ತುಮಕೂರು:ಜಿಲ್ಲೆಗೆ ಹಂಚಿಕೆಯಾಗಿರುವ ನೀರನ್ನು ಎಕ್ಸ್ ಪ್ರೆಸ್ ಕೆನಾಲ್ ಮೂಲಕ ರಾಮನಗರ ಜಿಲ್ಲೆಯ ಮಾಗಡಿ ಮತ್ತಿತರ ಕಡೆಗೆ ತೆಗೆದುಕೊಂಡು ಹೋಗುವ ಕಾಮಗಾರಿಯನ್ನು ಕೂಡಲೇ ನಿಲ್ಲಿಸಬೇಕು ಹಾಗೂ ಸರಕಾರ ಮದ್ಯ ಪ್ರವೇಶಿಸಿ ಎರಡು ಜಿಲ್ಲೆಯ ಜನರ ನಡುವೆ ಉಂಟಾಗಿರುವ ಗೊಂದಲ ಬಗೆಹರಿಸಬೇಕು ಎಂದು ಒತ್ತಾಯಿಸಿ ಮೇ.30ರಂದು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಮನೆ ಮುಂದೆ ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ತುಮಕೂರು ಜಿಲ್ಲೆಯ ಕುಣಿಗಲ್‍ಗೆ ಹಂಚಿಕೆಯಾಗಿರುವ ನೀರು ತೆಗೆದುಕೊಂಡು ಹೋಗಲು ಈಗಾಗಲೇ ತಯಾರಾಗಿದ್ದ ನಾಲೆಯ ಆಧುನೀಕರಣ ಕಾಮಗಾರಿಯೂ ಪೂರ್ಣಗೊಂಡಿದೆ.ಅಲ್ಲದೆ ಎತ್ತಿನ ಹೊಳೆ ಯೋಜನೆಯಿಂದ ಕೊರಟಗೆರೆ ತಾಲೂಕು ಎಲೆರಾಂಪುರದಿಂದ 1.8 ಟಿ.ಎಂ.ಸಿ ನೀರು ತೆಗೆದುಕೊಂಡು ಹೋಗಲು ಪಂಪ್ ಹೌಸ್ ಸಹ ನಿರ್ಮಾಣಗೊಂಡಿದೆ.ಹೀಗಿದ್ದು,ಸಾವಿರಾರು ಕೋಟಿ ರೂ ದುಂದುವೆಚ್ಚ ಮಾಡಿ,ಪೈಫಲೈನ್ ಮೂಲಕ ನೀರು ತೆಗೆದು ಕೊಂಡು ಹೋಗುವ ಅಗತ್ಯವಿದೆ ಎಂದು ಪ್ರಶ್ನಿಸಿದರು.
ಹೇಮಾವತಿ ಎಕ್ಸ್ ಪ್ರೆಸ್ ಕೆನಾಲ್‍ನ ಮೂಲ ನಕ್ಷೆಯನ್ನು ಮುಚ್ಚಿಟ್ಟು, ಪ್ರಭಾವಿ ಮಂತ್ರಿಗಳಿಗೆ ಹೆದರಿ ನೀರಾವರಿ ಇಲಾಖೆ ಹಾಲಿ ಇರುವ ನಾಲೆಯ ಮಟ್ಟಕ್ಕಿಂತ 15 ಅಡಿ ಆಳದಲ್ಲಿ ಜಾಕ್‍ವೆಲ್ ನಿರ್ಮಿಸಲು ಹೊರಟಿದೆ.ಅತಿ ಆಳದಲ್ಲಿರುವ ಚಾಕ್‍ವೆಲ್‍ನಿಂದ ಹೆಚ್ಚು ನೀರು ಹರಿಯುವ ಪರಿಣಾಮ, ಹೇಮಾವತಿ ನಾಲೆಯ 70 ಕಿ.ಮಿ.ಗಿಂತ ಮುಂದೆ ಇರುವ ಊರುಗಳಿಗೆ ನೀರಿನ ಕೊರತೆ ಯಾಗಲಿದೆ.ಹೇಮಾವತಿ ನೀರನ್ನೇ ನಂಬಿ ನಿರ್ಮಿಸಿರುವ ಸುಮಾರು 28 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಸಹ ಉಪಯೋಗಕ್ಕೆ ಬಾರದಂತಾಗುತ್ತವೆ ಎಂಬ ಆಂತಕ ಜಿಲ್ಲೆಯ ಜನರನ್ನು ಕಾಡುತ್ತಿದೆ. ಹಾಗಾಗಿ ಹೇಮಾವತಿ ನಾಲಾ ವಲಯದ ಅಧಿಕಾರಿಗಳು ಹಾಗೂ ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳು ಮಧ್ಯೆ ಪ್ರವೇಶ ಮಾಡಿ, ರಾಮನಗರ, ತುಮಕೂರು ಎರಡು ಜಿಲ್ಲೆಯ ಜನರಿಗೆ ವಾಸ್ತವವನ್ನು ತಿಳಿಸಬೇಕೆಂಬುದು ನಮ್ಮ ಆಗ್ರಹವಾಗಿದೆ ಎಂದು ಸೊಗಡು ಶಿವಣ್ಣ ನುಡಿದರು.
