ಬಗರ್ ಹುಕುಂ ಅರ್ಜಿ ವಿಲೇವಾರಿ : ದಾಖಲೆಗಳನ್ನು ನೈಜವಾಗಿ ಪರಿಶೀಲಿಸಲು ಡಿ.ಸಿ. ಸೂಚನೆ

ತುಮಕೂರು : ಜಿಲ್ಲೆಯಲ್ಲಿ ಬಗರ್ ಹುಕುಂ ಹಾಗೂ ದರಖಾಸ್ತು ಸಂಬಂಧ ಸ್ವೀಕೃತ ಅರ್ಜಿಗಳನ್ನು ವಿಲೇವಾರಿ ಮಾಡುವಾಗ ದಾಖಲೆಗಳನ್ನು ನೈಜವಾಗಿ ಪರಿಶೀಲಿಸಬೇಕು ಎಂದು ಗ್ರಾಮ ಆಡಳಿತಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸೂಚನೆ ನೀಡಿದರು.

ನಗರದ ಕೇಂದ್ರ ಗ್ರಂಥಾಲಯ ಸಭಾಂಗಣದಲ್ಲಿ ಶನಿವಾರ ಕಂದಾಯ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ಗ್ರಾಮ ಆಡಳಿತಾಧಿಕಾರಿಗಳು ತಮ್ಮ ಹಂತದಲ್ಲಿರುವ ಯಾವುದೇ ಅರ್ಜಿಗಳನ್ನು ವಿಳಂಬವಿಲ್ಲದೆ ಮುಂದಿನ ಹಂತಕ್ಕೆ ಕಳುಹಿಸಬೇಕು. ಬಗರ್ ಹುಕುಂ ಅಡಿ ಮಂಜೂರಾದ ಜಮೀನಿನ ಅಳತೆ ಕಾರ್ಯ ನಡೆಸಿ, ದುರಸ್ತಿ ಕೈಗೊಳ್ಳಬೇಕು. ಮಂಜೂರಾದ ಭೂಮಿಗೆ ಆರ್‍ಟಿಸಿ, ಮ್ಯೂಟೇಷನ್ ರಿಜಿಸ್ಟರ್(ಎಂಆರ್), ಹಕ್ಕುಗಳ ದಾಖಲೆ(ಆರ್‍ಆರ್) ಹಾಗೂ ಮತ್ತಿತರ ಪೂರಕ ದಾಖಲೆಗಳನ್ನು ತಯಾರಿಸಬೇಕು ಎಂದು ತಿಳಿಸಿದರು.

ದರಖಾಸ್ತು ಹಾಗೂ ಬಗರ್ ಹುಕುಂ ಅಡಿ ತಿರಸ್ಕøತ ಅರ್ಜಿಗಳಿಗೆ ಸ್ಪಷ್ಟ ಕಾರಣ ದಾಖಲಿಸಿ, ನಂತರ ತಿರಸ್ಕರಿಸಬೇಕು. ಅರ್ಹ ಫಲಾನುಭವಿಗಳ ಅರ್ಜಿಗಳನ್ನು ಶೀಘ್ರದಲ್ಲಿ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.

ಕಂದಾಯ ನಿರೀಕ್ಷಕರ ಹಂತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಗರ್ ಹುಕುಂ ಅರ್ಜಿಗಳನ್ನು ಬಾಕಿ ಉಳಿಸಿಕೊಂಡಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಂದಾಯ ನಿರೀಕ್ಷಕರು ತ್ವರಿತವಾಗಿ ಅರ್ಜಿಗಳನ್ನು ಪರಿಶೀಲಿಸಿ, ವಿಲೇವಾರಿಗೆ ಕ್ರಮವಹಿಸಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ರೈತರು ಸಲ್ಲಿಸಿದ 30 ರಿಂದ 40 ವರ್ಷಗಳ ಅರ್ಜಿಗಳು ಇಂದಿಗೂ ಬಾಕಿಯಿರುವುದನ್ನು ಗಂಭೀರವಾಗಿ ಗಮನಿಸಿದ ಜಿಲ್ಲಾಧಿಕಾರಿಗಳು, ಹಳೆಯ ಅರ್ಜಿಗಳನ್ನು ಕೂಡಲೇ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ಉಪವಿಭಾಗಾಧಿಕಾರಿ ನಹೀದಾ ಜûಮ್ ಜûಮ್, ಭೂ ದಾಖಲೆಗಳ ಇಲಾಖೆ ಉಪನಿರ್ದೇಶಕ ನಿರಂಜನ್, ವಿವಿಧ ತಾಲ್ಲೂಕುಗಳ ತಹಶೀಲ್ದಾರರು, ಗ್ರಾಮ ಆಡಳಿತಾಧಿಕಾರಿಗಳು, ಕಂದಾಯ ನಿರೀಕ್ಷಕರು ಸೇರಿದಂತೆ ಮತ್ತಿತರ ಕಂದಾಯ ಅಧಿಕಾರಿ/ಸಿಬ್ಬಂದಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *