ತುಮಕೂರು:ಪ್ರವಾದಿ ಮಹಮದ್ ಫೈಗಂಬರರ ಮೇಲೆ ಅವಹೇಳನಕಾರಿ ಹೇಳಿಕೆ ನೀಡಿರುವ ನರಸಿಂಹಾನಂದ ಮಹರಾಜ್ ಅವರ ವಿರುದ್ದ ಶಿಸ್ತು ಕ್ರಮ ಜರುಗಿಸಬೇಕು ಎಂದು ಒತ್ತಾಯಸಿ, ತುಮಕೂರು ನಗರದ ವಿವಿಧ ಮಸೀದಿಗಳ ಮುಖಂಡರು,ತಾಜುದ್ದೀನ್ ಷರೀಫ್ ನೇತೃತ್ವದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಭೇಟಿ ಮಾಡಿದ ತಾಜುದ್ದೀನ್ ಷರೀಫ್,ಇಕ್ಬಾಲ್ ಅಹಮದ್, ನಯಾಜ್, ಉಬೇದುಲ್ಲಾ ಷರೀಫ್,ಜಿಯಾವುಲ್ಲಾ,ಬುರ್ಹಾನ್,ಉಮರ್ ಫಾರೂಕ್,ಮೌಲಾನ ಅನೀಫ್‍ವುಲ್ಲಾ,ತಮೀಜುದ್ದೀನ್, ಅಕ್ರಮವುಲ್ಲಾ ಖಾನ್,ಅಫೀಜ್,ಮೆಹಬೂಬ್ ಪಾಷ ಸೇರಿದಂತೆ ಹಲವು ನಾಯಕರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಳನ್ನು ಭೇಟಿಯಾಗಿ ಯತಿ ನರಸಿಂಹಾನಂದ ಮಹರಾಜ್ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಈ ವೇಳೆ ಮಾತನಾಡಿದ ಮುಖಂಡರಾದ ಇಕ್ಬಾಲ್ ಅಹಮದ್,ಈ ಪ್ರಪಂಚಕ್ಕೆ ಶಾಂತಿಯ ಸಂದೇಶ ಸಾರಿದ ಪ್ರವಾದಿ ಅವರ ಬಗೆ ನರಸಿಂಹಾನಂದ ಮಹರಾಜ್ ನೀಡಿರುವ ಹೇಳಿಕೆ ಖಂಡನೀಯ.ಓರ್ವ ಯತಿಯಾಗಿ ಇನ್ನೊಂದು ಧರ್ಮದವನ್ನು ನೋಯಿಸುವ ರೀತಿ ಹೇಳಿಕೆ ನೀಡುವುದು ಅವರಿಗೆ ಶೋಭೆ ತರುವಂತಹದ್ದಲ್ಲ. ಈ ಹಿಂದೆಯೂ ಹಲವು ಬಾರಿ ಇಂತಹ ಹೇಳಿಕೆಯನ್ನು ಇವರು ನೀಡಿದ್ದು,ಸರಕಾರ ಕೂಡಲೇ ಇವರ ವಿರುದ್ದ ಕಠಿಣ ಕಾನೂನು ಕ್ರಮ ಜರುಗಿಸ ಬೇಕು.ಭಾರತ ಎಂದರೆ ಬಹುತ್ವದ ರಾಷ್ಟ್ರ. ಇಲ್ಲಿ ಎಲ್ಲ ಧರ್ಮಗಳಿಗೂ ಸಮಾನ ಅವಕಾಶವಿದೆ.ಯಾವ ಧರ್ಮದ ವ್ಯಕ್ತಿಯೂ ಇನ್ನೊಂದು ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದು ಕಾನೂನು ಬಾಹಿರ.ಅದು ಹಿಂದುವಾಗಿರಲಿ, ಮುಸ್ಲಿಂನಾಗಿರಲಿ,ಪರಸ್ವರ ನಂಬಿಕೆಯಿಂದ ಬಾಳುವಂತಹ ಶಾಂತಿಯ ವಾತಾವರಣ ನಿರ್ಮಾಣವಾಗಬೇಕಾಗಿದೆ.ಹಾಗಾಗಿ ಒಂದು ಧರ್ಮದ ವಿರುದ್ದ ಹೇಳಿಕೆ ನೀಡುವ ಎಲ್ಲರಿಗೂ ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂಬುದು ನಮ್ಮಗಳ ಆಗ್ರಹವಾಗಿದೆ ಎಂದರು.
