ಹಿಂದುಳಿದ ವರ್ಗದವರ ಆತ್ಮ ಗೌರವ ಹೆಚ್ಚಿಸಿದ ದೇವರಾಜು ಅರಸು: ಜ್ಯೋತಿ ಗಣೇಶ್

ತುಮಕೂರು : ಹಲವಾರು ವರ್ಷಗಳಿಂದ ಸಮಾಜದ ಮುನ್ನೆಲೆಗೆ ಬಾರದೆ ತುಳಿತಕ್ಕೆ ಒಳಗಾಗಿದ್ದ ಹಿಂದುಳಿದ ವರ್ಗದ ಸಮುದಾಯಗಳ ಆತ್ಮ ಗೌರವ ಹೆಚ್ಚುವಂತೆ ಮಾಡಿದ್ದು ದೇವರಾಜ ಅರಸು ಎಂದು ನಗರ ಶಾಸಕ ಜಿ.ಬಿ. ಜ್ಯೋತಿ ಗಣೇಶ್ ಅಭಿಪ್ರಾಯಪಟ್ಟರು.

ನಗರ ಕೇಂದ್ರ ಗ್ರಂಥಾಲಯ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ್ದ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ 109ನೇ ಜನ್ಮ ದಿನಾಚರಣೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಹಿಂದುಳಿದ ವರ್ಗಗಳ ಪರಿವರ್ತನೆಯ ಹರಿಕಾರ ಎಂದೆ ಹೆಸರು ಪಡೆದಿದ್ದ ಅರಸು ಅವರ ರಾಜಕೀಯ ಜೀವನ ಸ್ಫೂರ್ತಿದಾಯಕವಾದದ್ದು. ಇಂತಹ ಮಹಾನ್ ವ್ಯಕ್ತಿಗಳನ್ನು ಒಂದು ವರ್ಗಕ್ಕೆ ಸೀಮಿತಗೊಳಿಸದೆ, ಅವರ ಸಾಧನೆಗಳ ಬಗ್ಗೆ ಪ್ರತಿಯೊಬ್ಬರಿಗು ತಿಳಿಯುವಂತೆ ಮಾಡಬೇಕು ಎಂದು ಹೇಳಿದರು.

ಜಿಲ್ಲೆಗೆ ಹೇಮಾವತಿ ನೀರು ತರಲು 1960ರಿಂದ ಹಲವು ಪ್ರಯತ್ನಗಳು ನಡೆದರೂ ಸಹ ಅರಸು ಅವರು ಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿ ತುಮಕೂರಿನ ಬಗ್ಗೆ ಹೆಚ್ಚು ಆಸಕ್ತಿವಹಿಸಿ ಜಿಲ್ಲೆಗೆ ಹೇಮಾವತಿ ನೀರು ಹರಿಯುವಂತೆ ಮಾಡಿದ ಅವರನ್ನು ನಾವೆಲ್ಲರು ಸ್ಮರಿಸಬೇಕು ಎಂದರು.

ನಂತರ ಮಾತನಾಡಿದ ಉಪವಿಭಾಗಾಧಿಕಾರಿ ಗೌರವ್ ಕುಮಾರ್ ಶೆಟ್ಟಿ, ಹಿಂದುಳಿದ ವರ್ಗಗಳಿಗೆ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ನ್ಯಾಯವನ್ನು ಒದಗಿಸಿಕೊಟ್ಟವರು ದೇವರಾಜು ಅರಸು ಅವರು. ಕರ್ನಾಟಕದಲ್ಲಿ ಭೂ-ಸುಧಾರಣೆ ಕಾಯ್ದೆಗಳು 1950 ರಿಂದ ಜಾರಿಗೆ ತಂದರೂ ಸಹ ಅವುಗಳನ್ನು ವ್ಯವಸ್ಥಿತವಾಗಿ ಅನುಷ್ಠಾನಗೊಳಿಸಿದ ಕೀರ್ತಿ ಅರಸು ಅವರಿಗೆ ಸಲ್ಲುತ್ತದೆ. ಉಳುವವನೇ ಭೂಮಿಯ ಒಡೆಯ ಕಾಯ್ದೆಯನ್ನು ಜಾರಿಗೆ ತರುವ ಮೂಲಕ ಲಕ್ಷಾಂತರ ಹಿಂದುಳಿದ, ಬಡವ, ದಲಿತ ಸಮುದಾಯದ ಜನರ ಜೀವನವನ್ನು ಕಟ್ಟಿಕೊಟ್ಟಿದ್ದಾರೆ. ಇಂತಹ ಮೇರು ವ್ಯಕ್ತಿತ್ವದ ಅರಸು ಅವರನ್ನು ಒಂದು ದಿನ ನೆನೆದು ಸುಮ್ಮನಾಗದೆ ಸದಾ ನೆನೆಯಬೇಕು ಎಂದರು.

ದೇವರಾಜು ಅರಸು ಅವರ ಕುರಿತು ವಿಶೇಷ ಉಪನ್ಯಾಸ ನೀಡಿದ ತುಮಕೂರು ವಿಶ್ವ ವಿದ್ಯಾನಿಲಯ ಕಲಾ ಕಾಲೇಜಿನ ಪ್ರಾಂಶುಪಾಲ ಹೊನ್ನಗೊಂಡನಹಳ್ಳಿ ಕರಿಯಣ್ಣ ಅವರು, ಕರ್ನಾಟಕದ ಮೊದಲ ದಲಿತ ಮುಖ್ಯಮಂತ್ರಿಯಾದ ದೇವರಾಜು ಅರಸು ಅವರು ರಾಷ್ಟ್ರಕವಿ ಕುವೆಂಪು ಅವರ ಬರವಣಿಗೆಗಳಿಂದ ಪ್ರೇರೇಪಿತರಾಗಿ ಅರಣ್ಯ ಸಂರಕ್ಷಣೆ ಕಾಯ್ದೆ, ಋಣ ಪರಿಹಾರ ಕಾಯ್ದೆ, ಭೂ-ಸುಧಾರಣೆ ಕಾಯ್ದೆ, ವೃದ್ಧಾಪ್ಯ ವೇತನ ಸೇರಿದಂತೆ ಹಲವು ಮಹತ್ವದ ಯೋಜನೆಗಳನ್ನು ಜಾರಿಗೆ ತರುವ ಮೂಲಕ ದೂರದೃಷ್ಠಿ ನಾಯಕ ಎನಿಸಿಕೊಂಡರು. ಹಿಂದುಳಿದ ವರ್ಗದವರು ಆರ್ಥಿಕ, ಸಾಮಾಜಿಕ, ರಾಜಕೀಯ, ಶೈಕ್ಷಣಿಕವಾಗಿ ಪ್ರಗತಿ ಹೊಂದಲು ಶ್ರಮಿಸಿದ ಅರಸು ಅವರು ತಾವು ಮಾಡಿದ ಕೆಲಸಗಳಿಂದ ನಮ್ಮ ಮಧ್ಯೆ ಸದಾ ಜೀವಂತವಾಗಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 5 ಜನ ಸಮುದಾಯ ಮುಖಂಡರಾದ ಹೆಬ್ಬೂರು ಶ್ರೀನಿವಾಸ್, ಲಕ್ಷ್ಮೀಕಾಂತರಾಜು, ಗುರು ಪ್ರಸಾದ್, ಅಶ್ವಥ್ ನಾರಾಯಣ್, ಸಿ.ಎಸ್. ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಎಂ. ಸಿದ್ದೇಶ್, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಸೋನಿಯಾ ವೆರ್ಣೇಕರ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಶಾರದಮ್ಮ, ಹಾಲಸಿದ್ದಪ್ಪ ಪೂಜೇರಿ, ತುಮಕೂರು ಡಿಡಿಪಿಐ ಕೆ. ಮಂಜುನಾಥ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಎಂ. ಕೃಷ್ಣಪ್ಪ, ಕಾರ್ಮಿಕ ಇಲಾಖೆ ಅಧಿಕಾರಿ ತೇಜಾವತಿ, ರೇμÉ್ಮ ಇಲಾಖೆ ಉಪನಿರ್ದೇಶಕ ಲಕ್ಷ್ಮೀ ನರಸಿಂಹಯ್ಯ ಸೇರಿದಂತೆ ಸಮುದಾಯದ ಮುಖಂಡರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *