ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಬಹುಭಾಷಿಕ ವಿದ್ವತ್ತು ಕಡಿಮೆ ಆಗುತ್ತಿದೆ: ಕಮಲಾಕರ ಭಟ್

ತುಮಕೂರು: ಬೇರೆಬೇರೆ ಭಾಷೆಗಳನ್ನು ಕಲಿತು ಅಲ್ಲಿ ಬಂದಿರುವ ಸಾಹಿತ್ಯದ ಅಧ್ಯಯನ ಮಾಡುವುದೇ ತೌಲನಿಕ ಅಧ್ಯಯನದ ಮೊದಲ ಮೆಟ್ಟಿಲು. ಬಹುಭಾಷಿಕ ಅಧ್ಯಯನ ಮಾದರಿ ಬೆಳೆಯಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಬಹುಭಾಷಿಕ ವಿದ್ವತ್ತು ಕಡಿಮೆ ಆಗುತ್ತಿದೆ ಎಂದು ಮಹಾರಾಷ್ಟ್ರದ ಅಹಮದ್‍ನಗರ ಕಾಲೇಜಿನ ಇಂಗ್ಲಿಷ್ ಪ್ರಾಧ್ಯಾಪಕ ಡಾ. ಕಮಲಾಕರ ಭಟ್ ಅಭಿಪ್ರಾಯಪಟ್ಟರು.

ತುಮಕೂರು ವಿಶ್ವವಿದ್ಯಾನಿಲಯದ ಅಲ್ಲಮಪ್ರಭು ಅಧ್ಯಯನ ಪೀಠವು ಇಂಗ್ಲಿಷ್ ಹಾಗೂ ಕನ್ನಡ ವಿಭಾಗಗಳ ಸಹಯೋಗದೊಂದಿಗೆ ಶುಕ್ರವಾರ ಹಮ್ಮಿಕೊಂಡಿದ್ದ ಕೀರ್ತಿನಾಥ ಕುರ್ತಕೋಟಿಯವರ ‘ಕರ್ಟೆಸಿ ಆಫ್ ಕ್ರಿಟಿಸಿಸಂ’ ಲೇಖನಗಳ ಸಂಕಲನದ ಅನುವಾದಿತ ಕೃತಿಯ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬಹುಭಾಷಿಕ ಅಧ್ಯಯನದ ಮಾದರಿಯನ್ನು ತೋರಿಸಿಕೊಟ್ಟವರು ಕುರ್ತಕೋಟಿ. ಅವರಿಗೆ ಹಿಂದಿ, ಮರಾಠಿ, ಇಂಗ್ಲೀಷ್, ಕನ್ನಡ, ಸಂಸ್ಕøತ, ಗುಜರಾತಿ ಮೊದಲಾದ ಭಾಷೆಗಳ ಸಾಹಿತ್ಯದ ಆಳವಾದ ಪರಿಚಯ ಇತ್ತು. ಇಂತಹ ವಿದ್ವತ್ತು ಈಗ ಕಡಿಮೆಯಾಗಿದೆ ಎಂದರು.

ಯಾವ ಭಾಷೆಯೂ ಸ್ವಯಂಪೂರ್ಣ ಅಲ್ಲ. ಒಂದು ಭಾಷೆಗೆ ಇನ್ನೊಂದರೊಂದಿಗೆ ಅವಿನಾಭಾವ ಸಂಬಂಧ ಇರುತ್ತದೆ. ಪರಸ್ಪರ ಕೊಂಡುಕೊಳ್ಳುವಿಕೆಯಿಂದ ಅವು ಶ್ರೀಮಂತವಾಗುತ್ತವೆ. ಸಾಹಿತ್ಯ ಪರಂಪರೆಗಳು ಕೂಡ ಸ್ವಯಂಪೂರ್ಣ ಅಲ್ಲ. ಒಂದು ಇನ್ನೊಂದರೊಂದಿಗೆ ನಿರಂತರ ಸಂಭಾಷಣೆಯಲ್ಲಿ ತೊಡಗಿರುತ್ತವೆ. ಆದರೆ ಇದನ್ನು ನಮ್ಮ ಸಾಹಿತ್ಯ ಅದ್ಯಯನಗಳು ಗಂಭೀರವಾಗಿ ಪರಿಗಣಿಸಿಲ್ಲ ಎಂದರು.

ವಿಚಾರಗಳನ್ನು ಬಹಳ ಸರಳವಾಗಿ ಹೇಳುವ ಕೌಶಲ ಕುರ್ತಕೋಟಿಯವರಿಗೆ ಸಿದ್ಧಿಸಿತ್ತು. ಅವರು ಕೇವಲ ವಿದ್ವಾಂಸರಿಗಾಗಿ ಬರೆಯುತ್ತಿರಲಿಲ್ಲ. ತಮ್ಮ ಓದುಗರು ಅಥವಾ ಕೇಳುಗರು ತಮಗಿಂತ ಕಡಿಮೆ ತಿಳಿದವರು ಎಂಬ ಭಾವನೆಯೂ ಅವರಲ್ಲಿರಲಿಲ್ಲ ಎಂದರು.

ಸಾಹಿತ್ಯ ಇತಿಹಾಸ ಬರವಣಿಗೆಯ ಹೊಸ ಮಾದರಿಯನ್ನು ಕುರ್ತಕೋಟಿಯವರು ಕೊಟ್ಟಿದ್ದಾರೆ. ಅವರ ವಿಮರ್ಶೆಯಲ್ಲಿ ಹೊಸ ಹೊಳಹುಗಳಿರುತ್ತಿದ್ದವು. ಅವರನ್ನು ಕನ್ನಡೇತರರಿಗೆ ಪರಿಚಯಿಸುವ ಉದ್ದೇಶದಿಂದ ‘ಕರ್ಟೆಸಿ ಆಫ್ ಕ್ರಿಟಿಸಿಸಂ’ ಕೃತಿ ರಚಿಸಿದ್ದೇನೆ ಎಂದರು.

ಅಲ್ಲಮಪ್ರಭು ಅಧ್ಯಯನಪೀಠದ ಸಂಯೋಜಕ ಪ್ರೊ. ಎನ್. ಎಸ್. ಗುಂಡೂರ ಮಾತನಾಡಿ, ಕುರ್ತಕೋಟಿಯವರು ನಮ್ಮ ನಡುವಿನ ನಿಜವಾದ ಸಾಹಿತ್ಯಕ ಚರಿತ್ರಕಾರ. ಸಾಮಾನ್ಯ ವಿದ್ಯಾರ್ಥಿಗೂ ಅರ್ಥವಾಗುವ ಭಾಷೆಯಲ್ಲಿ ಅವರ ಬರವಣಿಗೆ ಇತ್ತು. ಪಶ್ಚಿಮದ ಪ್ರಸಿದ್ಧ ಕವಿಗಳು ಹೇಳದ ಅನೇಕ ಹೊಳಹುಗಳನ್ನು ಅವರು ತಮ್ಮ ಕೃತಿಗಳಲ್ಲಿ ನೀಡಿದರು. ಪ್ರತಿಭೆ ಕಣ್ಣು ತೆರೆದರೆ ಜೀವನ ಸಾರ್ಥಕವಾಗ್ತದೆ ಎಂಬುದಕ್ಕೆ ಅವರೇ ನಿದರ್ಶನ ಎಂದರು.

ಪ್ರಾಧ್ಯಾಪಕರಾದ ಪ್ರೊ. ನಿತ್ಯಾನಂದ ಬಿ. ಶೆಟ್ಟಿ, ಪ್ರೊ. ಹೆಚ್. ಕೆ. ಶಿವಲಿಂಗಸ್ವಾಮಿ, ಡಾ. ಗೀತಾ ವಸಂತ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *