ಡಿ. 29,30ರಂದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ:

ತುಮಕೂರು : ಕಲೆ, ಸಾಹಿತ್ಯ, ಶಿಕ್ಷಣಗಳ ಜೊತೆಗೆ ವೈವಿಧ್ಯಮಯ ಸಂಗೀತ, ನೃತ್ಯ, ಜಾನಪದ, ಯಕ್ಷಗಾನ ಹಾಗೂ ರಂಗಭೂಮಿಯ ಸಂಗಮ ಹಾಗೂ ಶೈಕ್ಷಣಿಕವಾಗಿ ಕಲೆ ಸಾಹಿತ್ಯ ಸಂಸ್ಕøತಿಗಳ ಶ್ರೀಮಂತಿಕೆಯಿಂದ ಕೂಡಿರುವ ತುಮಕೂರು ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಡಿಸೆಂಬರ್ 29 ಮತ್ತು 30ರಂದು ಜಿಲ್ಲಾ 15ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಏರ್ಪಡಿಸಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್. ಸಿದ್ಧಲಿಂಗಪ್ಪ ತಿಳಿಸಿದರು.

ಅವರಿಂದು ನಗರದ ಕನ್ನಡ ಭವನದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. 

ನಾಡು ನುಡಿ ಜಲಗಳ ಕುರಿತಾದ ಅರ್ಥಪೂರ್ಣ ವಿಚಾರ ವಿನಿಮಯಗಳಿಗೆ ಸಮ್ಮೇಳನ ಒಂದು ವೇದಿಕೆಯಾಗಿದೆ. ನಮ್ಮ ಜಿಲ್ಲೆಯವರೇ ಆದ ಅಂತರ ರಾಷ್ಟ್ರೀಯ ಖ್ಯಾತಿಯ ಸಾಹಿತಿಗಳಾದ ಡಾ. ಹೆಚ್.ಎಸ್.ಶಿವಪ್ರಕಾಶ್‍ರವರು ಸಮ್ಮೇಳನಾಧ್ಯಕ್ಷರಾಗಿರುತ್ತಾರೆ ಎಂದು ತಿಳಿಸಿದರು.

ಡಿಸೆಂಬರ್ 29ರಂದು ಶುಕ್ರವಾರ ಬೆಳಿಗ್ಗೆ 7.30 ಗಂಟೆಗೆ ಧ್ವಜಾರೋಹಣದ ಮೂಲಕ ಸಮ್ಮೇಳನಕ್ಕೆ ಚಾಲನೆ ದೊರೆಯಲಿದೆ. ಅಪರ ಜಿಲ್ಲಾಧಿಕಾರಿ ಶಿವಾನಂದ್ ಬಿ.ಕರಾಳೆ ರಾಷ್ಟ್ರಧ್ವಜಾರೋಹಣ ಮಾಡುವರು. ಮಹಾನಗರಪಾಲಿಕೆಯ ಉಪ ಮಹಾಪೌರರಾದ ಟಿ.ಕೆ.ನರಸಿಂಹಮೂರ್ತಿ ನಾಡ ಧ್ವಜಾರೋಹಣ ನೆರವೇರಿಸುವರು, ಅಂದು ಬೆಳಿಗ್ಗೆ 8 ಗಂಟೆಗೆ ಮಹಾನಗರಪಾಲಿಕೆಯ ಆವರಣದಿಂದ ಸಮ್ಮೇಳನಾಧ್ಯಕ್ಷರ ವೈಭವಯುತ ಮೆರವಣಿಗೆ ನಡೆಯಲಿದೆ. ಜಿಲ್ಲೆಯ ಜಾನಪದ ಹಾಗೂ ಸಾಂಸ್ಕøತಿಕ ಪ್ರಕಾರಗಳಾದ ಕೋಲಾಟ, ವೀರಗಾಸೆ, ನಂದೀಧ್ವಜ, ಸೋಮನಕುಣಿತ, ನಾಸಿಕ್ ಡೋಲು, ನಾದಸ್ವರ, ಗಾರುಡಿ ಗೊಂಬೆ, ಕೋಳಿನೃತ್ಯಗಳ ಜೊತೆಗೆ ಶಾಲಾ ಕಾಲೇಜುಗಳ ಸಾಂಸ್ಕøತಿಕ ತಂಡಗಳು ಭಾಗವಹಿಸಲಿವೆ. ಪಾಲಿಕೆಯ ಆವರಣದಿಂದ ಬಿ.ಜಿ.ಎಸ್. ವೃತ್ತ, ಎಂ.ಜಿ.ರಸ್ತೆ ಮಾರ್ಗವಾಗಿ ಗುಂಚಿಚೌಕದಲ್ಲಿರುವ ಬಿ.ಶಿವಮೂರ್ತಿ ಶಾಸ್ತ್ರಿಗಳ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಜಿಲ್ಲಾಧಿಕಾರಿಗಳ ಕಛೇರಿ ಮುಂಭಾಗದ ಮಾರ್ಗವಾಗಿ ಪ್ರದಾನ ವೇದಿಕೆ ತಲುಪುವುದು.

ಅಂದು ಬೆಳಿಗ್ಗೆ 10 ಗಂಟೆಗೆ ಶಿಕ್ಷಣ ಭೀಷ್ಮ ಡಾ. ಹೆಚ್.ಎಂ.ಗಂಗಾಧರಯ್ಯ ಪ್ರದಾನ ವೇದಿಕೆಯಲ್ಲಿ ಶ್ರೀ ಸಿದ್ಧಗಂಗಾ ಮಠಾಧ್ಯಕ್ಷರಾದ ಶ್ರೀ ಶ್ರೀ ಸಿದ್ಧಲಿಂಗಸ್ವಾಮಿಗಳವರು, ಹಿರೇಮಠಾಧ್ಯಕ್ಷರಾದ ಶ್ರೀ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮಿಗಳು, ಪಾವಗಡ ಶ್ರೀರಾಮಕೃಷ್ಣ ಸೇವಾಶ್ರಮದ ಶ್ರೀ ಶ್ರೀಜಪಾನಂದಜೀ ಮಹಾರಾಜ್‍ರವರ ದಿವ್ಯ ಸಾನ್ನಿಧ್ಯದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಖ್ಯಾತ ಕವಿಗಳು, ಸಂಸ್ಕøತಿ ಚಿಂತಕರಾದ ಪ್ರೊ.ಎಸ್.ಜಿ.ಸಿದ್ಧರಾಮಯ್ಯನವರು ಸಮ್ಮೇಳನದ ಉದ್ಘಾಟನೆಯನ್ನು ನೆರವೇರಿಸುವರು.  ಅಂದು ಕುವೆಂಪು ಜನ್ಮದಿನಾಚರಣೆಯ ಅಂಗವಾಗಿ ರಾಷ್ಟ್ರಕವಿ ಕುವೆಂಪುರವರ ಭಾವಚಿತ್ರಕ್ಕೆ ಅತಿಥಿಗಳು ಪುಷ್ಪಾರ್ಚನೆ ಮಾಡುವರು.

ನವದೆಹಲಿಯ ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಸಮ್ಮೇಳನದ ಸ್ಮರಣ ಸಂಚಿಕೆ ಕಲ್ಪಸೌರಭ'' ಬಿಡುಗಡೆ ಮಾಡುವರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷರಾದ ಎಂ.ವಿ.ನಾಗರಾಜರಾವ್‍ರವರು ಪ್ರಸ್ತುತ ಸಮ್ಮೇಳನಾಧ್ಯಕ್ಷರಾದ ಡಾ. ಹೆಚ್.ಎಸ್.ಶಿವಪ್ರಕಾಶ್ ಅವರಿಗೆ ಧ್ವಜ ಹಸ್ತಾಂತರ ಮಾಡುವರು. ಖ್ಯಾತ ವಿಮರ್ಶಕರಾದ ಎಂ.ಎಸ್.ಆಶಾದೇವಿ ಸಮ್ಮೇಳನಾಧ್ಯಕ್ಷರ ಕೃತಿಮುಗಿಲ ಜಹಜು” ಬಿಡುಗಡೆ ಮಾಡುವರು. ಸಿಹಿಜೀವಿ ವೆಂಕಟೇಶ್ ಅವರ ಕರ್ನಾಟಕದ ಏಳು ಅದ್ಬುತಗಳು ಕೃತಿಯನ್ನು ಶಾಸಕ ವೈ.ಎ.ನಾರಾಯಣ ಸ್ವಾಮಿ ಬಿಡುಗಡೆಗೊಳಿಸುವರು.

ಅಂದು ಸಂಜೆ 4.15 ಗಂಟೆಗೆ ನಡೆಯಲಿರುವ ಸನ್ಮಾನ ಮತ್ತು ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ವಹಿಸುವರು. ಸಹಕಾರ ಸಚಿವ ಕೆ.ಎನ್.ರಾಜಣ್ಣ ಜಿಲ್ಲೆಯ ವಿವಿಧ ಕ್ಷೇತ್ರಗಳ 23 ಜನ ಸಾಧಕರನ್ನು ಸನ್ಮಾನಿಸುವರು. ಹಿರಿಯ ಸಾಹಿತಿಗಳಾದ ನಾಡೋಜ ಡಾ. ಬರಗೂರು ರಾಮಚಂದ್ರಪ್ಪ ಸಮಾರೋಪ ಭಾಷಣ ಮಾಡುವರು. ಲೋಕಸಭಾ ಸದಸ್ಯ ಜಿ.ಎಸ್.ಬಸವರಾಜ್ ಸಮ್ಮೇಳನಾಧ್ಯಕ್ಷರಾದ ಡಾ. ಹೆಚ್.ಎಸ್.ಶಿವಪ್ರಕಾಶ್‍ರವರನ್ನು ಸನ್ಮಾನಿಸುವರು. ಶಾಸಕರುಗಳಾದ ಬಿ.ಸುರೇಶ್‍ಗೌಡ, ಎಂ.ಚಿದಾನಂದ ಗೌಡ ಅವರು ಪ್ರಶಂಸನಾ ಪತ್ರ ವಿತರಣೆ ಮಾಡುವರು. ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಪ್ರಭು, ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಮತ್ತಿತರರು ಅತಿಥಿಗಳಾಗಿ ಭಾಗವಹಿಸುವರು.

ಸಂಜೆ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿ ವಿದ್ಯಾರ್ಥಿನಿಯರು ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನೆರವೇರಿಸುವರು ಎಂದು ಕಸಾಪ ಅಧ್ಯಕ್ಷ ಕೆ.ಎಸ್. ಸಿದ್ಧಲಿಂಗಪ್ಪ ತಿಳಿಸಿದರು. 

ಈ ಸಂದರ್ಭದಲ್ಲಿ ತುಮಕೂರು ತಾಲ್ಲೂಕು ಕಸಾಪ ಅಧ್ಯಕ್ಷ ಚಿಕ್ಕಬೆಳ್ಳಾವಿ ಶಿವಕುಮಾರ್, ಕಸಾಪ ನಗರ ಕಾರ್ಯದರ್ಶಿ ಸಿಹಿಜೀವಿ ವೆಂಕಟೇಶ್, ಸಾಂಸ್ಕøತಿಕ ಸಂಚಾಲಕ ಕೆಂಕೆರೆ ಮಲ್ಲಿಕಾರ್ಜುನ್, ಸಂಘಟನಾ ಕಾರ್ಯದರ್ಶಿ ತೇಜಸ್ವಿ, ಮಹಿಳಾ ಪ್ರತಿನಿಧಿ ರಾಣಿ ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *