ತುಮಕೂರು : ಲೋಕಸಭಾ ಸಾರ್ವತ್ರಿಕ ಚುನಾವಣೆ ಮಾದರಿ ನೀತಿ ಸಂಹಿತೆ ಪಾಲನೆಗಾಗಿ ಸ್ಥಾಪಿಸಿರುವ ಕುಣಿಗಲ್ ವಿಧಾನ ಸಭಾ ಕ್ಷೇತ್ರದ ಚೆಕ್‍ಪೋಸ್ಟ್ ಹಾಗೂ ವಲ್ನರೆಬಲ್ ಮತಗಟ್ಟೆ ಪ್ರದೇಶಗಳಿಗೆ ಶುಕ್ರವಾರ ಸಂಜೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶುಭ ಕಲ್ಯಾಣ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್ ಅವರು ಅನಿರೀಕ್ಷಿತವಾಗಿ ಜಂಟಿ ಭೇಟಿ ನೀಡಿ ಪರಿಶೀಲಿಸಿದರು.
ಜಿಲ್ಲೆಯ ಕುಣಿಗಲ್ ತಾಲೂಕು ಹುತ್ರಿದುರ್ಗ ಹೋಬಳಿ ಬೇಗೂರು ಗ್ರಾಮ ಪಂಚಾಯತಿ ವ್ಯಾಪ್ತಿ ಅಂಚೆಪಾಳ್ಯದಲ್ಲಿ ಸ್ಥಾಪಿಸಿರುವ ಚೆಕ್‍ಪೆÇೀಸ್ಟ್‍ಗೆ ಭೇಟಿ ನೀಡಿ ಚುನಾವಣಾ ಕಾರ್ಯನಿರತ ಅಧಿಕಾರಿ ಸಿಬ್ಬಂದಿಗಳ ತಪಾಸಣಾ ಕಾರ್ಯ ನಿರ್ವಹಣೆಯನ್ನು ಪರಿಶೀಲಿಸಿದರು.
ಕಟ್ಟುನಿಟ್ಟಿನ ಪರಿಶೀಲನೆಗೆ ಸೂಚನೆಃ
ಚುನಾವಣೆ ಮುಕ್ತಾಯವಾಗುವವರೆಗೂ ಚೆಕ್‍ಪೋಸ್ಟ್‍ಗಳಲ್ಲಿ ತಪಾಸಣೆ ಕಾರ್ಯವನ್ನು ನಿರಂತರವಾಗಿ ನಡೆಸಬೇಕು. ದಾಖಲೆಗಳಿಲ್ಲದೆ ನಗದು, ಸಾಮಗ್ರಿ, ಚಿನ್ನಾಭರಣ, ಮದ್ಯ ಹಾಗೂ ವಾಣಿಜ್ಯ ಸರಕುಗಳನ್ನು ವಾಹನಗಳಲ್ಲಿ ಸಾಗಾಟ ಮಾಡುವುದನ್ನು ಕಟ್ಟುನಿಟ್ಟಾಗಿ ಪರಿಶೀಲಿಸಬೇಕು. ದಾಖಲೆ ರಹಿತ ನಗದು, ಸಾಮಗ್ರಿ ದೊರೆತರೆ ನಿಯಮಾನುಸಾರ ಪ್ರಕರಣ ದಾಖಲಿಸಬೇಕೆಂದು ಕಾರ್ಯನಿರತ ಅಧಿಕಾರಿ/ಸಿಬ್ಬಂದಿಗಳಿಗೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.
ಖುದ್ದು ಪರಿಶೀಲನೆಗೆ ಮುಂದಾದ ಡೀಸಿ, ಎಸ್‍ಪಿಃ
ಶುಭ ಕಲ್ಯಾಣ್ ಹಾಗೂ ಅಶೋಕ್ ಅವರು ಚೆಕ್‍ಪೋಸ್ಟ್ ಮಾರ್ಗವಾಗಿ ಸಂಚರಿಸುವ ಕೆಎಸ್‍ಆರ್‍ಟಿಸಿ ಬಸ್ ಸೇರಿ ವಿವಿಧ ವಾಹನಗಳನ್ನು ಕೆಲಹೊತ್ತು ತಾವೇ ಖುದ್ದಾಗಿ ತಪಾಸಣೆ ನಡೆಸಿ ಕರ್ತವ್ಯನಿರತ ಅಧಿಕಾರಿ/ಸಿಬ್ಬಂದಿಗಳಿಗೆ ಮಾದರಿಯಾದರು.
ವಲ್ನರೆಬಲ್ ಮತಗಟ್ಟೆ ಪ್ರದೇಶಗಳಿಗೆ ಭೇಟಿಃ
ನಂತರ ವಲ್ನರೆಬಲ್ ಮತಗಟ್ಟೆ ಪಟ್ಟಿಯಲ್ಲಿರುವ ಕಿತ್ನಮಂಗಲ ಪಂಚಾಯತಿ ಮುನಿಯನಪಾಳ್ಯ ಗ್ರಾಮಕ್ಕೆ ಭೇಟಿ ನೀಡಿ ಮಾತನಾಡಿದ ಜಿಲ್ಲಾಧಿಕಾರಿ ಏಪ್ರಿಲ್ 26ರಂದು ಮತಗಟ್ಟೆಗೆ ತೆರಳಿ ನಿರ್ಭೀತಿಯಿಂದ ಮತದಾನ ಮಾಡಬೇಕೆಂದು ಮತದಾರರಲ್ಲಿ ಮನವಿ ಮಾಡಿದರು.
ಮುನಿಯನಪಾಳ್ಯ ಮತಗಟ್ಟೆ ವ್ಯಾಪ್ತಿಯಲ್ಲಿ ಮನೆಯಿಂದ ಮತದಾನ ಮಾಡುವವರಿಗೆ ನಮೂನೆ 12ಡಿ ವಿತರಿಸಿರುವ ಬಗ್ಗೆ ಮಾಹಿತಿ ಕೇಳಿದಾಗ ಉತ್ತರಿಸಿದ ಮತಗಟ್ಟೆ ಮಟ್ಟದ ಅಧಿಕಾರಿ ಹಾಗೂ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯಾಪಾಧ್ಯಾಯಿನಿ ಮಮತ ಬಿ.ಆರ್. ಈಗಾಗಲೇ 85+ ವಯೋಮಾನದ ಸಾಕಮ್ಮ ಹಾಗೂ ಹನುಮಮ್ಮ ಅವರಿಗೆ ನಿಗಧಿತ ನಮೂನೆಯನ್ನು ವಿತರಿಸಲಾಗಿದೆ ಎಂದು ವಿವರಣೆ ನೀಡಿದರಲ್ಲದೆ ಗ್ರಾಮದಲ್ಲಿರುವ ಸರ್ಕಾರಿ ಶಾಲೆಯ ಮಕ್ಕಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕೆಂದು ಮನವಿ ಮಾಡಿದಾಗ ಸ್ಪಂದಿಸಿದ ಜಿಲ್ಲಾಧಿಕಾರಿ ವಾಟರ್ ಪ್ಯೂರಿಫೈಯರ್ ಅನ್ನು ಅಳವಡಿಸಲು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ಪಂಚಾಯತಿ ಅಭಿವೃದ್ಧಿ ಅಧಿಕಾರಿ ವಾಸು ಅವರಿಗೆ ಸೂಚನೆ ನೀಡಿದರು.
ಸ್ವೀಪ್ ಕಾರ್ಯಕ್ರಮ ಏರ್ಪಡಿಸಿಃ
ಸ್ವೀಪ್ ಕಾರ್ಯಕ್ರಮದಡಿ ವಿವಿಧ ಚಟುವಟಿಕೆಗಳನ್ನು ಏರ್ಪಡಿಸಿ ಮತದಾರರಲ್ಲಿ ಕಡ್ಡಾಯ ಮತದಾನದ ಬಗ್ಗೆ ಜಾಗೃತಿ ಮೂಡಿಸಬೇಕು. ಗ್ರಾಮದಲ್ಲಿ ಗುರುತಿಸಿರುವ ಸ್ಮಶಾನ ಭೂಮಿಗೆ ಪಂಚಾಯತಿ ಅನುದಾನ ಬಳಸಿ ಆವರಣ ಗೋಡೆ, ಮತ್ತಿತರ ಮೂಲ ಸೌಲಭ್ಯಗಳನ್ನು ಕಲ್ಪಿಸಲು ಮುಂದಾಗಬೇಕೆಂದು ತಾಲೂಕು ಪಂಚಾಯತಿ ಕಾರ್ಯನಿರ್ವಾಹಕಾಧಿಕಾರಿ ಮುನಿಯಪ್ಪ ಅವರಿಗೆ ಸೂಚನೆ ನೀಡಿದರು.
ಮತದಾರರೊಂದಿಗೆ ಸಂವಾದಃ
ಬಳಿಕ ಮತ್ತೊಂದು ವಲ್ನರೆಬಲ್ ಮತಗಟ್ಟೆಯೆಂದು ಗುರುತಿಸಿರುವ ಸಂತೆ ಮಾವತ್ತೂರು ಗ್ರಾಮ ಪಂಚಾಯತಿ ಮೋದೂರು ಗ್ರಾಮಕ್ಕೆ ಭೇಟಿ ನೀಡಿ ಮತದಾರರೊಂದಿಗೆ ಸಂವಾದ ನಡೆಸಿದ ಅವರು, ಮತದಾನ ದಿನದಂದು ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದೆ ತಪ್ಪದೇ ಮತದಾನ ಮಾಡಬೇಕು. ಚುನಾವಣಾ ಅಕ್ರಮಗಳು ನಡೆದಲ್ಲಿ ಕಂಟ್ರೋಲ್ ರೂಂ ಸಂಖ್ಯೆ 1950ಗೆ ಕರೆ ಮಾಡಿ ದೂರು ನೀಡಬೇಕೆಂದು ಅರಿವು ಮೂಡಿಸಿದರಲ್ಲದೆ ಗ್ರಾಮದಲ್ಲಿರುವ ಬರ ಪರಿಸ್ಥಿತಿ, ಕುಡಿಯುವ ನೀರಿನ ಸಮಸ್ಯೆ, ಮೇವಿನ ಕೊರತೆ, ಮೇವಿನ ಕಿಟ್ ವಿತರಣೆ, ವಿದ್ಯುತ್ ಪೂರೈಕೆ ಬಗ್ಗೆ ಗ್ರಾಮಸ್ಥರಿಂದ ಮಾಹಿತಿ ಪಡೆದರು.
ವಲ್ನರೆಬಲ್ ಮತಗಟ್ಟೆ ಪಟ್ಟಿಯಿಂದ ಕೈಬಿಡಲು ಗ್ರಾಮಸ್ಥರ ಮನವಿಃ
ಈ ಸಂದರ್ಭದಲ್ಲಿ ಮೋದೂರು ಗ್ರಾಮದ ಮತಗಟ್ಟೆಯನ್ನು ವಲ್ನರೆಬಲ್ ಪಟ್ಟಿಯಿಂದ ಕೈಬಿಡಬೇಕು. ಶುದ್ಧ ಕುಡಿಯುವ ನೀರಿನ ಘಟಕ ಸೌಲಭ್ಯ ಒದಗಿಸಬೇಕೆಂದು ಗ್ರಾಮಸ್ಥರೆಲ್ಲ ಒಕ್ಕೊರಲಿನಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.
ತಪಾಸಣಾ ವಹಿ ಪರಿಶೀಲನೆಃ
ತರುವಾಯ ನಿಡಸಾಲೆ ಗ್ರಾಮ ಪಂಚಾಯತಿ ನಿಡಸಾಲೆಯಲ್ಲಿ ಸ್ಥಾಪಿಸಿರುವ ಚೆಕ್‍ಪೋಸ್ಟ್‍ಗೆ ಭೇಟಿ ನೀಡಿ ವಾಹನ ತಪಾಸಣೆ ಸಂಬಂಧ ನಿರ್ವಹಿಸುತ್ತಿರುವ ವಹಿಯನ್ನು ಪರಿಶೀಲಿಸಿದರು. ಚೆಕ್‍ಪೋಸ್ಟ್‍ಗಳಲ್ಲಿ ಬೆಳಕು, ನೀರು ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯ ಒದಗಿಸಬೇಕು. ಬೇಸಿಗೆ ಇರುವುದರಿಂದ ಚೆಕ್‍ಪೋಸ್ಟ್‍ಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗೆ ಕುಡಿಯಲು ಮಜ್ಜಿಗೆ ನೀಡಬೇಕೆಂದು ಸಹಾಯಕ ಚುನಾವಣಾಧಿಕಾರಿ ಜಿ. ಮಹೇಶ್ ಅವರಿಗೆ ಸೂಚನೆ ನೀಡಿದರು.
ತಪಾಸಣೆ ಕಾರ್ಯ ಚುರುಕುಗೊಳಿಸಿಃ
ಕೆ.ವಿ. ಅಶೋಕ್ ಮಾತನಾಡಿ ನಿಡಸಾಲೆ ಚೆಕ್‍ಪೋಸ್ಟ್‍ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳ ಓಡಾಟ ಇರುವುದರಿಂದ ತನಿಖಾಧಿಕಾರಿಗಳನ್ನೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ನೇಮಕ ಮಾಡುವ ಮೂಲಕ ತಪಾಸಣೆ ಕಾರ್ಯವನ್ನು ಮತ್ತಷ್ಟು ಚುರುಕುಗೊಳಿಸಬೇಕು ಎಂದು ತಮ್ಮ ಅಧೀನ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ವಿಶ್ವನಾಥ್, ವಿವಿಧ ಗ್ರಾಮ ಪಂಚಾಯತಿ ಪಿಡಿಓಗಳು, ವಿವಿಧ ಇಲಾಖಾಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.