ತುಮಕೂರು : ತುಮಕೂರಿನ ಜಿಲ್ಲಾಸ್ಪತ್ರೆಯ ಹಳೆ ಕಟ್ಟಡವು ಶಿಥಿಲಗೊಂಡಿದ್ದು, ಮರು ನಿರ್ಮಾಣ ಮಾಡಬೇಕೆಂದು ಶಾಸಕ ಜ್ಯೋತಿಗಣೇಶ್ ಅವರು ವಿಧಾನ ಮಂಡಲದಲ್ಲಿ ಒತ್ತಾಯಿಸಿದ್ದಾರೆ.
ತುಮಕೂರು ಜಿಲ್ಲಾಸ್ಪತ್ರೆಯು ಹೆಚ್ಚು ಹೊರ-ಒಳ ರೋಗಿಗಳನ್ನು ಹೊಂದಿರುವ ರಾಜ್ಯದ ಅತೀ 3 ನೇ ಜಿಲ್ಲೆಯಾಗಿದ್ದು, 11 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ. ತುಮಕೂರು ಸರ್ಕಾರಿ ಜಿಲ್ಲಾಸ್ಪತ್ರೆಯ ಕಟ್ಟಡವನ್ನು 1948ನೇ ಸಾಲಿನಲ್ಲಿ ಲೋರ್ಕಾಪಣೆ ಮಾಡಿಲಾಗಿದ್ದು, ಕಟ್ಟಡವು 78 ವರ್ಷ ಹಳೆಯದಾಗಿದ್ದು, ಅನುದಾನಕ್ಕನುಗುಣವಾಗಿ ವಾರ್ಷಿಕ ನಿರ್ವಹಣೆಯನ್ನು ಮಾಡಲಾಗಿದ್ದರೂ ಸಹ ಶಿಥಿಲವಾಗಿರುವುದರಿಂದ ನಿರ್ವಹಣೆಯು ಕಷ್ಟಸಾಧ್ಯವಾಗಿರುವುದರಿಂದ ಶಿಥಿಲಗೊಂಡ ಜಿಲ್ಲಾಸ್ಪತ್ರೆಯ ಮುಖ್ಯ ಕಟ್ಟಡ ಮರು ನಿರ್ಮಾಣಕ್ಕಾಗಿ ಸದನದಲ್ಲಿ ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ರವರು ಆಗ್ರಹಿಸಿದರು.
ಶಿಥಿಲಾವಸ್ಥೆಯಲ್ಲಿರುವ ಜಿಲ್ಲಾಸ್ಪತ್ರೆ ನಿರ್ವಹಣೆಯ ವೆಚ್ಚವು ಅಧಿಕವಾಗಿದ್ದು, ಐ.ಪಿ.ಹೆಚ್.ಎಸ್ ಮಾನದಂಡಗಳಿಗೆ ಅನುಗುಣವಾಗಿ ಇರದ ಕಾರಣ ರೋಗಿಗಳಿಗೆ ಸೂಕ್ತ ಚಿಕಿತ್ಸೆಯನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ. ತುಮಕೂರು ಜಿಲ್ಲೆಯಲ್ಲಿ 10 ತಾಲ್ಲೂಕುಗಳಿದ್ದು, ಸರಿ ಸುಮಾರು 100 ಕಿ.ಮೀ ದೂರದ ಪಾವಗಡ, 80 ಕೀ.ಮೀ. ದೂರದ ತಿಪಟೂರುನ ರೋಗಿಗಳು ಅವಲಂಬಿಸಿರುವುದು ಸಹ ಇದೇ ತುಮಕೂರು ಸರ್ಕಾರಿ ಜಿಲ್ಲಾಸ್ಪತ್ರೆಯನ್ನೆ. ಜಿಲ್ಲಾಸ್ಪತ್ರೆಯ ಹಳೆ ಕಟ್ಟಡದ ಸ್ಥಿತಿ ಗತಿಯ ಬಗ್ಗೆ ಲೋಕೋಪಯೋಗಿ ಇಲಾಖೆಯಿಂದ ವರದಿ ಪಡೆಯಲಾಗಿದ್ದು, ಲೋಕೋಪಯೋಗಿ ಇಲಾಖೆಯ ವರದಿಯ ಪ್ರಕಾರ ಶಿಥಿಲಾವಸ್ಥೆಯಲ್ಲಿರುವ ಜಿಲ್ಲಾಸ್ಪತ್ರೆ ಕಟ್ಟಡವನ್ನು ನೆಲಸಮ ಮಾಡಬಹುದಾಗಿದೆ ಎಂದು ಶಾಸಕರು ತಿಳಿಸಿದರು.
ಜಿಲ್ಲಾಸ್ಪತ್ರೆಯ ಹಳೆಯ ಕಟ್ಟಡವು ಸುಸ್ಥಿತಿಯಲ್ಲಿರದ ಕಾರಣ ಸದರಿ ಕಟ್ಟಡವನ್ನು ತೆರವುಗೊಳಿಸಿ 250 ಹಾಸಿಗೆಗಳ ಆಸ್ಪತ್ರೆ ಮರು ನಿರ್ಮಾಣ ಕೈಗೊಳ್ಳಲು ಕೆ.ಎಂ.ಇ.ಆರ್.ಸಿ ಯೋಜನೆಯಡಿ ರೂ.131 ಕೋಟಿಗಳಿಗೆ ಪ್ರಸ್ತಾವನೆಯನ್ನು ಆಯುಕ್ತರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರವರಿಗೆ ಸಲ್ಲಿಸಲಾಗಿದೆ. ತುಮಕೂರು ಸರ್ಕಾರಿ ಜಿಲ್ಲಾಸ್ಪತ್ರೆಯ ಮುಖ್ಯ ಕಟ್ಟಡವನ್ನು ಮರು ನಿರ್ಮಾಣ ಮಾಡುವ ಮೂಲಕ ಬಡತನ ರೇಖೆಗಿಂತ ಕೆಳಗೆ ಇರುವ ರೋಗಿಗಳ ಜೀವ ಉಳಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಬೇಕಿದೆ ಎಂದು ನಗರ ಶಾಸಕರು ಸದನದಲ್ಲಿ ಆಗ್ರಹಿಸಿದರು.
ತುಮಕೂರು ಜಿಲ್ಲಾಸ್ಪತ್ರೆಗೆ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಪೋಸ್ಟ್ ಗ್ರಾಜುಯೇಷನ್ ಮೆಡಿಕಲ್ ಕಾಲೇಜು ಅನುಮೋದನೆ ಮಾಡಲಾಗಿತ್ತು. ಜನರಿಗೆ ಅನುಕೂಲವಾಗುವ ದೃಷ್ಟಿಯಿಂದ ಅನುಮೋದನೆಯಾಗಿರುವ ಪೋಸ್ಟ್ ಗ್ರಾಜುಯೇಷನ್ ಮೆಡಿಕಲ್ ಕಾಲೇಜನ್ನು ಕಾರ್ಯಗತ ಮಾಡಬೇಕೆಂದು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ರವರು ಸದನಕ್ಕೆ ಮನವಿ ಮಾಡಿದರು.