ದೇವೇಗೌಡರ ಪ್ರಚಾರ ಸಭೆಯಲ್ಲಿ ಧಿಕ್ಕಾರ : ಕಠಿಣ ಕ್ರಮಕ್ಕೆ ಆಗ್ರಹ

ತುಮಕೂರು: ನಗರದಲ್ಲಿ ನಡೆದ ಎನ್.ಡಿ.ಎ ಅಭ್ಯರ್ಥಿ ವಿ.ಸೋಮಣ್ಣ ಅವರ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಗೆ ಧಿಕ್ಕಾರ ಕೂಗಿ ಅವಮಾನಿಸಿದ ಕಾಂಗ್ರೆಸ್ ಪಕ್ಷದ ಕಿಡಿಗೇಡಿಗಳ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಬಿಜೆಪಿ, ಜೆಡಿಎಸ್ ಮುಖಂಡರು, ಕಾರ್ಯಕರ್ತರು ಒತ್ತಾಯಿಸಿದರು.

ಈ ಸಂಬಂಧ ಮಂಗಳವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವ ವೇಳೆ ಜಿಲ್ಲಾಧಿಕಾರಿ ಕಚೇರಿ ಬಳಿ ಸೇರಿದ್ದ ಎರಡೂ ಪಕ್ಷದ ಕಾರ್ಯಕರ್ತರು, ವಿಶೇಷವಾಗಿ ಮಹಿಳಾ ಕಾರ್ಯಕರ್ತೆಯರು ಕಾಂಗ್ರೆಸ್ ಪಕ್ಷದ ವರ್ತನೆ ಹಾಗೂ ಪೊಲೀಸರ ನಿರ್ಲಕ್ಷತನಕ್ಕೆ ಆಕ್ರೋಶ ವ್ಯಕ್ತಪಡಿಸಿದರು.

ಸೋಮವಾರ (ಏ15) ನಗರದ ಕುಂಚಿಟಿಗ ಸಮುದಾಯ ಭವನದಲ್ಲಿ ಎನ್.ಡಿ.ಎ ಅಭ್ಯರ್ಥಿ ವಿ.ಸೋಮಣ್ಣ ಅವರ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹಾಗೂ ಎರಡೂ ಪಕ್ಷಗಳ ಮುಖಂಡರು ಭಾಗವಹಿಸಿದ್ದರು. ಈ ವೇಳೆ ಸಭೆಗೆ ನುಗ್ಗಿದ ಕಾಂಗ್ರೆಸ್ ಕಾರ್ಯಕರ್ತರು ಏಕಾಏಕಿ ದೇವೇಗೌಡರಿಗೆ, ಹೆಚ್.ಡಿ.ಕುಮಾರಸ್ವಾಮಿಯವರಿಗೆ ಧಿಕ್ಕಾರ ಕೂಗಿ, ಕಾರ್ಯಕ್ರಮಕ್ಕೆ ಅಡ್ಡಿ ಉಂಟು ಮಾಡಿದ್ದರು. ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಕಾಂಗ್ರೆಸ್‍ನವರು ಪಿತೂರಿ ಮಾಡಿ ಈ ಘಟನೆಗೆ ಕಾರಣರಾಗಿದ್ದಾರೆ. ಮಾಜಿ ಪ್ರಧಾನಿಗಳಿಗೆ ನೀಡಬೇಕಾದ ಭದ್ರತೆ ಲೋಪ, ಪೊಲೀಸರ ನಿರ್ಲಕ್ಷ ಕಾರಣವಾಗಿದೆ ಎಂದು ಬಿಜೆಪಿ, ಜೆಡಿಎಸ್ ಮುಖಂಡರು ಟೀಕಿಸಿದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ಎನ್.ಡಿ.ಎ ಸಭೆಗಳಿಗೆ ಕಾಂಗ್ರೆಸ್‍ನವರು ಅಡ್ಡಿ ಮಾಡಬಹುದೆಂದು ಮುಂಜಾಗ್ರತವಾಗಿ ಪೊಲಿಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ಪೊಲೀಸರು ನಿರ್ಲಕ್ಷ ಮಾಡಿದ್ದಾರೆ. ನಮ್ಮ ಪಕ್ಷದ ಸಭೆಗೆ ಅಕ್ರಮವಾಗಿ ನುಗ್ಗಿದ ಕಾಂಗ್ರೆಸ್ ಕಾರ್ಯಕರ್ತರ ಉದ್ದೇಶ ಏನಿತ್ತು ಎಂಬ ಬಗ್ಗೆ ತನಿಖೆ ಆಗಬೇಕು, ಇದೇ ರೀತಿ ಗೃಹ ಸಚಿವರ ಸಭೆಗೆ ಯಾರಾದರೂ ನುಗ್ಗಿ ಅಡ್ಡಿ ಮಾಡಿದ್ದರೆ ನೀವು ಸುಮ್ಮನಿರುತ್ತಿದ್ದಿರೆ? ಪೊಲೀಸರು ತಾರತಮ್ಯ ಮಾಡುತ್ತಿದ್ದೀರಿ ಎಂದು ಪೊಲೀಸರನ್ನು ತರಾಟೆ ತೆಗೆದುಕೊಂಡರು.

ಸಭೆಗೆ ನುಗ್ಗಿದ್ದ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಜಾಮೀನು ಸಿಗದ ರೀತಿಯ ಪ್ರಕರಣ ದಾಖಲಿಸಬೇಕು. ಅವರನ್ನು ಕೂಡಲೇ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್.ಸಿ.ಆಂಜನಪ್ಪ ಮಾತನಾಡಿ, ನಮ್ಮ ಚುನಾವಣಾ ಸಭೆಗೆ ಅಡ್ಡಿಪಡಿಸಲು ಕಾಂಗ್ರೆಸ್‍ನವರು ಹೆಣ್ಣುಮಕ್ಕಳನ್ನು ಕಳಿಸಿರುವುದು ದುರಾದೃಷ್ಟಕರ. ಅದು ಕಾಂಗ್ರೆಸ್ ಸಂಸ್ಕøತಿಯನ್ನು ಎತ್ತಿ ತೋರಿಸುತ್ತದೆ. ಇಂತಹ ಪ್ರಕರಣಗಳು ಮುಂದುವರೆದರೆ ಕಾಂಗ್ರೆಸ್ ಸಭೆಗಳು ನಡೆಯಲು ನಮ್ಮ ಎರಡೂ ಪಕ್ಷಗಳು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಕುಮಾರಸ್ವಾಮಿಯವರ ಹೇಳಿಕೆಯನ್ನು ತಿರುಚಿ, ಚುನಾವಣಾ ಅಸ್ತ್ರ ಮಾಡಿಕೊಳ್ಳಲು ಕಾಂಗ್ರೆಸ್‍ನವರು ಹೊರಟಿದ್ದಾರೆ. ಈ ಬಗ್ಗೆ ಕುಮಾರಸ್ವಾಮೀಯವರು ವಿವರವಾದ ಮಾಹಿತಿ ನೀಡಿದ್ದಾರೆ. ಹೆಣ್ಣುಮಕ್ಕಳ ಬಗ್ಗೆ ಅಪಾರ ಗೌರವ ಹೊಂದಿರುವ ಮಾಜಿ ಪ್ರಧಾನಿ ದೇವೇಗೌಡರಿಗೆ ಧಿಕ್ಕಾರ ಕೂಗಿ ಅಪಮಾನ ಮಾಡಿರುವುದನ್ನು ಕಾಂಗ್ರೆಸಿನ ಕೆಟ್ಟ ನಡವಳಿಕೆ. ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಜೆಡಿಎಸ್ ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜು, ಮುಖಂಡರಾದ ಎಸ್.ಶಿವಪ್ರಸಾದ್, ಬ್ಯಾಟರಂಗೇಗೌಡ, ಎಸ್.ಪಿ.ಚಿದಾನಂದ್, ಬಿಜೆಪಿ ನಗರ ಅಧ್ಯಕ್ಷ ಹನುಮಂತರಾಜು, ಜೆಡಿಎಸ್ ನಗರ ಅಧ್ಯಕ್ಷ ವಿಜಯ್‍ಗೌಡ, ಮುಂಡರಾದ ಹೆಚ್.ಟಿ.ಚಂದ್ರಶೇಖರ್, ಬೆಳ್ಳಿಲೋಕೇಶ್, ಶ್ರೀನಿವಾಸಪ್ರಸಾದ್, ಟಿ.ಜಿ.ನರಸಿಂಹರಾಜು, ಸೋಲಾರ್ ಕೃಷಮೂರ್ತಿ, ರಂಗನಾಥ್, ಮುದಿಮಡು ರಂಗಸ್ವಾಮಯ್ಯ, ಭೈರೇಶ್, ರೇಖಾರಾಜು, ಪ್ರೇಮಾ ಹೆಗಡೆ, ವಿಜಯ ಭಾಸ್ಕರ್, ತಾಹೇರಾ ಕುಲ್ಸಂ, ಜ್ಯೋತಿ ತಿಪ್ಪೇಸ್ವಾಮಿ, ಲಕ್ಷ್ಮಮ್ಮ, ಯಶೋದ, ರಾಧಮ್ಮ, ಡಾ.ಫರ್ಜಾನಾ, ಉಷಾ, ರಾಧಾ ಗಂಗಾಧರ್, ಆದ್ಯ ಮೊದಲಾದವರು ಭಾಗವಹಿಸಿದ್ದರು.

ಕಾನೂನು ಘಟಕದ ಖಂಡನೆ :

ಮಾಜಿ ಪ್ರಧಾನಿ ದೇವೇಗೌಡರು ಪಾಲ್ಗೊಂಡಿದ್ದ ಎನ್.ಡಿ.ಎ ಅಭ್ಯರ್ಥಿ ಪರ ಚುನಾವಣಾ ಪ್ರಚಾರ ಸಭೆಗೆ ಅಡ್ಡಿಪಡಿಸಿದ ಪ್ರಕರಣ ಸಂಬಂಧ ಅಧಿಕಾರಿಗಳ ಕರ್ತವ್ಯಲೋಪದ ಬಗ್ಗೆ ಜೆಡಿಎಸ್ ಹಾಗೂ ಬಿಜೆಪಿ ಕಾನೂನು ಘಟಕದಿಂದ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಲಾಯಿತು.

ಜೆಡಿಎಸ್ ರಾಜ್ಯ ಘಟಕ ಅಧ್ಯಕ್ಷ ಎ.ಪಿ.ರಂಗನಾಥ್, ಬಿಜೆಪಿ ಕಾನೂನು ಪ್ರಕೋಷ್ಟ ರಾಜ್ಯ ಸಂಚಾಲಕ ವಸಂತಕುಮಾರ್, ರಾಜ್ಯ ಸಮಿತಿ ಸದಸ್ಯ ಡಿ.ಸಿ.ಹಿಮಾನಂದ್, ಕೆ.ಪಿ.ವಿಶ್ವನಾಥ್, ಜೆಡಿಎಸ್ ಜಿಲ್ಲಾ ಕಾನೂನು ಘಟಕ ಅಧ್ಯಕ್ಷೆ ರೇಖಾ, ತುಮಕೂರು ವಕೀಲರ ಸಂಘದ ಅಧ್ಯಕ್ಷ ಕೆಂಪರಾಜು, ಮುಖಂಡರಾದ ರೇಣುಕೇಶ್, ಪ್ರಕಾಶ್, ಆತ್ಮಾ ಹಿರೇಮಠ್, ರಮೇಶ್ ಸುಲ್ತಾನ್‍ಪುರ್, ನವೀನ್‍ಚಂದ್ರ ಶೆಟ್ಟಿ ಮೊದಲಾದವರು ಹಾಜರಿದ್ದರು.

Leave a Reply

Your email address will not be published. Required fields are marked *