ಕೆ.ಎನ್.ಆರ್.ಗೆ ಸಚಿವ ಸ್ಥಾನ ನೀಡಲು ಸರ್ಕಾರಕ್ಕೆ ಒತ್ತಾಯ, ಸಿಎಂ ಬಳಿಗೆ ನಿಯೋಗ

ತುಮಕೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಕೆ.ಎನ್.ರಾಜಣ್ಣನವರನ್ನು ಮಂತ್ರಿಮಂಡಲಕ್ಕೆ ಸೇರಿಸಿಕೊಂಡು, ಅವರ ಆಸಕ್ತಿಯ ಹಾಗೂ ಪರಿಣತಿ ಹೊಂದಿರುವ ಸಹಕಾರ ಖಾತೆಯನ್ನೇ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಒತ್ತಾಯಿಸಿ ಜಿಲ್ಲೆಯ ಹಿಂದುಳಿದ ವರ್ಗಗಳ ಸಮಾಜಗಳ ಮುಖಂಡರು ಇನ್ನೆರಡು ದಿನಗಳನ್ನು ಮುಖ್ಯಮಂತ್ರಿ ಬಳಿ ನಿಯೋಗ ತೆರಳಲಿದ್ದಾರೆ.

ತುಮಕೂರು ಜಿಲ್ಲೆಯ ಪ್ರಭಾವಿ ನಾಯಕ, ಹಿಂದುಳಿದ ವರ್ಗಗಳ ಆಶಾಕಿರಣವಾಗಿರುವ ಕೆ.ಎನ್.ರಾಜಣ್ಣನವರು ಯಾವುದೇ ತಪ್ಪು, ಭ್ರಷ್ಟಾಚಾರ ಮಾಡದಿದ್ದರೂ ಕ್ಷುಲ್ಲಕ ಕಾರಣವೊಡ್ಡಿ ಅವರನ್ನು ಸಚಿವ ಸ್ಥಾನದಿಂದ ತೆಗೆದು ಅವಮಾನ ಮಾಡಿರುವುದು ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳಿಗೆ ತೀವ್ರ ನೋವಾಗಿದೆ ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ಡಾ.ಧನಿಯಾಕುಮಾರ್ ಹೇಳಿದ್ದಾರೆ.

ಕೆ.ಎನ್.ಆರ್. ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂದು ಹಿಂದುಳಿದ ವರ್ಗಗಳ ಮುಖಂಡರ ಸಹಿ ಸಂಗ್ರಹಿಸಿದ ಮನವಿ ಪತ್ರವನ್ನು ಈಗಾಗಲೇ ಎಐಸಿಸಿ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ತಲುಪಿಸಲಾಗಿದೆ. ಈಗ ಮಂತ್ರಿಮಂಡಲ ವಿಸರ್ಜನೆಯ ಚರ್ಚೆಗಳು ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಕೆ.ಎನ್.ರಾಜಣ್ಣನವರಿಗೆ ಮಂತ್ರಿ ಸ್ಥಾನ ನೀಡಲೇಬೇಕು ಎಂದು ಒತ್ತಾಯಿಸಿ ಜಿಲ್ಲೆಯ ಹಿಂದುಳಿದ ವರ್ಗಗಳ ಸಮಾಜಗಳ ಮುಖಂಡರು ಮುಖ್ಯಮಂತ್ರಿ ಬಳಿಗೆ ನಿಯೋಗ ತೆರಳಲು ನಿರ್ಧಾರ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

2013 ಹಾಗೂ 2023ರಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ ಶಾಸಕರು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಲು ಕೆ.ಎನ್.ರಾಜಣ್ಣನವರ ಪ್ರಭಾವ ಹಾಗೂ ಶ್ರಮವೂ ಕಾರಣ. ಜಿಲ್ಲೆಯ 26 ಲಕ್ಷ ಜನಸಂಖ್ಯೆಯಲ್ಲಿ ಸುಮಮಾರು 12 ಲಕ್ಷ ಜನ ಹಿಂದುಳಿದ ವರ್ಗಗಳ ಸಮಾಜದವರಿದ್ದು, ಇವರು ಕೆ.ಎನ್.ಆರ್ ಅವರ ಬೆಂಬಲಕ್ಕಿದ್ದಾರೆ. ಈ ಬಾರಿ ಸಚಿವ ಸ್ಥಾನ ನೀಡಲು ನಿರ್ಲಕ್ಷಿಸಿದರೆ ಮುಂಬರುವ ಸ್ಥಳೀಯ ಸಂಸ್ಥೆ, ತಾಲ್ಲೂಕು, ಜಿಲ್ಲಾ ಪಂಚಾಯ್ತಿ ಚುನಾವಣೆಗಳಲ್ಲಿ ಹಿಂದುಳಿದ ವರ್ಗಗಳ ಸಮಾಜದವರು ಕಾಂಗ್ರೆಸ್ ವಿರುದ್ಧ ಮತ ಚಲಾಯಿಸಬೇಕಾಗುತ್ತದೆ ಎಂದು ಡಾ.ಧನಿಯಾಕುಮಾರ್ ಹೇಳಿದ್ದಾರೆ.

ಜಿಲ್ಲೆಯ ಹಿಂದುಳಿದ ವರ್ಗಗಳ ಧ್ವನಿಯಾಗಿ ಅವರ ಪ್ರಗತಿಗೆ ನೆರವಾಗುತ್ತಿರುವ ಕೆ.ಎನ್.ರಾಜಣ್ಣನವರನ್ನು ಜಿಲ್ಲೆಯ ದೇವರಾಜ ಅರಸು ಎಂದೇ ಗೌರವಿಸಲಾಗುತ್ತಿದೆ. 45 ವರ್ಷಗಳಿಂದ ಸಹಕಾರ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ಕೊಟ್ಟು ರಾಷ್ಟ್ರಮಟ್ಟದಲ್ಲಿ ಹೆಸರಾಗಿರುವ ಕೆ.ಎನ್.ಆರ್ ಅವರಿಗೆ ಕಾಂಗ್ರೆಸ್ ಪಕ್ಷ ಅಪಮಾನ ಮಾಡಬಾರದು, ಅವರಿಗೆ ಗೌರವಯುತವಾಗಿ ಸಚಿವ ಸ್ಥಾನ ನೀಡಿ ಸಾರ್ವಜನಿಕ ಸೇವೆ ಮಾಡಲು ಅನುವು ಮಾಡಬೇಕು ಎಂದು ಕಾಂಗ್ರೆಸ್ ನಾಯಕರನ್ನು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *