ತುಮಕೂರು ಜಿ.ಪಂ.ಸಿಇಓಯಿಂದ ಪ್ರಜಾಪ್ರಭುತ್ವ ಕಗ್ಗೊಲೆ-ಜನವರಿ 18ರಂದು ಜಿ.ಪಂ. ಮುಂದೆ ಪ್ರತಿಭಟನೆ

ತುಮಕೂರು : ಪ್ರಜೆಗಳಿಂದ, ಪ್ರಜೆಗಳಿಗೋಸ್ಕರ, ಪ್ರಜೆಗಳೆ ಮಾಡಿಕೊಂಡಿರುವುದೇ ಪ್ರಜಾಪ್ರಭುತ್ವ ಎಂಬುದು ದೇಶದ ಎಲ್ಲಾ ಪ್ರಜೆಗಳು ತಿಳಿದುಕೊಂಡು, ಪ್ರಜಾಪ್ರಭುತ್ವದಡಿ ಬದುಕುತ್ತಿದ್ದಾರೆ.

ಈ ಪ್ರಜೆಗಳಿಂದ ಆಯ್ಕೆಯಾದವರು ರೂಪಿಸುವ ಕಾನೂನುಗಳನ್ನು, ಅಧಿಕಾರವನ್ನು ಅಧಿಕಾರಿಗಳು, ನೌಕರರು ಪ್ರಜೆಗಳಿಗೋಸ್ಕರ ಜಾರಿ ಮಾಡಲಷ್ಟೇ ಇರುವಂತಹವರು, ಅವರ ಅಧಿಕಾರ ಪ್ರಜೆಗಳಿಗೋಸ್ಕರವಾಗಿಯೇ ವಿನಃ, ಅಧಿಕಾರಿಗಳೇ ಯಾವುದೇ ಕಾನೂನು, ಅಧಿಕಾರ ಮಂಡನೆ, ಚಲಾವಣೆ ಮಾಡುವಂತಹ ಅಧಿಕಾರ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಇರುವುದಿಲ್ಲ.

ಎಂತಹ ಅಧಿಕಾರಿಯಾದರೂ ಪ್ರಜೆಗಳಿಂದ ಆಯ್ಕೆಯಾದ ಜನಪ್ರತಿನಿಧಿಯಡಿಯಲ್ಲೆ ಪ್ರಜೆಗಳಿಗಾಗಿ ಕಾರ್ಯನಿರ್ವಹಿಸಬೇಕು, ಇದರಿಂದಲೇ ಪ್ರಜಾಪ್ರಭುತ್ವವನ್ನು 4 ಅಂಗಗಳನ್ನಾಗಿ ಮಾಡಲಾಗಿದೆ. ರಾಜ್ಯಾಂಗ, ನ್ಯಾಯಾಂಗ, ಕಾರ್ಯಾಂಗ ಮತ್ತು ಪತ್ರಿಕಾರಂಗ ಎಂದು ವಿಂಗಡಿಸಲಾಗಿದೆ.

ಅಧಿಕಾರಿ ವರ್ಗವು ಪ್ರಜಾಪ್ರಭೂತ್ವದಡಿ ತಮ್ಮ ಕಾರ್ಯವನ್ನಷ್ಠೇ ಜಾರಿಗೆ ತರಬೇಕೆ ವಿನಃ ಅದನ್ನು ಚಲಾಯಿಸುವ ಹಕ್ಕನ್ನು ರಾಜ್ಯಾಂಗ ನೀಡಿಲ್ಲ ಎಂಬುದನ್ನು ಯಾವುದೇ ಅಧಿಕಾರಿ ಒಂದು ಹುದ್ದೆಗೆ ಬರುವಾಗ ಅದನ್ನು ಒಪ್ಪಿಕೊಂಡು ಬಂದಿರುತ್ತಾರೆ.

ಆದರೆ ಇತ್ತೀಚೆಗೆ ಬರುತ್ತಿರುವ ಕೆಲ ಅಧಿಕಾರಿಗಳು ನಾವಿದ್ದರೇನೆ ಅಧಿಕಾರ, ನಾವೇ ಅಧಿಕಾರ ಚಲಾಯಿಸಬೇಕೆಂದುಕೊಂಡು ಸರ್ವಾಧಿಕಾರಿ ಧೋರಣೆಯನ್ನು ಇಟ್ಟುಕೊಂಡು ಬರುತ್ತಿದ್ದಾರೆ, ಹೀಗೆ ಸರ್ವಾಧಿಕಾರವನ್ನು ತಮ್ಮ ಕೊರಳಿಗೆ ನೇತಾಕಿಕೊಂಡು ಬರುವ ಅಧಿಕಾರಿಗಳು, ಪ್ರಜಾಪ್ರತಿನಿಧಿಗಳು, ನನ್ನ ಕೈ ಕೆಳಗಿನ ನೌಕರರು ನನ್ನ ಮೂಗಿನ ನೇರಕ್ಕೆ, ನಾನು ಹೇಳಿದಂತೆ, ನಾನು ಮಾಡಿದ ಕಾನೂನಿಂತೆ ನಡೆಯಬೇಕು, ಕೆಲಸ ಮಾಡಬೇಕು, ನನ್ನ ಮಾತಿಲ್ಲದೆ ಕಡ್ಡಿಯೂ ಸಹ ಅಲುಗಾಡಬಾರದು ಎಂಬ ಧೋರಣೆಯನ್ನು ಹೊಂದಿರುತ್ತಾರೆ.

ಇಂತಹ ಸರ್ವಾಧಿಕಾರಿ ಧೋರಣೆಯನ್ನು ಇಟ್ಟುಕೊಂಡೇ ಬಂದಿರುವ ತುಮಕೂರು ಜಿಲ್ಲಾ ಪಂಚಾಯತಿ ಮುಖ್ಯಕಾರ್ಯ ನಿರ್ವಾಹಣಾಧಿಕಾರಿ ನಾನು ಹೇಳಿದಂತೆ ನನ್ನ ಕೆಳ ಹಂತದ ಅಧಿಕಾರಿಗಳು ಕೇಳಬೇಕು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ನಾನು ಹೇಳಿದ್ದನ್ನೇ ಮಾಡಬೇಕು ಎಂಬ ಉದ್ಧಟತನಕ್ಕೆ ಬಿದ್ದಿರುವುದಲ್ಲದೆ, ಪಿಡಿಓಗಳನ್ನು ಕೆಟ್ಟ ಭಾಷೆಯಲ್ಲಿ ನಿಂದಿಸುವುದಲ್ಲದೆ, ಅಮಾನತ್ತು, ಸೇವೆಯಿಂದ ವಜಾಗೊಳಿಸುವುದಾಗಿ ಬೆದರಿಕೆ ಹಾಕುವುದಲ್ಲದೆ, ಗ್ರಾಮ ಪಂಚಾಯಿತಿ ಸದಸ್ಯರುಗಳು ಗ್ರಾಮ ಸಭೆಗಳಲ್ಲಿ ತೆಗೆದುಕೊಂಡ ನಿರ್ಣಯದಂತೆ ಕೆಲಸ ಮಾಡಬೇಡಿ ಎಂದು ಪರ್ಮಾನು ಹೊರಡಿಸಿ ಒಂದು ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಆಯ್ಕೆಯಾದ ಸ್ಥಳೀಯ ಪ್ರಜಾ ಆಡಳಿತವನ್ನು ಕಸಕ್ಕಿಂತ ಕಡೆಯಾಗಿ ಕಾಣುತ್ತಿದ್ದಾರೆ.

ಗ್ರಾಮ ಪಂಚಾಯಿತಿ ಎಂಬುದೇ ಒಂದು ಸ್ಥಳೀಯ ಸರ್ಕಾರವಾಗಿದ್ದು, ಗ್ರಾಮಸಭೆಯಲ್ಲಿ ತೆಗೆದುಕೊಂಡ ನಿರ್ಣಯವನ್ನು ರಾಷ್ರ್ಡಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಗೂ ಬದಲಾಯಿಸುವ ಅಧಿಕಾರ ಇರುವುದಿಲ್ಲ.
ಯಾಕೆಂದರೆ ಗ್ರಾಮ ಪಂಚಾಯಿತಿಗಳು ತಮ್ಮ ಗ್ರಾಮದ ಅಭಿವೃದ್ಧಿ, ಸಮಸ್ಯೆ, ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ವ್ಯವಸ್ಥೆಯಡಿಯಲ್ಲಿ ಗ್ರಾಮ ಸಭೆ ನಡೆಸಿ ಅಲ್ಲಿಯ ಜನರ, ಗ್ರಾಮಗಳ, ಪಶು-ಪಕ್ಷಿ, ಕಾಡು-ಮೇಡು, ದನ-ಕರುಗಳ ಅಭಿವೃದ್ಧಿಗೆ ತಮ್ಮದೇ ಆದ ಸ್ಥಳೀಯ ಸಂಪನ್ಮೂಲ ಮತ್ತು ಸರ್ಕಾರದಿಂದ ದೊರೆಯುವ ಅನುದಾನದಿಂದ ಗ್ರಾಮಗಳನ್ನು ಗ್ರಾಮ ಸ್ವರಾಜ್ಯಗಳನ್ನಾಗಿ ಮಾಡಲು ಶ್ರಮಿಸುತ್ತಿರುತ್ತವೆ.
ಇದನ್ನು ಮನಗಂಡೇ ಪ್ರಧಾನಿಯಾಗಿದ್ದ ರಾಜೀವ್ ಗಾಂಧಿಯವರು 1972ರ ಗ್ರಾಮ ಪಂಚಾಯಿತಿಗಳಿಗೆ ತಮ್ಮದೆಯಾದ ಕಾಯ್ದೆ ತಂದು ಸ್ಥಳೀಯ ಸರ್ಕಾರಕ್ಕೆ ಅಧಿಕಾರವನ್ನು ಪ್ರಜೆಗಳೇ ನಡೆಸಬೇಕೆಂದು ಭದ್ರತೆ ನೀಡಿದ್ದಾರೆ.

ಇದ್ಯಾವುದನ್ನೂ ತಿಳಿಯದ ತುಮಕೂರು ಜಿಲ್ಲಾ ಪಂಚಾಯತಿ ಸಿಇಓ ಪಿಡಿಓಗಳ ಮುಖಾಂತರ ಸರ್ವಾಧಿಕಾರಿ ಧೋರಣೆಯಿಂದ ನಾನು ಹೇಳಿದಂತೆ ಕೆಲಸ ನಡೆಸಬೇಕೆಂದು ಆದೇಶ ನೀಡುವುದು ಪ್ರಜಾಪ್ರಭುತ್ವದ ಕಗ್ಗೊಲೆ.
ಸಿಇಓ ಅವರು ಇಷ್ಟೇ ಅಲ್ಲದೆ ಜಿಲ್ಲಾ ಪಂಚಾಯಿತಿಯಲ್ಲಿ ಕೆಲಸ ಮಾಡುವವರ ಎಲ್ಲಾ ಅಧಿಕಾರವನ್ನು ತಮ್ಮಲ್ಲೇ ಇಟ್ಟುಕೊಂಡು ಯಾರು ತಿಳಿಯರು ನನ್ನ ಅಧಿಕಾರದ ಮದ ಎನ್ನುವಂತೆ ಮೆರೆಯುತ್ತಿದ್ದಾರೆ.
ಜಿಲ್ಲಾ ಪಂಚಾಯತಿಯ ಡಿಎಸ್-1 ಮತ್ತು ಡಿಎಸ್-2 ಅವರುಗಳು ಆಡಳಿತ, ಅಭಿವೃದ್ಧಿ ಮತ್ತು ಹಣಕಾಸು ವಿಭಾಗಗಳನ್ನು ನೋಡಿಕೊಂಡು ಆಡಳಿತವನ್ನು ವಿಕೇಂದ್ರೀಕರಣದಡಿ ಕೆಲಸ ಮಾಡಬೇಕಾಗಿತ್ತು ಆದರೆ ಆಡಳಿತ, ಅಭಿವೃದ್ಧಿ ಹಣಕಾಸು ವಿಭಾಗಗಳನ್ನೂ ತಾವೇ ಇಟ್ಟುಕೊಂಡು ಯಾವ ಫೈಲ್‍ಗಳು ಪುಟ್‍ಆಫ್ ಆಗದೆ ಹನುಂತನ ಬಾಲದಂತೆ ಸಿಇಓ ಕಛೇರಿಯಲ್ಲಿ ಕೊಳೆಯುತ್ತಾ ಬಿದ್ದಿವೆ.

