ತುಮಕೂರು : ಇಂದಿನಿಂದ ಜಿಲ್ಲೆಯಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರಿಂದು ನಗರದ ಎಂಪ್ರೆಸ್ ಪ್ರೌಢಶಾಲೆ ಮತ್ತು ಸರ್ಕಾರಿ ಪ್ರೌಢಶಾಲೆಯ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ನಂತರ ಮಾತನಾಡಿದ ಅವರು, ಜಿಲ್ಲೆಯಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ವ್ಯವಸ್ಥಿತವಾಗಿ ನಡೆಸುವ ನಿಟ್ಟಿನಲ್ಲಿ ಒಟ್ಟು 129 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, 36 ಸಾವಿರ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಈ ಬಾರಿ ಪರೀಕ್ಷಾ ಕೇಂದ್ರದ ಪ್ರತಿಯೊಂದು ಕೊಠಡಿಗಳಲ್ಲೂ ಸಿ.ಸಿ ಕ್ಯಾಮರಾ ಅಳವಡಿಸಲಾಗಿದ್ದು, ಅವುಗಳನ್ನು ಪರಿಶೀಲಿಸಲು ಪ್ರತ್ಯೇಕ ತಂಡಗಳನ್ನು ರಚಿಸಲಾಗಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ಪರೀಕ್ಷೆಗೆ ಪೂರ್ವ ತಯಾರಿ ನಡೆಸಿಕೊಂಡು ಪರೀಕ್ಷಾ ಕೇಂದ್ರಗಳಿಗೆ ನಿಗಧಿತ ಸಮಯದೊಳಗೆ ಹಾಜರಾಗಿ ನಿರಾತಂಕವಾಗಿ ಪರೀಕ್ಷೆ ಬರೆಯಬೇಕೆಂದು ವಿದ್ಯಾರ್ಥಿಗಳಿಗೆ ಧೈರ್ಯದ ಮಾತು ಹೇಳಿದರು.
ಪ್ರತಿಯೊಬ್ಬ ವಿದ್ಯಾರ್ಥಿಗೂ ಎಸ್.ಎಸ್.ಎಲ್.ಸಿ ಪರೀಕ್ಷೆ ಮಹತ್ವದ ಘಟ್ಟ. ಈ ಹಿನ್ನೆಲೆಯಲ್ಲಿ ಶಿಕ್ಷಕರು ಪರೀಕ್ಷಾ ಮಂಡಳಿ ಸೂಚಿಸಿರುವಂತೆ ಸಮಯಕ್ಕೆ ಸರಿಯಾಗಿ ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆ ಒದಗಿಸಬೇಕು. ಒಂದು ವೇಳೆ ತಡವಾಗಿ ಪ್ರಶ್ನೆ ಪತ್ರಿಕೆ ನೀಡಿದ ಪ್ರಕರಣಗಳು ಕಂಡುಬಂದಲ್ಲಿ ಅಂತಹ ಶಿಕ್ಷಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.