ತುಮಕೂರು : ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿಗಳಿಂದ ಮಹಿಳೆಯರು ದಾರಿ ತಪ್ಪಿದ್ದಾರೆಂದು ಮಂಡ್ಯ ಲೋಕಸಭಾ ಎನ್‍ಡಿಎ ಅಭ್ಯರ್ಥಿ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಯನ್ನು ತುಮಕೂರು ಜಿಲ್ಲಾ ಮಹಿಳಾ ಕಾಂಗ್ರೆಸ್ ತೀವ್ರವಾಗಿ ಖಂಡಿಸಿತು.
ತುಮಕೂರು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಮತಿ ಗೀತಾರಾಜಣ್ಣ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಒಳ್ಳೆಯ ಕುಟುಂಬದಿಂದ ಬಂದವರಾಗಿದ್ದು, ಅವರ ಈ ಮಾತಿನಿಂದ ಹೆಣ್ಣು ಮಕ್ಕಳ ಸ್ವಾಭಿಮಾನದ ಪ್ರಶ್ನೆ ಎದ್ದಿದೆ. ರಾಜ್ಯದ ಮಹಿಳೆಯರಿಗೆ ಸ್ವಾಭಿಮಾನದ ಬದುಕು ಕಟ್ಟಿಕೊಡಬೇಕೆಂದು ಕಾಂಗ್ರೆಸ್ ಸರಕಾರ ಗ್ಯಾರಂಟಿ ಯೋಜನೆ ಜಾರಿ ಮಾಡಿದೆ. ಇದನ್ನು ಸಹಿಸಲಾರದೆ ಕುಮಾರಸ್ವಾಮಿ ಅವಹೇಳನ ಮಾಡಿದ್ದಾರೆ ಎಂದು ಕಿಡಿಕಾರಿದರು.
ಹೆಣ್ಣು ಮಕ್ಕಳು ಅಭಿವೃದ್ದಿ ಆಗುವುದು ಕುಮಾರಸ್ವಾಮಿ ಅವರಿಗೆ ಬೇಕಿಲ್ಲವೇ. ಕುಮಾರಸ್ವಾಮಿ ಅವರಿಗೆ ಇದು ಶೋಭೆ ಅಲ್ಲ. ಈ ಹಿಂದೆ ಸುಮಲತಾ ಅಂಬರೀμï ಅವರ ಬಗ್ಗೆ ಪ್ರಶ್ನೆ ಮಾಡಿದ ಬಡ ಮಹಿಳೆ ಬಗ್ಗೆ ಹೀಗೆಯೇ ಮಾತನಾಡಿದ್ದರು. ಮಂಡ್ಯದಲ್ಲಿ ಓಟು ಕೇಳಲು ಬರುತ್ತಿರುವ ಕುಮಾರಸ್ವಾಮಿ ಅವರಿಗೆ ಮಂಡ್ಯದ ಸ್ವಾಭಿಮಾನಿ ಮಹಿಳೆಯರು ಉತ್ತರ ಕೊಡಲಿದ್ದಾರೆ ಎಂದು ಅವರು ಹೇಳಿದರು.

ಕುಮಾರಸ್ವಾಮಿ ಅವರಿಗೆ ಮಹಿಳೆಯರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ಹೋರಾಟವನ್ನು ಇಡೀ ರಾಜ್ಯಕ್ಕೆ ವಿಸ್ತರಿಸುತ್ತೇವೆ. ಚುನಾವಣಾ ಆಯೋಗ, ಮಹಿಳಾ ಆಯೋಗಕ್ಕೂ ದೂರು ಕೊಡುತ್ತೇವೆ. ಕುಮಾರಸ್ವಾಮಿ ಅವರ ಹೇಳಿಕೆಗೆ ಮೈತ್ರಿ ಪಕ್ಷವಾದ ಬಿಜೆಪಿಗೂ ಇದರಿಂದ ಹಿನ್ನಡೆಯಾಗಲಿದೆ ಎಂದು ಹೇಳಿದರು.
ಮಾಜಿ ಮೇಯರ್ ಪ್ರಭಾವತಿ ಸುಧೀಶ್ವರ್ ಮಾತನಾಡಿ ಸ್ವಾಭಿಮಾನಿ ಮಹಿಳೆಯರು ಕುಮಾರಸ್ವಾಮಿಯವರನ್ನು ಸೋಲಿಸಿ ಮನೆಗೆ ಕಳುಹಿಸಬೇಕು. ಇಂತಹವರು ಜನಪ್ರತಿನಿಧಿಯಾದರೆ ಮಹಿಳೆಯರಿಗೆ ರಕ್ಷಣೆ ಸಿಗುತ್ತದೆಯೇ ಎಂಬುದನ್ನು ಹೆಣ್ಣು ಮಕ್ಕಳು ಅರ್ಥಮಾಡಿಕೊಳ್ಳಬೇಕು ಎಂದರು.
ಮಹಿಳಾ ಕಾಂಗ್ರೆಸ್‍ನ ಉಪಾದ್ಯಕ್ಷರಾದ ಮರಿಚೆನ್ನಮ್ಮ ಮಾತನಾಡಿ ಕುಮಾರಸ್ವಾಮಿಯವರ ಈ ಹೇಳಿಕೆ ನಾಚಿಕೆಗೇಡಿನ ಹೇಳಿಕೆಯಾಗಿದೆ, ಕುಮಾರಸ್ವಾಮಿಯವರ ಹೇಳಿಕೆ ಇಡೀ ರಾಜ್ಯದ ಮಹಿಳೆಯರಿಗೆ ಎಸಗಿದ ಅವಮಾನ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಮೇಯರ್ ಫರಿದಾ ಬೇಗಂ, ವಸುಂದರ, ವಿಜಯಲಕ್ಷ್ಮೀ, ಕೆಸ್ತೂರು ಭಾಗ್ಯ ಮುಂತಾದವರಿದ್ದರು.
ನಂತರ ತುಮಕೂರು ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಮುಂಭಾಗ ಹೆಚ್.ಡಿ.ಕುಮಾರಸ್ವಾಮಿಯವರ ಹೇಳಿಕೆ ವಿರುದ್ಧ ಪ್ರತಿಭಟನೆ ನಡೆಸಿದರು.