರಮದ ಪ್ರಯುಕ್ತ ತುಮಕೂರು ಜಿಲ್ಲೆಯಲ್ಲಿ ಏಕಬಳಕೆ ಪ್ಲಾಸ್ಟಿಕ್ ಬಾಟಲಿಗಳನ್ನು ಬಳಸಿ “ನಮ್ಮ ಸಂವಿಧಾನ” ಎಂಬ ಕನ್ನಡ ಅಕ್ಷರದ ಕಲಾಕೃತಿಯನ್ನು ರಚಿಸಿ ಗಿನ್ನಿಸ್ ದಾಖಲೆಗೆ ಸೇರಿಸುವ ಪ್ರಯತ್ನ ವಿನೂತನವಾಗಿದ್ದು ಶ್ಲಾಘನೀಯವಾಗಿದೆ ಎಂದು ಪ್ರಶಂಸಿಸಿದರು.

ಸಭೆಯಲ್ಲಿ ಜಿಲ್ಲಾ ವಾರ್ತಾಧಿಕಾರಿ ಎಂ.ಆರ್.ಮಮತ, ಎನ್‍ಐಸಿ ಉಪನಿರ್ದೇಶಕ ತಾಟಿಪುಡಿ, ಶ್ರೀನಿವಾಸ್ ಸೇರಿದಂತೆ ಮತ್ತಿತರ ಅಧಿಕಾರಿಗಳು ಹಾಜರಿದ್ದರು.

Leave a Reply

Your email address will not be published. Required fields are marked *