ತುಮಕೂರು: ಭಾರತದ ಅತ್ಯುನ್ನತ ಪ್ರಶಸ್ತಿಯಾದ ಭಾರತ ರತ್ಮ ನೀಡಲು ಶಿಪಾರಸ್ಸು ಪತ್ರ ಬರೆಯುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕರ್ನಾಟಕ ರತ್ನ ಶತಾಯುಷಿ ಡಾ.ಶಿವಕುಮಾರ ಶ್ರೀಗಳ ಸ್ಮರಣಾರ್ಥ ನಿರ್ಮಿಸಿರುವ ಸ್ಮೃತಿ ವನವನ್ನು ಉದ್ಘಾಟಿಸಿ, ಶ್ರೀಗಳ 5ನೇ ಪುಣ್ಯ ಸಂಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು,ಶಿವಕುಮಾರ ಶ್ರೀಗಳು ಬಸವಾದಿ ಶರಣರ ಆಶಯಗಳನ್ನು ಆಚರಿಸಲು ಬದುಕನ್ನು ಮುಡಿಪಾಗಿಟ್ಟು ನುಡಿದಂತೆ ನಡೆದ ಮಹಾಯೋಗಿಗಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವರ್ಣಿಸಿದರು.
12ನೇ ಶತಮಾನದಲ್ಲೇ ಬಸವಾದಿ ಶರಣರು ಜಾತಿ ರಹಿತ, ವರ್ಗ ರಹಿತ ಸಮಾನತೆಯ ಸಮಾಜ ನಿರ್ಮಾಣಕ್ಕಾಗಿ ಕ್ರಾಂತಿಯನ್ನೇ ಮಾಡಿದ್ದರು. ಮನುಷ್ಯ ಕುಲ ಇರುವವರೆಗೂ ಶಾಶ್ವತ ಆಗಿ ಉಳಿಯುವ ಸಂದೇಶ ಮತ್ತು ಮೌಲ್ಯಗಳನ್ನು ಬಿಟ್ಟು ಹೋಗಿದ್ದಾರೆ. ಈ ಮೌಲ್ಯಗಳನ್ನು ಪಾಲಿಸುವುದೇ ಬಸವಾದಿ ಶರಣರಿಗೆ ಸಲ್ಲಿಸುವ ಗೌರವ. ಎಂದರು.
ಭಾರತ ಸಂವಿಧಾನದ ಆಶಯ ಮತ್ತು ಬಸವಾದಿ ಶರಣರ ಹೋರಾಟದ ಆಶಯ ಒಂದೇ ಆಗಿದೆ. ನಮಗೆ ಸಂವಿಧಾನ ಧರ್ಮಗ್ರಂಥ ಇದ್ದ ಹಾಗೆ. ಜನರ ಬದುಕನ್ನು ಎತ್ತಿರುವುದೇ ಈ ಸಂವಿಧಾನ ಎಂಬ ಧರ್ಮಗ್ರಂಥದ ಆಶಯವಾಗಿದೆಯೆಂದು ಹೇಳಿದರು.
ಕಾಯಕ ಮತ್ತು ದಾಸೋಹ ಎರಡೂ ಜೀವನ ಮೌಲ್ಯಗಳು. ಈ ಮೌಲ್ಯಗಳನ್ನು ಪೂಜ್ಯರು ತಮ್ಮ ಬದುಕಿನುದ್ದಕ್ಕೂ ಆಚರಿಸಿದ್ದರು. ಇಂದು 10 ಸಾವಿರ ಮಕ್ಕಳು ಮಠದಲ್ಲಿ ವಿದ್ಯೆ, ವಸತಿ, ಅನ್ನ ಪಡೆಯುತ್ತಿದ್ದಾರೆ ಎಂದರೆ ಶಿವಕುಮಾರ ಶ್ರೀಗಳ ಬದುಕಿನ ಆಚರಣೆಯೇ ಕಾರಣ ಎಂದರು.
ನಂಜುಂಡಪ್ಪ ವರದಿಯಂತೆ ಸರ್ಕಾರ ಕೆಲಸ ಮಾಡುತ್ತಿದೆ. ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ದಕ್ಷಿಣ ಮತ್ತು ಉತ್ತರ ಕರ್ನಾಟಕ ನಡುವಿನ ಅಭಿವೃದ್ಧಿಯ ತಾರತಮ್ಯವನ್ನು ಹೋಗಲಾಡಿಸಲು ಸರ್ಕಾರ ಶ್ರಮಿಸುತ್ತಿದೆ. ಶಿಕ್ಷಣದ ಮೂಲಕ ತಾರತಮ್ಯ ಮತ್ತು ಅಸಮಾನ ಪ್ರಜ್ಞೆಯನ್ನು ಅಳಿಸಲು ಸಾಧ್ಯವಿದೆ. ಬಸವಾದಿ ಶರಣರ ತತ್ವಾದರ್ಶಗಳು ಸಮಾಜದಲ್ಲಿ ಜಾರಿ ಆದಾಗ ಮಾತ್ರ ಸಮಾನ ಅವಕಾಶಗಳು ಸೃಷ್ಟಿಯಾಗಲು ಸಾಧ್ಯ ಎಂದು ತಿಳಿಸಿದರು.
ಶಿವಕುಮಾರ ಸ್ವಾಮಿಗಳು ಬದುಕಿನುದ್ದಕ್ಕೂ ಅಕ್ಷರ ಸಂಸ್ಕೃತಿ ಮೂಲಕ ಸಮಾಜದಲ್ಲಿ ಕ್ರಾಂತಿಕಾರಕ ಬದಲಾವಣೆ ತರಲು ಶ್ರಮಿಸಿದರು. ಹೀಗಾಗಿ ಶ್ರೀಗಳ ಕಾರ್ಯ, ಕಾಳಜಿ ಮತ್ತು ಅವರ ನಡೆ-ನುಡಿ ಈ ಮಣ್ಣಿನಲ್ಲಿ ಅಜರಾಮರ ಆಗಿ ಉಳಿಯಲಿದೆ ಎಂದರು.
ಶ್ರೀಕ್ಷೇತ್ರದಲ್ಲಿ ನಡೆದ ಶ್ರೀಗಳ 5ನೇ ಪುಣ್ಯ ಸಂಸ್ಮರಣೋತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಚಿವರಾದ ಡಾ. ಜಿ. ಪರಮೇಶ್ವರ್, ಕೆ.ಎನ್. ರಾಜಣ್ಣ, ಎಂ.ಬಿ. ಪಾಟೀಲ್, ಈಶ್ವರ್ಖಂಡ್ರೆ, ಸಂಸದ ಜಿ.ಎಸ್. ಬಸವರಾಜು ಸೇರಿದಂತೆ ವಿವಿಧ ಮಠಾಧೀಶರುಗಳು, ಹರಗುರುಚರಮೂರ್ತಿಗಳು ಹಾಗೂ ಸಹಸ್ರಾರು ಭಕ್ತ ಸಮೂಹ ಸಾಕ್ಷಿಯಾದರು.
ಶ್ರೀಗಳ 5ನೇ ಪುಣ್ಯಾರಾಧನೆ ಪ್ರಯುಕ್ತ ಶ್ರೀಗಳು ಐಕ್ಯರಾಗಿರುವ ಶಿವಯೋಗಿ ಮಂದಿರ ಬಗೆ ಬಗೆಯ ಪುಷ್ಪಗಳಿಂದ ಅಲಂಕೃತಗೊಂಡು ಕಂಗೊಳಿಸುತ್ತಿದ್ದು, ಶ್ರೀಗಳ ಗದ್ದುಗೆಯನ್ನು ವಿವಿಧ ಪುಷ್ಪ, ಹಣ್ಣು ಹಂಪಲುಗಳಿಂದ ವಿಶೇಷವಾಗಿ ಸಿಂಗರಿಸಲಾಗಿತ್ತು.
ಮುಂಜಾನೆಯೇ ಇಷ್ಟಲಿಂಗ ಪೂಜೆ ನೆರವೇರಿಸಿದ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರ ನೇತೃತ್ವದಲ್ಲಿ ಲಿಂ. ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಗದ್ದುಗೆಯ ಪೂಜಾ ವಿಧಾನಗಳು ಮಹಾರುದ್ರಾಭಿಷೇಕ, ರಾಜೋಪಚಾರ, ಬಿಲ್ವಾರ್ಚನೆಯೊಂದಿಗೆ ನೆರವೇರಿದವು. ಹಲವು ಮಠಾಧೀಶರುಗಳು, ಹರಗುರುಚರಮೂರ್ತಿಗಳು ನಸುಕಿನಲ್ಲೆ ಆರಂಭವಾದ ಶ್ರೀಗಳ ಗದ್ದುಗೆ ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡು ಭಕ್ತಿ ಸಮರ್ಪಿಸಿದರು.
ಮೆರವಣಿಗೆ
ಶ್ರೀಮಠದ ಆವರಣದಲ್ಲಿ ಸುಮಂಗಲಿಯರು ಹೊತ್ತ 108 ಕಳಸಗಳೊಂದಿಗೆ ರುದ್ರಾಕ್ಷಿ ಮಂಟಪದಲ್ಲಿ ಲಿಂಗೈಕ್ಯ ಶ್ರೀಗಳ ಭಾವಚಿತ್ರ ಮೆರವಣಿಗೆ ವೈಭವಯುತವಾಗಿ ನಡೆಯಿತು.
ರುದ್ರಾಕ್ಷಿ ಮಂಟಪದಲ್ಲಿ ಶ್ರೀಗಳ ಭಾವಚಿತ್ರ ಮೆರವಣಿಗೆಯು ಶ್ರೀಗಳ ಗದ್ದುಗೆ ಮಂದಿರದಿಂದ ಆರಂಭವಾಗಿ ವಸ್ತುಪ್ರದರ್ಶನದ ಆವರಣದವರೆಗೆ ಸಾಗಿತು. ಮತ್ತೆ ವಸ್ತು ಪ್ರದರ್ಶನದ ಆವರಣದಿಂದ ಗದ್ದುಗೆ ಮಂದಿರದ ವರೆಗೆ ಮೆರವಣಿಗೆಯು ಸಾಗಿ ಅಂತ್ಯಗೊಂಡಿತು. ಈ ಮೆರವಣಿಗೆಯುದ್ದಕ್ಕೂ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ಸೇರಿದಂತೆ ಹರಗುರುಚರಮೂರ್ತಿಗಳು, ಭಕ್ತಾದಿಗಳು, ಶಾಲಾ ಮಕ್ಕಳು ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.
ಶ್ರೀಗಳ ಭಾವಚಿತ್ರ ಮೆರವಣಿಗೆಯಲ್ಲಿ ಕರಡಿ ವಾದ್ಯ, ನಂದಿಧ್ವಜ ಕುಣಿತ, ಡೋಲು ಕುಣಿತ ಸೇರಿದಂತೆ ವಿವಿಧ ಜಾನಪದ ಕಲಾ ಮೇಳಗಳ ಪ್ರದರ್ಶನ ನೋಡುಗರ ಗಮನ ಸೆಳೆಯಿತು.
ಗದ್ದುಗೆ ದರ್ಶನ ಪಡೆದ ಸಿಎಂ
ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಚಿವರಾದ ಡಾ. ಜಿ. ಪರಮೇಶ್ವರ್, ಕೆ.ಎನ್. ರಾಜಣ್ಣ, ಎಂ.ಬಿ. ಪಾಟೀಲ್, ಈಶ್ವರ್ಖಂಡ್ರೆ ಸೇರಿದಂತೆ ಅನೇಕ ಗಣ್ಯರು ಶ್ರೀಗಳ ಗದ್ದುಗೆ ದರ್ಶನ ಪಡೆದರು.
ಶ್ರೀಗಳ ಗದ್ದುಗೆ ದರ್ಶನ ಪಡೆದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಗಣ್ಯರನ್ನು ಪೂರ್ಣಕುಂಭ ಕಳಸ ಮತ್ತು ಮಂಗಳವಾದ್ಯದೊಂದಿಗೆ ಶ್ರೀಗಳ ಪುಣ್ಯಸ್ಮರಣೆ ಕಾರ್ಯಕ್ರಮದ ಅಂಗವಾಗಿ ಭವ್ಯವಾಗಿ ನಿರ್ಮಿಸಿದ್ದ ಬೃಹತ್ ಗೋಸಲ ಸಿದ್ದೇಶ್ವರ ವೇದಿಕೆಗೆ ಕರೆದೊಯ್ಯಲಾಯಿತು.
ದಾಸೋಹ ದಿನ ಆಚರಣೆ
ರಾಜ್ಯ ಸರ್ಕಾರ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಪುಣ್ಯಸ್ಮರಣೆ ದಿನವನ್ನು ದಾಸೋಹ ದಿನವನ್ನಾಗಿ ಘೋಷಿಸಿದ್ದು, ಅದರಂತೆ ಪುಣ್ಯಾರಾಧನೆಯನ್ನು ಅಕ್ಷರಶಃ ಮಹಾದಾಸೋಹ ದಿನವನ್ನಾಗಿ ಆಚರಿಸುತ್ತಿದ್ದು, ಶ್ರೀಮಠದ 6 ಕಡೆಗಳಲ್ಲಿ ಲಕ್ಷಾಂತರ ಭಕ್ತಾದಿಗಳಿಗಾಗಿ ಬಗೆ ಬಗೆಯ ಖಾದ್ಯಗಳೊಂದಿಗೆ ದಾಸೋಹ ವ್ಯವಸ್ಥೆ ಮಾಡಲಾಗಿದೆ.
ಶ್ರೀಮಠದ ಕೈಗಾರಿಕಾ ವಸ್ತುಪ್ರದರ್ಶನದ ಆವರಣ, ಸಾದರ ಕೊಪ್ಪಲು, ಕೆಂಪಹೊನ್ನಯ್ಯ, ಅತಿಥಿಗೃಹ, ಹೊಸ ಪ್ರಸಾದ ನಿಲಯ, ಹಳೆ ಪ್ರಸಾದ ನಿಲಯ ಸೇರಿದಂತೆ 6 ಕಡೆ ಪ್ರಸಾದದ ವ್ಯವಸ್ಥೆ ಮಾಡಲಾಗಿದ್ದು, ಬೆಳಿಗಿನ ಉಪಹಾರ ಉಪ್ಪಿಟ್ಟು, ಕೇಸರಿಬಾತ್, ಮಧ್ಯಾಹ್ನ ಚಿತ್ರಾನ್ನ, ಪಾಯಸ, ಸಿಹಿ ಬೂಂದಿ, ಖಾರಬೂಂದಿ, ಅನ್ನಸಾಂಬರು ಸೇರಿದಂತೆ ವಿವಿಧ ಖಾದ್ಯಗಳನ್ನು ಭಕ್ತರು ಸವಿದು ಪುನೀತರಾದರು.
ಮುಂಜಾನೆಯಿಂದಲೇ ನಾಡಿನ ವಿವಿಧೆಡೆಯಿಂದ ಧಾವಿಸಿದ್ದ ಸಹಸ್ರಾರು ಭಕ್ತರು ಸರದಿಯ ಸಾಲಿನಲ್ಲಿ ನಿಂತು ಶ್ರೀಗಳ ಗದ್ದುಗೆ ದರ್ಶನ ಪಡೆದರು.
ಶ್ರೀಮಠದಲ್ಲಿ ಭಕ್ತಾದಿಗಳಿಗೆ, ಸಾರ್ವಜನಿಕರಿಗೆ ಯಾವುದೇ ರೀತಿ ತೊಂದರೆಯಾಗದಂತೆ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ., ಅಡಿಷನಲ್ ಎಸ್ಪಿ ವಿ. ಮರಿಯಪ್ಪ ನೇತೃತ್ವದಲ್ಲಿ ಬಿಗಿ ಪೆÇಲೀಸ್ ಬಂದೋ ಬಸ್ತ್ ವ್ಯವಸ್ಥೆ ಮಾಡಲಾಗಿತ್ತು.