ತುಮಕೂರು- ವೈದ್ಯಕೀಯ ಕ್ಷೇತ್ರ ನೊಬೆಲ್ ವೃತ್ತಿಯಾಗಿದ್ದು, ಸಾರ್ವಜನಿಕರು ರೋಗಿಗಳು ನಮ್ಮನ್ನು ದೇವರಿಗೆ ಹೋಲಿಕೆ ಮಾಡುತ್ತಾರೆ. ನಾವು ನಿಜವಾಗಲೂ ರೋಗಿಗಳ ಸೇವೆ ಮಾಡುವುದರಲ್ಲಿ ದೇವರನ್ನು ಕಾಣಬೇಕು ಎಂದು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದರಾದ ಡಾ. ಸಿ.ಎನ್. ಮಂಜುನಾಥ್ ಹೇಳಿದರು.
ನಗರದ ಎಸ್ಐಟಿಯ ಬಿರ್ಲಾ ಆಡಿಟೋರಿಯಂನಲ್ಲಿ ಭಾರತೀಯ ವೈದ್ಯಕೀಯ ಸಂಘದ ವತಿಯಿಂದ ಏರ್ಪಡಿಸಿದ್ದ ವೈದ್ಯರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜಕೀಯಕ್ಕೆ ಬಂದಿದ್ದು ಆಕಸ್ಮಿಕ, ರಾಜಕೀಯ ಕುಟುಂಬದಲ್ಲಿದ್ದರೂ ಕೂಡ ನಾನು ಎಂದಿಗೂ ರಾಜಕೀಯವನ್ನು ಅಂಟಿಕೊಂಡಿಲ್ಲ. ರಾಜಕೀಯದಲ್ಲಿದ್ದರೂ ಕೂಡ ಶೇ. 20 ರಿಂದ 30 ರಷ್ಟು ಸಮಯವನ್ನು ವೈದ್ಯಕೀಯ ವೃತ್ತಿಗೆ ಅದರಲ್ಲೂ ಹೃದ್ರೋಗ ಸೇವಾ ವೃತ್ತಿಗೆ ಮೀಸಲಿಟ್ಟಿದ್ದೇನೆ. ಈಗಲೂ ಕೂಡ ಬೆಂಗಳೂರಿನಲ್ಲಿ ಜಯನಗರದ ಸೌತ್ ಅಂಡ್ ಸರ್ಕಲ್ನಲ್ಲಿ ಇದ್ದು, ಬೆಂಗಳೂರಿನಲ್ಲಿ ಇದ್ದಂತ ಸಂದರ್ಭದಲ್ಲಿ ವಾರದಲ್ಲಿ ಎರಡು ಮೂರು ದಿನ 3 ರಿಂದ 4 ಗಂಟೆ ರೋಗಿಗಳ ಸೇವೆಗೆ ಮುಡುಪಾಗಿಟ್ಟಿದ್ದೇನೆ, ನನ್ನ ಸೇವೆ ಉಚಿತವಾಗಿದೆ ಎಂದು ತಿಳಿಸಿದರು.
ನಾನು ಜಯದೇವ ಹೃದ್ರೋಗ ಸಂಸ್ಥೆಯಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ನನಗೆ ಒಂದು ಕನಸಿತ್ತು, ನಾನೇನಾದರೂ ನಿರ್ದೇಶಕನಾದರೆ ಇಡೀ ರಾಜ್ಯಕ್ಕೆ ರಾಷ್ಟ್ರಕ್ಕೆ ಒಂದು ಸರ್ಕಾರಿ ಸ್ವಾಯತ್ತ ಸಂಸ್ಥೆಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ, ಪಂಚತಾರಾ ಖಾಸಗಿ ಆಸ್ಪತ್ರೆಗಳ ಮಟ್ಟಕ್ಕೆ ನಿರ್ವಹಣೆ ಮಾಡಿ ತೋರಿಸಬೇಕೆಂಬ ಕನಸಿತ್ತು. ಆ ಕನಸನ್ನು ಸಂಪೂರ್ಣವಾಗಿ ನನಸು ಮಾಡಿ ಹೊರಗಡೆ ಬಂದಿದ್ದೇನೆ, ಜಯದೇವ ಹೃದ್ರೋಗ ಸಂಸ್ಥೆ ನನ್ನ ಅವಧಿಯಲ್ಲಿ ಶೇ. 500 ರಷ್ಟು ಪ್ರಗತಿ ಸಾಧಿಸಿದೆ ಎಂದು ಅವರು ಹೇಳಿದರು.
ವೈದ್ಯರು ಬಹಳ ಒತ್ತಡದಲ್ಲಿ ಕೆಲಸವನ್ನು ನಿರ್ವಹಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ರೋಗಿಗಳನ್ನು ಪರೀಕ್ಷಿಸುವ ವೈದ್ಯರಿಗೆ ಆರೋಗ್ಯ ತಪಾಸಣೆ ಮಾಡುವ ಪರಿಸ್ಥಿತಿ ಬಂದೊದಗಿದೆ ಎಂದರು.
ಗ್ರಾಮೀಣ ಭಾಗದಲ್ಲಿ ಕೆಲಸ ನಿರ್ವಹಿಸುವಂತಹ ವೈದ್ಯರಿಗೆ ವಿಶೇಷ ಭತ್ಯೆಯನ್ನು ನೀಡಬೇಕಿದೆ, ಇದರ ಜತೆ ಜತೆಗೆ ಒಬ್ಬ ರೋಗಿ ಆಸ್ಪತ್ರೆಗೆ ಬರಬೇಕಾದರೆ ವೈದ್ಯರ ಮೇಲೆ ನಂಬಿಕೆಯಿರಲಿ ಹಾಗೂ ವೈದ್ಯರು ಬಡವರಿಗೆ ಕೈಗೆಟಕುವ ದರದಲ್ಲಿ ಚಿಕಿತ್ಸೆ ನೀಡಬೇಕು ಎಂದರು.
ನಮ್ಮ ಇತ್ತೀಚಿನ ಒತ್ತಡದ ಜೀವನ ಶೈಲಿಯಿಂದ ಶೇ. 65 ರಷ್ಟು ಸಾವುಗಳು ಸಂಭವಿಸಿದರೆ ಶೇ. 35 ರಷ್ಟು ಹೃದಯಘಾತದಿಂದ ಸಾವುಗಳು ಉಂಟಾಗುತ್ತಿವೆ. ಈ ಹಿಂದೆ ಮಕ್ಕಳು ತಮ್ಮ ತಂದೆ ತಾಯಿಯನ್ನು ಆಸ್ಪತ್ರೆಗೆ ಕರೆತರುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ತಂದೆ-ತಾಯಿಗಳು ಮಕ್ಕಳನ್ನು ಆಸ್ಪತ್ರೆಗೆ ಸೇರಿಸುವಂತಹ ಪರಿಸ್ಥಿತಿ ಬಂದಿದೆ. ಹೃದಯಾಘಾತ ಉಂಟಾದಾಗ ತಡ ಮಾಡದೆ ಗೋಲ್ಡನ್ ಟೈಮ್ನಲ್ಲಿ ಚಿಕಿತ್ಸೆ ನೀಡುವುದು ವೈದ್ಯರ ಕರ್ತವ್ಯವಾಗಿದೆ. ಹೃದಯಾಘಾತ ಸಂಭವಿಸಿದ ರೋಗಿಗೆ 18 ಸಾವಿರ ವೆಚ್ಚದ ಔಷಧಿಯನ್ನು ಉಚಿತವಾಗಿ ಸರ್ಕಾರವು 45 ತಾಲ್ಲೂಕು ಆಸ್ಪತ್ರೆಗಳಲ್ಲಿ ನೀಡುತ್ತಿದೆ. ಕೂಡಲೇ ಇದರ ಪ್ರಯೋಜನ ಪಡೆದಲ್ಲಿ ಸಾವಿನ ಪ್ರಮಾಣವು ಶೇ. 20 ರಿಂದ ಶೇ. 6 ರಷ್ಟು ಕಡಿಮೆಯಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಸಂಸದ ಡಾ. ಸಿ.ಎನ್. ಮಂಜುನಾಥ್, ವೈದ್ಯರಾದ ಡಾ. ಆರ್. ಮುದ್ದರಂಗಪ್ಪ, ಡಾ. ಕೆ.ಜಿ. ಸಿದ್ದಲಿಂಗೇಶ್ವರ್, ಡಾ. ಜೆ.ಸಿ. ಮುಕ್ತಾಂಬ, ಡಾ. ಎ.ಎಸ್. ವೀಣಾ ರವರನ್ನು ಸನ್ಮಾನಿಸಲಾಯಿತು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಐಎಂಎ ತುಮಕೂರು ಶಾಖೆಯ ಅಧ್ಯಕ್ಷ ಡಾ. ಹೆಚ್.ವಿ. ರಂಗಸ್ವಾಮಿ ಮಾತನಾಡಿದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿರ್ದೇಶಕ ಡಾ. ಶ್ರೀನಿವಾಸ್ ಜಿ.ಎಸ್., ಐಎಂಎ ರಾಜ್ಯಶಾಖೆಯ ಅಧ್ಯಕ್ಷರಾದ ಪ್ರೊ. ಡಾ. ಶ್ರೀನಿವಾಸ್ ಎಸ್., ಡಾ. ಪ್ರಭಾಕರ್, ಡಾ. ಹನುಮಕ್ಕ, ಐಎಂಎ ಕಾರ್ಯದರ್ಶಿ ಡಾ. ಮಹೇಶ್ ಜಿ., ಖಜಾಂಚಿ ಡಾ. ಪ್ರದೀಪ್ ಪ್ರಭಾಕರ್, ಮಹಿಳಾ ವೈದ್ಯ ವೃಂದ ಅಧ್ಯಕ್ಷರಾದ ಡಾ. ಅನಿತಾ ಬಿ. ಗೌಡ, ಕಾರ್ಯದರ್ಶಿ ಡಾ. ಶೃತಿ ಕೆ. ಮತ್ತಿತರರು ಭಾಗವಹಿಸಿದ್ದರು.