ತುಮಕೂರು: ಭಾರತ ಸರ್ಕಾರದ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ನಗರದ ಫ್ಯಾಷನ್ ಡಿಸೈನಿಂಗ್ ಪದವಿಧರೆ ಭಾವನ ರೆಡ್ಡಿ ಅವರಿಗೆ ಉತ್ತರ ಪ್ರದೇಶ ಸರ್ಕಾರ ಬೆಸ್ಟ್ ರೀಸೈಕಲ್ಡ್ ಮೆಟೀರಿಯಲ್ಸ್ ಯೂಸ್ ಅವಾರ್ಡ್ ಎಂಬ ರಾಷ್ಟ್ರ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಿದೆ.
ಫ್ಯಾಷನ್ ಡಿಸೈನಿಂಗ್ ಸ್ನಾತಕೋತ್ತರ ಪದವಿ ಪಡೆದಿರುವ ಭಾವನ ರೆಡ್ಡಿ ಅವರು ನಿರುಪಯೋಗಿ ಪದಾರ್ಥಗಳನ್ನು ಬಳಸಿಕೊಂಡು ಸಿದ್ಧಪಡಿಸಿದ ಪದಾರ್ಥಕ್ಕೆ ಉತ್ತರ ಪ್ರದೇಶದ ಮಾನವಸಂಪನ್ಮೂಲ ಮತ್ತು ಕೈಗಾರಿಕಾ ಇಲಾಖೆಯು ಹೊಸ ಉದ್ದಿಮೆದಾರರನ್ನು ಪ್ರೋತ್ಸಾಹಿಸುವ ಈ ಪ್ರಶಸ್ತಿ ಭಾವನಾ ರೆಡ್ಡಿಗೆ ದೊರಕಿದೆ. ಕರ್ನಾಟಕದಿಂದ ಇವರೊಬ್ಬರಿಗೆ ಈ ಪ್ರಶಸ್ತಿಯ ಗೌರವ ಲಭಿಸಿದೆ. ಇತ್ತೀಚೆಗೆ ಉತ್ತರ ಪ್ರದೇಶ ರಾಜಧಾನಿ ಲಕ್ನೋದಲ್ಲಿ ನಡೆದ ಸಮಾರಂಭದಲ್ಲಿ ಅಲ್ಲಿನ ರಾಜ್ಯ ಸರ್ಕಾರದ ಕೃಷಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಸ್ಮಿತಾ ಸಿಂಗ್ ಅವರು ಭಾವನಾ ರೆಡ್ಡಿಯವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ನಗರದ ಗುತ್ತಿಗೆದಾರರಾದ ಕ್ಯಾತ್ಸಂದ್ರ ನಿವಾಸಿ ರಮಣ ರೆಡ್ಡಿ ಹಾಗು ಜಯಂತಿ ರೆಡ್ಡಿ ಅವರ ಪುತ್ರಿ ಭಾವನಾ ರೆಡ್ಡಿ ಈ ಸಾಧನೆ ಮಾಡಿದ್ದಾರೆ. ಇವರ ಬೆಳವಣಿಗೆಗೆ ಪ್ರೋತ್ಸಾಹ ನೀಡುತ್ತಾ ಬಂದಿರುವ ಮಾಜಿ ಸಚಿವ, ಶಾಸಕ ಕೆ.ಎನ್.ರಾಜಣ್ಣ ಅವರು ಭಾವನ ರೆಡ್ಡಿ ಅವರನ್ನು ಅಭಿನಂದಿಸಿದ್ದಾರೆ.