ಹಣಬೇಡ ಪಡಿತರ ನೀಡಲು ಆಗ್ರಹ

ತುಮಕೂರು:ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಬಾಕಿ ಇರುವ ಇಕೆಐಸಿ ಸೇವಾ ಶುಲ್ಕ ನೀಡಬೇಕು,ಎಲ್ಲಾ ಸಗಟು ದಾಸ್ತಾನು ಮಳಿಗೆಗೆ ಸಿಸಿ ಕ್ಯಾಮರ ಅಳವಡಿಕೆ ಮಾಡಬೇಕು. ರಾಜ್ಯಸರಕಾರ ಪಡಿತರದ ಬದಲು ಹಣ ನೀಡುವುದನ್ನು ನಿಲ್ಲಿಸಿ ಆಹಾರ ಪದಾರ್ಥಗಳನ್ನು ವಿತರಿಸಬೇಕೆಂದು ಕರ್ನಾಟಕ ರಾಜ್ಯ ಸರಕಾರಿ ಪಡಿತರ ವಿತರಕರ ಸಂಘದ ರಾಜ್ಯಾಧ್ಯಕ್ಷ ಕೃಷ್ಣಪ್ಪ ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ರಾಜ್ಯ ಸರಕಾರ ಅನ್ನಭಾಗ್ಯ ಯೋಜನೆ ಅಡಿ ನೀಡಲು ಬಯಸಿದ್ದ ಹೆಚ್ಚುವರಿ ಐದು ಕೆ.ಜಿ.ಅಕ್ಕಿ ದೊರೆಯದ ಕಾರಣ ಹಣ ನೀಡುತ್ತಿದೆ.ಹಣ ನೀಡುವ ಬದಲು ಬೆಳೆ,ಸಕ್ಕರೆ,ಉಪ್ಪು ಇನ್ನಿತರ ಪದಾರ್ಥಗಳನ್ನು ನೀಡುವುದರಿಂದ ಜನರಿಗೆ ಹೆಚ್ಚಿನ ಉಪಯೋಗವಾಗಲಿದೆ ಎಂದರು.

ಅನ್ನಭಾಗ್ಯ ಯೋಜನೆಯಲ್ಲಿ ವಿತರಿಸುತ್ತಿರುವ ಐದು ಕೆ.ಜಿ.ಅಕ್ಕಿ ಕೇಂದ್ರ ಸರಕಾರದ ಆಹಾರ ಭದ್ರತಾ ಕಾಯ್ದೆಯಡಿ ನೀಡುತ್ತಿರುವ ಅಕ್ಕಿಯಾಗಿದೆ. ರಾಜ್ಯ ಸರಕಾರ ಅಕ್ಕಿಯ ಬದಲಾಗಿ ನೀಡುವ ಹಣವೂ ಸಹ ಕಳೆದ ನಾಲ್ಕು ತಿಂಗಳಿನಿಂದ ಪಡಿತರ ಚೀಟಿದಾರರ ಖಾತೆಗೆ ವರ್ಗಾವಣೆ ಆಗಿಲ್ಲ. ಹಾಗಾಗಿ ಈ ಹಿಂದೆ ನೀಡಿದಂತೆ ಪಡಿತರದಾರರಿಗೆ ಬೆಳೆ,ಸಕ್ಕರೆ,ಉಪ್ಪು ಇನ್ನಿತರ ಸಾಮಾನುಗಳನ್ನು ವಿತರಿಸುವುದರಿಂದ ಹೆಚ್ಚಿನ ಅನುಕೂಲವಾಗಲಿದೆ.ಸರಕಾರದ ಮೇಲಿನ ಅಪಾದನೆಗೂ ಮುಕ್ತಿ ಸಿಗಲಿದೆ ಎಂದು ಕೃಷ್ಣಪ್ಪ ಒತ್ತಾಯಿಸಿದರು.

ಸರಕಾರದ ಸೂಚನೆಯಂತೆ ರಾಜ್ಯದಲ್ಲಿರುವ ಸುಮಾರು 20 ಸಾವಿರ ಪಡಿತರ ವಿತರಕರು 2017 ಒಂದು ಕಾರ್ಡಿಗೆ 20 ರೂಗಳಂತೆ ಇಕೆವೈಸಿ ಮಾಡಿದ ಸುಮಾರು 18 ಕೋಟಿ ರೂ ಸೇವಾ ಶುಲ್ಕ ಬಾಕಿ ಬರಬೇಕಿದೆ.ಶೇ 97 ರಷ್ಟು ಇಕೆವೈಸಿ ಕೆಲಸ ಪೂರ್ಣಗೊಂಡು 7 ವರ್ಷ ಕಳೆದರೂ ಸರಕಾರ ಹಣ ಬಿಡುಗಡೆ ಮಾಡಿಲ್ಲ. ಎಲ್ಲಾ ಮುಖ್ಯಮಂತ್ರಿಗಳಿಗೂ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.ಪಡಿತರ ವಿತರಕರು ಕಷ್ಟಪಟ್ಟು ಮಾಡಿದ ಕೆಲಸಕ್ಕು ಹಣ ಬಿಡುಗಡೆ ಮಾಡದೆ ಸತಾಯಿಸುತ್ತಿರುವುದು ಸರಿಯಲ್ಲ.ಕೂಡಲೇ ಬಾಕಿ ಬಿಡುಗಡೆಗೆ ಸರಕಾರ ಕ್ರಮ ವಹಿಸಬೇಕು ಎಂದು ಕೃಷ್ಣಪ್ಪ ಒತ್ತಾಯಿಸಿದರು.

ಆಹಾರ ಪದಾರ್ಥಗಳ ಎತತುವಳಿ ವೇಳೆ ಗೋಡನ್ ಗಳಲ್ಲಿ ಪಡಿತರ ಆಹಾರ ವಿತರಕರಿಗೆ ಆಗುತ್ತಿರುವ ಮೋಸವನ್ನು ಸರಿಪಡಿಸಲು ಎಲ್ಲಾ ಗೋಡನ್ ಗಳಿಗೆ ಸಿಸಿಟಿವಿ ಅಳವಡಿಕೆ ಮತ್ತು ಬಯೋ ಮೆಟ್ರಿಕ್ ಯಂತ್ರ ಅಳವಡಿಸುವಂತೆ ಒತ್ತಾಯಿಸಿ
2023 ರ ನವೆಂಬರ್ 09 ರಂದು ಬೆಂಗಳೂರಿನ ಪ್ರಿಡಂ ಪಾರ್ಕಿನಲ್ಲಿ ನಡೆಸಿದ ಹೋರಾಟದ ವೇಳೆ ಮನವಿ ಸ್ವಿಕರಿಸಿದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಕೆ.ಹೆಚ್.ಮುನಿಯಪ್ಪ ಹಾಗು ಇಲಾಖೆಯ ಹಿರಿಯ ಅಧಿಕಾರಿಗಳು 2023 ರ ನವೆಂಬರ್ 21 ರಂದು 18 ಕೋಟಿ ರೂ ಹಣ ಬಿಡುಗಡೆ ಮಾಡಿದ್ದರು.ಆದರೆ ಇದುವರೆಗೂ ಸಿಸಿಟಿವಿ ಅಳವಡಿಕೆ ಕಾರ್ಯ ನಡೆದಿಲ್ಲ. ಅಧಿಕಾರಿಗಳು ಈಗ ಅಷ್ಟು ಹಣ ಸಾಲದು ಎಂದು ವರದಿ ಸಲ್ಲಿಸಿದ ಹಿನ್ನೆಲೆಯಲ್ಲಿ ಅಂದಾಜು ವೆಚ್ಚವನ್ನು 18 ಕೋಟಿ ರೂಗಳಿಗೆ ಬದಲಾಗಿ 39 ಕೋಟಿ ರೂಗಳಿಗೆ ಹೆಚ್ಚಿಸಿ ಸರಕಾರಕ್ಕೆ ಕಳುಹಿಸಿದ್ದು ಅರಕಾರದಿಂದ ಅನುಮೋಧನೆಯಾಗಿದೆ.ಆದರೆ ಕೆಲಸ ಆರಂಭವಾಗಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆ ಮೂಲಕ ಹಸಿರು ಕಾರ್ಡು,ಅಂತ್ಯೋದಯ ಸೇರಿ ಒಟ್ಟು 1.28 ಕೋಟಿ ಪಡಿತರ ಕಾರ್ಡುಗಳಿದ್ದು,ಇವುಗಳಲ್ಲಿ ಸುಮಾರು 35 ಲಕ್ಷ ಕಾರ್ಡುಗಳಿಗೆ ದಾಖಲೆಗಳೇ ಇಲ್ಲ.ಹಾಗಾಗಿ ಇಕೆವೈಸಿ ಮಾಡಲು ಸಾಧ್ಯವಾಗಿಲ್ಲ.ಆದ್ದರಿಂದ ಇಂತಹ ಕಾರ್ಡುಗಳಿಗೆ ಅಹಾರ ಹಂಚಿಕೆಯಾಗುತ್ತಿರುವುದನ್ನು ಬಿಟ್ಟರೆ ಡಿಬಿಟಿ ಮೂಲಕ ಹಣ ವರ್ಗಾವಣೆ ಅಸಾಧ್ಯ. ಇದನ್ನು ಸರಕಾರ ಮನಗಾಣಬೇಕು ಎಂದ ಅವರು, ನಮ್ಮ ಸಂಘದಿಂದ ಸಹ ಕರ್ನಾಟಕ ಸರಕಾರ ಗ್ಯಾರೆಂಟಿ ಯೋಜನೆಗಳ ಮೂಲಕ ವಿತರಿಸಲು ಹೆಚ್ಚುವರಿ ಅಕ್ಕಿ ನೀಡುವಂತೆ ಹಿಂದಿನ ಸರಕಾರಕ್ಕೆ ಮನವಿ ಮಾಡಲಾಗಿತ್ತು.ಆದರೆ ಸರಕಾರ ನಮ್ಮ ಮನವಿಗೆ ಸ್ಪಂದಿಸಲಿಲ್ಲ ಎಂದರು.

ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಸರಕಾರಿ ಪಡಿತರ ವಿತರಕರ ಸಂಘದ ರಾಜ್ಯ ಕಾರ್ಯದರ್ಶಿ ಚನ್ನಕೇಶವೇಗೌಡ,ಉಪಾಧ್ಯಕ್ಷರಾದ ಕೆ.ಎಲ್.ರಾಮಚಂದ್ರ, ಕೆ.ಬಿ.ಉಮೇಶಚಂದ್ರ,ಜಿಲ್ಲಾಧ್ಯಕ್ಷ ನಟರಾಜ್, ಚಿ.ನಾಹಳ್ಳಿ ತಾಲೂಕು ಅಧ್ಯಕ್ಷ ಬೀರಲಿಂಗಯ್ಯ, ಪಾವಗಡ ತಾಲೂಕು ಅಧ್ಯಕ್ಷ ಕೆ.ನಾಗರಾಜು, ಕಾರ್ಯದರ್ಶಿ ಪಿ.ಆರ್.ವಿ.ಪ್ರಸಾದ್, ಜಿಲ್ಲಾ ಉಪಾಧ್ಯಕ್ಷರಾದ ಲಕ್ಷ್ಮಣ್ ಮತ್ತಿತರರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *