ಸಂಭ್ರಮಿಸುವುದ ಬೇಡ, ಆರ್‍ಎಸ್‍ಎಸ್‍ನ ಬೇರನ್ನು ಕಿತ್ತೊಗೆಯುವುದು ಅಷ್ಟು ಸುಲಭವಲ್ಲ-ಪ್ರೊ.ರವಿವರ್ಮಕುಮಾರ್

ತುಮಕೂರು : ರಾಜ್ಯದಲ್ಲಿ ಆರ್‍ಎಸ್‍ಎಸ್ ಯಾವ ರೀತಿ ಬೇರು ಬಿಟ್ಟು ಕಾಂಡವಾಗಿ ಬಲಿತಿದೆ ಎಂಬುದನ್ನು ಇಂದು ಊಹಿಸಲೂ ಸಾಧ್ಯವಾಗುತ್ತಿಲ್ಲ, ಆರ್‍ಎಸ್‍ಎಸ್‍ನ್ನು ಬೇರು ಸಹಿತ ಕಿತ್ತೊಗೆಯಲು ಯಾವ ಪಕ್ಷ, ಸರ್ಕಾದಿಂದಲೂ ಸಾಧ್ಯವಿಲ್ಲ ಎಂದು ಪ್ರೊ.ರವಿವರ್ಮಕುಮಾರ್ ಆತಂಕ ವ್ಯಕ್ತಪಡಿಸಿದರು.

ಅವರು ಜೂನ್ 10ರಂದು ನಗರದ ಐಎಂಎ ಹಾಲ್‍ನಲ್ಲಿ ಏರ್ಪಡಿಸಲಾಗಿದ್ದ ಚಿಂತಕ ಕೆ.ದೊರೈರಾಜ್-75 ಮತ್ತು ನವೀದ್ ಅಹ್ಮದ್ ಖಾನ್ ಸರ್ಕಾರಿ ಸೇವೆಯಿಂದ ವಯೋ ನಿವೃತ್ತಿ ಹೊಂದಿದ ಹಿನ್ನಲೆಯಲ್ಲಿ ತುಮಕೂರು ಸಮತಾ ಬಳಗದ ವತಿಯಿಂದ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಮೇ ತಿಂಗಳ ಕಾರವಾನ್ ಇಂಗ್ಲೀಷ್ ಪತ್ರಿಕೆಯು ಜನರಿಂದ ಆಯ್ಕೆಯಾಗದ ಸಂಘವೊಂದು ಸರ್ಕಾರವನ್ನು ಮುನ್ನೆಡೆಸುತ್ತದೆ, ಆರ್‍ಎಸ್‍ಎಸ್ ರಾಜ್ಯದಲ್ಲಿ ಕೋಮು ಸಾಮರಸ್ಯ ಹದಗೆಡಿಸುವುದಕ್ಕೆ ಬೇಕಾದ ಎಲ್ಲಾ ತಯಾರಿಯನ್ನು ಸರ್ಕಾರವಲ್ಲದ ಸಂಘವೊಂದು ಹೇಗೆ ನಿಭಾಯಸಿತು, ಅಲ್ಲದೆ ತನ್ನ ಬಾಹುಗಳನ್ನು ಧರ್ಮ-ಧರ್ಮಗಳ ಸಾಮರಸ್ಯವನ್ನು ಹೇಗೆ ಹಾಳು ಮಾಡಿ ಜನರ ಮನಸ್ಸನ್ನು ಒಡೆಯುವುದು ಹೇಗೆ ಎಂಬುದೇ ಆ ಸಂಘದ ಅಜೆಂಡವಾಗಿದ್ದು, ಈಗ ಆ ಸಂಘ ಪರಿವಾರವು ಹೆಮ್ಮರವಾಗಿರುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ, ಕಾಂಗ್ರೆಸ್ ಸರ್ಕಾರ ಬಂದಿದೆ ಅದನ್ನು ಮಟ್ಟ ಹಾಕಲಿದ್ದಾರೆ ಎಂದು ಸಂಭ್ರಮ ಪಡಬೇಕೆಂದುಕೊಳ್ಳುವುದು ನಮ್ಮಗಳ ತಪ್ಪು ಗ್ರಹಿಕೆ ಮತ್ತು ಭ್ರಮೆ ಎಂದು ಹೇಳಿದರು.

ಆರ್‍ಎಸ್‍ಎಸ್ ತನ್ನ ಕಬಂಧಬಾಹುಗಳನ್ನು ಎಲ್ಲಾ ಕಡೆ ಚಾಚಿಕೊಂಡಿರುವುದರಿಂದ ಈಗಿನ ಸರ್ಕಾರ ಅದು ಹೇಗೆ ನಿಯಂತ್ರಿಸಬಲ್ಲದು, ಅಧಿಕಾರಿಗಳಲ್ಲಿ, ನೌಕರಿಗಳಲ್ಲಿ ಅಲ್ಲದೆ ಖಾಸಗೀಕರಣದಲ್ಲೂ ಆ ಸಂಘ ಬೇರು ಬಿಟ್ಟಿದೆ, ಆ ಬೇರನ್ನು ಕಿತ್ತೊಗೆಯುವುದು ಅಷ್ಟು ಸುಲಭವಲ್ಲ ಎಂದು ಕಾರವಾನ್ ಪತ್ರಿಕೆ ವರದಿ ಮಾಡಿದೆ ಎಂದು ತಿಳಿಸಿದರು.

ಯಾಕೆ ಸಾಧ್ಯವಿಲ್ಲ ಎಂದರೆ ಇವತ್ತಿನ ಸಂಪುಟದಲ್ಲಿ, ಸರ್ಕಾರದಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಗಳು, ಮೆಡಿಕಲ್ ಮಾಫಿಯಾ ದೊರೆಗಳು, ಕೋಮುವಾದಿಗಳು, ಶಿಕ್ಷಣ ಮಾಫಿಯಾ ದೊರೆಗಳು, ಅಶಾಢಬೂತಿಗಳು, ಮೂಢನಂಬಿಕೆಯನ್ನು ಭಿತ್ತುವವರಿಲ್ಲವೆ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಸರ್ಕಾರ ಬಂದಿದೆ ಎಂದು ಸಂಭ್ರಮಿಸುವ ಕಾಲ ಇದಲ್ಲ, ಇದರ ಬಗ್ಗೆ ಆಳವಾದ ಅಧ್ಯಯನ, ಚರ್ಚೆ ನಡೆಯಬೇಕಿದೆ ಎಂದರು.
ಹಿರಿಯರಾದ ದೊರೈರಾಜ್ ಅವರ ಬಗ್ಗೆ ಸುಧೀರ್ಘವಾದ ವಿಚಾರಸಂಕೀರ್ಣ ಮತ್ತು ಅವರ ನಡೆನುಡಿ ಬಗ್ಗೆ ಮತ್ತಷ್ಟು ಅಧ್ಯಯನ ನಡೆಯ ಬೇಕಿದೆ, ದೊರೈರಾಜ್ ಅವರಂತವರಿಂದ ಇಂದಿನ ಪೀಳಿಗೆಗೆ ಹೊಸ ದಾರಿಯನ್ನು ತೋರಿಸಬೇಕಿದೆ ಎಂದರು.

ದಲಿತ ಸಂಘರ್ಷ ಸಮಿತಿ ಸಂಸ್ಥಾಪಕ ಬಿ.ಕೃಷ್ಣಪ್ಪ ಅವರು ನನ್ನ ಬಳಿ ಬರುವಾಗ ಎಂಟು-ಹತ್ತು ಕಡತಗಳನ್ನು ಹಿಡಿದು ಬರುತ್ತಿದ್ದರು. ಆ ಪೈಲುಗಳು ಅಟ್ರಾಸಿಟಿ ಪ್ರಕರಣ, ಮೀಸಲಾತಿ ಪ್ರಕರಣಗಳಾಗಿರುತ್ತಿದ್ದವು. ಸಾವಿರಾರು ಕೇಸುಗಳನ್ನು ಹಾಕಿಸಿದ್ದಾರೆ ಎಂದು ತಿಳಿಸಿದರು.

ಹಿರಿಯ ಪತ್ರತ್ರಕರ್ತ ದಿನೇಶ್ ಅಮೀನ್ ಮಟ್ಟು ಮಾತನಾಡಿ ದೊರೈರಾಜ್ 75 ವರ್ಷಗಳ ಕಾಲವೂ ಆತ್ಮಸಾಕ್ಷಿ ಯನ್ನು ಕಾಪಾಡಿಕೊಂಡು ಬಂದಿದ್ದು ಇದು ಸಣ್ಣ ವಿಷಯವೇನಲ್ಲ. ದೊರೈರಾಟ್ ಹೆಸರು ಕೇಳಿದರೆ ಮೊದಲು ಸನ್ಮಾನಿಸಬೇಕಾದುದು ಅವರ ತಂದೆ ತಾಯಿಗಳಿಗೆ 75 ವರ್ಷದ ಹಿಂದೆ ತನ್ನ ಮಗ ರಾಜನಾಗಿರಬೇಕು, ದೊರೆಯಾಗಿರಬೇಕು ಎಂದು ಯೋಚಿಸಿ ರಬೇಕಾದರೆ ಅವರಲ್ಲಿ ಅಂತಹ ಸ್ವಾಭಿ ಮಾನದ ಕಿಚ್ಚು ಇತ್ತು ಎಂದೆನಿಸುತ್ತದೆ. ಅದು ದೊರೈರಾಜ್ ಅವರಲ್ಲಿ ಬಂದಿದೆ ಎಂದರು.

ಬಡತನ, ಶೋಷಣೆಯನ್ನು ಅನುಭವಿಸಿ ಬಂದ ವರು ದೊರೈರಾಜ್, ಈ ಅನುಭವಗಳನ್ನು ಇ ಟ್ಟುಕೊಂಡು ಕತೆ, ಕಾದಂಬರಿ ಬರೆಯುವುದು ಬಹಳ ಸುಲಭ. ಆದರೆ ಅದರಂತೆ ಬದುಕುವುದು ಕಷ್ಟ ಆದರೂ ಸಹ ದೊರೈರಾಜ್ ನುಡಿದಂತೆ ಬದುಕಿದರು ಮತ್ತು ಬದುಕುತ್ತಿದ್ದಾರೆ ಕೂಡ ಎಂದರು.

ಲೇಖಕರು ಮತ್ತು ಕವಿಗಳು ಬಹಳ ಜೋರು ದನಿ ಯಲ್ಲಿ ಮಾತನಾಡುತ್ತಾರೆ. ಅವರ ಮಾತುಗಳಲ್ಲಿ ಆಕ್ರೋಶ ಇರುತ್ತದೆ. ಇದು ಕೂಡ. ಸಹಜವಾದುದು ಸಿದ್ದಲಿಂಗಯ್ಯನವರ ಕವನಗಳನ್ನು ನೋಡಿದರೆ ಇದು ಅರ್ಥವಾಗುತ್ತದೆ. ಆದರೆ ದೊರೈರಾಜ್ ಅವರದು ಬಹಳ ಮೆಲು ಮಾತು. ನಡೆಗೂ ನುಡಿಗೂ ವ್ಯತ್ಯಾಸ ಇಲ್ಲದಿದ್ದರೆ ಜನರು ಅಂತಹವರನ್ನು ಗೌರವಿಸುತ್ತಾರೆ. ಹಾಗೆಯೇ ದೊರೈರಾಜ್ ಅವರ ಮಾತುಗಳನ್ನು ಸಮಾಜ ಆಲಿಸುತ್ತದೆ ಎಂದು ಕೇಳುತ್ತದೆ. ಯಾಕೆಂದರೆ ಅವರು ನುಡಿದಂತೆ ನಡೆಯುತ್ತಿದ್ದಾರೆ ಎನ್ನುವ ಕಾ ರಣಕ್ಕೆ. ಮೆಲುದನಿಯಲ್ಲಿ ಮಾತನಾಡಿದರು ಎಂದರೆ ಅದು ಅವರ ದೌರ್ಬಲ್ಯವಲ್ಲ. ಮಕ್ಕಳನ್ನು ಹಾಗೆ ಗದರಿರುವುದಕ್ಕೆ ಸಾಧ್ಯವಿಲ್ಲ. ಅಷ್ಟು ಮಾತ್ರಕ್ಕೆ ಅವರು ಸಾಧುಪ್ರಾಣಿ ಮತ್ತು ಬಹಳ ದುರ್ಬಲರಾಗಿದ್ದಾರೆ ಎಂಬ ಅರ್ಥವಲ್ಲ. ಸಾಮಾಜಿ ವಿಷಯ ಬಂದಾಗ, ಅದು ಕೋಮುವಾದ ಇರಬಹುದು. ಬಡವರ ಮೇಲಿನ ದೌರ್ಜನ್ಯ ಇರಬಹದು, ಯಾ ವುದೇ ಬಗೆಯ ಅನ್ಯಾಯ ಇರಬಹುದು. ಅಂತಹ ಸಂದರ್ಭದಲ್ಲಿ ಮೆಲು ಮಾತಿನಲ್ಲಿ ಒಂದು ಕಠಿಣ ನಿರ್ಧಾರ ತೆಗೆದು ಕೊಳ್ಳುವುದು ಮಹತ್ವದ್ದು ಎಂದು ಹೇಳಿದರು.

ಸಮಾರಂಭದಲ್ಲಿ ಸಾಹಿತಿ, ಲೇಖಕ ನಟರಾಜ ಬೂದಾಳು, ವಯೋ ನಿವೃತ್ತಿ ಬೊಂದಿ ಸನ್ಮಾನ ಸ್ವೀಕರಿಸಿ ನವೀದ್ ಅಹ್ಮದ್ ಖಾನ್, 75 ವರ್ಷಗಳನ್ನು ಪೂರೈಸಿ ಅಭಿನಂದನೆ ಸ್ವೀಕರಿಸಿದ ಕೆ.ದೊರೈರಾಜ್, ಚಲನ ಚಿತ್ರ ನಟರಾದ ಹನುಮಂತೇಗೌಡರು,ನಾಗರಾಜ ಶೆಟ್ಟರು ಮುಂತಾದವರು ಮಾತನಾಡಿದರು.

ಅರೋಗ್ಯ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಡಾ.ಹೆಚ್.ವಿ.ರಂಗಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಹೈಕೋರ್ಟ್ ವಕೀಲರಾದ ಹೆಚ್.ವಿ.ಮಂಜುನಾಥ ಕಾರ್ಯಕ್ರಮ ನಿರೂಪಿಸಿದರು, ರೇಷ್ಮೆ ಇಲಾಖೆಯ ಜಂಟಿ ನಿರ್ದೇಶಕರಾದ ವೈ.ಕೆ.ಬಾಲಕೃಷ್ಣಪ್ಪ ವಂದಿಸಿದರು.

Leave a Reply

Your email address will not be published. Required fields are marked *