ನರೇಗಾ ಕಾಮಗಾರಿಯಡಿ ಉದಿಬದು ಒಂದನ್ನು ಹಾಕಿಸಿ ಬಿಟ್ಟರೆ ಸಾಕು ಎಲ್ಲಾ ರೈತರನ್ನು ಅಭಿವೃದ್ಧಿ ಮಾಡಿದಂತೆ ಎಂದುಕೊಂಡಿರುವ ಸಿಇಓ ಸಾಹೇಬರ್ ಗ್ರಾಮ ಪಂಚಾಯತಿಯ ವಾಟರ್‍ಮೆನ್‍ಗೆ 10 ಜನರ ಉದಿಬದಿ, ಬಿಲ್‍ಕಲಟಕ್ಟರ್‍ಗೆ 20 ಉದಿಬದಿ, ಇತರರಿಗೆ 5ರಂತೆ ಹಂಚಿದ್ದು, ಅವರು ಇಡೀ ಊರೆಲ್ಲಾ ಸುತ್ತಿ ಉದಿಬದಿ ಹಾಕಿಸಿಕೊಳ್ಳುತ್ತಿರುವವರ ಹೆಸರು ವಿಳಾಸ ಬರೆದುಕೊಂಡು ಬರಬೇಕು.

ಹಾಗಾದರೆ ಜನರಿಂದ ಆಯ್ಕೆಯಾದ ಗ್ರಾಮಪಂಚಾಯತಿ ಸದಸ್ಯರುಗಳು ಸಿಇಓ ಹೇಳಿದಂತೆ ಕೇಳಬೇಕಾ? ಸಿಇಓಗೆ ಅಧಿಕಾರ ರೂಪಿಸುವ ಅಧಿಕಾರ ಯಾರೂ ನೀಡಿಲ್ಲ. ಈ ಅಧಿಕಾರ ಕೊಟ್ಟವರ್ಯಾರು ಎಂಬುದನ್ನು ಸಿಇಓ ಗ್ರಾಮ ಪಂಚಾಯಿತಿ ಸದಸ್ಯರಿಗೆ ಹೇಳಿಲಿ, ಆ ಕಾನೂನು ಎಲ್ಲಿದೆ ತೋರಿಸಲಿ.

ಗ್ರಾಮ ಪಂಚಾಯಿತಿಯ ಹಿಂದುಳಿದ, ಪರಿಶಿಷ್ಟಜಾತಿ ಮತ್ತು ಪರಿಶಿಷ್ಠವರ್ಗದ ಪಿಡಿಓಗಳಿಗೆ ಮತ್ತು ತಾಲ್ಲೂಕು ಪಂಚಾಯಿತಿ ಇಓಗಳಿಗೆ ಕೆಟ್ಟ ಭಾಷೆಯಲ್ಲಿ ನಿಂದಿಸುವುದಲ್ಲದೆ, ಅಮಾನತ್ತು ಮಾಡಿ ಜೈಲಿಗೆ ಕಳಿಸುವುದಾಗಿ ಬೆದರಿಕೆ ಹಾಕತ್ತಿರುವ ಮಾತುಗಳು ಕೇಳಿ ಬರುತ್ತಿವೆ.

ಸಿಇಓ ಅವರೇ ಸರ್ಕಾರವೋ-ಸಿಇಓ ಅವರು ಸರ್ಕಾರದ ಅಡಿ ಕೆಲಸ ಮಾಡುತ್ತಿದ್ದಾರೋ ಎಂಬುದನ್ನು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಗೃಹಸಚಿವರಾದ ಡಾ.ಜಿ.ಪರಮೇಶ್ವರ್ ಅವರು ಜನ ಪ್ರತಿನಿಧಿಗಳಿಗೆ ತಿಳಿಸಬೇಕಾಗಿದೆ ಎಂದು ಗ್ರಾಮಪಂಚಾಯಿತಿ ಸದಸ್ಯರುಗಳ ಜಿಲ್ಲಾ ಒಕ್ಕೂಟವು ಒತ್ತಾಯಿಸಿದ್ದು, ಸಿಇಓ ಅವರ ಸರ್ವಾಧಿಕಾರಿಧೋರಣೆಯನ್ನು ಖಂಡಿಸಿ ಜನವರಿ 18ರ ಗುರುವಾರ ಜಿಲ್ಲಾ ಪಂಚಾಯಿತಿ ಎದುರು ಧರಣಿ ಸತ್ಯಾಗ್ರಹ ಪ್ರತಿಭಟನೆಯನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದೆ.

Leave a Reply

Your email address will not be published. Required fields are marked *