ತುಮಕೂರು- ವಿವಿ ಪರಿಶಿಷ್ಟ ಜಾತಿ, ಪಂಗಡದ ಸ್ನೋತಕೋತ್ತರ ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳು ದಿಢೀರ್ ಪ್ರತಿಭಟನೆ ನಡೆಸಿದ ಸುದ್ದಿ ತಿಳಿದ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಇಂದು ಬೆಳಿಗ್ಗೆ ವಿವಿಯ ಹಾಸ್ಟೆಲ್ಗೆ ಭೇಟಿ ನೀಡಿ ಪರಿಶೀಲಿಸಿ ಮುಂದಿನ 10 ದಿನದೊಳಗೆ ಅವ್ಯವಸ್ಥೆ ಸರಿಪಡಿಸುವಂತೆ ಸಂಬಂಧಪಟ್ಟವರಿಗೆ ಖಡಕ್ ಸೂಚನೆ ನೀಡಿದರು.
ಹಾಸ್ಟೆಲ್ನಲ್ಲಿ ಇಡ್ಲಿಯನ್ನು ಕಾಟನ್ ಬಟ್ಟೆಯಲ್ಲಿ ಬೇಯಿಸುವ ಬದಲು ಪಾಸ್ಟಿಕ್ನಲ್ಲಿ ಬೇಯಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಸಂಬಂಧಪಟ್ಟವರು ಗಮನ ಹರಿಸಿ ಕಾಟನ್ ಬಟ್ಟೆಯಲ್ಲಿ ಇಡ್ಲಿ ಬೇಯಿಸಲು ಕ್ರಮ ಕೈಗೊಳ್ಳಬೇಕು. ಇದರೊಂದಿಗೆ ವಿದ್ಯಾರ್ಥಿಗಳಿಗೆ ಗುಣಮಟ್ಟ ಆಹಾರ ಒದಗಿಸಬೇಕು ಎಂದು ಸೂಚನೆ ನೀಡಿರುವುದಾಗಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದರು.
ಪ್ಲಾಸ್ಟಿಕ್ನಲ್ಲಿ ಇಡ್ಲಿ ಬೇಯಿಸಿದರೆ ಕ್ಯಾನ್ಸರ್ ಬರುತ್ತದೆ. ಕೂಡಲೇ ಬದಲಾಯಿಸಬೇಕು. ಮತ್ತೆ ನಾನು ಹಾಸ್ಟೆಲ್ಗೆ ಭೇಟಿ ನೀಡುತ್ತೇನೆ ಎಂದು ಹೇಳಿದರು.
ಹಾಸ್ಟೆಲ್ನಲ್ಲಿ ಶೌಚಾಲಯ ಸಮಸ್ಯೆ ಸಹ ಇರುವ ಬಗ್ಗೆ ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಕೂಡಲೇ ಶೌಚಾಲಯ ಸಮಸ್ಯೆ, ಪಿಟ್ ಸಮಸ್ಯೆಗಳನ್ನು ಬಗೆಹರಿಸಬೇಕು. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಗುತ್ತಿಗೆದಾರರಿಗೆ ಅಧಿಕಾರಿಗಳು ಸೂಚಿಸಿ, 10 ದಿನಗಳೊಳಗೆ ವಿವಿ ಸಮಸ್ಯೆ ಸಂಪೂರ್ಣ ಬಗೆಹರಿಯಬೇಕು. ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ನಂತರ ನಗರದ ಬಿ.ಹೆಚ್. ರಸ್ತೆಯಲ್ಲಿರುವ ಸರ್ಕಾರಿ ಜೂನಿಯರ್ ಕಾಲೇಜು ಮೈದಾನಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಕಾಲೇಜಿನ ಶೌಚಾಲಯ ಹದಗೆಟ್ಟಿರುವುದನ್ನು ಖುದ್ದು ವೀಕ್ಷಿಸಿ ಸಂಬಂಧಪಟ್ಟವರನ್ನು ತರಾಟೆಗೆ ತೆಗೆದುಕೊಂಡರು.
ಸಮರ್ಪಕ ನಿರ್ವಹಣೆ ಇಲ್ಲದೆ ಹದಗೆಟ್ಟಿರುವ ಶೌಚಾಲಯದ ಸ್ವಚ್ಚತೆ ಕಾಪಾಡುವಂತೆ ಸಂಬಂಧಪಟ್ಟವರಿಗೆ ಸೂಚಿಸಿದರು.
ಶಾಂತಿನಗರ ಅಂಡರ್ಪಾಸ್ಗೆ ಭೇಟಿ
ಇಲ್ಲಿನ ಶಾಂತಿನಗರದ ಅಂಡರ್ಪಾಸ್ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಶುಭಕಲ್ಯಾಣ್ ಅವರು, ಈ ಭಾಗದ ಜನತೆ ಓಡಾಡಲು ತೀವ್ರ ತೊಂದರೆಯಾಗಿದೆ. ಆದಷ್ಟು ಬೇಗ ಅಂಡರ್ ಪಾಸ್ ಕಾಮಗಾರಿಯನ್ನು ಸಂಪೂರ್ಣಗೊಳಿಸುವಂತೆ ಸಂಬಂಧಪಟ್ಟವರಿಗೆ ಸೂಚಿಸಿದರು.
ನಗರದ ವಸಂತನರಸಾಪುರ ಕೈಗಾರಿಕಾ ಪ್ರದೇಶ, ಶಾಂತಿನಗರ ಅಂಡರ್ ಪಾಸ್ ಸೇರಿದಂತೆ ವಿವಿಧ ಪ್ರದೇಶಗಳಿಗೆ ಬೆಳ್ಳಂಬೆಳಿಗ್ಗೆ ಜಿಲ್ಲಾಧಿಕಾರಿ ಶುಭಕಲ್ಯಾಣ್ ಅವರು ಭೇಟಿ ನೀಡಿ ಪರಿಶೀಲಿಸಿದರು.
ಬೆಳಿಗ್ಗೆಯೇ ವಸಂತನರಸಾಪುರ ಕೈಗಾರಿಕಾ ಪ್ರದೇಶಕ್ಕೆ ಕಂದಾಯ ಇಲಾಖೆ, ಅರಣ್ಯ ಇಲಾಖೆ, ಕೆಐಎಡಿಬಿ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಶುಭಕಲ್ಯಾಣ್ ಅವರು ವಸಂತನರಸಾಪುರದ ಫೇಸ್-4ನಲ್ಲಿ ಎಲ್ ಅಂಡ್ ಟಿಯವರಿಗೆ ಹಸ್ತಾಂತರಿಸಬೇಕಾಗಿರುವ 1700 ಎಕರೆ ಜಮೀನಿನ ಕುರಿತು ಅಧಿಕಾರಿಗಳಿಗೆ ಚರ್ಚಿಸಿದರು.
ನಂತರ ಮಾತನಾಡಿದ ಅವರು, ವಸಂತನರಸಾಪುರ ಫೇಸ್-4 ನಲ್ಲಿ ಎಲ್ ಅಂಡ್ ಟಿಯವರಿಗೆ 1700 ಎಕರೆ ಹಸ್ತಾಂತರ ಮಾಡಬೇಕು. ಹಾಗಾಗಿ ಆ ಜಾಗ ನಡೋಕೊಂಡು ಬಂದಿದ್ದೇವೆ. ಇಲ್ಲಿ ಕೆಲ ಸಮಸ್ಯೆಗಳಿದ್ದು, ಅದನ್ನು ಬಗೆಹರಿಸಿ ಹಸ್ತಾಂತರ ಮಾಡುವಂತೆ ಗೃಹ ಸಚಿವರು ನಿರ್ದೇಶನ ನೀಡಿದ್ದಾರೆ. ಆದ್ದರಿಂದ ಕಂದಾಯ ಇಲಾಖೆ. ತೋಟಗಾರಿಕೆ ಇಲಾಖೆ, ಅರಣ್ಯ ಇಲಾಖೆ, ಕೆಐಎಡಿಬಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಿದ್ದು, ತ್ವರಿತಗತಿಯಲ್ಲಿ ಎಲ್ಲ ಕೆಲಸ ಕಾರ್ಯಗಳನ್ನು ಮುಗಿಸುವಂತೆ ನಿರ್ದೇಶನ ನೀಡಲಾಗಿದೆ ಎಂದರು..