ಮಾನನಷ್ಟ ಪ್ರಕರಣ, ರಾಹುಲ್ ಗಾಂಧಿಗೆ ಎರಡು ವರ್ಷಗಳ ಜೈಲು ಶಿಕ್ಷೆ- ಜಾಮೀನು

ಕೋಲಾರದಲ್ಲಿ ನಡೆದ ಚುನಾವಣಾ ಪೂರ್ವ ಪ್ರಚಾರದ ಭಾಷಣದಲ್ಲಿ ರಾಹುಲ್‌ ಗಾಂಧಿಯವರು ವಿವಾದಿತ ಹೇಳಿಕೆ

ಸೂರತ್‌, ಮಾರ್ಚ್‌ 23: 2019 ರ ಮಾನನಷ್ಟ ಪ್ರಕರಣದಲ್ಲಿ ಕಾಂಗ್ರೆಸ್ ( Congress ) ನಾಯಕ ರಾಹುಲ್ ಗಾಂಧಿ ( Rahul Gandhi ) ಅವರು ಇಂದು ತಪ್ಪಿತಸ್ಥರೆಂದು ಸಾಬೀತಾಗಿದೆ. ರಾಹುಲ್‌ ಗಾಂಧಿ ಅವರು ‘ಮೋದಿ’ ( Narendra Modi ) ಸರ್‌ನೇಮ್‌ ಬಗ್ಗೆ ಮಾಡಿದ ಟೀಕೆಗಳಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ಬಗ್ಗೆ ನೀವು ತಿಳಿಯಬೇಕಿರುವ ಪ್ರಮುಖ ಅಂಶಗಳು ಇಲ್ಲಿವೆ.

1- ರಾಹುಲ್ ಗಾಂಧಿಯನ್ನು ದೋಷಿ ಎಂದು ಘೋಷಿಸಿದ ಗುಜರಾತ್‌ನ ಸೂರತ್‌ನ ನ್ಯಾಯಾಲಯವು ಅವರಿಗೆ 30 ದಿನಗಳ ಕಾಲ ಜಾಮೀನು ನೀಡಿದೆ. ಕೋರ್ಟ್‌ ನಿರ್ಧಾರಕ್ಕೆ ಮೇಲ್ಮನವಿ ಸಲ್ಲಿಸಲು ಒಂದು ತಿಂಗಳುಗಳ ಕಾಲ ಅವಕಾಶ ಮಾಡಿಕೊಟ್ಟಿದೆ.

2- 2019 ರಲ್ಲಿ ಕರ್ನಾಟಕದ ಕೋಲಾರದಲ್ಲಿ ನಡೆದ ಚುನಾವಣಾ ಪೂರ್ವ ಪ್ರಚಾರದ ಭಾಷಣದಲ್ಲಿ ರಾಹುಲ್‌ ಗಾಂಧಿಯವರು ವಿವಾದಿತ ಹೇಳಿಕೆಗಳನ್ನು ನೀಡಿದ್ದರೆಂದು ಆರೋಪಿಸಲಾಗಿದೆ. ‘ಈ ದೇಶದ ಎಲ್ಲಾ ಕಳ್ಳರು ‘ಮೋದಿ’ ಎಂಬ ಸಾಮಾನ್ಯ ಸರ್‌ನೇಮ್‌ ಅನ್ನು ಹೇಗೆ ಹೊಂದಿದ್ದಾರೆ?’ ಎಂದು ರಾಹುಲ್‌ ಪ್ರಶ್ನಿಸಿದ್ದರು. ಈ ಹೇಳಿಕೆಯನ್ನು ಲೋಕಸಭೆ ಚುನಾವಣೆಗೂ ಮುನ್ನ ನೀಡಿದ್ದರು.

3- ಬಿಜೆಪಿ ಶಾಸಕ ಮತ್ತು ಗುಜರಾತ್ ಮಾಜಿ ಸಚಿವ ಪೂರ್ಣೇಶ್ ಮೋದಿ ಅವರು ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಲಾಗಿತ್ತು. ರಾಹುಲ್‌ ಗಾಂಧಿಯವರ ಹೇಳಿಕೆಯು ಇಡೀ ಮೋದಿ ಸಮುದಾಯವನ್ನು ಅವಮಾನಿಸಿದೆ ಎಂದು ಆರೋಪಿಸಲಾಗಿತ್ತು.

4- ಎರಡೂ ಕಡೆಯ ಅಂತಿಮ ವಾದಗಳ ವಿಚಾರಣೆಯು ಕಳೆದ ವಾರ ಮುಕ್ತಾಯಗೊಂಡಿತು. ಮಾರ್ಚ್ 23 ರಂದು ತೀರ್ಪು ಪ್ರಕಟಿಸಲು ನಿಗದಿಪಡಿಸಲಾಗಿದೆ ಎಂದು ರಾಹುಲ್‌ ಗಾಂಧಿಯವರ ವಕೀಲ ಕಿರಿತ್ ಪನ್ವಾಲಾ ಹೇಳಿದ್ದರು.

5- ರಾಹುಲ್‌ ಗಾಂಧಿ ಅವರು ತಮ್ಮ ಹೇಳಿಕೆಯನ್ನು ದಾಖಲಿಸಲು ಅಕ್ಟೋಬರ್ 2021 ರಲ್ಲಿ ಕೊನೆಯದಾಗಿ ಸೂರತ್ ನ್ಯಾಯಾಲಯಕ್ಕೆ ಹಾಜರಾಗಿದ್ದರು.

6- ಗುಜರಾತ್‌ನಲ್ಲಿ ಭೂಪೇಂದ್ರ ಪಟೇಲ್ ಸರ್ಕಾರದ ಮೊದಲ ಅವಧಿಯಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ ದೂರುದಾರ ಪೂರ್ಣೇಶ್ ಮೋದಿ ಅವರು ಕಳೆದ ಡಿಸೆಂಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಸೂರತ್ ಪಶ್ಚಿಮ ವಿಧಾನಸಭಾ ಕ್ಷೇತ್ರದಿಂದ ಮರು ಆಯ್ಕೆಯಾಗಿದ್ದಾರೆ.

7- ಭಾರತೀಯ ದಂಡ ಸಂಹಿತೆಯ ಸೆಕ್ಷನ್ 500 (ಮಾನನಷ್ಟ ಮೊಕದ್ದಮೆ) ಅಡಿಯಲ್ಲಿ ರಾಹುಲ್‌ ಗಾಂಧಿಯನ್ನು ತಪ್ಪಿತಸ್ಥರೆಂದು ನಿರ್ಣಯಿಸಲಾಗಿದೆ. ಅದರ ಅಡಿಯಲ್ಲಿ ಆರೋಪಿಗೆ (ಇನ್ನೊಬ್ಬರನ್ನು ಅವಮಾನಿಸುವವರು) ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುವುದು.

8- ದೇಶದಿಂದ ಪರಾರಿಯಾಗಿರುವ ವಜ್ರದ ವ್ಯಾಪಾರಿ ನೀರವ್ ಮೋದಿ, ಉದ್ಯಮಿ ಲಲಿತ್ ಮೋದಿ, ಪ್ರಧಾನಿ ನರೇಂದ್ರ ಮೋದಿ… ಇವರನ್ನು ಉಲ್ಲೇಖಿಸಿ ರಾಹುಲ್‌ ಗಾಂಧಿ ವಾಗ್ದಾಳಿ ನಡೆಸಿದ್ದರು.

9- 2019 ರಲ್ಲಿ, ಮೊಕದ್ದಮೆ ದಾಖಲಾದಾಗ, ತಮ್ಮನ್ನು ‘ಮೌನಗೊಳಿಸಲು’ ರಾಜಕೀಯ ವಿರೋಧಿಗಳ ‘ಹತಾಶ’ ಕ್ರಮ ಎಂದು ರಾಹುಲ್‌ ಗಾಂಧಿ ಹೇಳಿದ್ದರು.

10- ಯುನೈಟೆಡ್ ಕಿಂಗ್‌ಡಂನಲ್ಲಿ ರಾಹುಲ್ ಗಾಂಧಿ ಅವರ ಇತ್ತೀಚಿನ ಹೇಳಿಕೆಗಳಿಗಾಗಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿರುವ ಬಿಜೆಪಿ ನ್ಯಾಯಾಲಯದ ತೀರ್ಪನ್ನು ಸ್ವಾಗತಿಸಿದೆ. ರಾಹುಲ್ ಗಾಂಧಿ ಏನು ಹೇಳಿದರೂ ಅದು ಪಕ್ಷಕ್ಕೆ ಮತ್ತು ದೇಶಕ್ಕೆ ಅಪಾಯಕಾರಿ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.

Leave a Reply

Your email address will not be published. Required fields are marked *