ತುಮಕೂರು: ಇತ್ತೀಚಿನ ದಿನಗಳಲ್ಲಿ ಯಾವುದೇ ಶಾಲೆ, ಕಾಲೇಜು, ವಿಶ್ವವಿದ್ಯಾನಿಲಯ ಕಲಿಸದ ಪಾಠವನ್ನು ಜೀವನ ಕಲಿಸುತ್ತದೆ ಎಂದು ಬೆಂಗಳೂರಿನ ಎಸ್.ಪಿ. ಜಾಹೀರಾತಿನ ವಾಣಿಜ್ಯೋದ್ಯಮಿ ಮತ್ತು ಪ್ರವರ್ತಕರಾದ ಪ್ರದೀಪ್ ಬಿ.ಪಿ.ರವರು ತಿಳಿಸಿದರು.

ನಗರದ ಶಿರಾರಸ್ತೆಯ ಶ್ರೀದೇವಿ ತಾಂತ್ರಿಕ ಮಹಾವಿದ್ಯಾಲಯ ವತಿಯಿಂದ “ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಸಮಾರಂಭ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಉದ್ಘಾಟನಾ” ಸಮಾರಂಭವನ್ನು ಡಿ.9 ರಂದು ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಶ್ರೀದೇವಿ ಇಂಜಿನಿಯರಿಂಗ್ ಕಾಲೇಜಿನ ಅಡಿಟೋರಿಯಂ ಸಭಾಂಗಣದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿದ್ದ ಪ್ರದೀಪ್ ಬಿ.ಪಿ.ರವರು ಮಾತನಾಡುತ್ತಾ ಸಾಂಪ್ರದಾಯಿಕ ಶಿಕ್ಷಣಕ್ಕಿಂತ ಜೀವನ ಕಲಿಸುವ ಪಾಠ ಮತ್ತು ಶಿಕ್ಷಣ ಮುಖ್ಯವಾಗುತ್ತದೆ. ಶಿಕ್ಷಣ ಮನುಷ್ಯನನ್ನು ಎಷ್ಟು ಎತ್ತರಕ್ಕೆ ಬೇಕಾದರೂ ತೆಗೆದುಕೊಂಡು ಹೋಗುವ ಅಗಾಧ ಶಕ್ತಿ ಪಡೆದುಕೊಂಡಿದೆ. ಎಲ್ಲರೊಂದಿಗೆ ಸ್ನೇಹ, ವಿಶ್ವಾಸ ಮತ್ತು ಉತ್ತಮ ಸಂಪರ್ಕ ಬೆಳೆಸಿಕೊಂಡರೆ ಜೀವನದಲ್ಲಿ ಮತ್ತು ಉದ್ಯಮದಲ್ಲಿ ಎದುರಾಗುವ ಯಾವುದೇ ಸ್ಪರ್ಧೆ, ಅಡ್ಡಿಆತಂಕ ಎದುರಿಸಿ ಗುರಿ ಮುಟ್ಟಬಹುದು, ಯಶಸ್ಸುಗಳಿಸ ಬಹುದು. ಪ್ರತಿಯೊಬ್ಬ ವಿದ್ಯಾರ್ಥಿಯೂ ಯಶಸ್ವಿ ವ್ಯಕ್ತಿಗೆ ಉದ್ಯಮಿ ಹಿಂದೆ ಶಿಕ್ಷಣದ ಪಾತ್ರ ಬಹಳವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀದೇವಿ ಚಾರಿಟಬಲ್ ಟ್ರಸ್ಟ್‍ನ ಅಧ್ಯಕ್ಷರಾದ ಡಾ.ಎಂ.ಆರ್.ಹುಲಿನಾಯ್ಕರ್‍ರವರು ಮಾತನಾಡುತ್ತಾ ಭಾರತದಲ್ಲಿ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಬೇಕಾದಷ್ಟು ಅವಕಾಶಗಳಿವೆ. ಪ್ರಾಮಾಣಿಕತೆ, ಸರಳಜೀವನ ಉದಾತ್ತ ಆಲೋಚನೆಯಿಂದ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಹಲವು ನಿದರ್ಶನಗಳಿವೆ. ಶಿಕ್ಷಣದ ನಂತರ ಉದ್ಯೋಗ ಹುಡುಕಾಟದ ಬದಲು ಉದ್ಯಮಿಯಾಗಿ ನೀವೇ ಹತ್ತಾರು ಜನರಿಗೆ ಉದ್ಯೋಗ ನೀಡುವಂತಹ ಅವಕಾಶಗಳನ್ನು ಬಳಸಿಕೊಳ್ಳಬೇಕು. ಇಂಜಿನಿಯರಿಂಗ್ ಶಿಕ್ಷಣದಲ್ಲಿ ಸ್ನಾತಕೋತ್ತರ ಪದವಿ ಪಡೆದ ವಿದ್ಯಾರ್ಥಿಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ ಅದರಂತೆ ಜಾಗತಿಕ ಮಟ್ಟದಲ್ಲೂ ಅವಕಾಶಗಳು ಹೆಚ್ಚಾಗುತ್ತಿವೆ ಎಂದು ಹೇಳಿದರು.
ಕಾರ್ಯಕ್ರಮದ ಗೌರವ ಅತಿಥಿಗಳಾಗಿ ಶ್ರೀದೇವಿ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕರಾದ ಎಂ.ಎಸ್.ಪಾಟೀಲ್‍ರವರು ಮಾತನಾಡುತ್ತಾ ವಿದ್ಯಾರ್ಥಿಗಳು ಕನಸು ಕಾಣಿ ನಂತರ ನಿದ್ದೆ ಮಾಡಬೇಡಿ, ಕನಸಿನ ಬೆನ್ನು ಹತ್ತಿ ಕಾರ್ಯರೂಪಕ್ಕೆ ಗುರಿಯಿಡಿ, ಶ್ರಮ ಹಾಕಿ ಇದರಿಂದ ಯಾವ ಸಾಧನೆಯನ್ನಾದರೂ ಮಾಡಬಹುದು. ಬೇರೆಯವರಿಗಿಂತ ನಮ್ಮ ಶಕ್ತಿಯ ಬಗ್ಗೆ ನಮಗೆ ಅರಿವಿರಬೇಕು ಜೊತೆಗೆ ಆತ್ಮವಿಶ್ವಾಸ ಬೆಳೆಸಿಕೊಂಡರೆ ಯಶಸ್ಸಿನ ದಾರಿ ತಾನಾಗಿಯೇ ತೆರೆದುಕೊಳ್ಳುತ್ತದೆ ಎಂದು ಹೇಳಿದರು.
ಇದೇ ಸಮಾರಂಭದಲ್ಲಿ ಶ್ರೀದೇವಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ.ನರೇಂದ್ರ ವಿಶ್ವನಾಥ್‍ರವರು ಮಾತನಾಡುತ್ತಾ ಗುಣಾತ್ಮಕ ಶಿಕ್ಷಣ ನೀಡುವುದರಲ್ಲಿ ಶ್ರೀದೇವಿ ವಿದ್ಯಾಸಂಸ್ಥೆಯೂ ಬಹುಮುಖ್ಯ ಪಾತ್ರ ವಹಿಸುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳಾದ ಅಶ್ವಿನ್, ದೀಪಾಐಸಿರಿ, ದೇವರಾಜ್, ಶೈಲಜಾ ಮತ್ತು ಅಂಕಿತ ತಮ್ಮ ಕಾಲೇಜಿನ ಅನುಭವ ಮತ್ತು ಅಧ್ಯಾಪಕರೊಂದಿಗೆ ಕಳೆದ ಕ್ಷಣಗಳನ್ನು ಸ್ಮರಿಸಿಕೊಂಡರು. 43 ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿ ಪ್ರದಾನ ನಡೆಸಲಾಗಿತ್ತು. ಇದೇ ಸಂದರ್ಭದಲ್ಲಿ ಶ್ರೀದೇವಿ ವೈದ್ಯಕೀಯ ನಿರ್ದೇಶಕರಾದ ಡಾ. ರಮಣ್ ಆರ್ ಹುಲಿನಾಯ್ಕರ್ ಹಾಗೂ ಶ್ರೀದೇವಿ ಚಾರಿಟಬಲ್ ಟ್ರಸ್ಟ್‍ನ ಟ್ರಸ್ಟಿ ಹಾಗೂ ನೇತ್ರ ತಜ್ಞರಾದ ಡಾ.ಲಾವಣ್ಯರವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ್ದರು. ಇದೇ ಸಂದರ್ಭದಲ್ಲಿ ಬೆಂಗಳೂರಿನ ಎಸ್.ಪಿ. ಜಾಹೀರಾತಿನ ವಾಣಿಜ್ಯೋದ್ಯಮಿ ಮತ್ತು ಪ್ರವರ್ತಕರಾದ ಪ್ರದೀಪ್ ಬಿ.ಪಿ.ರವರಿಗೆ ಶ್ರೀದೇವಿ ತಾಂತ್ರಿಕ ಮಹಾವಿದ್ಯಾಲಯ ವತಿಯಿಂದ ಸನ್ಮಾನಿಸಿ ಗೌರವಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಶ್ರೀದೇವಿ ಇಂಜಿನಿಯರಿಂಗ್ ಕಾಲೇಜಿನ ಉಪಪ್ರಾಂಶುಪಾಲರು ಹಾಗೂ ಡೀನ್ ಅಕಾಡೆಮಿಕ್ಸ್ ಡಾ.ಎನ್.ಚಂದ್ರಶೇಖರ್, ಶ್ರೀದೇವಿ ಎಂ.ಬಿ.ಎ. ವಿಭಾಗದ ಮುಖ್ಯಸ್ಥರಾದ ಡಾ.ಕೆ.ಎಸ್.ರಾಮಕೃಷ್ಣ, ಪ್ರವೇಶ ಅಧಿಕಾರಿ ಹಾಗೂ ಎಂ.ಸಿ.ಎ.ವಿಭಾಗದ ಸಹಾಯಕ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾದ ಪ್ರೊ.ಕಾವ್ಯಕುಮಾರ್ ಹಾಗೂ ವಿವಿಧ ವಿಭಾಗದ ಮುಖ್ಯಸ್ಥರು, ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.