ತುಮಕೂರು: ಶೈಕ್ಷಣಿಕವಾಗಿ,ಉದ್ಯೋಗದಲ್ಲಿ ಬಹಳ ಹಿಂದುಳಿದಿರುವ ರೆಡ್ಡಿ ಸಮುದಾಯದ ಅಭಿವೃದ್ದಿಗೆ ರೆಡ್ಡಿ ಅಭಿವೃದ್ದಿ ಪ್ರಾಧಿಕಾರವನ್ನು ಸ್ಥಾಪಿಸಬೇಕೆಂಬುದು ನಮ್ಮಗಳ ಒತ್ತಾಯವಾಗಿದೆ.ಹಲವಾರು ಸಮುದಾಯಗಳಿಗೆ ಅಭಿವೃದ್ದಿ ನಿಗಮಗಳನ್ನು ರಚಿಸಲಾಗಿದೆ. ಹಾಗೆಯೇ ನಮ್ಮ ಸಮುದಾಯಕ್ಕೂ ಅಭಿವೃದ್ದಿ ನಿಗಮ ಸ್ಥಾಪಿಸಿ, ನಮ್ಮ ಅರ್ಥಿಕ, ಶೈಕ್ಷಣಿಕ ಅಭಿವೃದ್ದಿ ಯೋಜನೆಗಳನ್ನು ರೂಪಿಸಲು ಅನುಕೂಲ ಕಲ್ಪಿಸಬೇಕೆಂದು ಜಿಲ್ಲಾ ರೆಡ್ಡಿ ಜನಸಂಘದ ಅಧ್ಯಕ್ಷ ಶ್ರೀನಿವಾಸ ರೆಡ್ಡಿ ಸರಕಾರವನ್ನು ಆಗ್ರಹಿಸಿದರು.
ರಾಜ್ಯದಲ್ಲಿ ಸುಮಾರು 80 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ರೆಡ್ಡಿ ಸಮುದಾಯದಿಂದ ಈ ಬಾರಿಯ ಚುನಾವಣೆಯಲ್ಲಿ 21 ಜನರಿಗೂ ಹೆಚ್ಚು ಶಾಸಕರು ಆಯ್ಕೆಯಾಗಿದ್ದು,ಕಾಂಗ್ರೆಸ್ ಸರಕಾರದಲ್ಲಿ ಸಮುದಾಯದ ಒಬ್ಬರಿಗೆ ಉಪಮುಖ್ಯಮಂತ್ರಿ ನೀಡಬೇಕೆಂದು ಜಿಲ್ಲಾ ರೆಡ್ಡಿ ಜನಸಂಘದ ಅಧ್ಯಕ್ಷ ಕೆ.ಶ್ರೀನಿವಾಸರೆಡ್ಡಿ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸುಮಾರು 16ಕ್ಕೂ ಹೆಚ್ಚು ಜನರು ಆಯ್ಕೆಯಾಗಿದ್ದಾರೆ.ಇವರಲ್ಲಿ ಮೂವರಿಗೆ ಮಾತ್ರ ಮಂತ್ರಿ ಸ್ಥಾನ ನೀಡಲಾಗಿದೆ.ಇಷ್ಟೊಂದು ದೊಡ್ಡ ಸಂಖ್ಯೆಯ ಶಾಸಕರನ್ನು ಹೊಂದಿರುವ ರೆಡ್ಡಿ ಸಮುದಾಯಕ್ಕೆ ಡಿಸಿಎಂ ಸ್ಥಾನ ನೀಡಬೇಕು. ಇದರಿಂದ ಮುಂದಿನ ಲೋಕಸಭೆ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹೆಚ್ಚಿನ ಅನುಕೂಲ ಪಕ್ಷಕ್ಕೆ ಆಗಲಿದೆ ಎಂದರು.
ರೆಡ್ಡಿ ಜನಾಂಗ ಪೂರ್ವದಲ್ಲಿ ಶ್ರೀಮಂತರಾಗಿದ್ದರೂ,ಅವಿಭಕ್ತ ಕುಟುಂಬಗಳು ಹೆಚ್ಚಾದಂತೆ ಇದ್ದ ಭೂಮಿಯೂ ಕಡಿಮೆಯಾಗಿ ಬಡವರಾಗುತ್ತಿದ್ದಾರೆ. ಇಂತಹ ಸಮುದಾಯವನ್ನು ಸರಕಾರ ಹಿಂದುಳಿದ ವರ್ಗದ ಪ್ರವರ್ಗ 3 ಎ ನಿಂದ 2 ಎಗೆ ಸೇರಿಸಬೇಕೆಂಬುದು ನಮ್ಮ ಬಹುದಿನದ ಬೇಡಿಕೆಯಾಗಿದೆ.ಇದರಿಂದ ರೆಡ್ಡಿ ಸಮುದಾಯದ ಮಕ್ಕಳ ವಿದ್ಯಾಭ್ಯಾಸ, ಉದ್ಯೋಗಕ್ಕೆ ಹೆಚ್ಚಿನ ಒತ್ತು ನೀಡಲು ಅನುಕೂಲವಾಗಲಿದೆ.ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಶ್ರೀನಿವಾಸ ರೆಡ್ಡಿ ಒತ್ತಾಯಿಸಿದರು.
ರೆಡ್ಡಿ ಸಮುದಾಯದ ಅಭಿವೃದ್ದಿಗೆ ಹಾಸ್ಟಲ್ ನಿರ್ಮಾಣ ಕಾರ್ಯ ನಡೆಯುತ್ತಿದೆ.ಈ ಹಿಂದಿನ ಸರಕಾರದಲ್ಲಿಯೂ ಅನುದಾನ ನೀಡಿ ವಸತಿ ನಿಲಯಗಳ ಅಭಿವೃದ್ದಿ ಪೂರಕ ವಾತಾವರಣ ನಿರ್ಮಿಸಬೇಕೆಂದ ಅವರು,ಜಿಲ್ಲಾ ರೆಡ್ಡಿ ಜನಸಂಘದಿಂದ ತುಮಕೂರು ನಗರದ ಕ್ಯಾತ್ಸಂದ್ರದಲ್ಲಿ ಗಂಡು ಮಕ್ಕಳ ಹಾಸ್ಟಲ್,ಗಣೇಶ ನಗರದಲ್ಲಿ ಹೆಣ್ಣು ಮಕ್ಕಳ ಹಾಸ್ಟಲ್ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು,ಸರಕಾರ ಅನುದಾನ ನೀಡುವ ಮೂಲಕ ವಸತಿ ನಿಲಯಗಳ ಅಭಿವೃದ್ದಿಗೆ ಕ್ರಮವಹಿಸುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು.
ಸರಕಾರ ಜನಗಣತಿಗೆ ಮುಂದಾಗಿದೆ.ಈ ಬಾರಿ ಜನಗಣತಿ ಸಂದರ್ಭದಲ್ಲಿ ರೆಡ್ಡಿ ಉಪ ಪಂಗಡಗಳನೆಲ್ಲಾ ಜಾತಿ ಕಾಲಂ ನಲ್ಲಿ ರೆಡ್ಡಿ ಎಂದು ನಮೂದಿಸಿದರೆ ನಮ್ಮ ಜನಸಂಖ್ಯೆಯ ನಿಖರ ಮಾಹಿತಿ ದೊರೆಯಲಿದೆ.ಹಾಗಾಗಿ ಸರಕಾರ ರೆಡ್ಡಿ ಜನಾಂಗಕ್ಕೆ ಸೇರಿದ ಎಲ್ಲಾ ಉಪ ಜಾತಿಗಳು ರೆಡ್ಡಿ ಎಂದು ನಮೂದಿಸಲು ಸರಕಾರಿ ಆದೇಶ ಹೊರಡಿಸುವಂತೆ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ರೆಡ್ಡಿ ಜನಸಂಘದ ಕಾರ್ಯದರ್ಶಿ ಬಿ.ಆರ್.ಮಧು,ಜಂಟಿ ಕಾರ್ಯದರ್ಶಿ ರಾಜಗೋಪಾಲರೆಡ್ಡಿ, ಖಜಾಂಚಿ ಎಂ.ಎ.ಶಿವರೆಡ್ಡಿ,ನಿರ್ದೇಶಕರಾದ ಮಲ್ಲಿಕಾರ್ಜುನ ರೆಡ್ಡಿ,ಶೇಷಪ್ಪ ರೆಡ್ಡಿ,ನರಸಿಂಹಪ್ಪ ರೆಡ್ಡಿ,ಜಗಮೋಹನ್ ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.