ತುಮಕೂರು : ಡಾ. ಬಿಧನ್ ಚಂದ್ರ ರಾಯ್ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ, ಹಾಗೂ ಶೇಷ್ಠ ವೈದ್ಯರು. ಡಾ. ಬಿಧನ್ ಚಂದ್ರ ರಾಯ್ ಅವರು ಜುಲೈ 1, 1882 ರಂದು ಪಶ್ಚಿಮ ಬಂಗಾಳದಲ್ಲಿ ಜನಿಸಿದರು. ಇವರು ಜುಲೈ 1,1962 ರಲ್ಲಿ ಮರಣ ಹೊಂದಿದರು. ಬಿ ಸಿ ರಾಯ್ ಅವರು ವೈದ್ಯಕೀಯ ರಂಗಕ್ಕೆ ಅಮೋಘ ಕೋಡುಗೆಯನ್ನು ನೀಡಿದ್ದಾರೆ. ವೈದ್ಯಕೀಯ ವಿಜ್ಞಾನ ಕ್ಷೇತ್ರದಲ್ಲಿ ನೀಡಿದ ಕೊಡುಗೆಗಾಗಿ ಇವರಿಗೆ ಫೆಬ್ರವರಿ 4, 1961 ರಲ್ಲಿ ಭಾರತ ರತ್ನ ಪ್ರಶಸ್ತಿಯನ್ನು ನೀಡಲಾಯಿತು ಎಂದು ಡಾ.ಲೆಂಕಪ್ಪ ಹೇಳಿದರು.
ಅವರಿಂದು ನಗರದ ಆರ್.ಟಿ.ನಗರದ ಪಾವನ ಆಸ್ಪತ್ರೆಯಲ್ಲಿ ಅಂತರಾಷ್ಟ್ರೀಯ ವೈದ್ಯಕೀಯ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಡಾ. ಬಿಧನ್ ಚಂದ್ರ ರಾಯ್ ಅವರ ಜನ್ಮ ಮತ್ತು ಮರಣ ದಿನ ಜುಲೈ 1, ಆದ್ದರಿಂದ ಈ ದಿನವನ್ನು, ಅವರ ಗೌರವಾರ್ಥ ವೈದ್ಯರ ದಿನವಾಗಿ ಆಚರಿಸಲಾಗುತ್ತಿದೆ. ರಾಷ್ಟ್ರೀಯ ವೈದ್ಯರ ದಿನದಂದು, ವೈದ್ಯರ ಮಹತ್ವದ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಗುತ್ತದೆ. ಅಲ್ಲದೇ ನಮ್ಮ ಜೀವನಕ್ಕೆ ವೈದ್ಯರು ನೀಡಿದ ಕೊಡುಗೆಯನ್ನು ಸ್ಮರಿಸಿ ಪ್ರಶಂಸಿಸಲಾಗುತ್ತದೆ. ಈ ವಿಶೇಷ ದಿನವನ್ನು ಜನರ ಸೇವೆಗಾಗಿ ಪ್ರಾಣವನ್ನೇ ಪಣಕ್ಕಿಟ್ಟಿರುವ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರಿಗೆ ಸಮರ್ಪಿಸಲಾಗುತ್ತದೆ.
ನಿವೃತ್ತ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ|| ಚೆಲುವರಾಜ್ ಮಾತನಾಡಿ ಡಾ|| ಮುರಳೀಧರ್ ಅವರು ಅವರ ಅಣ್ಣನವರಾದ ರಂಗಸ್ವಾಮಿ ಬೆಲ್ಲದಮಡು ಹೆಸರಿನಲ್ಲಿ ಸ್ಮಾರಕವನ್ನಾಗಿ ಮಾಡಿ ಬಡವರ ಸೇವೆ ಮಾಡುತ್ತಿದ್ದಾರೆ, ಪಾವನ ಆಸ್ಪತ್ರೆಯಿಂದ ಹಲವಾರು ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ಶಿಬಿರಗಳನ್ನು ಹಮ್ಮಿಕೊಂಡು ಆರೋಗ್ಯ ಸೇವೆಯ ಮನೋಭಾವ ಅವರ ಅಣ್ಣನವರಿಂದ ಬಂದಿದೆ ಎಂದರು.
ಕೋವಿಡ್ ಸಂದರ್ಭದಲ್ಲಿ ಹಲವಾರು ಜೀವಗಳನ್ನು ಉಳಿಸಿದ ಶ್ರೇಯಸ್ಸು ಡಾ|| ಮುರಳೀಧರ್ ಅವರಿಗೆ ಸಲ್ಲಲಿದೆ, ಅವರ ಅಣ್ಣನ ಸಮಾಜ ಸೇವೆಯನ್ನು ಡಾ||ಮುರಳೀಧರ ಅವರು ಮುಂದುವರೆಸಿದ್ದಾರೆ ಎಂದು ಹೇಳಿದರು.
ಚಿಂತಕ ದೊರೈರಾಜ್ ಮಾತನಾಡಿ ಜಗತ್ತು ಮತ್ತು ದೇಶದಲ್ಲಿ ವೈದ್ಯರಾಗುತ್ತಿದ್ದಾರೆ, ಅವರನ್ನೆಲ್ಲಾ ಬಿಟ್ಟು ಡಾ.ಬಿ.ಸಿ.ರಾಯ್ ಅವರಿಗೆ ಭಾರತ ರತ್ನ ಕೊಟ್ಟಿರುವುದನ್ನು ನೆನಪು ಮಾಡಿಕೊಳ್ಳಬೇಕಿದೆ, ಬಿ.ಸಿ.ರಾಯ್ ಅವರ ಬದ್ಧತೆಯನ್ನು ಎಲ್ಲಾ ವೈದ್ಯರು ಅಳವಡಿಸಿಕೊಳ್ಳಬೇಕಿದೆ, ವೃತ್ತಿ ಅನ್ನುವುದು ಇದೆಯಲ್ಲಾ ಅದೊಂದು ಜ್ಞಾನ, ಬಹಳ ಕಷ್ಟಪಟ್ಟು ಜ್ಞಾನವನ್ನು ಸಂಪಾದಿಸಿದ್ದಾರೆ, ಅದು ಜೀವ ಉಳಿಸುವ ಜ್ಞಾನ, ಆ ಜ್ಞಾನಕ್ಕೆ ಜಗತ್ತಿನಲ್ಲಿ ಗೌರವ ಆದರಗಳಿವೆ ಎಂದರು.
ಬಿ.ಸಿ.ರಾಯ್ ಅವರ ಬಹುಮುಖ ಪ್ರತಿಭೆಯಿಂದ ಅವರನ್ನು ನೆನಪು ಮಾಡಿಕೊಳ್ಳಲಾಗುತ್ತಿದೆ, ಅವರ ಬಹುಮುಖ ಪ್ರತಿಭೆ, ವ್ಯಕ್ತಿತ್ವ ಇಂದಿನ ವೈದ್ಯರಿಗೆ ಮಾದರಿ, ವೈದ್ಯಕೀಯವನ್ನು ಅಮೂಲ್ಯ ಸೇವೆ ಎಂದು ಭಾವಿಸಿದ್ದರು ಎಂದು ಹೇಳಿದರು.
ದಿನಾಚರಣೆಯಲ್ಲಿ ಪಾವನ ಆಸ್ಪತ್ರೆಯ ಡಾ||ಮುರಳೀಧರ್, ಡಾ|| ಪಾವನ ಮತ್ತು ಪತ್ರಕರ್ತ ವೆಂಕಟಾಚಲ ಹೆಚ್.ವಿ.ಉಪಸ್ಥಿತರಿದ್ದರು.