ಮುಖಂಡರಾದ ತಾಜುದ್ದೀನ ಷರೀಫ್ ಮಾತನಾಡಿ,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಇಂದು ಜಿಲ್ಲೆಯ ಎಲ್ಲಾ ಮುಸ್ಲಿಂ ಮುಖಂಡರು,ಉಲ್ಮಾಗಳು,ಮೌಲ್ವಿಗಳು,ಬೇರೆ ಬೇರೆ ಸಂಘ ಸಂಸ್ಥೆಗಳ ಮುಖಂಡರುಗಳು ದೂರು ಸಲ್ಲಿಸಿದ್ದಾರೆ. ಯತಿ ನರಸಿಂಹಾನಂದ ಮಹರಾಜ್ ಎಂಬ ವ್ಯಕ್ತಿ ಪದೇ ಪದೇ ಒಂದು ಸಮುದಾಯದ ವಿರುದ್ದ ದ್ವೇಷ ಕಾರುವ ರೀತಿಯ ಹೇಳಿಕೆಗಳನ್ನು ನೀಡುತ್ತಾ,ಮುಸ್ಲಿಂರ ಮನಸ್ಸಿಗೆ ನೋವುಂಟು ಮಾಡುವಂತಹ ಕೆಲಸ ಮಾಡುತ್ತಿದ್ದಾರೆ. ಇವರ ಹೇಳಿಕೆ ಒಂದು ವರ್ಗದ ಯುವಕರನ್ನು ಪ್ರಚೋದನೆಗೆ ಒಳಪಡಿಸಿ,ದೇಶದಲ್ಲಿ ಆಶಾಂತಿ ಉಂಟಾಗಿ, ಕೋಮು ಗಲಭೆಗಳು ಉಂಟು ಮಾಡಲು ಯತ್ನಿಸಿದ್ದಾರೆ.ಇಸ್ಲಾಂ ಶಾಂತಿಯನ್ನು ಪ್ರತಿಪಾದಿಸುವ ಧರ್ಮ.ಹಾಗಾಗಿ ಇಂದು ಜಿಲ್ಲೆಯ ಎಲ್ಲಾ ಉಲ್ಮಾಗಳು ಇಂದು ಎಸ್.ಪಿ.ಅವರಿಗೆ ದೂರು ಸಲ್ಲಿಸಿದ್ದಾರೆ.ಪದೇ ಪದೇ ಇದೇ ರೀತಿಯ ಹೇಳಿಕೆಗಳನ್ನು ನೀಡುತ್ತಿರುವ ನರಸಿಂಹಾನಂದ ಅವರ ವಿರುದ್ದ ದೇಶದ ಎಲ್ಲಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ದೂರು ನೀಡುತ್ತಿದ್ದು,ಅದರ ಭಾಗವಾಗಿಯೇ ಇಂದು ತುಮಕೂರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.ಅವರ ವಿರುದ್ದ ಎಫ್‍ಐಆರ್.ದಾಖಲಿಸಿ,ಇಲ್ಲಿನ ನ್ಯಾಯಾಲಯಕ್ಕೆ ಕರೆತರಬೇಕೆಂಬುದು ಇಡೀ ಮುಸ್ಲಿಂ ಸಮುದಾಯದ ಬೇಡಿಕೆಯಾಗಿದೆ ಎಂದರು.