ವಿಕಲ ಚೇತನರಿಗೆ ಪ್ರತ್ಯೇಕ ಸಚಿವಾಲಯ ಸ್ಥಾಪನೆಗೆ ಒತ್ತಾಯ

ತುಮಕೂರು:ಕಳೆದ 17 ವರ್ಷಗಳಿಂದ ಅಂಗವಿಕಲರ ಅಭಿವೃದ್ದಿಗಾಗಿ ಸೇವೆ ಸಲ್ಲಿಸುತ್ತಿರುವ ವಿ.ಆರ್.ಡಬ್ಲ್ಯ, ಎಂ.ಆರ್.ಡಬ್ಲ್ಯ ಗಳ ಸೇವೆಯನ್ನು ಖಾಯಂ ಗೊಳಿಸಬೇಕು ಹಾಗೂ ವಿಕಲಚೇತನರು ಹಾಗೂ ಹಿರಿಯನಾಗರಿಕರಿಗಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪನೆ, ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಇಂದು ಕರ್ನಾಟಕ ರಾಜ್ಯ ವಿಕಲಚೇತನ ಹಾಗೂ ವಿವಿದೋದ್ದೇಶ ಮತ್ತು ಗ್ರಾಮೀಣ ಪುನರ್ವಸತಿ, ನಗರ ಪುನರ್ವಸತಿ ಕಾರ್ಯಕರ್ತರ ಒಕ್ಕೂಟದಿಂದ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಸಮಾವೇಶಗೊಂಡ ನೂರಾರು ವಿ.ಆರ್.ಡಬ್ಲ್ಯು ಮತ್ತು ಎಂ.ಆರ್.ಡಬ್ಲ್ಯು ಕಾರ್ಯಕರ್ತರು,ಕಳೆದ 17 ವರ್ಷಗಳಿಂದ ವಿಕಲಚೇತನರ ಪುನರವಸತಿಗೆ ಶ್ರಮಿಸುತ್ತಿರುವ ನಮ್ಮನ್ನು ಖಾಯಂ ಗೊಳಿಸುವುದರ ಜೊತೆಗೆ ಸೇವಾ ಭದ್ರತೆ ಹಾಗೂ ಕನಿಷ್ಠ ವೇತನ ವ್ಯಾಪ್ತಿಗೆ ಒಳಪಡಿಸಬೇಕೆಂಬುದು ನಮ್ಮಗಳ ಆಗ್ರಹವಾಗಿದೆ ಎಂದರು.

ಕರ್ನಾಟಕ ರಾಜ್ಯ ವಿಕಲಚೇತನ ಹಾಗೂ ವಿವಿದೋದ್ದೇಶ ಮತ್ತು ಗ್ರಾಮೀಣ ಪುನರ್ವಸತಿ, ನಗರ ಪುನರ್ವಸತಿ ಕಾರ್ಯಕರ್ತರ ಒಕ್ಕೂಟ ಜಿಲ್ಲಾಧ್ಯಕ್ಷ ಚಿತ್ತಯ್ಯ ಮಾತನಾಡಿ,ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯು ಅಂಗವಿಕಲರ ಹಾಗು ಹಿರಿಯ ನಾಗರಿಕರ ಸಬಲೀಕರಣ ನಿರ್ದೇಶನಾಲಯದ ಅಡಿಯಲ್ಲಿ ಸುಮಾರು 5860 ವಿ.ಆರ್.ಡಬ್ಲ್ಯು, 175 ಎಂ.ಆರ್.ಡಬ್ಲ್ಯು,380 ಯುಆರ್‍ಡಬ್ಲ್ಯುಗಳನ್ನು ನೇಮಕ ಮಾಡಿದ್ದು,ವಿಕಲಚೇತನರಾದ ನಾವುಗಳು ಕಳೆದ 17 ವರ್ಷಗಳಿಂದಲೂ ನಿರಂತರವಾಗಿ ಅಂಗವಿಕಲರನ್ನು ಗುರುತಿಸಿ,ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ಮಾಡುತಿದ್ದು,ನಮ್ಮಗಳ ಶ್ರಮದ ಫಲವಾಗಿ ರಾಜ್ಯ ಸರಕಾರ 2018-19 ಮತ್ತು 2019-20ನೇ ಸಾಲಿನಲ್ಲಿ ರಾಷ್ಟ್ರಪ್ರಶಸ್ತಿಯನ್ನು ಪಡೆದಿದೆ.ಆದರೆ ಕೆಲಸ ಮಾಡಿದ ನಮಗೆ ಸೇವಾ ಭದ್ರತೆಯಿಲ್ಲ.16 ವರ್ಷಗಳಿಂದಲೂ ಮನವಿ ಸಲ್ಲಿಸುತ್ತಿದ್ದರೂ ಸರಕಾರ ಸ್ಪಂದಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಭಾರತದ ಸರ್ವೋಚ್ಚ ನ್ಯಾಯಾಲಯದ ಆದೇಶದ ಅನ್ವಯ ರಾಜ್ಯ ಸರಕಾರದ ಅನುದಾನದ ಸಂಸ್ಥೆಗಳಲ್ಲಿ 10-15 ವರ್ಷ ಸೇವೆ ಸಲ್ಲಿಸಿದ ನೌಕರರನ್ನು ಖಾಯಂ ಗೊಳಿಸಬೇಕೆಂದು ಆದೇಶವನ್ನು 2021ರ ಜನವರಿ 10 ರಂದು ನೀಡಿದೆ.ಅಲ್ಲದೆ ಇದೇ ವಿಚಾರವಾಗಿ 2023ರ ಸೆಪ್ಟಂಬರ್ 21 ರಣದಯ ಸಹ ಆದೇಶ ಬಂದಿದೆ.ಅಲ್ಲದೆ ಸರಕಾರದ ವಿವಿಧ ಇಲಾಖೆಗಳಲ್ಲಿ ಸುಮಾರು 15 ಸಾವಿರಕ್ಕೂ ಹೆಚ್ಚು ಬ್ಯಾಕ್‍ಲಾಗ್ ಹುದ್ದೆಗಳು ಖಾಲಿ ಇವೆ.ಹಾಗಾಗಿ ವಿ.ಆರ್.ಡಬ್ಲ್ಯ, ಎಂಆರ್‍ಡಬ್ಲ್ಯು ಮತ್ತು ಯುಆರ್‍ಡಬ್ಲ್ಯು ಗಳಾಗಿ ಕೆಲಸ ಮಾಡುತ್ತಿರುವ ಸುಮಾರು 6422 ನೌಕರರನ್ನು ಮಾನವೀಯತೆ ಆಧಾರದ ಮೇಲೆ ಖಾಯಂಗೊಳಿ ಸಬೇಕೆಂಬುದು ನಮ್ಮ ಬೇಡಿಕೆಯಾಗಿದೆ ಎಂದರು.

ವಿ.ಆರ್.ಡಬ್ಲ್ಯು.ಎಂ.ಆರ್.ಡಬ್ಲ್ಯು ಹಾಗೂ ಯುಆರ್‍ಡಬ್ಲ್ಯುಗಳಿಗೆ ಸೇವಾ ಭದ್ರತೆಯ ಜೊತೆಗೆ,ಕನಿಷ್ಠ ವೇತನಕ್ಕೆ ಒಳಪಡಿಸಬೇಕು. ವಿಕಲಚೇತನರಿಗಾಗಿ ಪ್ರತ್ಯೇಕ ಅಭಿವೃದ್ದಿ ನಿಗಮ ಸ್ಥಾಪಿಸಬೇಕು ಹಾಗೂ ನಿವೃತ್ತಿ ಇಡಿಗಂಟು ನೀಡಬೇಕೆಂಬ ಬೇಡಿಕೆಯಿದ್ದು, ಡಿಸೆಂಬರ್ 03 ರಂದು ನಡೆಯುವ ವಿಶ್ವ ಅಂಗವಿಕಲರ ದಿನದ ಒಳಗೆ ಈ ಬೇಡಿಕೆಗಳನ್ನು ಈಡೇರಿಸಬೇಕು.ಇಲ್ಲದಿದ್ದಲ್ಲಿ ಹೋರಾಟವನ್ನು ತೀವ್ರಗೊಳಿಸುವುದಾಗಿ ಚಿತ್ತಯ್ಯ ತಿಳಿಸಿದರು.

ಈ ಸಂಬಂಧ ಮನವಿಯನ್ನು ಜಿಲ್ಲಾಧಿಕಾರಿಗಳ ಕಚೇರಿಯ ಆಡಳಿತಾಧಿಕಾರಿಗಳಿಗೆ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಮೈಲಾರಪ್ಪ, ಸೌಭಾಗ್ಯ, ಚಂದ್ರಶೇಖರ್, ನಿವೇದಿತ, ನಾಗರಾಜು, ಕುಸುಮ, ಆದಿಲ್, ಮಂಜುನಾಥ್ ಸೇರಿದಂತೆ ಎಲ್ಲಾ ವಿಆರ್‍ಡಬ್ಲ್ಯು, ಎಂಆರ್‍ಡಬ್ಲ್ಯು ಮತ್ತು ಯುಆರ್‍ಡಬ್ಲ್ಯುಗಳು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *