ತುಮಕೂರು :ತುಮಕೂರು ಜಿಲ್ಲೆ ಸೇರಿದಂತೆ ಏಳು ಜಿಲ್ಲೆಗಳ ಜನರ ಕುಡಿಯುವ ನೀರಿನ ಭವಣೆ ತೀರಿಸುವ ಎತ್ತಿನಹೊಳೆ ಯೋಜನೆಯ ಶೇ90ರಷ್ಟ್ರು ಕಾಮಗಾರಿಗಳು ಪೂರ್ಣಗೊಂಡ ನಂತರ ಯೋಜನೆಗೆ ಕೇಂದ್ರ ಸರಕಾರ ಅಡ್ಡಿ ಪಡಿಸುತ್ತಿದ್ದು,ಈ ಬಗ್ಗೆ ಕೇಂದ್ರದ ಜಲಸಂಪನ್ಮೂಲ ಸಚಿವರೊಂದಿಗೆ ಚರ್ಚಿಸಲು ಡಿಸೆಂಬರ್ 13-14 ರಂದು ರಾಜ್ಯ ಸರಕಾರದ ದೆಹಲಿ ನಿಯೋಗ ಕೊಂಡೊಯ್ಯಲಿದೆ ಎಂದು ಕೌಶಲ್ಯಾಭಿವೃದ್ದಿ ಮಂಡಳಿ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,2012ರಲ್ಲಿ ಆರಂಭವಾದ ಎತ್ತಿನಹೊಳೆ ಯೋಜನೆಯ ಶೇ90ರಷ್ಟು ಕಾಮಗಾರಿಗಳು ಪೂರ್ಣಗೊಂಡಿದೆ.ಈಗ ಕೇಂದ್ರ ಸರಕಾರ ಯೋಜನೆಗೆ ನಿಗಧಿಗಿಂತ ಹೆಚ್ಚು ಭೂಮಿ ಬಳಕೆ ಮಾಡಲಾಗಿದೆ. ಹಸಿರು ಪೀಠದ ಅನುಮತಿ ಪಡೆದಿಲ್ಲ,ಇನ್ನಿತರ ಅನಗತ್ಯ ತರಕಾರುಗಳನ್ನು ತೆಗೆದು,ಯೋಜನೆ ವಿಳಂಭವಾಗಲು ಕಾರಣವಾಗುತ್ತದೆ. ಎತ್ತಿನ ಹೊಳೆ ಯೋಜನೆ ರಾಜ್ಯ ಸರಕಾರದ ಮಹಾತ್ವಕಾಂಕ್ಷೆಯ ಯೋಜನೆಯಾಗಿದ್ದು,ಜನರ ಕುಡಿಯುವ ನೀರಿನ ಬವಣೆ ತೀರಿಸಲು ಇರುವ ಮಹತ್ವದ ಯೋಜನೆಯಾಗಿದೆ.ಇದಕ್ಕೆ ಸಹಕಾರ ನೀಡುವ ಬದಲು,ಕೇಂದ್ರ ಸರಕಾರ ಯೋಜನೆಯನ್ನು ತಡೆಯಲು ಯತ್ನಿಸುತ್ತಿರುವುದು ಸರಿಯಲ್ಲ.ಇದರ ವಿರುದ್ದ ರಾಜ್ಯದ ಎಲ್ಲಾ ಸಂಸದರು ದ್ವನಿ ಎತ್ತಬೇಕಾಗಿದೆ ಎಂದರು.
ತುಮಕೂರು ಜಿಲ್ಲೆಯ ಕುಡಿಯುವ ನೀರಿನ ಯೋಜನೆಗಳಲ್ಲಿ ಹೇಮಾವತಿ, ಭದ್ರ ಮೇಲ್ದಂಡೆ ಹಾಗೂ ಎತ್ತಿನಹೊಳೆ ಮಹತ್ವದ ಪಾತ್ರ ವಹಿಸುತ್ತವೆ.ಕೇಂದ್ರ ಸರಕಾರ ಭದ್ರ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಿ, 5300 ಕೋಟಿ ರೂ ಬಿಡುಗಡೆ ಮಾಡುವುದಾಗಿ 2023-24ನೇ ವರ್ಷದ ಬಜೆಟ್‍ನಲ್ಲಿ ಹಣಕಾಸು ಸಚಿವರು ಘೋಷಣೆ ಮಾಡಿದ್ದರು. ಆದರೆ ಇದುವರೆಗೂ ಒಂದು ನಯಾಪೈಸೆ ನೀಡಿಲ್ಲ.ಯೋಜನೆಯನ್ನು ರಾಜ್ಯ ಸರಕಾರವೇ ತನ್ನ ಸಂಪನ್ಮೂಲದಲ್ಲಿಯೇ ನಡೆಸುತ್ತಿದೆ.ಎತ್ತಿನ ಹೊಳೆ ಯೋಜನಾ ವೆಚ್ಚ ಸುಮಾರು 23,252 ಕೋಟಿ ರೂಗಳಾಗಿದೆ.ಕೇಂದ್ರ ಸರಕಾರ ಅನುದಾನ ನೀಡುವಂತೆ ಪ್ರಸ್ತಾವನೆ ಸಲ್ಲಿಸಿದ ನಂತರ, ಈ ರೀತಿಯ ತರಕಾರು ತೆಗೆದು, ಅನಗತ್ಯವಾಗಿ ತನಿಖಾ ಸಮಿತಿಗಳನ್ನು ಕಳುಹಿಸಿ, ಇನ್ನಿಲ್ಲದ ಕಿರಿಕಿರಿ ಉಂಟು ಮಾಡಿ, ಕರ್ನಾಟಕದ ಬಗೆಗಿನ ತನ್ನ ಮಲತಾಯಿ ಧೋರಣೆಯನ್ನು ಮುಂದುವರೆಸಿದೆ.ಇದರ ವಿರುದ್ದ ಯೋಜನಾ ವ್ಯಾಪ್ತಿಗೆ ಬರುವ ಎಲ್ಲಾ ಜಿಲ್ಲೆಗಳ ಜನರು ಒಗ್ಗೂಡಿ ಹೋರಾಟ ರೂಪಿಸುವ ಮೂಲಕ ಕೇಂದ್ರ ಸರಕಾರದ ಮೇಲೆ ಒತ್ತಡ ತರುವ ಅಗತ್ಯವಿದೆ ಎಂದು ಮುರುಳೀಧರ ಹಾಲಪ್ಪ ತಿಳಿಸಿದರು.
ಕೇಂದ್ರ ಸರಕಾರ ಕೇಳಿರುವ ಪ್ರಶ್ನೆಗಳಿಗೆ ಈಗಾಗಲೇ ವಿಶ್ವೇಶ್ವರಯ್ಯ ಜಲ ಅಭಿವೃದ್ದಿ ನಿಗಮದಿಂದ ಸಮರ್ಪಕ ಉತ್ತರವನ್ನು ನೀಡಿದ್ದರೂ ಸಹ,ಯೋಜನೆಗೆ ಅನುಮತಿ ನೀಡದೆ ಅನಗತ್ಯ ವಿಳಂಭ ಮಾಡುತ್ತಿದೆ.ಈ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿಗಳು ಮತ್ತು ಜಲಸಂಪನ್ಮೂಲ ಸಚಿವರು ರಾಜ್ಯದ ಎಲ್ಲಾ ಸಂಸದರ ಸಭೆ ಕರೆದಾಗ,ವಿವಿಧ ಕಾರಣ ಹೇಳಿ ಯಾವೊಬ್ಬ ಬಿಜೆಪಿ ಸಂಸದರು ಸಭೆಗೆ ಹಾಜರಾಗಿಲ್ಲ. ಇದು ರಾಜ್ಯದ ಬಗ್ಗೆ ಬಿಜೆಪಿ ಪಕ್ಷಕ್ಕೆ ಇರುವ ಕಾಳಜಿಯನ್ನು ತೋರಿಸುತ್ತದೆ.ಈಗಲಾದರೂ ಬಿಜೆಪಿ ಸಂಸದರು, ಕೇಂದ್ರ ಸರಕಾರದ ಮೇಲೆ ಒತ್ತಡ ತಂದು,ಎತ್ತಿನಹೊಳೆ ಯೋಜನೆಗೆ ಇರುವ ಅಡ್ಡಿ, ಆತಂಕಗಳನ್ನು ನಿವಾರಿಸಿ,ತಮ್ಮ ಪಾಲಿನ ಅನುದಾನ ನೀಡುವ ಮೂಲಕ, ಯೋಜನೆ ಪೂರ್ಣಗೊಳ್ಳಲು ಸಹಕಾರ ನೀಡಬೇಕು.ಇಲ್ಲದಿದ್ದಲ್ಲಿ ಯೋಜನಾ ವ್ಯಾಪ್ತಿಗೆ ಒಳಪಡುವ ಎಲ್ಲಾ ಜಿಲ್ಲೆಗಳ ಜನರು ಅನಿವಾರ್ಯವಾಗಿ ಬೀದಿಗಿಳಿದು, ಕೇಂದ್ರ ಸರಕಾರದ ವಿರುದ್ದ ಪ್ರತಿಭಟಿಸಬೇಕಾಗುತ್ತದೆ ಎಂದು ಮುರುಳೀಧರ ಹಾಲಪ್ಪ ಎಚ್ಚರಿಸಿದರು.
ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಗೀತಾ ರಾಜಣ್ಣ ಮಾತನಾಡಿ,ಬಯಲು ಸೀಮೆಗೆ ಸೇರಿದ ತುಮಕೂರು,ಹಾಸನ, ರಾಮನಗರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿತ್ರದುರ್ಗ ಜಿಲ್ಲೆಗಳಿಗೆ ಎತ್ತಿನ ಹೊಳೆ ಕುಡಿಯುವ ನೀರಿನ ವಿಚಾರದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.ಹಾಗಾಗಿ ಕೇಂದ್ರ ಸರಕಾರ ಈ ಯೋಜನೆಗೆ ಕಲ್ಲು ಹಾಕುವ ಕೆಲಸ ಮಾಡಬಾರದು.ಇಂದು ಪರಿಸರ ಇಲಾಖೆಯಿಂದ ಎನ್.ಓ.ಸಿ ಪಡೆದಿಲ್ಲ. ಹೆಚ್ಚು ಭೂಮಿ ಬಳಕೆ ಎಂದು ತಕರಾರು ತೆಗೆಯುವ ಕೇಂದ್ರ ಸರಕಾರ 12 ವರ್ಷದಿಂದ ಏನು ಮಾಡುತ್ತಿತ್ತು. ಈ ರೀತಿಯ ಮಲತಾಯಿ ಧೋರಣೆ ಸರಿಯಲ್ಲ. ಕೂಡಲೇ ಕೇಂದ್ರ ಸರಕಾರ ಎತ್ತಿನಹೊಳೆ ಯೋಜನೆಗೆ ಅನುಮೋಧನೆ ನೀಡುವ ಜೊತೆಗೆ, ಅನುಧಾನವನ್ನು ನೀಡುವ ಮೂಲಕ ಸಹಕಾರ ನೀಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಅನಿವಾರ್ಯ ಎಂದರು.
ಸುದ್ದಿಗೋಷ್ಠಿಯಲ್ಲಿ ಹಿರಿಯರಾದ ರೇವಣ್ಣ ಸಿದ್ದಯ್ಯ,ಅಶೋಕ್ ರಾಜವರ್ಧನ್,ರೈತ ಮುಖಂಡರಾದ ರಾಚಪ್ಪ, ಕೆ.ಆರ್.ವೆಂಕಟೇಶ್ ಇವರುಗಳು ಎತ್ತಿನ ಹೊಳೆ ಯೋಜನೆ ಹಾಗೂ ಕೇಂದ್ರದ ಅಡ್ಡಿ ಕುರಿತಂತೆ ಮಾತನಾಡಿದರು. ಹಲವರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.