
ತುಮಕೂರು: ಅಂಗವಿಕಲರ ಕಲ್ಯಾಣ ಇಲಾಖೆವತಿಯಿಂದ ನೀಡಲಾದ ತ್ರಿಚಕ್ರ ಸೈಕಲನ್ನು, ಕರ್ನಾಟಕ ಜನ ಸೈನ್ಯ ಸಂಘಟನೆ ಹಾಗೂ ಹಾಲಪ್ಪ ಪ್ರತಿಷ್ಠಾನ ಗುರುತಿಸಿದ ಮಧುಗಿರಿ ತಾಲೂಕು ಸ್ವಾದೇನಹಳ್ಳಿಯ ಚಿಕ್ಕಣ್ಣ ಎಂಬ ಪೋಲಿಯೋ ಪೀಡಿತನಿಗೆ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕೌಶಲ್ಯಾಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ ಅಶಕ್ತರಿಗೆ,ಅಂಗವಿಕಲರಿಗೆ ತಮ್ಮ ಕೈಲಾದ ನೆರವು ನೀಡುವುದನ್ನು ಎಲ್ಲಾ ಸಂಘ ಸಂಸ್ಥೆಗಳು ಮೈಗೂಡಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು.
ನಗರದ ಸುಧಾ ಟೀ ಹೌಸ್ ಮುಂಭಾಗದಲ್ಲಿ ತ್ರಿಚಕ್ರವಾಹನ ವಿತರಿಸಿ ಮಾತನಾಡಿದ ಅವರು,ಕರ್ನಾಟಕ ಜನ ಸೈನ್ಯ ಸಂಘಟನೆಯ ರಕ್ಷಿತ್ ಕರಿಮಣ್ಣೆ,ಆರ್ಹರನ್ನು ಗುರುತಿಸಿ,ಅವರಿಗೆ ಸರಕಾರದ ಸವಲತ್ತು ತಲುಪುವಂತೆ ಮಾಡಿರುವುದು ಶ್ಲಾಘನೀಯ ಎಂದರು.
ಸಮಾಜದಲ್ಲಿ ಹಲವರು ಸರಕಾರದ ಸವಲತ್ತುಗಳಿಗಾಗಿ ಅರ್ಜಿ ಸಲ್ಲಿಸುತ್ತಾರೆ. ಆದರೆ ಸರಕಾರದ ಸವಲತ್ತುಗಳು ಅರ್ಹರಿಗೆ ತಲುಪಿದಾಗ ಮಾತ್ರ ಸರಕಾರದ ಯೋಜನೆಗಳು ಸಾರ್ಥಕವಾಗುತ್ತವೆ.ಕಳೆದ 28 ವರ್ಷಗಳಿಂದ ಪೊಲೀಯೋದಿಂದ ಕಾಲುಗಳ ಸ್ವಾಧೀನ ಕಳೆದುಕೊಂಡು ಜೀವನ ನಿರ್ವಹಣೆಗಾಗಿ ತೆವಳಿಕೊಂಡೇ ಹೋಗಿ ಶ್ರೀಮಂತರ ಮನೆಯ ಕೈತೊಟಗಳನ್ನು ಸ್ವಚ್ಚ ಮಾಡುವ ಕೆಲಸದಲ್ಲಿ ನಿರತನಾಗಿದ್ದ ಮಧುಗಿರಿ ತಾಲೂಕು ಸ್ವಾದೇನಹಳ್ಳಿಯ ಚಿಕ್ಕಣ್ಣ ಅವರನ್ನು ಗುರುತಿಸಿ ಅಂಗವಿಕಲರ ಕಲ್ಯಾಣ ಇಲಾಖೆಯವರು ನೀಡುವ ತ್ರಿಚಕ್ರ ಸೈಕಲ್‍ನ್ನು ಚಿಕ್ಕಣ್ಣ ಅವರ ಅಗತ್ಯಕ್ಕೆ ತಕ್ಕಂತೆ ಕೆಲ ಮಾರ್ಪಾಡು ಮಾಡಿ ನೀಡಿದ್ದೇವೆ. ತ್ರಿಚಕ್ರ ಸೈಕಲ್ ಹಿಂಬದಿಯಲ್ಲಿರುವ ಪೆಟ್ಟಿಯಲ್ಲಿ ತರಕಾರಿ, ಹಣ್ಣು, ಸಿಹಿ ಪದಾರ್ಥಗಳನ್ನು ಇಟ್ಟುಕೊಂಡು ಮಾರಾಟ ಮಾಡಲು ಅನುಕೂಲವಿದೆ. ಇದು ಚಿಕ್ಕಣ್ಣ ಅವರ ಸ್ವಾಭಿಮಾನದ ಬದುಕಿಗೆ ನಾಂದಿಯಾಗಲಿದೆ ಎಂಬ ವಿಶ್ವಾಸವನ್ನು ಮುರುಳೀಧರ ಹಾಲಪ್ಪ ವ್ಯಕ್ತಪಡಿಸಿದರು.
ಕರ್ನಾಟಕ ಜನ ಸೈನೆಯ ಜಿಲ್ಲಾಧ್ಯಕ್ಷ ರಕ್ಷಿತ್ ಕರಿಮಣ್ಣೆ ಮಾತನಾಡಿ,ನಮ್ಮ ಸಂಘಟನೆವತಿಯಿಂದ ಪ್ರತಿವರ್ಷದ ಕನ್ನಡ ರಾಜೋತ್ಸವದ ಕಾರ್ಯಕ್ರಮದ ವೇಳೆ ಇಂತಹ ಅಶಕ್ತರನ್ನು ಗುರುತಿಸಿ, ಅವರಿಗೆ ಹಲವು ಸವಲತ್ತುಗಳನ್ನು ವಿತರಿಸುತಿದ್ದೇವೆ. ಇದನ್ನು ಮನಗಂಡ ಮುರುಳೀಧರ ಹಾಲಪ್ಪ ಅವರು,ಚಿಕ್ಕಣ್ಣ ಅವರಿಗೆ ತ್ರಿಚಕ್ರ ಸೈಕಲ್ ನೀಡುವ ಸಂಬಂಧ ಅವರಿಂದ ಅರ್ಜಿ ಹಾಕಿಸಿ,ನಿರಂತರ ಪಾಲೋ ಅಪ್ ಮಾಡಿದ ಪರಿಣಾಮ ಇಂದು ಅವರು ಸಲವತ್ತು ಪಡೆಯುವಂತಾಗಿದೆ. ಮುರಳೀಧರ ಹಾಲಪ್ಪ ಅವರ ಕಾಳಜಿ ಮೆಚ್ಚುವಂತಹದ್ದು, ಇವರು ಜನಪ್ರತಿನಿಧಿಗಳಾಗಿ ಆಯ್ಕೆಯಾದರೆ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.
ಈ ವೇಳೆ ಮುಖಂಡರಾದ ಸಿದ್ದಲಿಂಗೇಗೌಡ,ನಟರಾಜಶೆಟ್ಟಿ, ಸಿಮೆಂಟ್ ಮಂಜಣ್ಣ,ಶಿವಣ್ಣ, ಆಶ್ವಥಪ್ಪ, ವಸುಂಧರ, ವಿಜಯಲಕ್ಷ್ಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.