ಕಳೆದ ಒಂದು ತಿಂಗಳಿನಿಂದ ಹೇಮಾವತಿ ಎಕ್ಸ್ ಪ್ರೆಸ್ ಕೆನಾಲ್ ವಿರುದ್ದ ಹಂತ ಹಂತದ ಪ್ರತಿಭಟನೆ ನಡೆಯುತ್ತಲೇ ಇದೆ. ಹೆಬ್ಬೂರು,ಸಿ.ಎಸ್.ಪುರ ಭಾಗದಲ್ಲಿ ತೆಗೆದಿದ್ದ ನಾಲೆಯನ್ನು ಹೋರಾಟಗಾರರು ಮುಚ್ಚಿ,ಪೈಪ್ ತುಂಬಿಕೊಂಡು ಬಂದ ಲಾರಿಗಳನ್ನು ವಾಪಸ್ ಕಳುಹಿಸಲಾಗಿದೆ.ಆದರೆ ರೈತರ ಪ್ರತಿಭಟನೆಗೆ ಮಣಿದು ಪೈಪ್ ಇಳಿಸದೆ ಹೋದ ಲಾರಿಗಳು, ಕುಣಿಗಲ್ ಶಾಸಕರಾದ ಡಾ.ಹೆಚ್.ಡಿ.ರಂಗನಾಥ್ ಅವರ ಜಮೀನಿನಲ್ಲಿ ಪೈಪ್‍ಗಳನ್ನು ದಾಸ್ತಾನು ಮಾಡಿವೆ.ತುಮಕೂರು ಜಿಲ್ಲೆಗೆ ಅನ್ಯಾಯ ಮಾಡಿ, ರಾಮನಗರ ಜಿಲ್ಲೆಗೆ ಹೇಮಾವತಿ ನೀರು ತೆಗೆದುಕೊಂಡು ಹೋಗುವ ಎಕ್ಸ್ ಪ್ರೆಸ್ ಕೆನಾಲ್ ಯೋಜನೆಯನ್ನು ರದ್ದು ಪಡಿಸುವವವರೆಗೂ ನಮ್ಮ ಹೋರಾಟ ನಿಲ್ಲದು.ಮೇ.30 ರಂದು ಜಿಲ್ಲೆಯ ಎಲ್ಲಾ ಶಾಸಕರು, ವಿರೋಧಪಕ್ಷದ ನಾಯಕರುಗಳು, ರೈತರು ಸೇರಿ ಉಸ್ತುವಾರಿ ಸಚಿವರ ಗೊಲ್ಲಹಳ್ಳಿ ಮನೆಯ ಮುಂದೆ ಪ್ರತಿಭಟನಾ ಧರಣಿ ನಡೆಸುತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸೊಗಡು ಶಿವಣ್ಣ ಮನವಿ ಮಾಡಿದರು.
ಮುಖಂಡ ದಿಲೀಪ್ ಮಾತನಾಡಿ,ಜಿಲ್ಲೆಗೆ ಹೇಮಾವತಿ ನಾಲೆಯಿಂದ 24.05 ಟಿ.ಎಂ.ಸಿ ನೀರು ನಿಗಧಿ ಮಾಡಿದ್ದರೂ ಇದುವರೆಗೂ ಅದು ಸಂಪೂರ್ಣವಾಗಿ ಹರಿದಿಲ್ಲ.ಕುಡಿಯುವ ನೀರು ಮತ್ತು ನೀರಾವರಿ ನೀಡಲು ನಡೆದಿದ್ದ ವಿಸ್ತರಣಾ ನಾಲೆಗಳಲ್ಲಿ ಒಂದು ದಿನವೂ ನೀರು ಹರಿದಿಲ್ಲ.ಹೀಗಿರುವಾಗ ಏಕಾಎಕಿ ನಾಲೆಯಿಂದ 15 ಅಡಿ ಆಳದಲ್ಲಿ ಪೈಪ್‍ಲೈನ್ ಮೂಲಕ ನೀರು ಡ್ರಾ ಮಾಡಿದರೆ,ಮುಂದಿನ ಊರುಗಳಿಗೆ ನೀರು ಹರಿಯುವ ವೇಗ ಮತ್ತು ಪ್ರಮಾಣ ಕುಗ್ಗಲಿದೆ.ಹೇಮಾವತಿ ನೀರನ್ನು ನಂಬಿ ಕೈಗೊಂಡಿರುವ ಹಲವಾರು ಯೋಜನೆಗಳು ಉಪಯೋಗಕ್ಕೆ ಬಾರದಂತಾಗುತ್ತವೆ.ಹಾಗಾಗಿ ಸರಕಾರ ಮದ್ಯಪ್ರವೇಶಿಸಬೇಕು ಎಂಬುದು ನಮ್ಮ ಒತ್ತಾಯವಾಗಿದೆ.ಇದಲ್ಲದೆ,ಸದರಿ ಯೋಜನೆಯ ವಿರುದ್ದ ಕಾವೇರಿ ಟ್ರುಬ್ಯುನಲ್ ಮುಂದೆಯೂ ಅರ್ಜಿ ಸಲ್ಲಿಸಲು ಸಹ ಅಗತ್ಯ ದಾಖಲೆಗಳನ್ನು ಕಲೆ ಹಾಕಲಾಗುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಪಂಚಾಕ್ಷರಯ್ಯ,ಬೆಟ್ಟಸ್ವಾಮಿ,ತಿಪಟೂರಿನ ಎಂ.ಪಿ.ಪ್ರಸನ್ನಕುಮಾರ್,ಭೂ ರಾಮಣ್ಣ,ಸೌಮ್ಯ, ಪ್ರಭಾಕರ್ ಮತ್ತಿತರರು ಉಪಸ್ಥಿತರಿದ್ದರು.