ತುಮಕೂರು: ಶಿಕ್ಷಣವೆಂದರೆ ವಿದ್ಯಾರ್ಥಿಗಳು ಎಲ್ಲವನ್ನೂ ಸಮಸ್ಯೆಯೆಂದು ಪರಿಗಣಿಸದೆ, ಅವಕಾಶಗಳೆಂದು ಪರಿಗಣಿಸಿ, ಸದಾ ಧನಾತ್ಮಕವಾಗಿರುವುದನ್ನು ಕಲಿಸಿ, ಪಠ್ಯಕ್ರಮದ ಚೌಕಟ್ಟನ್ನು ಮೀರಿ ಜ್ಞಾನ ಸಂಪಾದಿಸಲು ಪ್ರೇರೇಪಿಸುವುದು. ನಮ್ಮೊಳಗಿರುವ ಪೂರ್ಣತೆಯನ್ನು ಉಜ್ವಲಗೊಳಿಸುವುದು ಎಂದು ನಿವೃತ್ತ ಪ್ರಾಧ್ಯಾಪಕ ಪ್ರೊ. ಎಂ. ಕೃಷ್ಣೇಗೌಡ ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಘಟಕ, ಕೌಶಲ್ಯಾಭಿವೃದ್ಧಿ ಘಟಕ, ವಿವಿ ವಿಜ್ಞಾನ ಕಾಲೇಜು ಹಾಗೂ ಸ್ನಾತಕೋತ್ತರ ವಿಭಾಗಗಳ ವತಿಯಿಂದ ಬುಧವಾರ ಆಯೋಜಿಸಿದ್ದ ಪ್ರಥಮ ಮತ್ತು ದ್ವಿತೀಯ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪ್ರೇರಣಾ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿಫಲವಾದ ವ್ಯಕ್ತಿಗಳು ಸದಾ ಕಾರಣ ಹೇಳುತ್ತಾರೆ. ಅಧಿಕಾರವೆಂದರೆ ಶಿಕ್ಷಣ, ಕೆಲಸ-ಸಂಬಳವಲ್ಲ, ವಾಸ್ತವವಾಗಿ ಜ್ಞಾನ. ಜ್ಞಾನದ ಅಳತೆ ನೋಡಿ ಕೆಲಸ ಸಿಗುವ ಕಾಲ ಭವಿಷ್ಯದಲ್ಲಿ ಎದುರಾಗಲಿದೆ. ಬದುಕಿನ ಸ್ಪರ್ಧೆಯಲ್ಲಿ ಜ್ಞಾನದ ಗುಣಮಟ್ಟವನ್ನು ಉತ್ಕೃಷ್ಟಗೊಳಿಸಿಕೊಳ್ಳತ್ತಾ ಸಾಗಬೇಕು. ಉನ್ನತ ಸ್ಥಾನಕ್ಕೇರಿರುವವರಿಗೆ ಸಾಧ್ಯವಾಗಿರುವುದು ನಮಗೇಕೆ ಸಾಧ್ಯವಾಗದು? ಎಂದು ಪ್ರಶ್ನೆ ಕೇಳಿಕೊಳ್ಳುವ ಸಮಯವಿದು ಕ್ಷÄಲ್ಲಕವಾಗಿ, ಬೇಜವಾಬ್ದಾರಿಯಿಂದ ಬದುಕಿ, ಅದರಂತೆ ಸಿದ್ಧಾಂತ, ತತ್ತ್ವಗಳನ್ನು ರೂಪಿಸುತ್ತಿರುವುದು ಸಮಾಜದ ದುರಂತ ಅಸಮಾಧಾನ ವ್ಯಕ್ತಪಡಿಸಿದರು.
ಮನಸ್ಸು, ವ್ಯಕ್ತಿತ್ವ, ಬದುಕು ಶುಚಿಶೀಲವಾಗಿದ್ದರೆ ನಾವು ಆಡುವ ಮಾತಿಗೆ ಶಕ್ತಿ ಬರುತ್ತದೆ. ಭಾರತದಲ್ಲಿ ಶಿಕ್ಷಣವೆಂದರೆ ಕೇವಲ ಯಾಂತ್ರಿಕ ಪ್ರಕ್ರಿಯೆಯಾಗಿದೆ. ವ್ಯಕ್ತಿತ್ವ ನಿರ್ಮಾಣ ಶಿಕ್ಷಣ ಸಂಸ್ಥೆಗಳ ಆದ್ಯತೆಯಲ್ಲ. ಶಿಕ್ಷಣ ಜ್ಞಾನ ಸಂಪಾದಿಸುವ, ಮನುಷ್ಯನನ್ನು ಪರಿಪೂರ್ಣಗೊಳಿಸುವ ಸಾಧನವಾಗದೆ, ಜ್ಞಾನವನ್ನು ಮಾಹಿತಿಯೊಂದಿಗೆ ವಿಲೀನಗೊಳಿಸುವ, ಕೆಲಸ, ಸಂಬಳ ಗಳಿಸುವ ಪ್ರಕ್ರಿಯೆಯಾಗಿದೆ ಎಂದರು.
ಪಾವಗಡದ ಶ್ರೀ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷ ಸ್ವಾಮಿ ಜಪಾನಂದಜೀ ಪ್ರಾಸ್ತಾವಿಕ ನುಡಿಗಳನ್ನಾಡಿ, ನಿರ್ಧಿಷ್ಟ ಗುರಿಯಿಲ್ಲದಿರುವ ವಿದ್ಯಾರ್ಥಿಗಳನ್ನು ಶಿಕ್ಷಣ ಸಂಸ್ಥೆಗಳು ರೂಪಿಸುತ್ತಿವೆ. ಉಜ್ಜೀವನಕ್ಕಾಗಿ ಏನು ಮಾಡಬೇಕೆಂಬುದನ್ನು ನಿರ್ಧರಿಸುವ ಕಾಲವಿದು. ಮಾನವೀಯ ಮೌಲ್ಯಗಳ ಹಿಂದೆ ಎಲ್ಲರೂ ಸಾಗಬೇಕು ಎಂದರು.
ವಿವಿ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ೨೦ನೆಯ ಶತಮಾನ ಆವಿಷ್ಕಾರಗಳ ಕಾಲವಾಗಿತ್ತು. ೨೧ನೆಯ ಶತಮಾನ ಜ್ಞಾನದ ಯುಗವಾಗಿದೆ. ಬದುಕು ರೂಪಿಸಿಕೊಳ್ಳುವ ಅವಕಾಶಗಳು ಈ ಯುಗದಲ್ಲಿ ಹೆಚ್ಚಿದೆ ಎಂದರು.
ಕುಲಸಚಿವೆ ನಾಹಿದಾ ಜûಮ್ ಜûಮ್, ಪರೀಕ್ಷಾಂಗ ಕುಲಸಚಿವ ಪ್ರೊ. ಪ್ರಸನ್ನಕುಮಾರ್ ಕೆ., ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ. ಬಿ. ಕರಿಯಣ್ಣ, ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಪ್ರೊ. ಪ್ರಕಾಶ್ ಎಂ. ಶೇಟ್, ಕೌಶಲ್ಯಾಭಿವೃದ್ಧಿ ಘಟಕದ ನಿರ್ದೇಶಕ ಪ್ರೊ. ಕೆ. ಜಿ. ಪರಶುರಾಮ ಉಪಸ್ಥಿತರಿದ್ದರು. ಡಾ. ಜ್ಯೋತಿ ನಿರೂಪಿಸಿದರು. ಡಾ. ಗುಂಡೇಗೌಡ ವಂದಿಸಿದರು.