ತುಮಕೂರು:ಸಂವಿಧಾನಿಕ ಸಂಸ್ಥೆಗಳಾದ ಐಟಿ, ಇಡಿ, ಸಿಬಿಐ ಮೂಲಕ ವಿರೋಧಪಕ್ಷಗಳನ್ನು ಧಮನ ಮಾಡಿ, ಸರ್ವಾಧಿಕಾರಿ ಗಳಂತೆ ವರ್ತಿಸುತ್ತಿರುವ ಬಿಜೆಪಿಯನ್ನು ಸೋಲಿಸುವ ಮೂಲಕ ಅಪಾಯದಲ್ಲಿರುವ ಪ್ರಜಾಪ್ರಭುತ್ರವವನ್ನು ರಕ್ಷಿಸಬೇಕಾಗಿದೆ ಎಂದು ಗೃಹ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಕೆರೆ ಕೊಟ್ಟರು.
ನಗರದ ಟೌನ್ಹಾಲ್ನಲ್ಲಿ ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿ ಕಾಂಗ್ರೆಸ್ನ ಎಸ್.ಪಿ.ಮುದ್ದಹನುಮೇಗೌಡರ ನಾಮಪತ್ರ ಸಲ್ಲಿಸುವ ವೇಳೆ ಸೇರಿದ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದ ಅವರು,ಪದೇ ಪದೇ ಸಂವಿಧಾನ ಬದಲಾವಣೆಯ ವಿಚಾರಗಳನ್ನು ಬಿಜೆಪಿ ಸಂಸದರು ಮಾತನಾಡುತ್ತಿದ್ದರು ಮೌನ ವಹಿಸಿ, ಅವರ ಮಾತುಗಳಿಗೆ ಕುಮ್ಮಕ್ಕು ನೀಡುತ್ತಿರುವ ನರೇಂದ್ರಮೋದಿ ಮತ್ತೊಮ್ಮೆ ಪ್ರಧಾನಿಯಾದರೆ ಸಂವಿಧಾನಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ.ಹಾಗಾಗಿ ಪ್ರಪಂಚದಲ್ಲಿಯೇ ಅತ್ಯಂತ ಶ್ರೇಷ್ಠವೆನಿಸಿಕೊಂಡಿರುವ ಭಾರತದ ಸಂವಿಧಾನವನ್ನು ಉಳಿಸಿಕೊಳ್ಳಲು ನಾವೆಲ್ಲರೂ ಬಿಜೆಪಿಯನ್ನು ಸೋಲಿಸುವುದು ಅನಿವಾರ್ಯವಾಗಿದೆ ಎಂದರು.
ಇದು ಸತ್ಯ ಮತ್ತು ಅಸತ್ಯದ ನಡುವೆ ನಡೆಯುತ್ತಿರುವ ಹೋರಾಟವಾಗಿದೆ.ಅಸತ್ಯ ಎಷ್ಟೇ ವಿಜೃಂಬಿಸಿದರೂ, ಕೊನೆಗೆ ಸತ್ಯಕ್ಕೆ ಗೆಲುವು ಹಾಗಾಗಿ ಸರಳ,ಸಜ್ಜನ ಹಾಗೂ ಉತ್ತಮ ಸಂಸದೀಯ ಪಟು ಎಂದು ಹೆಸರು ಪಡೆದಿರುವ ಎಸ್.ಪಿ.ಮುದ್ದಹನುಮೇಗೌಡ ಅವರು ಗೆಲ್ಲಬೇಕಿದೆ. ಆ ಮೂಲಕ ಜಿಲ್ಲೆಯ ಜಲ್ವಂತ ಸಮಸ್ಯೆಗಳಾದ ಕೊಬ್ಬರಿ ಬೆಲೆ ಇಳಿಕೆ ಸೇರಿದಂತೆ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.ಎಲ್ಲಿಂದಲೋ ಬಂದ ವಿ.ಸೋಮಣ್ಣ ಅವರಿಗೆ ಮತಹಾಕುವುದರಿಂದ ಇದು ಸಾಧ್ಯವಿಲ್ಲ. ಹಾಲಿ ಸಂಸದ ಜಿ.ಎಸ್.ಬಸವರಾಜು ಸೇರಿದಂತೆ ರಾಜ್ಯದಿಂದ ಆರಿಸಿ ಹೋದ 26 ಬಿಜೆಪಿ ಸಂಸದರು ಒಂದು ದಿನವೂ ರಾಜ್ಯದ ನೆಲ,ಜಲ, ಭಾಷೆಯ ವಿಚಾರದಲ್ಲಿ ದ್ವನಿ ಎತ್ತಿ ಮಾತನಾಡಲಿಲ್ಲ.ಅವರ ಹಾದಿಯಲ್ಲಿಯೇ ಇರುವ ವಿ.ಸೋಮಣ್ಣ ಅವರಿಂದ ಏನನ್ನಾದರೂ ನಿರೀಕ್ಷೆ ಮಾಡಲು ಸಾಧ್ಯವೆ ಎಂದು ಡಾ.ಜಿ.ಪರಮೇಶ್ವರ್ ಪ್ರಶ್ನಿಸಿದರು.
ಬರ ಬಂದಾಗ, ನೆರೆ ಬಂದಾಗ ಬಾರದ ಅಮಿತ್ ಷಾ ಇಂದು ಚುನಾವಣೆಗೋಸ್ಕರ ರಾಜ್ಯಕ್ಕೆ ಬಂದ ಹಸಿ ಸುಳ್ಳುಗಳನ್ನು ಹೇಳುತ್ತಿದ್ದಾರೆ.ಸುಳ್ಳು ಹುಟ್ಟಿದ್ದೇ ಬಿಜೆಪಿಯಿಂದ, ಭೀಕರ ಬರಗಾಲದಿಂದ ಇಡೀ ಜನತೆ ತತ್ತರಿಸಿದ್ದು,18ಸಾವಿರ ಕೋಟಿ ರೂ ಪರಿಹಾರ ಕೇಳಿದರೆ ಇದುವೆರಗೂ ನೀಡಿಲ್ಲ. ಜಿ.ಎಸ್.ಟಿ ಪಾಲಿನಲ್ಲಿಯೂ ರಾಜ್ಯಕ್ಕೆ ಅನ್ಯಾಯವಾಗಿದೆ. ಹೀಗಿದ್ದರೂ ರಾಜ್ಯದ ಸಂಸದರಾಗಲಿ, ಸಚಿವರಾಗಲಿ ಮೋದಿಯನ್ನು ಪ್ರಶ್ನಿಸಲಿಲ್ಲ. ಆದರೆ ಈಗ ಮೋದಿಗೆ ಮತ ನೀಡಿ ಎಂದು ಕೇಳಲು ಇವರಿಗೆ ನಾಚಿಕೆಯಾಗುವುದಿಲ್ಲವೇ, ಇಡೀ ದೇಶದಲ್ಲಿ ಅತಿ ಹೆಚ್ಚು ತೆರಿಗೆ ನೀಡುವ ಕರ್ನಾಟಕಕ್ಕೆ ನೀಡಿರುವುದು ಕೇವಲ 54 ಸಾವಿರ ಕೋಟಿ ಮಾತ್ರ. ಎಲ್ಲಾ ವಿಚಾರದಲ್ಲಿಯೂ ರಾಜ್ಯಕ್ಕೆ ಕೇಂದ್ರದ ಬಿಜೆಪಿ ಸರಕಾರದಿಂದ ಅನ್ಯಾಯವಾಗುತ್ತಿದ್ದು,ಇದು ಸರಿಹೊಗ ಬೇಕಾದರೆ ಮುದ್ದಹನುಮೇಗೌಡರಂತಹ ಸಂಸದರು ಪಾರ್ಲಿಮೆಂಟ್ಗೆ ಹೋಗಬೇಕು.ಅವರನ್ನು ಅಲ್ಲಿಗೆ ಕಳುಹಿಸಿಕೊಡುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರದ್ದು,ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹಸ್ತಕ್ಕೆ ಮತ ನೀಡುವ ಮೂಲಕ ಜನವಿರೋಧಿ, ರೈತವಿರೋಧಿ, ಕಾರ್ಮಿಕ ವಿರೋಧಿ ಬಿಜೆಪಿಯನ್ನು ಸೋಲಿಸವಂತೆ ಡಾ.ಜಿ.ಪರಮೇಶ್ವರ್ ಕರೆ ನೀಡಿದರು.
ಚಾಮನಗರಕ್ಕೆ ಹೋಗಿದ್ದಾಗ ಅಲ್ಲಿನ ಜನ ಸೋಮಣ್ಣನನ್ನು ನಾವು ಸೋಲಿಸಿ ಕಳಿಸಿದ್ದೇವೆ, ನೀವು ಸೋಲಿಸಿ ಕಳಿಸಿ ಎಂದಿದ್ದಾರೆ. ಸೋಲಿಸಿ ಕಳಿಸುತ್ತೇವೆ.
ಬಿಜೆಪಿಯವರು ತುಮಕೂರು ಲೋಕಸಭೆಗೆ ನಿಲ್ಲಿಸಲು ಜಿಲ್ಲೆಯಲ್ಲಿ ಯಾರೂ ಗಂಡಸರು ಇರಲಿಲ್ಲವೆ, ಬೆಂಗಳೂರಿಂದ ಕರೆ ತರಬೇಕಿತ್ತೇ ಎಂದು ಡಾ.ಜಿ.ಪರಮೇಶ್ವರ್ ಜಿಲ್ಲಾ ಬಿಜೆಪಿಗರನ್ನು ಲೇವಡಿ ಮಾಡಿದರು.
ಎಐಸಿಸಿ ಕಾರ್ಯದರ್ಶಿ ಮಯೂರು ಜಯಕುಮಾರ್ ಮಾತನಾಡಿ, ದೇಶದಲ್ಲಿ ಬಿಜೆಪಿ ಸರಕಾರ ತನ್ನ ಕೊನೆಯದಿನಗಳನ್ನು ಎನಿಸುತ್ತಿದೆ.ರಾಜ್ಯದಲ್ಲಿ ಐದು ಗ್ಯಾರಂಟಿಗಳನ್ನು ಜಾರಿ ಮಾಡಿದ ರೀತಿಯಲ್ಲಿಯೇ ಕೇಂದ್ರದಲ್ಲಿಯೂ ಹಲವು ಗ್ಯಾರಂಟಿಗಳನ್ನು ಕಾಂಗ್ರೆಸ್ ಜಾರಿಗೆ ತರಲಿದೆ. ಇದನ್ನು ಕಾರ್ಯಕರ್ತರು ಪ್ರತಿ ಮನೆ ಮನೆಗೂ ತಿಳಿಸಿ, ಕಾಂಗ್ರೆಸ್ ಪಕ್ಷ ಗೆಲ್ಲುವಂತೆ ಮಾಡಿ ಎಂದು ಕರೆ ನೀಡಿದರು.
