ಜನರಲ್ ಆಸ್ಪತ್ರೆಯಲ್ಲಿ ಅಗ್ನಿ ಅವಘಡಗಳಾಗದಂತೆ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಸೂಚನೆ

ತುಮಕೂರು : ಜಿಲ್ಲಾಸ್ಪತ್ರೆಯು ಹಳೆಯ ಕಟ್ಟಡವಾಗಿರುವುದರಿಂದ ಯಾವುದೇ ರೀತಿಯ ಅಗ್ನಿ ಅವಘಡಗಳಾಗದಂತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ|| ಅಸ್ಗರ್ ಬೇಗ್ ಅವರಿಗೆ ಸೂಚನೆ ನೀಡಿದರು.

ಮೊನ್ನೆ ಶುಕ್ರವಾರ ರಾತ್ರಿ ಉತ್ತರ ಪ್ರದೇಶದ ಝಾನ್ಸಿ ಮಹಾರಾಣಿ ಲಕ್ಷ್ಮಿಬಾಯಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ 10 ನವಜಾತ ಶಿಶುಗಳು ಮೃತಪಟ್ಟಿರುವ ಬಗ್ಗೆ ವರದಿಯಾಗಿರುವ ಹಿನ್ನೆಲೆಯಲ್ಲಿ ಶನಿವಾರ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಅವರು ಪರಿಶೀಲಿಸಿದರು.

ಆಸ್ಪತ್ರೆಯ ನವಜಾತ ಶಿಶುಗಳ ತೀವ್ರ ನಿಗಾ ಘಟಕ, ಹೆರಿಗೆ ವಾರ್ಡ್, ಡೆಂಗ್ಯು ರೋಗಿಗಳ ವಾರ್ಡ್, ಟ್ರಯೇಜ್ ಕೊಠಡಿ, ಹೊರ ರೋಗಿ ಚೀಟಿ ವಿಭಾಗಳಿಗೆ ಭೇಟಿ ನೀಡಿದ ಅವರು ವಿದ್ಯುತ್ ಶಾರ್ಟ್ ಸಕ್ರ್ಯುಟ್ ವಿದ್ಯುತ್ ವೈರ್‍ಗಳನ್ನು ಪರಿಶೀಲಿಸಬೇಕು. ಆಕಸ್ಮಿಕವಾಗಿ ಅಗ್ನಿ ಅವಘಡ ಸಂಭವಿಸಿ ಹೊಗೆ ತುಂಬಿಕೊಂಡಲ್ಲಿ ಎಚ್ಚರಿಕೆ ನೀಡಲು ಫೈರ್ ಡಿಟೆಕ್ಟರ್ ಅನ್ನು ಅಳವಡಿಸಬೇಕು ಎಂದು ಅವರು ನಿರ್ದೇಶನ ನೀಡಿದರು.

ಅಗ್ನಿ ಅವಘಡಗಳು ಸಂಭವಿಸಿದಾಗ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ಆಸ್ಪತ್ರೆ ಸಿಬ್ಬಂದಿಗಳಿಗೆ ಅಣುಕು ಪ್ರದರ್ಶನ ಏರ್ಪಡಿಸಬೇಕೆಂದು ಹಾಗೂ ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಹಳೆ ಕಟ್ಟಡಗಳಲ್ಲಿ ಪರಿಶೋಧನೆ ಕೈಗೊಂಡು ವರದಿ ನೀಡಬೇಕೆಂದು ಜಿಲ್ಲಾ ಅಗ್ನಿ ಶಾಮಕ ಅಧಿಕಾರಿ ಕೆ.ಪಿ. ಶಶಿಧರ್ ಅವರಿಗೆ ಸೂಚನೆ ನೀಡಿದರು.

oplus_0

ಹೆರಿಗೆ ವಾರ್ಡ್‍ಗೆ ಭೇಟಿ ನೀಡಿ ಗರ್ಭಿಣಿ-ಬಾಣಂತಿಯರ ಆರೋಗ್ಯ ವಿಚಾರಿಸಿದ ಅವರು ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡಬೇಕು. ದೂರದ ಊರುಗಳಿಂದ ಬರುವ ರೋಗಿಗಳನ್ನು ಕಾಯಿಸದೆ ಸೂಕ್ತ ಚಿಕಿತ್ಸೆ ನೀಡಲು ಮುಂದಾಗಬೇಕೆಂದರಲ್ಲದೆ ಯಾವುದೇ ಸಮಸ್ಯೆಗಳು ಎದುರಾದಾಗ ಕ್ರಮ ಕೈಗೊಳ್ಳುವುದಕ್ಕಿಂತ ಮುಂಜಾಗ್ರತೆ ಕ್ರಮವಾಗಿ ಸಮಸ್ಯೆ ಬಾರದಂತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ನಿರ್ದೇಶನ ನೀಡಿದರು.

ಆಸ್ಪತ್ರೆಯಲ್ಲಿ ರೋಗಿಗಳು ದಾಖಲಾಗಿರುವ ವಾರ್ಡುಗಳಲ್ಲಿ ಪ್ರತಿದಿನ ಹಾಸಿಗೆ, ಹೊದಿಕೆಗಳನ್ನು ಬದಲಾಯಿಸಬೇಕು. ಹಳೆಯ ಅನುಪಯುಕ್ತ ಉಪಕರಣಗಳನ್ನು ವಾರ್ಡಿನಲ್ಲಿ ಇಡಬಾರದು ಎಂದು ಸೂಚನೆ ನೀಡಿದರು.

ನಂತರ ಆಸ್ಪತ್ರೆ ಆವರಣದಲ್ಲಿ ಹೊಸದಾಗಿ ನಿರ್ಮಾಣ ಮಾಡಲಾಗುತ್ತಿರುವ ಇಂದಿರಾ ಕ್ಯಾಂಟೀನ್ ಕಟ್ಟಡ ಕಾಮಗಾರಿಯನ್ನು ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಮಕ್ಕಳ ತಜ್ಞ ಡಾ|| ಶ್ರೀನಿವಾಸ್ ಪ್ರಸಾದ್, ಸಹಾಯಕ ಆಡಳಿತ ಅಧಿಕಾರಿ ರವಿ, ಸ್ಥಾನಿಕ ವೈದ್ಯಾಧಿಕಾರಿ ಡಾ|| ಚೇತನ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *