ತುಮಕೂರು.:ಕಳೆದ ಹತ್ತು ವರ್ಷಗಳಿಂದ ಹಳೆಯ ಪಿಂಚಿಣಿ ಪದ್ದತಿ ಜಾರಿಗೆ ಒತ್ತಾಯಿಸಿ ನಿರಂತರ ಹೋರಾಟದಲ್ಲಿ ತೊಡಗಿರುವ ನಾವು,2022ರ ಡಿಸೆಂಬರ್‍ನಿಂದ ಮಾಡು ಇಲ್ಲವೇ,ಮಡಿ ಹೋರಾಟ ನಡೆಸುತಿದ್ದು,2024ರ ಜನವರಿ 05ರಂದು ಮುಖ್ಯಮಂತ್ರಿಗಳೊಂದಿಗೆ ನಡೆಯವ ಸಭೆಯಲ್ಲಿ ಅದರ ಫಲಿತಾಂಶ ಹೊರಬೀಳಲಿದೆ ಎಂದು ಕರ್ನಾಟಕ ರಾಜ್ಯ ಸರಕಾರಿ ಎನ್.ಪಿ.ಎಸ್. ನೌಕರರ ಸಂಘದ ರಾಜ್ಯಾಧ್ಯಕ್ಷ ಶಾಂತಾರಾಂ ತೇಜ ತಿಳಿಸಿದ್ದಾರೆ.
ನಗರದ ಗ್ರಂಥಾಲಯ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸರಕಾರಿ ಎನ್.ಪಿ.ಎಸ್. ನೌಕರರ ಸಂಘದ ತುಮಕೂರು ಜಿಲ್ಲಾ ಘಟಕ ಆಯೋಜಿಸಿದ್ದ ಬೆಂಗಳೂರು ವಿಭಾಗೀಯ ಸಂಘಟನಾ ಸಭೆಯನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು,2024ರ ಜನವರಿ 05ರಂದು ಸಂಜೆ 5 ಗಂಟೆಗೆ ಮುಖ್ಯಮಂತ್ರಿಗಳು ಎನ್.ಪಿ.ಎಸ್.ನೌಕರರು ಹಾಗೂ ಸಮಾನ ಮನಸ್ಕ ನೌಕರರ ಸಂಘಟನೆಗಳ ಪದಾಧಿಕಾರಿಗಳ ಸಭೆಯನ್ನು ಕರೆದಿದ್ದಾರೆ.ಈ ಸಭೆಯಲ್ಲಿ ರಾಜ್ಯ ಮಟ್ಟದ ಸಮಾವೇಶದ ದಿನಾಂಕ ಘೋಷಣೆಯಾಗಲಿದ್ದು,ಸಮಾವೇಶದಂದು ಮುಖ್ಯಮಂತ್ರಿಗಳು ಎನ್.ಪಿ.ಎಸ್.ರದ್ದುಗೊಳಿಸಿ,ಓಪಿಎಸ್ ಜಾರಿ ಮಾಡುವ ಘೋಷಣೆ ಮಾಡಲಿದ್ದಾರೆ ಎಂಬ ನಂಬಿಕೆ ನಮಗಿದೆ ಎಂದರು.
ಯಾವುದೇ ಒಂದು ಹೋರಾಟಕ್ಕೆ ವ್ಯಕ್ತಿ ಮುಖ್ಯವಲ್ಲ, ಸಂಘಟನೆ ಮುಖ್ಯ ಹಾಗಾಗಿ, ಎನ್.ಪಿ.ಎಸ್ ರದ್ದು ಮಾಡಿ, ಓಪಿಎಸ್ ಜಾರಿ ಎಂಬ ಏಕೈಕ ಉದ್ದೇಶ ಹೊಂದಿರುವ ನಮ್ಮ ಸಂಘಟನೆಯ ಪ್ರತಿ ಪಾದಾಧಿಕಾರಿ,ಸದಸ್ಯರು ಎಲ್ಲರ ಮೇಲು ಹೋರಾಟದ ತಾತ್ವಿಕ ಜವಾಬ್ದಾರಿ ಇದೆ.ನಂಬಿಕೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡೋಣ.2022ರ ಡಿಸೆಂಬರ್ ನಲ್ಲಿ 14 ದಿನಗಳ ಕಾಲ ಬೆಂಗಳೂರಿನ ಪ್ರಿಡಂ ಪಾರ್ಕಿನಲ್ಲಿ ನಡೆದ ಅಹೋರಾತ್ರಿ ಧರಣಿ, ಆನಂತರ ನಡೆದ ಕೋರ್ ಕಮಿಟಿ ಸಭೆಯಲ್ಲಿ ಆದ ತೀರ್ಮಾನಗಳಂತೆ ನಾವು ನಡೆದುಕೊಳ್ಳುತ್ತಿದ್ದು,ಹಾಲಿ ಸರಕಾರ ಚುನಾವಣೆ ಪೂರ್ವದಲ್ಲಿ ಮತ್ತು ತನ್ನ ಚುನಾವಣಾ ಪ್ರಾಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ನಡೆದುಕೊಳ್ಳಲಿದೆ ಎಂಬ ವಿಶ್ವಾಸ ನಮಗಿದೆ.ಈಗಾಗಲೇ ಪ್ರಾಣಾಳಿಕೆ ಸಮಿತಿಯ ಅಧ್ಯಕ್ಷರಾಗಿದ್ದ, ಹಾಗೂ ಇಂದಿನ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹಾಗೂ ಮುಖ್ಯಮಂತ್ರಿಗಳ ಮೇಲೆ ನಂಬಿಕೆ ಇದೆ.ನಾವು ಸಂಧ್ಯಾಕಾಲದಲ್ಲಿ ನಮಗೆ ಆಸರೆಯಾದ ಹಳೆಯ ಪಿಂಚಿಣಿ ಪದ್ದತಿಯನ್ನು ಪಡೆದೇ ಪಡೆಯುತ್ತೇವೆ ಎಂಬ ಭರವಸೆಯನ್ನು ಶಾಂತಾರಾಂ ತೇಜ ವ್ಯಕ್ತಪಡಿಸಿದರು.

ಕಾಂಗ್ರೆಸ್ ಮುಖಂಡ ಹಾಗೂ ಕೌಶಲ್ಯಾಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ ಮಾತನಾಡಿ,ಕಾಂಗ್ರೆಸ್ ಪಕ್ಷದ ಸರಕಾರ ನುಡಿದಂತೆ ನಡೆದಿದೆ.2013ರಲ್ಲಿ ಜನರಿಗೆ ನೀಡಿದ್ದ ಸುಮಾರು 168 ಭರವಸೆಗಳಲ್ಲಿ 165ನ್ನು ಈಡೇರಿಸಿದೆ. ಹಾಗೆಯೇ 2023ರಲ್ಲಿ ನೀಡಿರುವ ಭರವಸೆಯನ್ನು ಈಡೇರಿಸಲಿದೆ.ಡಾ.ಜಿ.ಪರಮೇಶ್ವರ್ ತುರ್ತು ಕಾರ್ಯನಿಮಿತ್ತ ಈ ಸಭೆಯಲ್ಲಿ ಪಾಲ್ಗೊಳ್ಳಲಾಗಿಲ್ಲ. ನನ್ನ ಮೂಲಕ ಶುಭ ಸಂದೇಶ ಕಳುಹಿಸಿದ್ದಾರೆ.2024ರ ಜನವರಿ 05ರ ಸಭೆ ನಿಮಗೆ ಹೊಸ ವರ್ಷ ತರಲಿದೆ ಎಂದು ಡಾ.ಜಿ.ಪರಮೇಶ್ವರ್ ಅವರು ಕಳುಹಿಸಿದ ಶುಭ ಸಂದೇಶವನ್ನು ವಾಚಿಸಿದರು.
ಕರ್ನಾಟಕ ರಾಜ್ಯ ಸರಕಾರಿ ಎನ್.ಪಿ.ಎಸ್.ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದಪ್ಪ ಸಂಗಣ್ಣ ಮಾತನಾಡಿ, 2022ರ ಡಿಸೆಂಬರ್‍ನಲ್ಲಿ ನಡೆದ 14 ದಿನಗಳ ಆಹೋರಾತ್ರಿ ಧರಣಿಯ ನಂತರ ಹಂತ ಹಂತವನ್ನು ಸಂಘಟನೆ ಹೋರಾಟ ವನ್ನು ನಡೆಸಿಕೊಂಡು ಬರುತ್ತಿದೆ.ಸರಕಾರಿ ನೌಕರರ ಸಂಧ್ಯಾ ಕಾಲದ ಊರುಗೋಲಾಗಿರುವ ಪಿಂಚಿಣಿಯನ್ನು ಪಡೆಯು ವುದು ನಮ್ಮೆಲ್ಲರ ಹಕ್ಕು.ನಮ್ಮ ಹೋರಾಟದ ಕೊನೆಯ ಘಟ್ಟದಲ್ಲಿ ನಾವಿದ್ದೇವೆ.ಓಪಿಎಸ್ ಸಂಕಲ್ಪಯಾತ್ರೆ,ಓಟ್ ಪಾರ್ ಓಪಿಎಸ್,ಅಲ್ಲದೆ ರಾಜ್ಯದ ನಾಲ್ಕು ವಿಭಾಗಗಳಲ್ಲಿ ವಿಭಾಗೀಯ ಸಮಾವೇಶಗಳನ್ನು ನಡೆಸಿ ನೌಕರರನ್ನು ಸಂಘಟಿಸ ಲಾಗಿದೆ.ಸರಕಾರ ನುಡಿದಂತೆ ನಡೆದುಕೊಳ್ಳುತ್ತದೆ ಎಂಬ ವಿಶ್ವಾಸ ನಮಗಿದೆ ಎಂದರು.
ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಅಧ್ಯಕ್ಷ ನಿಂಗೇಗೌಡ ಮಾತನಾಡಿ,ಕಾಂಗ್ರೆಸ್ ಪಕ್ಷ ಚುನಾವಣಾ ಪೂರ್ವದಲ್ಲಿ ನೀಡಿದ್ದ ಭರವಸೆಯನ್ನು ಈಡೇರಿಸುವಂತೆ ಹೊಸ ಸರಕಾರ ಬಂದ ನಂತರ 5 ಬಾರಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಗೃಹ ಸಚಿವರನ್ನು ಭೇಟಿಯಾಗಿ ಮಾತುಕತೆ ನಡೆದಿದೆ.2024ರ ಜನವರಿ 05ರ ಸಭೆ ನಮಗೆ ಒಳ್ಳೆಯ ಸಂದೇಶ ನೀಡಲಿದೆ ಎಂಬ ವಿಶ್ವಾಸವಿದೆ.ಒಂದು ವೇಳೆ ಸರಕಾರ ಹಿಂದೇಟು ಹಾಕಿದರೆ 3.15 ಲಕ್ಷ ಸದಸ್ಯರನ್ನು ಹೊಂದಿರುವ ಎನ್.ಪಿ.ಎಸ್.ನೌಕರರ ಸಂಘಟನೆ ಮುಂದಿನ ಹಂತದ ಹೋರಾಟಕ್ಕೆ ಸಿದ್ದವಿದೆ. ಇದಕ್ಕೆ ನಿಮ್ಮಗಳ ಸಹಕಾರ ಇರಲಿ ಎಂದರು.
ಸಂಘದ ರಾಜ್ಯ ಜಂಟಿ ಕಾರ್ಯದರ್ಶಿ ಬಿ.ವಿ.ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿಸಂಘ 2015ರಿಂದಲೂ ನಿರಂತರವಾಗಿ ಹೋರಾಟ ನಡೆಸಿಕೊಂಡು ಬರುತ್ತಿದೆ.ಬೆಳಗಾವಿ ಚಲೋ,ರಕ್ತ ಕೊಟ್ಟೇವು ಪಿಂಚಿಣಿ ಬಿಡೆವು,ಓಟ್ ಫಾರ್ ಓಪಿಎಸ್ ಹೀಗೆ ಹತ್ತು ಹಲವು ಹೋರಾಟದ ಭಾಗವಾಗಿ ಇಂದು ಬೆಂಗಳೂರು ವಿಭಾಗೀಯ ಸಮಾವೇಶ ನಡೆಯುತ್ತಿದೆ. ತುಮಕೂರು ಜಿಲ್ಲಾ ಘಟಕ ಸಮಾವೇಶವನ್ನು ಅಚ್ಚುಕಟ್ಟಾಗಿ ಆಯೋಜಿಸಿದೆ.ಇದಕ್ಕಾಗಿ ಎಲ್ಲಾ ಸಂಘಟಕರನ್ನು ಅಭಿನಂದಿಸುವುದಾಗಿ ತಿಳಿಸಿದರು.
ಸಮಾವೇಶದ ಅಧ್ಯಕ್ಷತೆಯನ್ನು ಓಪಿಎಸ್ ನೌಕರರ ಸಂಘದ ತುಮಕೂರು ಜಿಲ್ಲಾಧ್ಯಕ್ಷ ಹೆಚ್.ಡಿ.ಮಂಜುನಾಥ್ ವಹಿಸಿದ್ದರು. ಸಮಾವೇಶದಲ್ಲಿ ಕೆಪಿಟಿಸಿಎಲ್‍ನೌಕರರ ಸಂಘದ ರಾಜ್ಯಾಧ್ಯಕ್ಷ ಲಕ್ಷ್ಮಿಪತಿ,ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚಂದ್ರಶೇಖರ್,ನಾಗೇಶ್,ಸಚಿವಾಲಯದ ನೌಕರರ ಸಂಘದ ಗುರುಸ್ವಾಮಿ,ಶಿವರುದ್ರಯ್ಯ,ವಿವಿಧ ಇಲಾಖೆ ನೌಕರರ ಸಂಘದ ಮುಖಂಡರಾದ ಪದ್ಮಲತ, ಲೀಲಾವತಿ, ಹನುಮಂತಪ್ಪ, ಡಾ.ತಿಪ್ಪೆಸ್ವಾಮಿ ಸೇರಿದಂತೆ ಹಲವರು ಮಾತನಾಡಿದರು.
ವೇದಿಕೆಯಲ್ಲಿ ಓಪಿಎಸ್ ನೌಕರರ ಸಂಘದ ರಾಜ್ಯ ಪದಾಧಿಕಾರಿಗಳಾದ ಶೈಲಜಾ,ಪ್ರಮೀಳಾ, ಪುಷ್ಪ, ನಾಗರಾಜು,ರಮ್ಯ, ವೇದಾವತಿ,ಶೋಭ,ತುಮಕೂರು ಜಿಲ್ಲಾ ಗೌರವಾಧ್ಯಕ್ಷ ಪುರುಷೋತ್ತಮ್,ಎ.ಎಸ್,ಪ್ರಧಾನ ಕಾರ್ಯದರ್ಶಿ ಹರೀಶ್ ಕುಮಾರ್.ಡಿ.ಆರ್,ಉಪಾಧ್ಯಕ್ಷ ಪ್ರಭಾಕರ್, ಖಜಾಂಚಿ ಶಾಹಿದ್ ಅಫ್ರಿದಿ, ತಾಲೂಕು ಸಂಘಗಳ ಅಧ್ಯಕ್ಷರು ಪದಾಧಿಕಾರಿಗಳು ಉಪಸ್ಥಿತಿದ್ದರು.