ತುಮಕೂರು : ಗುಬ್ಬಿ ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸಲು 16.73 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿದೆ ಎಂದು ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ರಾಜ್ಯಖಾತೆ ಸಚಿವ ವಿ. ಸೋಮಣ್ಣ ತಿಳಿಸಿದರು.
ಗುಬ್ಬಿ ರೈಲ್ವೇ ನಿಲ್ದಾಣಕ್ಕೆ ಶನಿವಾರ ಭೇಟಿ ನೀಡಿ ಪರಿಶೀಲಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಗುಬ್ಬಿ ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸಲು ಈಗಾಗಲೇ ನೀಲಿ ನಕ್ಷೆ ಸಿದ್ದಪಡಿಸಲಾಗಿದೆ. ರೈಲ್ವೆ ನಿಲ್ದಾಣದ ಕಾಮಗಾರಿ ಪೂರ್ಣಗೊಂಡ ಬಳಿಕ ನಿಲ್ದಾಣಕ್ಕೆ ಶ್ರೀ ಚನ್ನಬಸವೇಶ್ವರ ಸ್ವಾಮಿಗಳ ಹೆಸರನ್ನು ನಾಮಕರಣ ಮಾಡಲಾಗುವುದು ಎಂದು ಹೇಳಿದರು.
ಇದಕ್ಕೂ ಮುನ್ನ ಚನ್ನಸೆಟ್ಟಿಹಳ್ಳಿ ಬಳಿ ಶಿವಮೊಗ್ಗ-ತುಮಕೂರು ಹೆದ್ದಾರಿಗೆ ಗುಬ್ಬಿಯ ಬಳಿ ನಿರ್ಮಿಸವಾಗುತ್ತಿರುವ ವರ್ತುಲ ರಸ್ತೆ ಕಾಮಗಾರಿ ರೈತರಿಗೆ ಸಮರ್ಪಕವಾಗಿ ಪರಿಹಾರ ವಿತರಣೆ ಮಾಡದೆ ಇದ್ದ ಕಾರಣ ಅಪೂರ್ಣವಾಗಿತ್ತು. ಖುದ್ದು ರೈತರ ಮನೆಯ ಬಳಿಯೆ ತೆರಳಿದ ಸಚಿವ ಸೋಮಣ್ಣ ರೈತರ ಸಮಸ್ಯೆಗಳನ್ನು ಅಲಿಸಿ ರೈತರಿಗೆ ಕೊಡಬೇಕಾದ 2 ಕೋಟಿ 94 ಲಕ್ಷ ಹಣವನ್ನು ಶೀಘ್ರವೇ ಪರಿಹಾರ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮನೆಯ ಬಳಿ ಇರುವ ಉದ್ದಾನೇಶ್ವರ ದೇವಸ್ಥಾನವನ್ನು ಸ್ಥಳಾಂತರ ಮಾಡಿ ದೇವಸ್ಥಾನ ಕಟ್ಟಿಸಿಕೊಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿ ರೈತರ ಮನವೊಲಿಸಿದರು.
ನಿಟ್ಟೂರು ಹಾಗೂ ಕೆ.ಬಿ. ಕ್ರಾಸ್‍ನಲ್ಲಿ ಬೆಂಬಲಿಗರ ಜೊತೆ ಮಾತುಕತೆ ನಡೆಸಿದರು. ತಿಪಟೂರಿನ ಕೌಸ್ತುಬಾ ಹೋಟೆಲ್‍ನಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿದರು.
ಈ ಸಂದರ್ಭದಲ್ಲಿ ಮಾಜಿ ಸಂಸದ ಜಿ. ಎಸ್. ಬಸವರಾಜು, ರೈಲ್ವೆ ಇಲಾಖೆ ಅಧಿಕಾರಿಗಳು, ಗುಬ್ಬಿ ತಹಶೀಲ್ದರ್ ಆರತಿ, ಮುಖಂಡರು ಸೇರಿದಂತೆ ಮತ್ತಿತರರು ಇದ್ದರು.