ಕ್ಯಾನ್ಸರ್ ಬಗ್ಗೆ ಭಯಬೇಡ, ಮುಂಜಾಗ್ರತೆ ವಹಿಸಿ

ತುಮಕೂರು: ಕ್ಯಾನ್ಸರ್ (Cancer) ಎಂದ್ರೆ ಎಲ್ಲರಿಗೂ ಭಯ ಇದ್ದೇ ಇರುತ್ತೆ. ಈ ರೋಗ ಬಂದ್ರೆ ಸತ್ತೇ ಹೋಗ್ತೀವಿ ಅನ್ನೋ ಮನೋಭಾವನೆ ಬಂದು ಬಿಡುತ್ತೆ. ಆದ್ರೆ ಕ್ಯಾನ್ಸರ್ ಬಗ್ಗೆ ಭಯಬೇಡ, ಮುಂಜಾಗ್ರತೆ ವಹಿಸಿ ಚಿಕಿತೆ ಪಡೆಯಿರಿ ಎಂದು ಗ್ರಾಮೀಣ ಪ್ರದೇಶದ ಮಹಿಳೆಯರಲ್ಲಿ ಆರೋಗ್ಯದ ಅರಿವು-ಜಾಗೃತಿಗೆ ಮುಂದಾಗಿದ್ದಾರೆ ನಗರದ ಶ್ರೀ ಸಿದ್ದಾರ್ಥ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳ ಸಮೂಹ.

ನಗರದ ಶ್ರೀ ಸಿದ್ದಾರ್ಥ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳ ತಂಡ, ಜಿಲ್ಲೆಯ ತುಮಕೂರು ಗ್ರಾಮಾಂತರ ತಾಲ್ಲೂಕಿನ ನಾಗವಲ್ಲಿಯ ರಂಗನಾಥಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್, ಗರ್ಭಕಂಠ ಮತ್ತು ಗರ್ಭಕೋಶದ ಕ್ಯಾನ್ಸರ್‌ಗಳ ಬಗ್ಗೆ ಜಾಗೃತಿ ಮೂಡಿಸಿದರು.

ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ನಡೆದ ಆರೋಗ್ಯ ಜಾಗೃತಿ ಆಂದೋಲನದಲ್ಲಿ ಶಾಲೆಯ ಮಕ್ಕಳಿಗೆ ಆರೋಗ್ಯ ತಪಾಸಣೆ ಜೊತೆಗೆ ಸ್ವಚ್ಛತೆ ಬಗ್ಗೆ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ನಾಟಕ ಮಾಡಿ ವಿವರಿಸಿದರು. ನೈಸರ್ಗಿಕ ಮತ್ತು ವೈಯಕ್ತಿಕ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಿದರು. ಆಶಾ ಕಾರ್ಯಕರ್ತೆ ಲಲಿತಮ್ಮ ಅವರು ಸ್ಥನ ಮತ್ತು ಗರ್ಭಕೋಶ ಕ್ಯಾನ್ಸರ್ ಬಗ್ಗೆ ನಾಟಕ ಪ್ರದರ್ಶನದ ಮೂಲಕ ಅರಿವು ಮೂಡಿಸಿದರು.

ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ರಂಗನಾಥಪುರ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಮುಖ್ಯ ಶಿಕ್ಷಕರಾದ ಶಶಿಕಲಾ ಅವರು ಮಾತನಾಡಿ, ಆರೋಗ್ಯವನ್ನು ಕಾಪಾಡಿಕೊಳ್ಳುವುದು ನಮ್ಮ ಕೈಯಲ್ಲೇ ಇದೆ. ಉತ್ತಮ ಅಭ್ಯಾಸ, ಹವ್ಯಾಸ ಮತ್ತು ಜೀವನ ಶೈಲಿಯಿಂದ ಹಲವಾರು ಕಾಯಿಲೆಗಳಿಂದ ನಾವು ದೂರವಿರಬಹುದು. ಕೆಟ್ಟ ಚಟಗಳು ನಮ್ಮ ಆರೋಗ್ಯವನ್ನು ಹಾಳು ಮಾಡುತ್ತವೆ. ಅವುಗಳಿಂದ ದೂರವಿಡಿ ಎಂದರು.

ಸಿದ್ದಾರ್ಥ ನರ್ಸಿಂಗ್ ಕಾಲೇಜಿನ ಉಪನ್ಯಾಸಕರಾದ ಎನ್. ಅರುಣಾ ಅವರು ಮಾತನಾಡಿ, ಇತ್ತೀಚಿನ ನಮ್ಮ ಒತ್ತಡದ ಜೀವನ, ಆಹಾರ ಶೈಲಿ, ನಾವು ರೂಢಿಸಿಕೊಂಡಿರುವ ಹಲವಾರು ಅಭ್ಯಾಸ-ಹವ್ಯಾಸಗಳು, ಇಂದಿನ ಯುವ ಜನಾಂಗದವರು ಕೂಡ ಹಲವಾರು ದುಶ್ಚಟಗಳಿಗೆ ಬಲಿಯಾಗುತ್ತಿರುವುದು ನಮ್ಮ ಆಯುಷ್ಯ ಕಡಿಮೆಯಾಗುತ್ತಿರುವುದಕ್ಕೆ ಕಾರಣವಾಗಿದೆ ಎಂದರು.

ತಂಬಾಕು ಸೇವನೆ, ಧೂಮಪಾನ, ಮದ್ಯಪಾನ, ವ್ಯಾಯಾಮದ ಕೊರತೆ, ಸ್ಥೂಲಕಾಯ, ಹಾನಿಕಾರಕ ಕಿರಣಗಳು, ಅಸುರಕ್ಷಿತ ಲೈಂಗಿಕ ಕ್ರಿಯೆ, ಹಾಗೂ ಅನುವಂಶಿತೆ ಕ್ಯಾನ್ಸರ್ ರೋಗಕ್ಕೆ ಕಾರಣ ಎಂಬ ಅಂಶಗಳನ್ನು ಗ್ರಾಮಸ್ಥರಿಗೆ ಮನವರಿಕೆ ಮಾಡಿಕೊಡಲಾಯಿತು. ೫೦ಕ್ಕೂ ಹೆಚ್ಚು ವಿದ್ಯಾರ್ಥಿಗಳ ಮತ್ತು ಶಿಕ್ಷರನ್ನು ಒಳಗೊಂಡ ತಂಡ ದಿನಪೂರ್ತಿ ಗ್ರಾಮದಲ್ಲಿ ವಾಸ್ತವ ಹೂಡಿ, ಗ್ರಾಮೀಣ ಜನರಲ್ಲಿ ಆರೋಗ್ಯದ ಬಗ್ಗೆ ತಿಳುವಳಿಕೆ ನೀಡಿದರಲ್ಲದೇ, ಮಕ್ಕಳಿಗೆ ಆರೋಗ್ಯ ತಪಾಸಣೆ ಜೊತೆಗೆ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಲಾಯಿತು.

ಶಾಲೆಯ ಮಕ್ಕಳಿಗೆ ಏರ್ಪಡಿಸಲಾದ ಸ್ವರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಪೆನ್ಸಿಲ್, ಪುಸ್ತಕ, ಎರೇಜರ್, ರಬ್ಬರ್‌ಗಳನ್ನು ಉಡುಗೊರೆಯಾಗಿ ನೀಡುವುದರ ಮೂಲಕ ಆರೋಗ್ಯ ಜಾಗೃತಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಳ್ಳುವಲ್ಲಿ ಸಿದ್ಧಾರ್ಥ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಸಫಲರಾದರು. ಕಾಲೇಜಿನ ಸಮುದಾಯ ಆರೋಗ್ಯ ವಿಭಾಗದ ಉಪನ್ಯಾಸಕರಾದ ಮಂಗಳಗೌರಿ, ಗಗನ, ಯೋಗೇಶ್ ಮತ್ತು ಮಮತಾ ಅವರು ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮದಲ್ಲಿ ಹಾಜರಿದ್ದರು.

Leave a Reply

Your email address will not be published. Required fields are marked *