ಕರ್ನಾಟಕ ಸರ್ಕಾರವು ಅಭಿವೃದ್ಧಿ ಮತ್ತು ಪರಿಸರ ಪತ್ರಿಕೋದ್ಯಮ ಕ್ಷೇತ್ರಗಳಲ್ಲಿ ವಿಶಿಷ್ಠ ಸಾಧನೆ ಮಾಡಿದ ಪತ್ರಕರ್ತರಿಗೆ ನೀಡುವ 2017 ರಿಂದ 2023ರ ಕ್ಯಾಲೆಂಡರ್ ವರ್ಷಗಳ ಅಭಿವೃದ್ದಿ ಮತ್ತು ಪರಿಸರ ಪತ್ರಿಕೋದ್ಯಮ ಪ್ರಶಸ್ತಿಗಳನ್ನು ಪ್ರಕಟಿಸಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಹೇಮಂತ್ ಎಂ ನಿಂಬಾಳ್ಕರ್ ತಿಳಿಸಿದ್ದಾರೆ.
ಕೋವಿಡ್ ಹಾಗೂ ಇತರೆ ಕಾರಣಗಳಿಂದ ವಿಳಂಬವಾಗಿದ್ದ 2017ರಿಂದ 2023ರ ವರೆಗಿನ ಏಳು ವರ್ಷಗಳ ಅವಧಿಯ ಪ್ರಶಸ್ತಿಗಳಿಗೆ ಅರ್ಹ ಪತ್ರಕರ್ತರನ್ನು ಹಿರಿಯ ಪತ್ರಕರ್ತರಾದ ಸನತ್ ಕುಮಾರ್ ಬೆಳಗಲಿ ಹಾಗೂ ಕೆ.ಶಿವಕುಮಾರ್ ಅವರಿದ್ದ ಸಮಿತಿಯು ಆಯ್ಕೆ ಮಾಡಿದೆ. ಪ್ರಶಸ್ತಿಯು ತಲಾ ಒಂದು ಲಕ್ಷ ರೂಪಾಯಿ ನಗದು, ಸ್ಮರಣಿಕೆ, ಅಭಿನಂದನಾ ಪತ್ರ ಒಳಗೊಂಡಿರುತ್ತದೆ ಎಂದು ಹೇಳಿದ್ದಾರೆ.
ಮಲ್ಲಿಕಾರ್ಜುನ ಹೊಸಪಾಳ್ಯ (2022) : ಮಲ್ಲಿಕಾರ್ಜುನ ಹೊಸಪಾಳ್ಯ ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಹೊಸಪಾಳ್ಯ ಗ್ರಾಮದವರು. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿಯಲ್ಲಿ ಮೊದಲ ರಾಂಕ್ ನೊಂದಿಗೆ ಎರಡು ಚಿನ್ನದ ಪದಕ ಮತ್ತು ಪದವಿಯಲ್ಲಿ ಕನ್ನಡ ವಿಷಯದಲ್ಲಿ ಹೆಚ್ಚಿನ ಅಂಕಗಳಿಕೆಗಾಗಿ ಚಿನ್ನದ ಪದಕ ಪಡೆದಿದ್ದಾರೆ. ದೇಸಿ ತಳಿ, ನಾಟಿ ಬೀಜಗಳ ಸಂರಕ್ಷಣೆ ಕುರಿತು ವಿಶೇಷ ಆಸಕ್ತಿ, ಜಲಸಂರಕ್ಷಣೆ, ಸುಸ್ಥಿರ ಕೃಷಿ, ಸಿರಿಧಾನ್ಯ ಚಟುವಟಿಕೆಗಳಿಗೆ ಬೆಂಬಲ. ಜಲಜಾಗೃತಿಗಾಗಿ ಕಾರ್ಯಕ್ರಮ ಸಂಘಟನೆ. ಪಾರಂಪರಿಕ ಜಲನಿಧಿಗಳಾದ ತಲಪರಿಗೆ ಬಗ್ಗೆ ಅಧ್ಯಯನ, ಪುನರುಜ್ಜೀವನಕ್ಕಾಗಿ ಶ್ರಮಿಸುತ್ತಿದ್ದಾರೆ. ಕಳೆದ ಎರಡು ದಶಕಗಳಿಂದ ವಿವಿಧ ಪತ್ರಿಕೆಗಳಲ್ಲಿ ಹವ್ಯಾಸಿ ಬರಹಗಾರರಾಗಿ ಕೃಷಿ ವಿಚಾರಗಳ ಬರವಣಿಗೆ ಮಾಡುತ್ತಿದ್ದಾರೆ. ನೆಟ್ಟಿರಾಗಿ, ತಲಪರಿಗೆ, ನಶಿಸುತ್ತಿರುವ ನೀರಿನ ಜ್ಞಾನ, ಕರ್ನಾಟಕದ ಕೃಷಿ ಆಚರಣೆಗಳು ಸೇರಿ ಒಟ್ಟು 14 ಕೃತಿಗಳು ಪ್ರಕಟವಾಗಿವೆ.
ವಿಜಯಲಕ್ಷ್ಮಿ ಶಿಬರೂರು (2017) : ಮೂಲತ: ದಕ್ಷಿಣ ಕನ್ನಡ ಜಿಲ್ಲೆಯ ಶಿಬರೂರು ಗ್ರಾಮದವರಾದ ವಿಜಯಲಕ್ಷ್ಮಿ ಅವರು, ಕಳೆದ ಸುಮಾರು 25 ವರ್ಷಗಳಿಂದ ನಾಡಿನ ವಿವಿಧ ಮಾಧ್ಯಮಗಳಿಗೆ ಸೇವೆ ಸಲ್ಲಿಸುತ್ತಿದ್ದಾರೆ. ಅರಣ್ಯ ಸಂರಕ್ಷಣೆ, ಅಪಾಯಕಾರಿ ಆಹಾರ ಪದಾರ್ಥಗಳು, ಪ್ಲಾಸ್ಟಿಕ್ ಅಪಾಯಗಳು ಮತ್ತಿತರ ಜಾಗೃತಿ ಮೂಡಿಸುವ ವರದಿಗಳನ್ನು ಎಲೆಕ್ಟ್ರಾನಿಕ್ ಹಾಗೂ ಸಾಮಾಜಿಕ ಮಾಧ್ಯಮಗಳ ಮೂಲಕ ಪರಿಣಾಮಕಾರಿಯಾಗಿ ಬಿತ್ತರಿಸಿದ್ದಾರೆ. ಪರಿಸರ ಜಾಗೃತಿಯ ವರದಿಗಳನ್ನು ಪ್ರಕಟಿಸಿದ್ದಾರೆ.

ಬಿ.ಎಂ.ಟಿ ರಾಜೀವ್ : (2018): ಮೂಲತ: ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಬೆನವಾರ ಗ್ರಾಮದವರು, ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಭಾರತೀಯ ಅರಣ್ಯ ಸೇವೆಯಿಂದ 2006ರಲ್ಲಿ ನಿವೃತ್ತಿ ಹೊಂದಿದ್ದಾರೆ. 1985 ರಿಂದ ವನ್ಯಜೀವಿಗಳು, ಅರಣ್ಯ ಮತ್ತು ಪರಿಸರ ಸಂರಕ್ಷಣೆ ಕುರಿತು ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ ಲೇಖನ, ಪ್ರಬಂಧಗಳನ್ನು ಬರೆಯುತ್ತಿದ್ದಾರೆ. ಅರಣ್ಯ/ವನ್ಯಜೀವಿ/ಪರಿಸರದಿಂದ ಮನುಕುಲಕ್ಕಿರುವ ಅನುಕೂಲಗಳು, ಅವಶ್ಯಕತೆಗಳ ಬಗ್ಗೆ ಲೇಖನಗಳನ್ನು ಬರೆದಿದ್ದಾರೆ.ಭಾರತೀಯ ವನ್ಯಪ್ರಾಣಿಗಳ ಕೈಪಿಡಿ, ಪರಿಸರ ಮಾಲಿನ್ಯ ಮತ್ತು ವಾಯುಗುಣ ಬದಲಾವಣೆ ಕುರಿತು ಒಟ್ಟು 6 ಪುಸ್ತಕಗಳನ್ನು ಪ್ರಕಟಿಸಿದ್ದಾರೆ.

ಇವರಲ್ಲದೆ ವಿನೋದ್ ಕುಮಾರ್ ನಾಯ್ಕ್, ಮಾಲತೇಶ್ ಅಂಗೂರು ಹಾವೇರಿ, ಸುಧೀರ್ ಶೆಟ್ಟಿ, ಆರ್.ಮಂಜುನಾಥ್, ಚಿ.ಜ.ರಾಜೀವ್, ದೇವಯ್ಯ ಗುತ್ತೇದಾರ್, ಗಿರೀಶ್ ಲಿಂಗಣ್ಣ, ಯೋಗೇಶ್ ಎಂ.ಎನ್. ನೌಶಾದ್ ಬಿಜಾಪುರ, ಜಿ.ಟಿ.ಸತೀಶ್, ಗಿರೀಶ್ ಬಾಬು, ಪ್ರಶಸ್ತಿಗೆ ಭಾಜನರಾಗಿದ್ದಾರೆ.