ಶಿರಾ-ಭೈರೇನಹಳ್ಳಿ ರಸ್ತೆ ಅಭಿವೃದ್ಧಿಗೆ ಸಾವಿರ ಕೋಟಿ-ಕೇಂದ್ರ ಸಚಿವ ಸೋಮಣ್ಣ

ತುಮಕೂರು: ಶಿರಾ, ಮಧುಗಿರಿ, ಭೈರೇನಹಳ್ಳಿ ವಿಭಾಗದ 52 ಕಿ.ಮೀ ಚತುಷ್ಪಥ ರಸ್ತೆ ಅಭಿವೃದ್ಧಿ ಕಾಮಗಾರಿ ಜಾರಿ ಮಾಡಿ 1000 ಕೋಟಿ ರೂ. ಮೀಸಲಿಟ್ಟ ಬಗ್ಗೆ ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಕೇಂದ್ರ ಜಲಶಕ್ತಿ ಹಾಗೂ ರೈಲ್ವೇ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅಭಿನಂದಿಸಿದ್ದಾರೆ.

ಮಂಗಳವಾರ ದೆಹಲಿಯಲ್ಲಿ ಸಚಿವ ವಿ.ಸೋಮಣ್ಣ ಅವರು ಸಚಿವ ನಿತಿನ್ ಗಡ್ಕರಿಯವರನ್ನು ಭೇಟಿ ಮಾಡಿ ಧನ್ಯವಾದ ತಿಳಿಸಿದರು. ತುಮಕೂರಿನ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಚಿವ ಗಡ್ಕರಿಯವರೊಂದಿಗೆ ಸುದೀರ್ಘವಾಗಿ ಚರ್ಚೆ ನಡೆಸಿದರು. ಈ ರಸ್ತೆ ಅಭಿವೃದ್ಧಿ ಕಾಮಗಾರಿ ಜಾರಿಯಾಗುವಲ್ಲಿ ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಅವರ ಪ್ರಯತ್ನಕ್ಕೂ ಸಚಿವ ಸೋಮಣ್ಣ ಅಭಿನಂದನೆ ಸಲ್ಲಿಸಿದ್ದಾರೆ.

ತುಮಕೂರು ಜಿಲ್ಲೆ ಕರ್ನಾಟಕದಲ್ಲಿ ಪ್ರಮುಖ ಜಿಲ್ಲೆಯಾಗಿ ಅಭಿವೃದ್ಧಿ ಪಥದಲ್ಲಿ ಸಾಗುವಲ್ಲಿ ರಸ್ತೆ ಅಭಿವೃದ್ಧಿಯ ಪ್ರಾಮುಖ್ಯತೆ ಬಗ್ಗೆ ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ಗಡ್ಕರಿಯವರೊಂದಿಗೆ ಚರ್ಚೆ ಮಾಡಿದರು.

ತುಮಕೂರು-ಶಿವಮೊಗ್ಗ ಹೆದ್ದಾರಿ 206ರಲ್ಲಿ ತುಮಕೂರು ನಗರ ಹಾಗೂ ಮಲ್ಲಸಂದ್ರದಲ್ಲಿ ಬೈಪಾಸ್ ನಿರ್ಮಾಣದ ಅಗತ್ಯತೆ ಬಗ್ಗೆ ಕೇಂದ್ರ ಭೂಸಾರಿಗೆ ಸಚಿವರ ಜೊತೆ ಚರ್ಚೆ ನಡೆಸಿದ ಸಚಿವ ವಿ.ಸೋಮಣ್ಣ ಅವರು ಈ ಬೈಪಾಸ್ ನಿರ್ಮಾಣ ಮಾಡುವುದರಿಂದ ಸಾರಿಗೆ ದಟ್ಟಣೆ ಹಾಗೂ ಅಪಘಾತಗಳು ಕಡಿಮೆಯಾಗುವ ಬಗ್ಗೆ ವಿವರಿಸಿದರು.

ರಾಷ್ಟ್ರೀಯ ಹೆದ್ದಾರಿ 206ರ ತುಮಕೂರು ನಗರ 12.30 ಕಿ.ಮೀ, ಗುಬ್ಬಿ ಪಟ್ಟಣ 8.5 ಕಿ.ಮೀ ಇಲ್ಲಿ ಸಾರಿಗೆ ದಟ್ಟಣೆ ತಗ್ಗಿಸುವ ಪ್ರಸ್ತಾವನೆಯನ್ನು ಸಚಿವ ನಿತಿನ್ ಗಡ್ಕರಿಯವರ ಮುಂದಿಟ್ಟು ಇದಕ್ಕೂ ಅನುಮೋದನೆ ನೀಡುವಂತೆ ಸಚಿವ ಸೋಮಣ್ಣ ಮನವಿ ಮಾಡಿದರು. ಮನವಿಗೆ ಸ್ಪಂದಿಸಿದ ಭೂಸಾರಿಗೆ ಸಚಿವರು ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

Leave a Reply

Your email address will not be published. Required fields are marked *