ಗುಬ್ಬಿ ಶಾಸಕ ಹಾಗೂ ಕೆ.ಎಸ್.ಆರ್.ಟಿ.ಸಿ. ಅಧ್ಯಕ್ಷ ಎಸ್.ಆರ್.ಶ್ರೀನಿವಾಸ್ ಮಾತನಾಡಿ,ತುಮಕೂರು ಲೋಕಸಭಾ ಕ್ಷೇತ್ರದ ಜನತೆಗೆ ಸ್ವಾಭಿಮಾನಿಗಳು, ಈ ಹಿಂದೆ ಎ.ಕೃಷ್ಣಪ್ಪ, ಕೋದಂಡರಾಮಯ್ಯ,ಮಂಜುನಾಥ್,ಹೆಚ್.ಡಿ.ದೇವೇಗೌಡರನ್ನೇ ಸೋಲಿಸಿ ಮನೆಗೆ ಕಳುಹಿಸುವ ಮೂಲಕ ಜಿಲ್ಲೆಯಲ್ಲಿ ಹೊರಗಿನವರಿಗೆ ಅವಕಾಶ ಇಲ್ಲ ಎಂಬುದನ್ನು ಸಾಭೀತು ಪಡಿಸಿದ್ದಾರೆ.ಈ ಬಾರಿಯೂ ತುಮಕೂರು ಲೋಕಸಭಾ ಕ್ಷೇತ್ರದ ಮತದಾರರು ತಮ್ಮ ಸ್ವಾಭಿಮಾನವನ್ನು ಎತ್ತಿ ಹಿಡಿಯಬೇಕಾಗಿದೆ.ಈ ಹಿಂದಿನ ಐದು ವರ್ಷಗಳಲ್ಲಿ ಒಮ್ಮೆಯೂ ಜಿಲ್ಲೆಯ ಜಲ್ವಂತ ಸಮಸ್ಯೆಗಳ ಕುರಿತು ಮಾತನಾಡದ ಜಿ.ಎಸ್.ಬಸವರಾಜು ಅವರ ಮಾತಿಗೆ ಮರಳಾದರೆ ಜಿಲ್ಲೆಗೆ ಘೋರ ಅನ್ಯಾಯ ಮಾಡಿದಂತಾಗುತ್ತದೆ. ಕೊಟ್ಟ ಮಾತಿನಂತೆ ಐದು ಗ್ಯಾರಂಟಿಗಳನ್ನು ನೀಡಿರುವ ಕಾಂಗ್ರೆಸ್ ಪಕ್ಷ ಬೇಕೋ, ಕಳೆದ 10 ವರ್ಷಗಳಲ್ಲಿ ತಾವು ಕೊಟ್ಟ ಒಂದು ಭರವಸೆ ಈಡೇರಿಸದ ಬಿಜೆಪಿ ಪಕ್ಷ ಬೇಕೋ ಎಂಬುದನ್ನು ಜನತೆ ತೀರ್ಮಾನಿಸಬೇಕು.ಹಣವಿದ್ದರೆ ಚುನಾವಣೆ ಗೆಲ್ಲಬಹುದು ಎಂಬ ಬಿಜೆಪಿ ಅಭ್ಯರ್ಥಿಯ ಮುಂದೆ ಸ್ವಾಭಿಮಾನವೆಂಬ ಗುಣವನ್ನು ನಾವೆಲ್ಲರೂ ಎತ್ತಿ ಹಿಡಿಯಬೇಕಿದೆ ಎಂದರು.
ಕಾಂಗ್ರೆಸ್ ಪಕ್ಷದ ಲೋಕಸಭಾ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡ ಮಾತನಾಡಿ,2014ರಿಂದ 2019ರವರೆಗೆ ಐದು ವರ್ಷಗಳ ಕಾಲ ಸಂಸದನಾಗಿ ಈ ಜಿಲ್ಲೆ, ರಾಜ್ಯದ ಹಲವಾರು ವಿಚಾರಗಳನ್ನು ಸಂಸತ್ತಿನಲ್ಲಿ ಪ್ರಾಸ್ತಾಪಿಸುವ ಮೂಲಕ ಜಿಲ್ಲೆಯ ಜಲ್ವಂತ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಪ್ರಯತ್ನ ನಡೆಸಿದ್ದೇನೆ. ವಿಶ್ವಸಂಸ್ಥೆಯಲ್ಲಿ ಭಾರತವನ್ನು ಪ್ರತಿನಿಧಿಸುವ ಮೂಲಕ ಜಿಲ್ಲೆಗೆ ಕೀರ್ತಿ ತರುವ ಕೆಲಸ ಮಾಡಿದ್ದೇನೆ. ರಾಜ್ಯದ ನೆಲ, ಜಲ, ಭಾಷೆ, ಕೈಗಾರಿಕೆ, ರೈತರ ಸಮಸ್ಯೆ, ಕೊಬ್ಬರಿ ಸಮಸ್ಯೆಗಳ ಕುರಿತು ಅಧಿವೇಶನದಲ್ಲಿ ಚರ್ಚಿಸಿ, ಪರಿಹಾರ ದೊರಕಿಸುವ ಪ್ರಯತ್ನ ನಡೆಸಿದ್ದು, ಮುಂದೆ ಜನತೆ ಅವಕಾಶ ಮಾಡಿಕೊಟ್ಟರೆ, ಜಿಲ್ಲೆಯ ಜಲ್ವಂತ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯಲು ಪಾರ್ಲಿಮೆಂಟಿನ ಒಳ, ಹೊರಗೆ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಮಾಜಿ ಶಾಸಕರಾದ ಡಿ.ಸಿ.ಗೌರಿಶಂಕರ್,ವೆಂಕಟರಮಣಪ್ಪ, ಎಸ್.ಷಪಿಅಹಮದ್,ಬೆಮೆಲ್ ಕಾಂತರಾಜು, ಕೆ.ಎಸ್.ಕಿರಣ ಕುಮಾರ್,ರಾಜ್ಯ ವಕ್ತಾರ ನಿಕೇತ್ರಾಜ್ ಮೌರ್ಯ ಅವರುಗಳು ಕಾರ್ಯಕರ್ತರು ಉದ್ದೇಶಿಸಿ ಮಾತನಾಡಿದರು. ಮಾಜಿ ಶಾಸಕರಾದ ಡಾ.ರಫೀಕ್ ಅಹಮದ್,ಗಂಗಹನುಮಯ್ಯ,ಇಕ್ಬಾಲ್ ಅಹಮದ್,ಜಿ.ಪಂ ಮಾಜಿ ಅಧ್ಯಕ್ಷೆ ಶಾಂತಲ ರಾಜಣ್ಣ,ಸದಸ್ಯರಾದ ರಾಧಾ ದೇವರಾಜು, ಮಾಜಿ ಮೇಯರಗಳಾದ ಪ್ರಭಾವತಿ, ಫರ್ಹಾನ ಬೇಗಂ,ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷ ಗೀತಾ ರಾಜಣ್ಣ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.
ಎತ್ತಿನ ಗಾಡಿಯಲ್ಲಿ ಹಸಿರು ಶಾಲಿನೊಂದಿಗೆ ಮೆರವಣಿಗೆ
ನಾಮಪತ್ರ ಸಲ್ಲಿಕೆ ಮೆರವಣಿಗೆಗೆ ವಿಶೇಷವಾಗಿ ವಾಹನ ಸಿದ್ದಗೊಂಡಿದ್ದರೂ ಕೊನೆಯ ಗಳಿಗೆಯಲ್ಲಿ ಚಿಕ್ಕಣ್ಣಸ್ವಾಮಿ ದೇವಾಲಯದ ಧರ್ಮದರ್ಶಿ ಪಾಪಣ್ಣ ಅವರು ಸಾರಥಿಯಾಗಿ, ತಾವು ಸಾಕಿರುವ ಎತ್ತುಗಳಿಗೆ ಟೈರ್ಗಾಡಿ ಹೂಡಿ, ಅದರಲ್ಲಿ ಲೋಕಸಭಾ ಅಬ್ಯರ್ಥಿ ಎಸ್.ಪಿ.ಮುದ್ದ ಹನುಮೇಗೌಡರು, ಡಾ.ಜಿ.ಪರಮೇಶ್ವರ್, ಕೆ.ಎನ್.ರಾಜಣ್ಣ, ಎಸ್,.ಆರ್.ಶ್ರೀನಿವಾಸ್ ಜಿಲ್ಲಾಧಿಕಾರಿಗಳ ಕಛೇರಿ ತನಕ ಮೆರವಣಿಗೆಯಲ್ಲಿ ತೆರಳಿದರು.