ಮುಷ್ಕರ ನಿರತ NRH ನೌಕರರ ವಜಾಕ್ಕೆ ಆರೋಗ್ಯ ಇಲಾಖೆ ಸೂಚನೆ.

ಬೆಂಗಳೂರು: ಕಳೆದ ಒಂದು ತಿಂಗಳಿನಿಂದ ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಂತ ಒಳಗುತ್ತಿಗೆ ನೌಕರರು ಸೇವೆ ಖಾಯಂಗೊಳಿಸುವಂತೆ ಅನಿರ್ಧಿಷ್ಟಾವಧಿ ಮುಷ್ಕರ ನಡೆಸುತ್ತಿದ್ದಾರೆ. ಈ ನೌಕರರಿಗೆ ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗುವಂತೆ ಆರೋಗ್ಯ ಇಲಾಖೆ ಸೂಚಿಸಿದೆ.

ಇದರ ನಡುವೆಯೂ ನೌಕರರು ಮುಷ್ಕರ ಮುಂದುವರೆಸಿದ್ದಾರೆ. ಈ ಹಿನ್ನಲೆಯಲ್ಲಿ ಅಂತಹ ನೌಕರರನ್ನು ವಜಾಗೊಳಿಸಿ, ಅವರ ಖಾಲಿ ಹುದ್ದೆಗೆ ಹೊಸದಾಗಿ ಭರ್ತಿ ಮಾಡಿಕೊಳ್ಳುವಂತೆ ಆರೋಗ್ಯ ಇಲಾಖೆ ( Karnataka Health Department ) ನಿರ್ದೇಶಿಸಿದೆ.

ಈ ಸಂಬಂಧ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವಂತ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು, ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿಒಟ್ಟು 30,574 ಕ್ಕೂ ಹೆಚ್ಚು ನೌಕರರು ಕರ್ತವ್ಯ ನಿರ್ವಹಿಸುತ್ತಿರುತ್ತಾರೆ.ಒಳಗುತ್ತಿಗೆ ನೌಕರರ ಸಂಘವು ವಿವಿಧ ಬೇಡಿಕೆಗಳ ಕುರಿತು ದಿನಾಂಕ : 13.02.2023 ರಿಂದ ಪ್ರತಿಭಟನೆಯನ್ನು ನಡೆಸುತ್ತಿರುತ್ತಾರೆ ಎಂದಿದೆ.

ಈಗಾಗಲೇ ಸರ್ಕಾರವು ಹಲವು ಬೇಡಿಕೆಗಳನ್ನು ಈಡೇರಿಸಿದ್ದು, ಅದರಲ್ಲಿ ಪ್ರಮುಖ ಬೇಡಿಕೆಯಾದ, ವೇತನದಲ್ಲಿ 15% ಹೆಚ್ಚಳ ಮಾಡುವ ಬಗ್ಗೆ ದಿನಾಂಕ : 04.03.2023 ರಂದು ಆದೇಶ ಹೊರಡಿಸಲಾಗಿರುತ್ತದೆಹಾಗೂ ಉಳಿದ ಬೇಡಿಕೆಗಳ ಬಗ್ಗೆ ಪರಿಗಣಿಸುವುದಾಗಿ ಸನ್ಮಾನ್ಯ ಮುಖ್ಯ ಮಂತ್ರಿಗಳು ಹಾಗೂ ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಆಶ್ವಾಸನೆ ನೀಡಿರುತ್ತಾರೆ. ಆದಾಗ್ಯೂ ಸಹ, ಹುದ್ದೆಗಳನ್ನು ಖಾಯಂಗೊಳಿಸುವಂತೆ ಪಟ್ಟು ಹಿಡಿದುಕರ್ತವ್ಯಕ್ಕೆ ಹಾಜರಾಗದೆ ಪ್ರತಿಭಟನೆಯನ್ನು ಮುಂದುವರೆಸಿರುತ್ತಾರೆ. ಸದರಿ ವಿಷಯದ ಕುರಿತು ಬೇರೆ ರಾಜ್ಯಗಳನ್ನು ಸಂಪರ್ಕಿಸಲಾಗಿದ್ದು, ಮಣಿಪುರ ರಾಜ್ಯವನ್ನು ಹೊರತುಪಡಿಸಿ ಬೇರೆ ಯಾವುದೇ ರಾಜ್ಯಗಳಲ್ಲಿ ಹುದ್ದೆಗಳನ್ನು ಖಾಯಂಗೊಳಿಸಿರುವುದು ಕಂಡುಬಂದಿರುವುದಿಲ್ಲ ಎಂದು ಹೇಳಿದೆ.

ದಿನಾಂಕ:16.03.2023ರಂದು ಪ್ರತಿಭಟನೆಯನ್ನು ನಿಲ್ಲಿಸಿ 48 ಗಂಟೆಗಳೊಳಗೆ ಕರ್ತವ್ಯಕ್ಕೆ ಹಾಜರಾಗುವಂತೆ ಎಚ್ಚರಿಕೆ ನೋಟೀಸನ್ನು ಜಾರಿಗೊಳಿಸಿದಾಗ್ಯೂಸಹ, ಮುಷ್ಕರ ಮುಂದುವರೆಸಿದ ಹಿನ್ನೆಲೆಯಲ್ಲಿ, ಸಾರ್ವಜನಿಕ ಹಿತದೃಷ್ಟಿಯಿಂದ ಗಂಭೀರವಾಗಿ ಪರಿಗಣಿಸಿ ESMA Act ಅನ್ನು ಜಾರಿಗೊಳಿಸುವಂತೆ ಸೂಚನೆ ನೀಡಲಾಗಿತ್ತು ಎಂದು ತಿಳಿಸಿದೆ.

ಮುಖ್ಯ ಕಾರ್ಯನಿರ್ವಾಹಕಾಧಿಕಾರಿ, ಜಿಲ್ಲಾಪಂಚಾಯತ್‌ ರವರ ನೇತೃತ್ವದಲ್ಲಿ ತುರ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘದ ಸಭೆಯನ್ನು ಏರ್ಪಡಿಸುವಂತೆ ಸೂಚಿಸಿ, 48 ಗಂಟೆಗಳ ಒಳಗೆ ಕರ್ತವ್ಯಕ್ಕೆ ಹಾಜರಾಗದ ಸಿಬ್ಬಂದಿಗಳನ್ನು ವಜಾಗೊಳಿಸುವ ಕುರಿತು ನಿರ್ಣಯ ಕೈಗೊಳ್ಳುವಂತೆ ಹಾಗೂ ವಜಾಗೊಳಿಸಿದ ಸಿಬ್ಬಂದಿಗಳಿಂದ ತೆರವಾದ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಲು ರಾಷ್ಟ್ರೀಯ ಆರೋಗ್ಯ ಅಭಿಯಾನ ನಿರ್ದೇಶಕರು ತಿಳಿಸಿರುವುದಾಗಿ ಹೇಳಿದೆ.

ಅಂತಿಮವಾಗಿ, ಎಲ್ಲಾ ಜಿಲ್ಲೆಗಳಿಂದ ಪ್ರತಿಭಟನಾ ನಿರತ ಎನ್.ಹೆಚ್.ಎಂ. ಸಿಬ್ಬಂದಿಗಳ ಹಾಜರಾತಿಯನ್ನು ಪಡೆಯಲಾಗಿದ್ದು, ಕೆಲವು ಜಿಲ್ಲೆಗಳಲ್ಲಿ ಪೂರ್ಣ ಪ್ರಮಾಣದ (100%) ಹಾಜರಾತಿಯಿರುವುದು ತಿಳಿದುಬಂದಿರುತ್ತದೆ. ಇನ್ನುಳಿದ ಜಿಲ್ಲೆಗಳಲ್ಲಿ ಸಿಬ್ಬಂದಿಗಳು ನಿಧಾನವಾಗಿ ಕರ್ತವ್ಯಕ್ಕೆ ಹಾಜರಾಗುತ್ತಿದ್ದು, ಸಾರ್ವಜನಿಕ ಆರೋಗ್ಯ ಸೇವೆಗಳು ಸುಗಮವಾಗಿ ಕಾರ್ಯಾಚರಣೆಗೊಳ್ಳುತ್ತಿದೆ ಎಂದು ತಿಳಿಸಿದೆ.

Leave a Reply

Your email address will not be published. Required fields are marked *