
ತುಮಕೂರು:sಸಿದ್ದಗಂಗಾ ಮಠದ ಹಿರಿಯ ಶ್ರೀಗಳಾದ ಡಾ.ಶ್ರೀಶಿವಕುಮಾರಸ್ವಾಮೀಜಿಯ ಆಶಯದಂತೆ ಮಾಜಿ ಸಚಿವ ವಿ.ಸೋಮಣ್ಣ ಅವರು,ವಿ.ಸೋಮಣ್ಣ ಪ್ರತಿಷ್ಠಾನದವತಿಯಿಂದ ನಿರ್ಮಿಸಿರುವ ಗುರುಭವನದ ಉದ್ಘಾಟನಾ ಸಮಾರಂಭ ಡಿಸೆಂಬರ್ 06 ರಂದು ನಡೆಯಲಿದೆ ಎಂದು ಸಂಸದ ಜಿ.ಎಸ್.ಬಸವರಾಜು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಹಳೆಯ ಮಠ ಚಿಕ್ಕದಾಗಿರುವ ಕಾರಣ.ವಿಶೇಷ ಪೂಜೆ ಸಂದರ್ಭದಲ್ಲಿ ಸಾಕಷ್ಟು ಇಕ್ಕಟ್ಟು ಆಗುತ್ತಿದ್ದ ಹಿನ್ನೆಲೆಯಲ್ಲಿ ವಿಶಾಲ ಪೂಜಾ ಮಂದಿರ ನಿರ್ಮಿಸಬೇಕೆಂಬುದು ನಡೆದಾಡುವ ದೇವರು ಎಂದು ಭಕ್ತರಿಂದ ಕರೆಯಿಸಿಕೊಂಡ ಡಾ.ಶ್ರೀಶಿವಕುಮಾರಸ್ವಾಮೀಜಿಗಳ ಆಶಯವಾಗಿದ್ದು,ಇದನ್ನು ಈಡೇರಿಸುವ ಭರವಸೆಯನ್ನು ವಿ.ಸೋಮಣ್ಣ ಅವರು ಸ್ವಾಮೀಜಿಯವರಿಗೆ ನೀಡಿದ್ದರು. ಅವರ ಜೀವಿತಾವಧಿಯಲ್ಲಿ ಅದು ಸಾಧ್ಯವಾಗಲಿಲ್ಲ.ಆದರೆ ಆ ನಂತರದಲ್ಲಿ ಸುಮಾರು 73 ಚದುರ ಮೀಟರ್‍ನಲ್ಲಿ ಎರಡು ಮಹಡಿಗಳನ್ನು ಒಳಗೊಂಡ, ಏಕಕಾಲಕ್ಕೆ 12 ಸ್ವಾಮೀಜಿ ಒಟ್ಟಿಗೆ ಕುಳಿತು ಶಿವಪೂಜೆ ನಡೆಸಬಹುದಾದ ಗುರುಭವನವನ್ನು ನಿರ್ಮಿಸಿದ್ದು, ಡಿಸೆಂಬರ್ 06ರಂದು ಉದ್ಘಾಟನೆಗೊಳ್ಳಲಿದೆ ಎಂದರು.
ಇದೊಂದು ಸಂಪೂರ್ಣ ಧಾರ್ಮಿಕ ಕಾರ್ಯಕ್ರಮವಾಗಿದ್ದು, ಇದರಲ್ಲಿ ರಾಜಕೀಯ ಇಲ್ಲ.ಯಾವ ದುರುದ್ದೇಶವೂ ಇಲ್ಲ. ಹಾಗಾಗಿ ಜಿಲ್ಲೆಯ ಜನಪ್ರತಿನಿಧಿಗಳನ್ನು ಹೊರತು ಪಡಿಸಿ ಹೊರಗಿನವರನ್ನು ಕರೆದಿಲ್ಲ ಎಂದ ಸಂಸದರು. ಡಿ.06ರ ಬೆಳಗ್ಗೆ 10:30ಕ್ಕೆ ಆರಂಭಗೊಳ್ಳುವ ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ಸಿದ್ದಗಂಗಾ ಮಠದ ಅಧ್ಯಕ್ಷರಾದ ಶ್ರೀಶ್ರೀ ಸಿದ್ದಲಿಂಗಸ್ವಾಮೀಜಿ ವಹಿಸಿದರು. ಶ್ರೀದೇಗುಲ ಮಠದ ಅಧ್ಯಕ್ಷ ಶ್ರೀಶ್ರೀಮುಮ್ಮಡಿ ನಿರ್ವಾಣ ಮಹಾಸ್ವಾಮೀಜಿಗಳು ನೇತೃತ್ವವಹಿಸಲಿದ್ದಾರೆ.

ಗುರುಭವನವನ್ನು ಗೃಹ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಉದ್ಘಾಟಿಸುವರು.ಶಿವಯೋಗಿ ಕೃತಿಯನ್ನು ಸಹಕಾರ ಸಚಿವ ಕೆ.ಎನ್.ರಾಜಣ್ಣ ಬಿಡುಗಡೆಗೊಳಿಸುವರು.ಅಧ್ಯಕ್ಷತೆಯನ್ನು ಮಾಜಿ ಸಚಿವರಾದ ವಿ.ಸೋಮಣ್ಣ ವಹಿಸಲಿದ್ದು,ಸಂಸದ ಜಿ.ಎಸ್.ಬಸವರಾಜು, ವಿ.ಸೋಮಣ್ಣ ಪ್ರತಿóಷ್ಠಾನದ ಅಧ್ಯಕ್ಷರಾದ ಶ್ರೀಮತಿ ಶೈಲಜ ಸೋಮಣ್ಣ, ಶಾಸಕರಾದ ಬಿ.ಸುರೇಶಗೌಡ, ಜಿ.ಬಿ.ಜೋತಿಗಣೇಶ್,ವಿಧಾನಪರಿಷತ್ ಸದಸ್ಯರಾದ ಡಾ.ವೈ.ಎ.ನಾರಾಯಣಸ್ವಾಮಿ, ಚಿದಾನಂದ.ಎಂ.ಗೌಡ, ಆರ್.ರಾಜೇಂದ್ರ, ಸಿದ್ದಗಂಗಾ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಟಿ.ಕೆ.ನಂಜುಂಡಪ್ಪ ಅವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ವಿವರ ನೀಡಿದರು.
ಮಾಜಿ ಸಚಿವ ವಿ.ಸೋಮಣ್ಣ ಅವರ ಪುತ್ರ ಡಾ.ಅರುಣ್ ಸೋಮಣ್ಣ ಮಾತನಾಡಿ,ದೇಗುಲ ಮಠದಿಂದ ಬೆಳದು ಬಂದ ವಿ.ಸೋಮಣ್ಣ, ಸಿದ್ದಗಂಗಾ ಮತ್ತು ಆದಿಚುಂಚನಗಿರಿ ಮಠಗಳನ್ನು ಬಹಳವಾಗಿ ನಂಬಿದ್ದಾರೆ.ಧಾರ್ಮಿಕ ಕಾರ್ಯಕ್ರಮಗಳ ಸಂಘಟಕರಾಗಿ,ಸಿದ್ದಗಂಗಾ ಮಠದಲ್ಲಿಯೇ ಹಲವಾರು ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ಹಿರಿಯ ಶ್ರೀಗಳ ಆಣತಿಯಂತೆ ಗುರುಭವನ ನಿರ್ಮಿಸಿದ್ದು,ಇದರ ಲೋಕಾರ್ಪಣೆ ಡಿಸೆಂಬರ್ 06ರಂದು ನಡೆಯಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಶ್ರೀಮಠದ ಭಕ್ತರು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ತುಮಕೂರು ಉಪಮೇಯರ್ ಟಿ.ಕೆ.ನರಸಿಂಹಮೂರ್ತಿ, ಮುಖಂಡರಾದ ಪಾಲನೇತ್ರಪ್ಪ, ನಿವೃತ್ತ ಅಧಿಕಾರಿ ಶಿವರುದ್ರಯ್ಯ ಮತ್ತಿತರರು ಉಪಸ್ಥಿತರಿದ್ದರು.