ಮರಳೂರು ಪಿ.ಎಂ.ಶ್ರೀ ಶಾಲೆಗೆ ಜಿಲ್ಲಾಧಿಕಾರಿ ಭೇಟಿ

ತುಮಕೂರು : ನಗರ ವ್ಯಾಪ್ತಿಯ ಮರಳೂರು ಪಿ.ಎಂ. ಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಗುರುವಾರ ಭೇಟಿ ನೀಡಿ, ಶಾಲೆಯ ಶೈಕ್ಷಣಿಕ ಗುಣಮಟ್ಟ, ಮೂಲಸೌಕರ್ಯಗಳ ಬಗ್ಗೆ ಪರಿಶೀಲಿಸಿದರು.

ಬಳಿಕ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಅವರ ಆಸೆ-ಆಕಾಂಕ್ಷೆಗಳ ಬಗ್ಗೆ ಕೇಳಿದ ಅವರು ಮಕ್ಕಳು ಸ್ವಯಂಪ್ರೇರಿತವಾಗಿ ಕಲಿಯುವ ಶಕ್ತಿ ಮೆರೆದಿದ್ದಾರೆ ಎಂದು ಶ್ಲಾಘಿಸಿದರು.

ಮುಖ್ಯ ಶಿಕ್ಷಕರಿಂದ ಶಾಲೆಯ ಶೈಕ್ಷಣಿಕ ಸಾಧನೆ, ಪಠ್ಯೇತರ ಚಟುವಟಿಕೆಗಳು ಹಾಗೂ ಪಿ.ಎಂ.ಶ್ರೀ ಯೋಜನೆಯಡಿ ಅನುμÁ್ಠನಗೊಳ್ಳುತ್ತಿರುವ ಯೋಜನೆಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು. ಶಾಲಾ ವಲಯದ ಸ್ವಚ್ಛತೆ, ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯಗಳ ಸ್ಥಿತಿಗತಿ ಪರಿಶೀಲಿಸಿದ ಅವರು ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಯೋಗಾತ್ಮಕ ಕಲಿಕೆ ಒದಗಿಸಲು ಅಧ್ಯಾಪಕರು ಹೊಸ ತಂತ್ರಜ್ಞಾನ ಉಪಯೋಗಿಸಬೇಕೆಂದು ಜಿಲ್ಲಾಧಿಕಾರಿ ಸೂಚಿಸಿದರು.

 ಮುಖ್ಯ ಶಿಕ್ಷಕ  ಪ್ರವೀಣ್ ಕುಮಾರ್ ಮಾತನಾಡಿ, ಜಿಲ್ಲಾಧಿಕಾರಿಗಳು ನೇರವಾಗಿ ಮಕ್ಕಳೊಂದಿಗೆ ಮಾತನಾಡಿದ್ದು  ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಹೊಸ ಉತ್ಸಾಹವನ್ನುಂಟು ಮಾಡಿದೆ ಎಂದರು.

ಈ ಸಂದರ್ಭದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಶಿಕ್ಷಕರಾದ ಪಟೇಲ್ ಚನ್ನೇಗೌಡ, ಆಶಾಲತಾ, ವಸಂತ್ ಕುಮಾರ್, ವನಿತಾರಾಣಿ, ರಮಾದೇವಿ ಚಂದ್ರಶೇಖರ್, ಗಿರಿಜಮ್ಮ, ಯಶೋಧ, ಕಲ್ಪನಾ, ದೀಪಿಕ, ಸೇರಿದಂತೆ ಮತ್ತಿತರರು ಇದ್ದರು.

ವಿದ್ಯಾರ್ಥಿ ನಿಲಯಕ್ಕೆ ಭೇಟಿ: ಪರಿಶೀಲನೆ

ನಗರದ ವೀರಸಾಗರದ ಬಳಿ ಇರುವ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಗುರುವಾರ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅನಿರೀಕ್ಷಿತ ಭೇಟಿ ನೀಡಿ ಮೂಲಭೂತ ಸೌಕರ್ಯಗಳ ಸಮಗ್ರ ಪರಿಶೀಲನೆ ನಡೆಸಿ. ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಹಾಜರಾತಿ ಪುಸ್ತಕ ನಿರ್ವಹಣೆ, ಶೌಚಾಲಯಗಳ ಸ್ವಚ್ಛತೆ, ಮೆನು ಪ್ರಕಾರ ದಿನನಿತ್ಯ ಆಹಾರ ನಿರ್ವಹಣೆ ಮತ್ತು ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಾದ ಪುಸ್ತಕಗಳ ಲಭ್ಯತೆ ಬಗ್ಗೆ ಪರಿಶೀಲನೆ ನಡೆಸಿದರು.

ಆಹಾರ ಸಾಮಗ್ರಿಗಳನ್ನು ಶೇಖರಿಸುವ ದಾಸ್ತಾನು ಕೊಠಡಿಗೆ ಭೇಟಿನೀಡಿ, ಕೊಠಡಿಯನ್ನು ಸಮರ್ಪಕವಾಗಿ ನಿರ್ವಹಿಸುವಂತೆ ತಿಳಿಸಿದರಲ್ಲದೆ, ವಿದ್ಯಾರ್ಥಿ ನಿಲಯಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಬೇಕು, ಹೆಚ್ಚು ಸ್ವಚ್ಛತೆಗೆ ಆದ್ಯತೆ ನೀಡಿದರೆ ವಿದ್ಯಾರ್ಥಿಗಳು ಆರೋಗ್ಯವಂತರಾಗಿರಲು ಸಾಧ್ಯ ಎಂದು ತಿಳಿಸಿದರು.

ವಿದ್ಯಾರ್ಥಿ ನಿಲಯಗಳ ನಿರ್ವಹಣೆಗೆ ಸರ್ಕಾರ ಕೋಟ್ಯಂತರ ರೂಪಾಯಿ ವೆಚ್ಚ ಮಾಡುತ್ತಿದೆ, ಅಧಿಕಾರಿಗಳು ಈ ಅನುದಾನವನ್ನು ವಿದ್ಯಾರ್ಥಿಗಳ ಅಭಿವೃದ್ಧಿಗಾಗಿ ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು. ಸಂಬಂಧಪಟ್ಟ ಅಧಿಕಾರಿಗಳು ಕಾಲಕಾಲಕ್ಕೆ ವಿದ್ಯಾರ್ಥಿ ನಿಲಯಗಳಿಗೆ ಭೇಟಿ ನೀಡಿ ಪರಿಶೀಲನೆ ನೆಡೆಸಿ, ವಸತಿ ನಿಲಯಗಳನ್ನು ಸಮಗ್ರವಾಗಿ ನಿರ್ವಹಣೆ ಮಾಡಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪ, ವಿದ್ಯಾರ್ಥಿನಿಲಯದ ಮೇಲ್ವಿಚಾರಕ ಕುಮಾರ್, ನಟರಾಜು, ಸೇರಿದಂತೆ ಮತ್ತಿತರ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *