ಜಿಲ್ಲಾ ಜೆಡಿಎಸ್‍ನಿಂದ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ

ತುಮಕೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ದುರಾಡಳಿತ, ರೈತ ವಿರೋಧಿ ನೀತಿ ವಿರುದ್ಧ ಜಿಲ್ಲಾ ಜೆಡಿಎಸ್ ಮುಖಂಡರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್.ಸಿ.ಆಂಜನಪ್ಪ ಅವರ ನೇತೃತ್ವದಲ್ಲಿ ಪಕ್ಷದ ಕಚೇರಿಯಿಂದ ಪಾದಯಾತ್ರೆಯಲ್ಲಿ ಆಗಮಿಸಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರ ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಸಿ.ಆಂಜನಪ್ಪ ಮಾತನಾಡಿ, ಕಳೆದ 2 ವರ್ಷಗಳಿಂದ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಲಂಚಗುಳಿತನ, ದುರಾಡಳಿ, ಆಡಳಿತ ವೈಫಲ್ಯತೆಯಿಂದ ಜನರ ಆಕ್ರೋಶಕ್ಕೆ ತುತ್ತಾಗಿದೆ. ಉತ್ತಮ ಮಳೆಯಾಗಿ ರೈತರು ಕೃಷಿ ಚಟುಟವಟಿಕೆ ಆರಂಭಿಸುತ್ತಿರುವ ಸಂದರ್ಭದಲ್ಲಿ ಅವರಿಗೆ ಸರ್ಕಾರ ರಸಗೊಬ್ಬರ, ಬಿತ್ತನೆಬೀಜ ಪೂರೈಸುವಲ್ಲಿ ವಿಫಲವಾಗಿದೆ. ಮುಂಜಾಗೃತವಾಗಿ ರಸಗೊಬ್ಬರನ್ನು ದಾಸ್ತಾನು ಮಾಡದೆ ನಿರ್ಲಕ್ಷ ಮಾಡಿದ ಪರಿಣಾಮ ಇಂದು ರೈತರು ಗಿಬ್ಬರ ಸಿಗದೆ ಪರಿತಪಿಸುವಂತಾಗಿದೆ ಎಂದರು.

ಅಲ್ಲದೆ, ಮಳೆ ಹಾಗೂ ನೆರೆ ಹಾವಳಿಯಿಂದ ಫಸಲು ನಷ್ಟವಾದ ಹಾಗೂ ಮಳೆ ಅಭಾವದ ಕಡೆ ಬೆಳೆ ಹಾನಿಗೊಳಗಾದ ರೈತರಿಗೆ ಪರಿಹಾರ, ವಿಮಾ ಹಣವನ್ನು ತಪುಪಿಸುವಲ್ಲಿ ಸರ್ಕಾರ ವಿಫಲವಾಗಿದೆ. ಎರಡೂ ವರ್ಷಗಳಿಂದ ರೈತರಿಗೆ ಅನ್ಯಾಯ ಮಾಡಿಕೊಂಡು ಬರುತ್ತಿರುವ ಕಾಂಗ್ರೆಸ್‍ನವರಿಗೆ ರಾಜ್ಯದ ಜನ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತಾರೆ. ಸರ್ಕಾರ ಇನ್ನಾದರೂ ಎಚ್ಚೆತ್ತುಕೊಂಡು ರೈತರ ಸಮಸ್ಯೆಗೆ ಸ್ಪಂದಿಸಿ ಕೆಲಸ ಮಾಡಲಿ, ಇಲ್ಲವೆ ಅಧಿಕಾರ ಬಿಟ್ಟು ತೊಲಗಲಿ ಎಂದು ಹೇಳಿದರು.

ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಮಾತನಾಡಿ, ರಾಜ್ಯದಲ್ಲಿ ಭಷ್ಟ ಸರ್ಕಾರ ಅಧಿಕಾರದಲ್ಲಿದೆ. ಜನಸಾಮಾನ್ಯರ ಯಾವುದೇ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ರೈತರು ರಸಗೊಬ್ಬರಕ್ಕಾಗಿ ಹೋರಾಟ ಮಾಡುತ್ತಿದ್ದರೂ ಸಮಸ್ಯೆ ಬಗೆಹರಿಸಬೇಕಾದ ಸರ್ಕಾರದ ನಾಯಕರು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಾ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ. ಕೇಂದ್ರ ಸರ್ಕಾರ ಸರಬರಾಜು ಮಾಡಿದ್ದ ರಸಗೊಬ್ಬರವನ್ನು ರೈತರಿಗೆ ಹಂಚಿಕೆ ಮಾಡದೆ ದಳ್ಳಾಳಿಗಳ ಮೂಲಕ ಕಾಳಸಂತೆಯಲ್ಲಿ ಮಾರಾಟ ಮಾಡಿದ್ದಾರೆ ಎಂದು ಆಪಾದಿಸಿದರು.

ತಿಪಟೂರು ಮುಖಂಡ ಕೆ.ಟಿ.ಶಾಂತಕುಮಾರ್ ಮಾತನಾಡಿ, ಕೇಂದ್ರ ಸರ್ಕಾರದ ಜೊತೆ ವ್ಯವಹರಿಸಿ ಅಗತ್ಯ ಗೊಬ್ಬರ ಪಡೆಯುವಲ್ಲಿ ವಿಫಲವಾಗಿರುವ ರಾಜ್ಯ ಸರ್ಕಾರ, ಸಮಸ್ಯೆಗೆ ಪರಿಹಾರ ಕಂಡುಕೊಂಡು ರೈತರಿಗೆ ಗೊಬ್ಬರ ನೀಡದೆ, ಕೇಂದ್ರದ ಮೇಲೆ ಆರೋಪ ಮಾಡುತ್ತಾ ಸಮಸ್ಯೆಯನ್ನು ಮತ್ತಷ್ಟು ಜಟಿಲ ಮಾಡುತ್ತಿದೆ. ಇರುವ ಗೊಬ್ಬರವನ್ನು ಬ್ರೋಕರ್‍ಗಳ ಮೂಲಕ ಮಾರಾಟ ಮಾಡಿ ಹಣ ಮಾಡಿಕೊಳ್ಳುತ್ತಿದ್ದಾರೆ. ಇಂತಹ ಆಡಳಿತಕ್ಕೆ ರೈತರು ರೋಸಿಹೋಗಿದ್ದಾರೆ. ಇಂತಹ ಕೆಟ್ಟ ಸರ್ಕಾರವನ್ನು ನಾವು ನೋಡಿಯೇ ಇಲ್ಲ ಎಂದು ಕಾಂಗ್ರೆಸ್ ಶಾಸಕರೇ ಹೇಳುತ್ತಿದ್ದಾರೆ. ಇನ್ನು ಜನಸಾಮಾನ್ಯರ ಪಾಡೇನು ಎಂದು ಪ್ರಶ್ನಿಸಿದರು.
ಗುಬ್ಬಿ ಮುಖಂಡ ಬಿ.ಎಸ್.ನಾಗರಾಜು ಮಾತನಾಡಿ, ಗ್ಯಾರಂಟಿ ಆಸೆ ತೋರಿಸಿ ಜನರಿಂದ ವೋಟು ಪಡೆದ ಕಾಂಗ್ರೆಸ್‍ನವರು ಅಧಿಕಾರಕ್ಕೆ ಬಂದ ನಂತರ ಜನರ ಹಿತ ಮರೆತಿದ್ದಾರೆ. ರೈತರನ್ನು ಕಡೆಗಣಿಸಿದ್ದಾರೆ. ಎಲ್ಲಾ ಕಡೆ ಭ್ಯಷ್ಟಾಚಾರ ತುಂಬಿದೆ. ಸರ್ಕಾರಿ ಕಚೇರಿಗಳಲ್ಲಿ ರೈತರ ಅಹವಾಲು ಕೇಳುವವರಿಲ್ಲ. ಜಿಲ್ಲಾಡಳಿತವೂ ಹದಗೆಟ್ಟಿದೆ. ಎಕ್ಸ್‍ಪ್ರೆಸ್ ಕೆನಾಲ್ ವಿರುದ್ಧ ಹೋರಾಟಕ್ಕಿಳಿದ ರೈತರನ್ನು ಪೊಲೀಸರನ್ನು ಬಳಸಿ ಬೆದರಿಸಲಾಗಿದೆ. ಆದರೆ ಕಾಂಗ್ರೆಸ್‍ನ ಸಚಿವರಾಗಲಿ, ಶಾಸಕರಾಗಲಿ ರೈತರ ಪರ ನಿಲ್ಲಲಿಲ್ಲ ಎಂದು ಟೀಕಿಸಿದರು.
ಕುಣಿಗಲ್ ಮುಖಂಡ ಜಗದೀಶ್ ನಾಗರಾಜಯ್ಯ ಅವರು, ಇದೊಂದು ನರಸತ್ತ ಸರ್ಕಾರ, ರಾಜ್ಯವನ್ನು ದಿವಾಳಿ ಅಂಚಿಗೆ ತೆಗೆದುಕೊಂಡು ಹೋಗಿದೆ. ರೈತರಿಗೆ ಹಂಚಬೇಕಾಗಿದ್ದ ರಸಗೊಬ್ಬರವನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿ ಹಣ ಮಾಡಿಕೊಂಡಿದ್ದಾರೆ. ಸರ್ಕಾರದ ಲೋಪ ಕೇಳುವ ವಿರೋಧ ಪಕ್ಷಗಳನ್ನು ಕಟ್ಟಿಹಾಕುವ ಕುತಂತ್ರ ರಾಜಕಾರಣವನ್ನು ಕಾಂಗ್ರೆಸ್‍ನವರು ಮಾಡುತ್ತಿದ್ದಾರೆ. ರಾಜ್ಯದ ಕೃಷಿ ಮಂತ್ರಿ ದೇವೇಗೌಡರ ಕುಟುಂಬವನ್ನು ಟೀಕಿಸುವುದರಲ್ಲೇ ನಿರತರಾಗಿದ್ದಾರೆ ಹೊರತು ರೈತರ ಕಷ್ಟ ಕೇಳಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಶಾಸಕ ಪಿ.ಆರ್.ಸುಧಾಕರಲಾಲ್, ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜು, ನಗರ ಅಧ್ಯಕ್ಷ ವಿಜಯ್‍ಗೌಡ, ಮುಖಂಡರಾದ ಉಗ್ರೇಶ್, ಕಾಮರಾಜು, ಕೊಂಡವಾಡಿ ಚಂದ್ರಶೇಖರ್, ತಿಮ್ಮಾರೆಡ್ಡಿ, ಸೋಲಾರ್ ಕೃಷ್ಣಮೂರ್ತಿ, ಗಂಗಣ್ಣ, ಕೆಂಪರಾಜು, ಭೈರೇಶ್, ಕಳ್ಳಿಪಾಳ್ಯ ಲೋಕೇಶ್, ಯೋಗಾನಂದಕುಮಾರ್, ಟಿ.ಕೆ.ನರಸಿಂಹಮೂರ್ತಿ, ಧರಣೇಂದ್ರಕುಮಾರ್, ಹೆಚ್.ಡಿ.ಕೆ.ಮಂಜುನಾಥ್, ರಾಮಕೃಷ್ಣಪ್ಪ, ಮೆಡಿಕಲ್ ಮಧು, ರೇಖಾ ರಾಜು, ಸೊಗಡು ವೆಂಕಟೇಶ್, ಚೆನ್ನಮಲ್ಲಯ್ಯ, ದೊಡ್ಡೇರಿ ಬಸವರಾಜು, ಮಧುಗೌಡ, ವಿಶ್ವೇಶ್ವರಯ್ಯ, ತಾಹೇರಾ ಕುಲ್ಸಂ, ಲೀಲಾವತಿ, ಲಕ್ಷ್ಮೀದೇವಮ್ಮ ಮೊದಲಾದವರು ಭಾಗವಹಿಸಿದ್ದರು.
ನಂತರ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.

Leave a Reply

Your email address will not be published. Required fields are marked *